Union Budget 1860-2024: ಭಾರತದ ಅರ್ಥವ್ಯವಸ್ಥೆಗೆ ಹೊಸ ದಿಕ್ಕು ತೋರಿದ ಐತಿಹಾಸಿಕ ಕೇಂದ್ರ ಬಜೆಟ್‌ಗಳ ಕಡೆಗೆ ಸಿಂಹಾವಲೋಕನ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Union Budget 1860-2024: ಭಾರತದ ಅರ್ಥವ್ಯವಸ್ಥೆಗೆ ಹೊಸ ದಿಕ್ಕು ತೋರಿದ ಐತಿಹಾಸಿಕ ಕೇಂದ್ರ ಬಜೆಟ್‌ಗಳ ಕಡೆಗೆ ಸಿಂಹಾವಲೋಕನ

Union Budget 1860-2024: ಭಾರತದ ಅರ್ಥವ್ಯವಸ್ಥೆಗೆ ಹೊಸ ದಿಕ್ಕು ತೋರಿದ ಐತಿಹಾಸಿಕ ಕೇಂದ್ರ ಬಜೆಟ್‌ಗಳ ಕಡೆಗೆ ಸಿಂಹಾವಲೋಕನ

Iconic Indian Budgets: ಕೇಂದ್ರ ಬಜೆಟ್ ಎಂಬುದು ದೇಶದ ಅರ್ಥ ವ್ಯವಸ್ಥೆಗೆ ದಿಕ್ಕು ತೋರಿಸುವಂತಹ ಹಣಕಾಸು ಹೇಳಿಕೆ. ಮುಂಬರುವ ವರ್ಷದ (2025-26) ಕೇಂದ್ರ ಬಜೆಟ್ ಮಂಡನೆಗೆ ದಿನಗಣನೆ ನಡೆದಿದೆ. ಫೆ 1ಕ್ಕೆ ಬಜೆಟ್ ಮಂಡನೆಯಾಗಲಿದೆ. ಹೀಗಾಗಿ, ಭಾರತದ ಅರ್ಥವ್ಯವಸ್ಥೆಗೆ ದಿಶೆ ತೋರಿದ ಐತಿಹಾಸಿಕ ಕೇಂದ್ರ ಬಜೆಟ್‌ಗಳ ಕಡೆಗೆ ಸಿಂಹಾವಲೋಕನ ನಡೆಸಲು ಈ ಹೊತ್ತು ಒಂದು ನಿಮಿತ್ತ.

ಭಾರತದ ಅರ್ಥವ್ಯವಸ್ಥೆಗೆ ದಿಶೆ ತೋರಿದ ಐತಿಹಾಸಿಕ ಕೇಂದ್ರ ಬಜೆಟ್‌ಗಳ ಕಡೆಗೆ ಸಿಂಹಾವಲೋಕನ (ಕಡತ ಚಿತ್ರ)
ಭಾರತದ ಅರ್ಥವ್ಯವಸ್ಥೆಗೆ ದಿಶೆ ತೋರಿದ ಐತಿಹಾಸಿಕ ಕೇಂದ್ರ ಬಜೆಟ್‌ಗಳ ಕಡೆಗೆ ಸಿಂಹಾವಲೋಕನ (ಕಡತ ಚಿತ್ರ)

Iconic Indian Budgets: ಸದ್ಯ ಎಲ್ಲರ ಗಮನವೂ ಕೇಂದ್ರ ಬಜೆಟ್ ಕಡೆಗಿದೆ. ಕೇಂದ್ರ ಸರ್ಕಾರ ಮುಂದಿನ ಹಣಕಾಸು ವರ್ಷಕ್ಕೆ (2025-26) ಸಂಬಂಧಿಸಿದ ಕೇಂದ್ರ ಬಜೆಟ್ 2025-26 ಅನ್ನು ಫೆಬ್ರವರಿ 1 ರಂದು ಮಂಡಿಸಲಿದೆ. ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸತತ ಎಂಟನೇ ಬಾರಿ ಬಜೆಟ್ ಮಂಡಿಸುತ್ತಿದ್ದಾರೆ. ಜನವರಿ 31 ರಂದು ಸಂಸತ್‌ನ ಜಂಟಿ ಅಧಿವೇಶನ ಶುರುವಾಗಲಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಂಸತ್ತಿನ ಜಂಟಿ ಅಧಿವೇಶನಕ್ಕೆ ಚಾಲನೆ ನೀಡಿದ ಬಳಿಕ, ದೇಶದ ಆರ್ಥಿಕ ಸಮೀಕ್ಷೆ ಮಂಡನೆಯಾಗಲಿದೆ. ಮಾರನೇ ದಿನ ಬಜೆಟ್ ಮಂಡನೆಯಾಗಲಿದೆ. ಜನರ ನಿರೀಕ್ಷೆಗಳು ಹೆಚ್ಚಾಗಿರುವ ಈ ಸಂದರ್ಭದಲ್ಲಿ, ಕೇಂದ್ರ ಬಜೆಟ್‌ ಎಂಬುದು ದೇಶದ ಅರ್ಥ ವ್ಯವಸ್ಥೆಯನ್ನು ರೂಪಿಸುವ ಹಣಕಾಸು ಹೇಳಿಕೆಯೂ ಹೌದು ಎಂಬುದನ್ನು ಮರೆಯುವಂತಿಲ್ಲ. ಕೇಂದ್ರ ಬಜೆಟ್ ಮಂಡನೆಯ ಈ ಹೊತ್ತು ನಿಮಿತ್ತವಾಗಿದ್ದು, ಭಾರತದ ಅರ್ಥವ್ಯವಸ್ಥೆಗೆ ದಿಶೆ ತೋರಿದ ಐತಿಹಾಸಿಕ ಕೇಂದ್ರ ಬಜೆಟ್‌ಗಳ ಕಡೆಗೆ ಸಿಂಹಾವಲೋಕನ ನಡೆಸುವುದಕ್ಕೆ ಅವಕಾಶ ಮಾಡಿಕೊಟ್ಟಿದೆ.

ಕೇಂದ್ರ ಬಜೆಟ್ ಇತಿಹಾಸದ ಕಿರುನೋಟ

ಬ್ರಿಟಿಷ್ ಭಾರತದ ಆಡಳಿತಕಾಲದಿಂದ ಭಾರತದ ಬಜೆಟ್ ಇತಿಹಾಸ ಶುರುವಾಗುತ್ತದೆ. 1860ರಲ್ಲಿ ಮೊದಲ ಬಾರಿಗೆ ಭಾರತದ ಬಜೆಟ್ ಮಂಡನೆಯಾಗಿದೆ. ಜೇಮ್ಸ್ ವಿಲ್ಸನ್ ಎಂಬ ಸ್ಕಾಟಿಷ್‌ ಅರ್ಥಶಾಸ್ತ್ರಜ್ಞ ಮೊದಲ ಬಜೆಟ್ ಮಂಡಿಸಿದ ಉಲ್ಲೇಖವಿದೆ. ಭಾರತ ಸರ್ಕಾರದ ಖರ್ಚು ವೆಚ್ಚಗಳ ಹಣಕಾಸು ಹೇಳಿಕೆಗೆ ಬುನಾದಿ ಹಾಕಿದ ಬಜೆಟ್ ಅದು. ಜೇಮ್ಸ್ ವಿಲ್ಸನ್ ಅವರೇ ‘ದ ಎಕನಾಮಿಸ್ಟ್’ ನಿಯತಕಾಲಿಕೆ ಮತ್ತು ‘ಸ್ಟ್ಯಾಂಡರ್ಡ್‌ ಚಾರ್ಟರ್ಡ್ ಬ್ಯಾಂಕ್’ ಸ್ಥಾಪಿಸಿದ್ದು. ಸ್ವತಂತ್ರ ಭಾರತದ ಮೊದಲ ಪೂರ್ಣ ಪ್ರಮಾಣದ ಕೇಂದ್ರ ಬಜೆಟ್ 1948ರ ಫೆಬ್ರವರಿ 28ರಂದು ಮಂಡನೆಯಾಯಿತು. ಅಂದಿನ ಹಣಕಾಸು ಸಚಿವ ಆರ್.ಕೆ. ಷಣ್ಮುಖಂ ಚೆಟ್ಟಿ ಅವರು ಈ ಬಜೆಟ್ ಮಂಡಿಸಿದರು. ಇದಕ್ಕೂ ಮೊದಲು, 1947ರಲ್ಲಿ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ ಬಳಿಕ ಮಧ್ಯಂತರ ಬಜೆಟ್ ಅನ್ನು 1947ರ ನವೆಂಬರ್ 26 ರಂದು ಮಂಡಿಸಲಾಯಿತು. ಈ ಬಜೆಟ್ 171.15 ಕೋಟಿ ರೂಪಾಯಿ ಆದಾಯ, 197.29 ಕೋಟಿ ವೆಚ್ಚವನ್ನು ಒಳಗೊಂಡಿತ್ತು. ಇದರಲ್ಲಿ ರಕ್ಷಣಾ ಕ್ಷೇತ್ರಕ್ಕೆ 92.74 ಕೋಟಿ ಮೀಸಲಿಡಲಾಗಿತ್ತು. ಅಲ್ಲಿಂದೀಚೆಗೆ, ಭಾರತದ ಅರ್ಥ ವ್ಯವಸ್ಥೆ ಮೇಲೆ, ಪ್ರಜಾಪ್ರಭುತ್ವದ ಮೇಲೆ ಪರಿಣಾಮ ಬೀರಿದ ಐತಿಹಾಸಿಕ ಬಜೆಟ್‌ಗಳು ದಾಖಲಾಗಿವೆ. ಅವುಗಳ ಪೈಕಿ ಆಯ್ದ ಬಜೆಟ್‌ಗಳ ಕಿರುನೋಟ ಇಲ್ಲಿದೆ.

1) ತೆರಿಗೆ ಸುಧಾರಣೆ ಪ್ರಕಟಿಸಿದ 1957-58ರ ಕೇಂದ್ರ ಬಜೆಟ್

1957-58ರಲ್ಲಿ ಅಂದಿನ ಹಣಕಾಸು ಸಚಿವ ಟಿ.ಟಿ. ಕೃಷ್ಣಮಾಚಾರಿ ಅವರು ಮಂಡಿಸಿದ ಬಜೆಟ್ ಸಂಪತ್ತಿನ ತೆರಿಗೆ ಸೇರಿ ಅದ್ಭುತ ತೆರಿಗೆ ಸುಧಾರಣೆಗಳನ್ನು ಪರಿಚಯಿಸಿತು. ಈ ತೆರಿಗೆಯನ್ನು ವೈಯಕ್ತಿಕ ಸ್ವತ್ತುಗಳ ಒಟ್ಟು ಮೌಲ್ಯದ ಮೇಲೆ ವಿಧಿಸಲಾಗಿದ್ದು, ಭಾರತದ ತೆರಿಗೆ ನೀತಿಯಲ್ಲಿ ಗಮನಾರ್ಹ ಬದಲಾವಣೆಯನ್ನು ಸೂಚಿಸುತ್ತದೆ. ಸಂಪತ್ತಿನ ತೆರಿಗೆ 2015 ರಲ್ಲಿ ರದ್ದುಗೊಂಡಿತು.

2) ಚೀನಾ ಯುದ್ಧದ ಸಂದರ್ಭದ ಕೇಂದ್ರ ಬಜೆಟ್‌ ಹೀಗಿತ್ತು

ಕೇಂದ್ರ ಸರ್ಕಾರವು 1962-63ನೇ ಸಾಲಿಗೆ ಮಂಡಿಸಿದ ಕೇಂದ್ರ ಮುಂಗಡಪತ್ರದಲ್ಲಿ ಗರಿಷ್ಠ ಶೇಕಡ 72.5 ಆದಾಯ ತೆರಿಗೆ ದರ ಪ್ರಕಟಿಸಲಾಯಿತು. ಹೆಚ್ಚುತ್ತಿರುವ ವಿತ್ತೀಯ ಕೊರತೆ (ಆದಾಯ ಮತ್ತು ಖರ್ಚಿನ ಅಂತರ) ಮತ್ತು ಆರ್ಥಿಕ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಹಣಕಾಸು ಹೊಂದಿಸಲು ಸರ್ಕಾರ ಈ ತೆರಿಗೆ ದರ ವಿಧಿಸಿತ್ತು. ಹೆಚ್ಚಿನ ಆದಾಯ ಹೊಂದಿದವರಿಗೆ ಅನ್ವಯಿಸಿದ ಪ್ರಸ್ತಾವಿತ ತೆರಿಗೆ ದರವು ಸಂಪತ್ತಿನ ಮರು ವಿತರಣೆ ಮತ್ತು ದೊಡ್ಡ ಪ್ರಮಾಣದ ಸಾರ್ವಜನಿಕ ಯೋಜನೆಗಳಿಗೆ ಧನಸಹಾಯ ನೀಡುವ ಬಗ್ಗೆ ಸರ್ಕಾರದ ಗಮನವನ್ನು ಬಿಂಬಿಸಿತ್ತು. ಭಾರತದ ಕೈಗಾರಿಕೀಕರಣ ಮತ್ತು ಮೂಲಸೌಕರ್ಯ ಅಗತ್ಯಗಳನ್ನು ಬೆಂಬಲಿಸಲು ರಾಜ್ಯ ಆದಾಯವನ್ನು ಹೆಚ್ಚಿಸುವ ಗುರಿಯನ್ನು ಈ ನಿರ್ಧಾರವು ಹೊಂದಿದೆ. ಆದಾಗ್ಯೂ, ಇಂತಹ ಹೆಚ್ಚಿನ ತೆರಿಗೆ ದರಗಳು ಆರ್ಥಿಕ ನೀತಿ ಮತ್ತು ಖಾಸಗಿ ಉದ್ಯಮದ ಮೇಲಿನ ಪರಿಣಾಮಗಳ ಕುರಿತ ಚರ್ಚೆಗಳಿಗೆ ಕಾರಣವಾದವು. ಇನ್ನು 1963-64ರ ಕೇಂದ್ರ ಬಜೆಟ್‌ನಲ್ಲಿ ಅತಿಹೆಚ್ಚು ಲಾಭ ಗಳಿಸುತ್ತಿರುವ ಕಂಪನಿಗಳ ಮೇಲೆ ಸೂಪರ್‌ ಪ್ರಾಫಿಟ್ ಟ್ಯಾಕ್ಸ್ ವಿಧಿಸಿತು.

3) 1973ರ ಕೇಂದ್ರ ಬಜೆಟ್‌ - ಬ್ಲ್ಯಾಕ್ ಬಜೆಟ್

1973ರ ಕೇಂದ್ರ ಬಜೆಟ್ ಅನ್ನು ಬ್ಲ್ಯಾಕ್ ಬಜೆಟ್ ಎಂದು ಗುರುತಿಸಲಾಗಿದೆ. ಅಂದಿನ ಹಣಕಾಸು ಸಚಿವ ಯಶ್ವಂತ್ ರಾವ್ ಬಿ ಚವಾಣ್ ಅವರು ಇದನ್ನು ಮಂಡಿಸಿದ್ದು, ಅಸಹಜವೆನಿಸುವ 550 ಕೋಟೊ ರೂಪಾಯಿ ಕೊರತೆ ಬಜೆಟ್ ಇದಾಗಿತ್ತು. ಹೀಗಾಗಿ, ಇದನ್ನು ಬ್ಲ್ಯಾಕ್ ಬಜೆಟ್ ಎಂದು ಗುರುತಿಸಲಾಗಿದೆ. ಇದೇ ಸಮಯದಲ್ಲಿ ಇಂದಿರಾ ಗಾಂಧಿ ಸರ್ಕಾರವು ಸಾಮಾನ್ಯ ವಿಮಾ ಕಂಪನಿ, ಕಲ್ಲಿದ್ದಲು ಗಣಿಗಳ ರಾಷ್ಟ್ರೀಕರಣವನ್ನೂ ಮಾಡಿತು.

4) 20 ಅಂಶಗಳ ಕಾರ್ಯಕ್ರಮ ಪರಿಚಯಿಸಿದ 1976-77ರ ಬಜೆಟ್‌

ಇಂದಿರಾ ಗಾಂಧಿ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಬಡತನ ನಿರ್ಮೂಲನೆಗೆ 20 ಅಂಶಗಳ ಕಾರ್ಯಕ್ರಮ ಘೋಷಿಸಲಾಗಿತ್ತು. ಇದು ಬಹಳ ಜನಪ್ರಿಯ ಉಪಕ್ರಮವಾಗಿ ಇಂದಿಗೂ ನೆನಪಿಗೆ ಬರುವಂಥದ್ದು. ಕೇಂದ್ರ ಬಜೆಟ್ 1976-77ರಲ್ಲಿ ಈ ಕಾರ್ಯಕ್ರಮ ಅಧಿಕೃತವಾಗಿ ಘೋಷಣೆಯಾಗಿತ್ತು. 1975 ರಲ್ಲಿ ಶುರುವಾದ 20 ಅಂಶಗಳ ಕಾರ್ಯಕ್ರಮವನ್ನು1982 ಮತ್ತು 1986 ರಲ್ಲಿ ಎರಡು ಬಾರಿ ಪರಿಷ್ಕರಿಸಲಾಗಿದೆ. ಕೊನೆಯದಾಗಿ -2006 2007 ರಲ್ಲಿ ಜಾರಿಗೆ ಬಂದಿತು. ಬಡತನ ನಿರ್ಮೂಲನೆ, ಜೀವನದ ಗುಣಮಟ್ಟ ಸುಧಾರಣೆ, ಸಾಮಾಜಿಕ ನ್ಯಾಯ ಮತ್ತು ಪಾಲುದಾರಿಕೆ ಉತ್ತೇಜನ, ಉತ್ಪಾದಕತೆಯನ್ನು ಹೆಚ್ಚಳ, ಆದಾಯ ಅಸಮಾನತೆ ಕಡಿಮೆ ಮಾಡುವುದು, ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆಗಳನ್ನು ಹೋಗಲಾಡಿಸುವುದು ಈ 20 ಅಂಶಗಳ ಕಾರ್ಯಕ್ರಮದ ಉದ್ದೇಶವಾಗಿತ್ತು.

5) ಕಾಂಗ್ರೆಸ್ಸೇತರ ಸರ್ಕಾರದ ಮೊದಲ ಬಜೆಟ್‌: 1977-78

ಕಾಂಗ್ರೆಸ್ ಅಲ್ಲದ ಸರ್ಕಾರಕ್ಕೆ ಐತಿಹಾಸಿಕ ಮೊದಲನೆಯದು 1977-78ರ ಕೇಂದ್ರ ಬಜೆಟ್ ಭಾರತೀಯ ಇತಿಹಾಸದಲ್ಲಿ ವಿಶಿಷ್ಟವಾಗಿತ್ತು, ಏಕೆಂದರೆ ಇದು ಕಾಂಗ್ರೆಸ್ ಅಲ್ಲದ ಸರ್ಕಾರವು ಮಂಡಿಸಿದ ಮೊದಲ ಬಜೆಟ್ ಅನ್ನು ಗುರುತಿಸಿದೆ. 1977 ರ ಸಾರ್ವತ್ರಿಕ ಚುನಾವಣೆಯಲ್ಲಿ ಜನತಾ ಪಕ್ಷದ ವಿಜಯದ ನಂತರ, ಈ ಬಜೆಟ್ ರಾಜಕೀಯ ಮತ್ತು ಆರ್ಥಿಕ ಆದ್ಯತೆಗಳಲ್ಲಿನ ಬದಲಾವಣೆಯನ್ನು ಪ್ರತಿನಿಧಿಸುತ್ತದೆ. ಹಣಕಾಸು ಸಚಿವ ಚರಣ್ ಸಿಂಗ್ ಅವರ ಬಜೆಟ್ ಭಾಷಣದ ಪ್ರಸ್ತಾವನೆಯು ಆರ್ಥಿಕತೆಯ ಮೇಲಿನ ಸರ್ಕಾರದ ನಿಯಂತ್ರಣವನ್ನು ಕಡಿಮೆ ಮಾಡುವುದು ಮತ್ತು ಮಾರುಕಟ್ಟೆ-ಚಾಲಿತ ನೀತಿಗಳನ್ನು ಉತ್ತೇಜಿಸುವುದು, ಕಾಂಗ್ರೆಸ್ ನೇತೃತ್ವದ ಆಡಳಿತದ ನೀತಿಗಳನ್ನು ರದ್ದುಗೊಳಿಸುವ ಘೋಷಣೆಗಳನ್ನು ಮಾಡಿತು.

6) ಕಾಳಧನ ತಡೆಗೆ ನೋಟು ಅಮಾನ್ಯ: 1978-79

ಮೊರಾರ್ಜಿ ದೇಸಾಯಿ ನೇತೃತ್ವದ ಜನತಾ ಸರ್ಕಾರವು ಮಂಡಿಸಿದ 1978-79ರ ಕೇಂದ್ರ ಬಜೆಟ್‌ ಕಾಳಧನ, ಭ್ರಷ್ಟಾಚಾರ ಮತ್ತು ಅಕ್ರಮ ಸಂಪತ್ತಿನ ಸಂಗ್ರಹವನ್ನು ನಿಗ್ರಹಿಸುವ ಪ್ರಯತ್ನವನ್ನು ನಡೆಸಿತು. ಇದರ ಭಾಗವಾಗಿ ಚಾಲ್ತಿಯಲ್ಲಿದ್ದ 1,000 ರೂಪಾಯಿ, 5,000 ರೂಪಾಯಿ ಮತ್ತು 10,000 ರೂಪಾಯಿ ಕರೆನ್ಸಿಗಳನ್ನು ಅಮಾನ್ಯಗೊಳಿಸಿತು.

7) ಉದಾರೀಕರಣದ ಯುಗಾರಂಭ: 1991-92

ಭಾರತದ ಅರ್ಥ ವ್ಯವಸ್ಥೆಯನ್ನು ಉದಾರೀಕರಣ, ಜಾಗತೀಕರಣ, ಖಾಸಗೀಕರಣ (ಎಲ್‌ಪಿಜಿ) ನೀತಿಗಳಿಗೆ ತೆರೆದು ಬಿಟ್ಟ ಕೇಂದ್ರ ಬಜೆಟ್ ಇದು. ಇದನ್ನು ಎಪೋಚಲ್ ಬಜೆಟ್ ಎಂದು ಗುರುತಿಸಲಾಗಿದೆ. ಅಂದು ಹಣಕಾಸು ಸಚಿವರಾಗಿದ್ದ ಡಾ ಮನಮೋಹನ ಸಿಂಗ್ ಅವರು ಈ ಬಜೆಟ್ ಮಂಡಿಸಿದ್ದರು. ಇದೇ ಬಜೆಟ್‌ನಲ್ಲಿ ಸೀಮಾ ಸುಂಕದಲ್ಲಿ ಭಾರಿ ಕಡಿತ ಅಂದರೆ ಶೇ 220 ಇದ್ದದ್ದನ್ನು ಶೇ 150ಕ್ಕೆ ಇಳಿಸಲಾಯಿತು. ರಫ್ತುಗಳನ್ನು ಉತ್ತೇಜಿಸಲು ಮತ್ತು ಆರ್ಥಿಕತೆಯನ್ನು ಉದಾರೀಕರಣಗೊಳಿಸಲು ನಿರ್ಣಾಯಕ ಕ್ರಮಗಳನ್ನು ಪರಿಚಯಿಸಲಾಯಿತು. ತೀವ್ರ ಆರ್ಥಿಕ ಬಿಕ್ಕಟ್ಟಿನ ಸಮಯದಲ್ಲಿ ನರಸಿಂಹ ರಾವ್ ಸರ್ಕಾರವು ಭಾರತದ ಉದಾರೀಕರಣ ಯುಗದ ಆರಂಭಕ್ಕೆ ಮುನ್ನುಡಿಯನ್ನು ಕೇಂದ್ರ ಬಜೆಟ್ 1991-92ರ ಮೂಲಕ ಬರೆಯಿತು. ಜಾಗತಿಕ ವ್ಯಾಪಾರದ ಕೇಂದ್ರವಾಗಿ ಭಾರತವನ್ನು ಬಿಂಬಿಸಿತು.

8) ಡ್ರೀಮ್ ಬಜೆಟ್ ಮಂಡಿಸಿದ ಚಿದಂಬರಂ: ಕೇಂದ್ರ ಬಜೆಟ್ 1997-98

ಕೇಂದ್ರ ಬಜೆಟ್ ಎಂದ ಕೂಡಲೇ ಎಲ್ಲರ ನಿರೀಕ್ಷೆಗಳಲ್ಲಿ ಮೊದಲ ಸ್ಥಾನದಲ್ಲಿರುವುದು ಆದಾಯ ತೆರಿಗೆ ಸ್ಲ್ಯಾಬ್ ಪರಿಷ್ಕರಣೆ. ಇದು 1997ರ ಬಜೆಟ್ ಸಂದರ್ಭದಲ್ಲೂ ಇತ್ತು. ಅಂದು ಹಣಕಾಸು ಸಚಿವರಾಗಿದ್ದ ಪಿ ಚಿದಂಬರಂ ಅವರು ಮಂಡಿಸಿದ ಬಜೆಟ್‌ಗೆ “ಡ್ರೀಮ್‌ ಬಜೆಟ್‌” ಎಂದು ಕರೆಯಲಾಯಿತು. ಅದರಲ್ಲಿ ಅವರು, ಆದಾಯ ತೆರಿಗೆ ಸ್ಲ್ಯಾಬ್‌ ಮತ್ತು ಕಾರ್ಪೊರೇಟ್‌ ತೆರಿಗೆಗಳನ್ನು ಪರಿಷ್ಕರಿಸಲು ಕ್ರಮ ತೆಗೆದುಕೊಂಡರು. ಇದರಲ್ಲಿ, ಆದಾಯ ತೆರಿಗೆಯನ್ನು ಶೇಕಡ 40ರಿಂದ ಶೇಕಡ 30ಕ್ಕೆ ಇಳಿಸಲಾಯಿತು. ಇದಲ್ಲದೆ, ಹಲವಾರು ಸೆಸ್‌ಗಳನ್ನು ರದ್ದುಗೊಳಿಸಲಾಯಿತು. ಹೀಗೆ ತೆರಿಗೆ ರಚನೆಯಲ್ಲಿ ಹಲವು ಬದಲಾವಣೆಗಳನ್ನು ಘೋಷಿಸಲಾಯಿತು.

9) ಸಹಸ್ರಮಾನದ ಬಜೆಟ್‌: 2000-01 ತಂತ್ರಜ್ಞಾನಕ್ಕೆ ಒತ್ತು

ಹೆಸರೇ ಹೇಳುವಂತೆ ಇದು ಸಹಸ್ರಮಾನದ ಬಜೆಟ್. 2000ನೇ ಇಸವಿಯಲ್ಲಿ ಅಂದಿನ ಹಣಕಾಸು ಸಚಿವ ಯಶವಂತ ಸಿನ್ಹ ಅವರು ಈ ಕೇಂದ್ರ ಬಜೆಟ್ ಮಂಡಿಸಿದರು. ಇದರಲ್ಲಿ ಸಿನ್ಹ ಅವರು, ಸಾಫ್ಟ್‌ವೇರ್ ರಫ್ತುಗಳ ಮೇಲಿನ ಪ್ರೋತ್ಸಾಹಕಗಳನ್ನು ಹಂತ ಂತವಾಗಿ ಸ್ಥಗಿತಗೊಳಿಸುವುದಾಗಿ ಘೋಷಿಸಿದರು. ಕೇಂದ್ರ ಬಜೆಟ್ 2000ನೇ ಇಸವಿ ಬಜೆಟ್‌ನಲ್ಲಿ ಸಿಡಿ, ಕಂಪ್ಯೂಟರ್‌ ಸೇರಿ 21 ವಸ್ತುಗಳ ಸೀಮಾ ಸುಂಕ ಕಡಿಮೆ ಮಾಡಲಾಯಿತು. ಆ ಮೂಲಕ ಭಾರತದ ತಂತ್ರಜ್ಞಾನ ಮತ್ತು ಆಧುನೀಕರಣ ಪ್ರಕ್ರಿಯೆಗೆ ವೇಗ ಕೊಡುವ ಕೆಲಸವನ್ನು ಸರ್ಕಾರ ಮಾಡಿತು.

10) ಆಮ್‌ ಆದ್ಮಿ ಬಜೆಟ್‌: 2005-06

2005ರಲ್ಲಿ ಅಂದಿನ ಹಣಕಾಸು ಸಚಿವ ಪಿ ಚಿದಂಬರಂ ಅವರು ಕೇಂದ್ರ ಬಜೆಟ್ 2005 ಮಂಡಿಸಿದರು. ಈ ಬಜೆಟ್ ಆಮ್ ಆದ್ಮಿ ಬಜೆಟ್ ಎಂದು ಜನಪ್ರಿಯವಾಗಿತ್ತು. ಈ ಬಜೆಟ್ ನಾಗರಿಕರ ಕಲ್ಯಾಣ ಮತ್ತು ಅಭಿವೃದ್ಧಿಯತ್ತ ಹಲವಾರು ಮಹತ್ವದ ಉಪಕ್ರಮಗಳನ್ನು ಜಾರಿಗೊಳಿಸಿತು. ವಿಶೇಷವಾಗಿ ಗ್ರಾಮೀಣ ಕ್ಷೇತ್ರಗಳ ಮಟ್ಟಿಗೆ ಇದು ಉಪಯುಕ್ತವೆನಿಸಿತು. ಹೀಗಾಗಿ, ಇದನ್ನು ಆಮ್ ಆದ್ಮಿ ಬಜೆಟ್ ಎಂದು ವಿಶ್ಲೇಷಿಸಲಾಯಿತು. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು (ಎಂಜಿಎನ್‌ಆರ್‌ಇಜಿಎ) ಇದೇ ಬಜೆಟ್‌ನಲ್ಲಿ ಪರಿಚಯಿಸಲಾಯಿತು. ಈ ಯೋಜನೆಯು ನಿರುದ್ಯೋಗಿಗಳಿಗೆ ನೂರು ದಿನಗಳ ಕೆಲಸವನ್ನು ಖಾತ್ರಿಪಡಿಸಿತು. ಇದಲ್ಲದೆ, ಮಾಹಿತಿ ಹಕ್ಕು ಕಾಯ್ದೆಯನ್ನು (ಆರ್‌ಟಿಐ) ಸಹ ಪರಿಚಯಿಸಲಾಯಿತು.

11) ಕೇಂದ್ರ ಬಜೆಟ್ 2014-15; ಮೋದಿ ಸರ್ಕಾರದ ಮೊದಲ ಬಜೆಟ್‌

ಕೇಂದ್ರದಲ್ಲಿ ಮೊದಲ ಬಾರಿಗೆ ಬಿಜೆಪಿ ಬಹುಮತದೊಂದಿಗೆ ಅಧಿಕಾರ ಹಿಡಿದು ನರೇಂದ್ರ ಮೋದಿ ನೇತೃತ್ವದಲ್ಲಿ ಸರ್ಕಾರ ರಚನೆಯಾದ ಬಳಿಕ ಮಂಡನೆಯಾದ ಮಧ್ಯಂತರ ಬಜೆಟ್ ಇದು. ಅಂದು ಹಣಕಾಸು ಸಚಿವರಾಗಿದ್ದ ಅರುಣ್‌ ಜೇಟ್ಲಿ ಅವರು ಈ ಬಜೆಟ್ ಮಂಡಿಸಿದರು. ಇದು ಎರಡು ಕಾರಣಗಳಿಗೆ ಗಮನಸೆಳೆಯಿತು. ಮೊದಲನೇಯದು ತಲಾ 100 ಕೋಟಿ ಅನುದಾನ ಹಂಚಿಕೆಯ 12 ಹೊಸ ಯೋಜನೆಗಳನ್ನು ಸರ್ಕಾರ ಪ್ರಕಟಿಸಿತು. ಭಾರತದ ವಿವಿಧೆಡೆ ಸ್ಮಾರ್ಟ್‌ ಸಿಟಿ ಯೋಜನೆಗಳಿಗಾಗಿ 70.6 ಶತಕೋಟಿ ರೂಪಾಯಿ ಯೋಜನೆ ಪ್ರಕಟಿಸಲಾಯಿತು. ನೀರಾವರಿಗಾಗಿ 1000 ಕೋಟಿ ರೂಪಾಯಿ ಯೋಜನೆ, ನಾಲ್ಕು ಹೊಸ ಏಮ್ಸ್‌, 5 ಹೊಸ ಐಐಟಿ ಮತ್ತು ಐಐಎಂ, ಮೊದಲನೇ ಸ್ತರ ಮತ್ತು ಎರಡನೇ ಸ್ತರದ ನಗರಗಳಲ್ಲಿ ವಿಮಾನ ನಿಲ್ದಾಣ ನಿರ್ಮಾಣವನ್ನೂ ಪ್ರಕಟಿಸಲಾಯಿತು. ಎರಡನೇಯದು ಅದುವರೆಗಿನ ಬಜೆಟ್ ಮಂಡನೆಯಲ್ಲಿ ಅತಿ ಹೆಚ್ಚು ಸಮಯ ತೆಗೆದುಕೊಂಡ ಬಜೆಟ್ ಭಾಷಣ ಅದಾಗಿತ್ತು.

12) ರೈಲ್ವೆ ಬಜೆಟ್ ವಿಲೀನ: 2017-18

ಕೇಂದ್ರ ಬಜೆಟ್‌ 2017ರಲ್ಲಿ ರೈಲ್ವೆ ಬಜೆಟ್ ಮತ್ತು ಕೇಂದ್ರ ಬಜೆಟ್ ವಿಲೀನವಾಯಿತು. ಅಂದಿನ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಬಜೆಟ್ ಮಂಡಿಸಿದರು. 92 ವರ್ಷಗಳಿಂದ ಪ್ರತ್ಯೇಕವಾಗಿ ಮಂಡಿಸಲ್ಪಡುತ್ತಿದ್ದ ರೈಲ್ವೆ ಬಜೆಟ್‌ 2017ರಿಂದ ಕೇಂದ್ರ ಬಜೆಟ್‌ ಜತೆಗೆ ವಿಲೀನವಾಗಿ ಮಂಡಿಸಲ್ಪಟ್ಟಿತು. 2016ರ ನವೆಂಬರ್ 8 ರಂದು ನೋಟು ಅಮಾನ್ಯೀಕರಣ ಜಾರಿಗೊಳಿಸಿದ ಬಳಿಕ ಮತ್ತು 2017ರ ಜುಲೈ 1ಕ್ಕೆ ಜಿಎಸ್‌ಟಿ ಜಾರಿಗೊಳಿಸುವ ನಿರ್ಧಾರ ಘೋಷಿಸಿದ ಬಳಿಕ ಮಂಡನೆಯಾದ ಬಜೆಟ್ ಇದು. ಕೃಷಿ ಕ್ಷೇತ್ರ, ಆರೋಗ್ಯ ಸೇವೆ, ಹಣಕಾಸು ನಿರ್ವಹಣೆ ಎಂಬ ಮೂರು ಥೀಮ್‌ ಪ್ರಕಾರ ಬಜೆಟ್ ಮಂಡನೆಯಾಗಿತ್ತು.

13) ಕೋವಿಡ್ ಬಳಿಕ ಪೇಪರ್‌ಲೆಸ್ ಬಜೆಟ್‌: 2021-22

ಭಾರತದಲ್ಲಿ 2019ರ ಕೊನೆಯಲ್ಲಿ 2020ರ ಆರಂಭದಲ್ಲಿ ಕೋವಿಡ್ ಸಂಕಷ್ಟ ತಲೆದೋರಿತು. ಇದಾದ ಬಳಿಕ ಲಾಕ್‌ಡೌನ್‌ ಇತ್ಯಾದಿಗಳಾಗಿದ್ದವು. 2021ರ ಕೇಂದ್ರ ಬಜೆಟ್ ಅನ್ನು ಭಾರತ ಸರ್ಕಾರವು ಪೇಪರ್‌ಲೆಸ್ ಆಗಿ ಮಂಡಿಸಿತು. ಡಿಜಿಟಲ್ ಇಂಡಿಯಾ ಉಪಕ್ರಮಕ್ಕೂ ಒತ್ತು ನೀಡಿದ ಸರ್ಕಾರ, ಕೋವಿಡ್ ಸಂಕಷ್ಟ ಚಾಲ್ತಿಯಲ್ಲಿದ್ದ ಕಾರಣ ಮುದ್ರಿತ ಪ್ರತಿ ಬಳಸುವುದನ್ನು ಕೈಬಿಟ್ಟಿತು. 2021ರ ಬಜೆಟ್ ಮಂಡಿಸುವಾಗ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಡಿಜಿಟಲ್ ಟ್ಯಾಬ್ಲೆಟ್‌ ಅನ್ನು ಬಹಿಖಾತಾದಲ್ಲಿ ತೆಗೆದುಕೊಂಡು ಸಂಸತ್‌ ಭವನಕ್ಕೆ ಹೋಗಿ ಬಜೆಟ್ ಭಾಷಣ ಮಾಡಿದ್ದರು. ಇದನ್ನು ಒನ್ಸ್‌ ಇನ್ ಎ ಸೆಂಚುರಿ ಬಜೆಟ್ ಎಂದೂ ಗುರುತಿಸಲಾಯಿತು.

14) ಮೈತ್ರಿ ಬಜೆಟ್‌: ಕೇಂದ್ರ ಬಜೆಟ್ 2024-25

ಎರಡು ಅವಧಿಗೆ ಪೂರ್ಣ ಬಹುಮತದ ಸರ್ಕಾರ ನಡೆಸಿದ್ದ ಬಿಜೆಪಿ ಮೂರನೇ ಅವಧಿಗೆ ಮೈತ್ರಿ ಸರ್ಕಾರ ಮುನ್ನಡೆಸುತ್ತಿದೆ. ಈ ಅವಧಿಯ ಮೊದಲ ಬಜೆಟ್ (ಕೇಂದ್ರ ಬಜೆಟ್ 2024) ಮಧ್ಯಂತರ ಬಜೆಟ್ ಆಗಿದ್ದು, ಇದರಲ್ಲಿ ತೆರಿಗೆ ಸುಧಾರಣೆಗಳನ್ನು ಘೋಷಿಸಲಾಗಿದೆ. ಹೊಸ ತೆರಿಗೆ ವ್ಯವಸ್ಥೆಯಲ್ಲಿ ಆದಾಯ ತೆರಿಗೆ ಸ್ಲ್ಯಾಬ್‌ಗಳ ಪರಿಷ್ಕರಣೆಯಾಗಿದೆ. ಪ್ರಮಾಣಿತ ಕಡಿತ ಪ್ರಮಾಣವನ್ನು ಸಾಮಾನ್ಯರಿಗೆ 25,000 ರೂಪಾಯಿಯಿಂದ 50,000 ರೂಪಾಯಿಗೆ, ಹಿರಿಯ ನಾಗರಿಕರಿಗೆ 50,000 ರೂಪಾಯಿಯಿಂದ 1 ಲಕ್ಷ ರೂಪಾಯಿಗೆ ಏರಿಸಲಾಗಿದೆ. 2012ರಲ್ಲಿ ಪರಿಚಯಿಸಿದ್ದ ಏಂಜೆಲ್ ಟ್ಯಾಕ್ಸ್ ರದ್ದುಗೊಳಿಸಲಾಯಿತು. ಹೀಗೆ ತೆರಿಗೆ ಸುಧಾರಣಾ ಕ್ರಮಗಳ ಮೂಲಕ ಗಮನಸೆಳೆಯಿತು.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.