Union Budget 2025: ವಿಮಾ ವ್ಯಾಪ್ತಿ ವಿಸ್ತರಣೆಯಿಂದ ಆಯುಷ್ಮಾನ್ ಭಾರತ್‌ವರೆಗೆ; ಕೇಂದ್ರ ಬಜೆಟ್‌ನಿಂದ ಆರೋಗ್ಯ ಕ್ಷೇತ್ರದ ನಿರೀಕ್ಷೆಗಳು
Healthcare Industry Expectations: ನಾಳೆ (ಫೆಬ್ರುವರಿ 1) 2025–26ರ ಸಾಲಿನ ಕೇಂದ್ರ ಬಜೆಟ್ ಮಂಡನೆಯಾಗಲಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 8ನೇ ಬಾರಿಗೆ ಬಜೆಟ್ ಮಂಡಿಸುತ್ತಿದ್ದಾರೆ. ವಿಮಾ ವ್ಯಾಪ್ತಿ ವಿಸ್ತರಣೆಯಿಂದ ಆಯುಷ್ಮಾನ್ ಭಾರತ್‌ವರೆಗೆ ಈ ಬಾರಿಯ ಬಜೆಟ್‌ನಲ್ಲಿ ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಏನೆಲ್ಲಾ ನಿರೀಕ್ಷೆಗಳಿವೆ ಎಂಬ ವಿವರ ಇಲ್ಲಿದೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2025–26ರ ಸಾಲಿನ ಬಜೆಟ್ ಮಂಡಿಸಲು ರೆಡಿಯಾಗಿದ್ದಾರೆ. ಫೆಬ್ರುವರಿ 1 ಅಂದರೆ ನಾಳೆ ಕೇಂದ್ರ ಬಜೆಟ್ ಮಂಡನೆಯಾಗಲಿದೆ. ಪ್ರತಿಬಾರಿಯಂತೆ ಈ ಬಾರಿಯೂ ಬಜೆಟ್‌ನಿಂದ ಆರೋಗ್ಯ ಕ್ಷೇತ್ರದ ಮೇಲೆ ನಿರೀಕ್ಷೆ ಹೆಚ್ಚಿದೆ. ಆಯುಷ್ಮಾನ್ ಭಾರತ, ಆರೋಗ್ಯ ವಿಮೆ ವ್ಯಾಪ್ತಿ ಹೆಚ್ಚಳ, ಆರೋಗ್ಯ ಸಲಕರಣೆ ಹಾಗೂ ಉಪಭೋಗ್ಯ ವಸ್ತುಗಳ ಮೇಲಿನ ತೆರಿಗೆ ವಿನಾಯಿತಿ, ಪ್ರಿವೆಂಟಿವ್ ಹೆಲ್ತ್‌ಕೇರ್‌ಗೆ ಒತ್ತು ನೀಡುವುದು ಈ ಕೆಲವು ಯೋಜನೆಗಳ ವಿಸ್ತರಣೆಯನ್ನು ಬಜೆಟ್‌ನಿಂದ ನಿರೀಕ್ಷಿಸಲಾಗುತ್ತಿದೆ.
ಈ ವರ್ಷದ ಬಜೆಟ್‌ನಲ್ಲಿ ನಾಗರಿಕರ ಆರೋಗ್ಯ ಮತ್ತು ಯೋಗಕ್ಷೇಮಕ್ಕೆ ಆದ್ಯತೆ ನೀಡುವ ಜೊತೆಗೆ ಅವರ ಜೇಬಿನಿಂದ ಹಣ ಕಡಿಮೆ ಖರ್ಚಾಗುವಂತೆ ಮಾಡಲು ವಿಮಾ ಸೌಲಭ್ಯ ಎಲ್ಲರಿಗೂ ಲಭ್ಯವಾಗುವಂತೆ ವ್ಯಾಪ್ತಿಯನ್ನು ಹೆಚ್ಚಿಸಬೇಕು, ರೋಗ ತಡೆಗಟ್ಟುವಿಕೆ ಮತ್ತು ಗುಣಪಡಿಸುವ ಆರೈಕೆಗಾಗಿ ದೃಢವಾದ ವ್ಯವಸ್ಥೆಯನ್ನು ರಚಿಸಬೇಕು ಎಂದು ವಿಟಸ್‌ಕೇರ್‌ನ ಪ್ರವರ್ತಕ, ಸಂಸ್ಥಾಪಕ ಮತ್ತು ಸಿಎಫ್‌ಒ ಪಂಕಜ್ ಟಂಡನ್ ಲೈವ್‌ಮಿಂಟ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಆಯುಷ್ಮಾನ್ ಭಾರತ್ ಮತ್ತು ಆರೋಗ್ಯ ವಿಮಾ ವ್ಯಾಪ್ತಿ
2025-26ರ ಕೇಂದ್ರ ಬಜೆಟ್ ಎಲ್ಲರಿಗೂ ಸುಲಭವಾಗಿ ತಲುಪಬಹುದಾದ ಮತ್ತು ಸಮಾನ ಆರೋಗ್ಯ ರಕ್ಷಣಾ ಪರಿಸರ ವ್ಯವಸ್ಥೆಗೆ ದಾರಿ ಮಾಡಿಕೊಡುವ ಅಪಾರ ಸಾಮರ್ಥ್ಯವನ್ನು ಹೊಂದಿದೆ ಎಂದು ಟಂಡನ್ ಹೇಳಿದರು.
ಆಯುಷ್ಮಾನ್ ಭಾರತ್‌ನಂತಹ ಯೋಜನೆಗಳ ಅಡಿಯಲ್ಲಿ ಆರೋಗ್ಯ ವಿಮಾ ರಕ್ಷಣೆಯನ್ನು ಬಲಪಡಿಸುವುದು, ರೋಗಿಗಳ ಆರೈಕೆ ಮತ್ತು ಡಯಾಲಿಸಿಸ್‌ನಂತಹ ಜೀವ ಉಳಿಸುವ ಚಿಕಿತ್ಸೆಗಳನ್ನು ಸೇರಿಸುವುದರ ಮೇಲೆ ಒತ್ತು ನೀಡುವುದು, ರೋಗಿಗಳು ಮತ್ತು ಅವರ ಕುಟುಂಬಗಳ ಮೇಲಿನ ಆರ್ಥಿಕ ಹೊರೆಯನ್ನು ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಹೆಚ್ಚು ಜನಸಂಖ್ಯೆ ಇರುವ ವಿಶೇಷವಾಗಿ ಗ್ರಾಮೀಣ ಮತ್ತು ಸೌಲಭ್ಯ ವಂಚಿತ ಪ್ರದೇಶಗಳಲ್ಲಿ ಆರೋಗ್ಯ ವಿಮೆಯ ವ್ಯಾಪ್ತಿಯನ್ನು ವಿಸ್ತರಿಸುವುದರಿಂದ, ಆರೈಕೆ ವಿತರಣೆಯಲ್ಲಿನ ಅಸಮಾನತೆಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಕಡಿಮೆ ಆದಾಯದ ಕುಟುಂಬಗಳಿಗೆ ಪ್ರೀಮಿಯಂಗಳಿಗೆ ಸಬ್ಸಿಡಿ ನೀಡುವುದು ಮತ್ತು ಖಾಸಗಿ ವಲಯದ ಭಾಗವಹಿಸುವಿಕೆಯನ್ನು ಉತ್ತೇಜಿಸುವುದು ಡಯಾಲಿಸಿಸ್ ಸೇರಿದಂತೆ ನಿರ್ಣಾಯಕ ಆರೋಗ್ಯ ಸೇವೆಗಳು ಕೈಗೆಟುಕುವಂತೆ ಮಾಡುವುದು ಇದರಲ್ಲಿ ಸೇರಿದೆ.
ತಡೆಗಟ್ಟುವ ಆರೋಗ್ಯ ಕಾಳಜಿ
ದೀರ್ಘಕಾಲದ ಆರೋಗ್ಯ ಸಮಸ್ಯೆಗಳ ಹೊರೆಯನ್ನು ತಪ್ಪಿಸಲು ತಡೆಗಟ್ಟುವ ಆರೋಗ್ಯ ಕಾಳಜಿ ಒತ್ತು ನೀಡುವುದು ಸಹ ನಿರ್ಣಾಯಕವಾಗಿದೆ, ಇದು ಆರೋಗ್ಯ ವ್ಯವಸ್ಥೆಯ ಸುಧಾರಣೆಯಿಂದ ಸಾಧ್ಯ. ಆರೈಕೆಯ ಗುಣಮಟ್ಟ ಮತ್ತು ದಕ್ಷತೆಯನ್ನು ಸುಧಾರಿಸಲು ಸಾರ್ವಜನಿಕ ಆರೋಗ್ಯ ಮೂಲಸೌಕರ್ಯ, ಕಾರ್ಯಪಡೆಯ ತರಬೇತಿ ಮತ್ತು ಡಿಜಿಟಲ್ ಆರೋಗ್ಯ ವ್ಯವಸ್ಥೆಗೆ ಹೆಚ್ಚಿನ ಪ್ರಾಮುಖ್ಯ ನೀಡುವುದು ಅತ್ಯಗತ್ಯ ಎಂದು ಟಂಡನ್ ಹೇಳಿದರು.
ಆರೋಗ್ಯ ಸಲಕರಣೆ, ಉಪಭೋಗ್ಯ ವಸ್ತುಗಳ ಮೇಲಿನ ತೆರಿಗೆ ವಿನಾಯಿತಿ
ಆರೋಗ್ಯ ಸೇವೆ ಉದ್ಯಮವು ಸರಕು ಮತ್ತು ಸೇವಾ ತೆರಿಗೆ (GST) ಯಿಂದ ವಿನಾಯಿತಿ ಪಡೆದಿರುವುದರಿಂದ ಆರೋಗ್ಯ ಸೇವೆಗಳು ಮತ್ತು ಉಪಕರಣಗಳನ್ನು ಅತ್ಯಂತ ಕಡಿಮೆ ಮತ್ತು ಏಕ ತೆರಿಗೆ ಶ್ರೇಣಿಯಲ್ಲಿ ಸೇರಿಸಬೇಕು. ಈ ವಿನಾಯಿತಿಯು ಆರೋಗ್ಯ ಸೇವೆ ಒದಗಿಸುವವರು ಈ ಉಪಭೋಗ್ಯ ವಸ್ತುಗಳಿಗೆ ಪಾವತಿಸಿದ ತೆರಿಗೆಗಳ ಮೇಲೆ ಇನ್ಪುಟ್ ಕ್ರೆಡಿಟ್ ಪಡೆಯಲು ಸಾಧ್ಯವಾಗದಂತೆ ತಡೆಯುತ್ತದೆ. ಆರೋಗ್ಯ ಸೇವೆಗಳನ್ನು ಕಡಿಮೆ ತೆರಿಗೆ ಶ್ರೇಣಿಯಲ್ಲಿ ಇರಿಸುವ ಮೂಲಕ, ಇದು ಆರೋಗ್ಯ ಸೇವೆ ಒದಗಿಸುವವರ ಮೇಲಿನ ಆರ್ಥಿಕ ಹೊರೆಯನ್ನು ಕಡಿಮೆ ಮಾಡುತ್ತದೆ, ವೈದ್ಯಕೀಯ ಸರಬರಾಜುಗಳ ವೆಚ್ಚವು ಹೆಚ್ಚು ಕೈಗೆಟುಕುವಂತೆ ಮಾಡುತ್ತದೆ. ಅಂತಿಮವಾಗಿ ಆರೋಗ್ಯ ಸೇವೆ ವಲಯ ಮತ್ತು ಅದು ಸೇವೆ ಸಲ್ಲಿಸುವ ರೋಗಿಗಳಿಗೆ ಪ್ರಯೋಜನವನ್ನು ನೀಡುತ್ತದೆ.
(ಗಮನಿಸಿ: ಈ ಮೇಲೆ ನೀಡಿದ ಅಭಿಪ್ರಾಯಗಳು ಮತ್ತು ಶಿಫಾರಸುಗಳು ವೈಯಕ್ತಿಕ ವಿಶ್ಲೇಷಕರು ಅಥವಾ ಬ್ರೋಕಿಂಗ್ ಕಂಪನಿಗಳ ಅಭಿಪ್ರಾಯಗಳಾಗಿವೆ, ಇದು ಎಚ್‌ಟಿ ಕನ್ನಡದ ವೈಯಕ್ತಿಕ ಅಭಿಪ್ರಾಯವಲ್ಲ. ಯಾವುದೇ ಹೂಡಿಕೆ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೊದಲು ಪ್ರಮಾಣೀಕೃತ ತಜ್ಞರೊಂದಿಗೆ ಪರಿಶೀಲಿಸಲು ನಾವು ಹೂಡಿಕೆದಾರರಿಗೆ ಸಲಹೆ ನೀಡುತ್ತೇವೆ.)
