Income Tax Slabs: ಕೇಂದ್ರ ಬಜೆಟ್‌ಗೆ ದಿನಗಣನೆ, ಹೊಸ ಆದಾಯ ತೆರಿಗೆ ಸ್ಲ್ಯಾಬ್ vs ಹಳೆ ಆದಾಯ ತೆರಿಗೆ ಸ್ಲ್ಯಾಬ್ ತುಲನೆ
Income Tax Slabs: ಸಂಸತ್‌ನ ಬಜೆಟ್ ಅಧಿವೇಶನ ಜನವರಿ 31ಕ್ಕೆ ಶುರುವಾಗಲಿದೆ. ಫೆ 1ರಂದು ಕೇಂದ್ರ ಬಜೆಟ್ 2025 ಮಂಡನೆಯಾಗಲಿದೆ. ಹೀಗಾಗಿ, ಆದಾಯ ತೆರಿಗೆ ವಿಚಾರ ಮುನ್ನೆಲೆಗೆ ಬಂದಿದೆ. ತನ್ನಿಮಿತ್ತ, ಹೊಸ ಆದಾಯ ತೆರಿಗೆ ಸ್ಲ್ಯಾಬ್ vs ಹಳೆ ಆದಾಯ ತೆರಿಗೆ ಸ್ಲ್ಯಾಬ್ ತುಲನಾತ್ಮಕ ವರದಿ ಇಲ್ಲಿದೆ.

Income Tax Slabs: ಕೇಂದ್ರ ಬಜೆಟ್ 2025-26ರ ಮಂಡನೆಗೆ ದಿನಗಣನೆ ಶುರುವಾಗಿರುವ ಹೊತ್ತು. ಫೆ 1 ರಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೇಂದ್ರ ಬಜೆಟ್ ಮಂಡಿಸಲಿದ್ದಾರೆ. ಹೀಗಾಗಿ ಆದಾಯ ತೆರಿಗೆ ಸ್ಲ್ಯಾಬ್, ತೆರಿಗೆ ವಿನಾಯಿತಿ ವಿಚಾರಗಳು ಹೆಚ್ಚು ಚರ್ಚೆಯಲ್ಲಿವೆ. ಕೇಂದ್ರ ಬಜೆಟ್ 2024-25 ಮಂಡಿಸುವಾಗ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಘೋಷಿಸಿದ ಬದಲಾವಣೆಗಳನ್ನು ನೆನಪುಮಾಡಿಕೊಳ್ಳುವುದಕ್ಕೆ ಈ ಹೊತ್ತು ಒಂದು ನಿಮಿತ್ತ. ಹೊಸ ಆದಾಯ ತೆರಿಗೆ ವ್ಯವಸ್ಥೆ ಮತ್ತು ಹಳೆ ಆದಾಯ ತೆರಿಗೆ ವ್ಯವಸ್ಥೆಯಲ್ಲಿ ತೆರಿಗೆ ಸ್ಲ್ಯಾಬ್‌ಗಳ ಹಂಚಿಕೆ ಮತ್ತು ಪೂರಕ ವಿವರಗಳನ್ನು ಗಮನಿಸೋಣ.
ಕೇಂದ್ರ ಬಜೆಟ್ 2024ರಲ್ಲಿ ಆದಾಯ ತೆರಿಗೆ ಬದಲಾವಣೆ ಏನಿತ್ತು
ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು 2024ರ ಜುಲೈ 23 ರಂದು ಕೇಂದ್ರ ಬಜೆಟ್ 2024-25 ಮಂಡಿಸುವಾಗ, ತೆರಿಗೆ ಸ್ಲ್ಯಾಬ್‌ಗಳಲ್ಲಿ ಪರಿಷ್ಕರಣೆ ಘೋಷಿಸಿದರು. ಹೊಸ ತೆರಿಗೆ ಆಡಳಿತ ವ್ಯವಸ್ತೆಯಲ್ಲಿ ತೆರಿಗೆದಾರರಿಗೆ ಪ್ರಮಾಣಿತ ಕಡಿತ (ಸ್ಟ್ಯಾಂಡರ್ಡ್ ಡಿಡಕ್ಷನ್) ಹೆಚ್ಚಳ ಪ್ರಕಟಿಸಿದರು. ಮಧ್ಯಮ ವರ್ಗದವರ ತೆರಿಗೆ ಹೊರೆ ಕಡಿಮೆಮಾಡುವ ಪರಿಷ್ಕರಣೆಗಳನ್ನು ನಿರೀಕ್ಷಿಸಿದ್ದರು. ಆದರೆ, ಹಳೆ ತೆರಿಗೆ ಸ್ಲ್ಯಾಬ್‌ಗಳಲ್ಲಿ ಯಾವುದೇ ಬದಲಾವಣೆಯನ್ನು ಸಚಿವರು ಮಾಡಿರಲಿಲ್ಲ.
“ಹೊಸ ತೆರಿಗೆ ಆಡಳಿತವನ್ನು ಆರಿಸಿಕೊಳ್ಳುವವರಿಗೆ ಅನುಕೂಲವಾಗುವ 2 ವಿಚಾರ ಪ್ರಕಟಿಸುತ್ತೇನೆ. ಮೊದಲನೆಯದಾಗಿ, ಸಂಬಳ ಪಡೆಯುವ ಉದ್ಯೋಗಿಗಳಿಗೆ ಪ್ರಮಾಣಿತ ಕಡಿತವನ್ನು ಈಗ ಇರುವ 50,000 ರೂಪಾಯಿಯಿಂದ 75,000 ರೂಪಾಯಿಗೆ ಹೆಚ್ಚಿಸಲಾಗುತ್ತದೆ. ಅದೇ ರೀತಿ, ಪಿಂಚಣಿದಾರರಿಗೆ ಕುಟುಂಬ ಪಿಂಚಣಿ ಮೇಲಿನ ಕಡಿತವನ್ನು ಪ್ರಸ್ತಾಪಿಸಲಾಗಿದೆ. ಇದು ಈಗ ಇರುವಂತಹ 15,000 ರೂಪಾಯಿಯಿಂದ 25,000 ರೂಪಾಯಿಗೆ ಹೆಚ್ಚಿಸಲಾಗುತ್ತದೆ. ಇದು ಸುಮಾರು 4 ಕೋಟಿ ವೇತನದಾರರಿಗೆ, ಪಿಂಚಣಿದಾರರಿಗೆ ಅನುಕೂಲ ಮಾಡಿಕೊಡಲಿದೆ” ಎಂದು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದರು. ಇನ್ನು ಎರಡನೇಯದಾಗಿ ಹೊಸ ಆದಾಯ ತೆರಿಗೆ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗಿದೆ ಎಂದು ಹೇಳಿದ್ದರು. ಇದರಂತೆ, ಹೊಸ ಆದಾಯ ತೆರಿಗೆ ಸ್ಲ್ಯಾಬ್ vs ಹಳೆ ಆದಾಯ ತೆರಿಗೆ ಸ್ಲ್ಯಾಬ್ ಒಂದು ನೋಟ ಇಲ್ಲಿದೆ.
ಕೇಂದ್ರ ಬಜೆಟ್; ಹೊಸ ಆದಾಯ ತೆರಿಗೆ ಸ್ಲ್ಯಾಬ್ vs ಹಳೆ ಆದಾಯ ತೆರಿಗೆ ಸ್ಲ್ಯಾಬ್
ಕೇಂದ್ರ ಬಜೆಟ್ 2024-25ರಲ್ಲಿ ಪರಿಷ್ಕರಿಸಲ್ಪಟ್ಟ ಹೊಸ ಆದಾಯ ತೆರಿಗೆ ಸ್ಲ್ಯಾಬ್ ವಿವರ ಹೀಗಿದೆ. ವಾರ್ಷಿಕ ಆದಾಯ ಮಿತಿ ಮತ್ತು ತೆರಿಗೆ ದರ (%) ವಿವರ
0-3 ಲಕ್ಷ ರೂಪಾಯಿ - ತೆರಿಗೆ ಇಲ್ಲ
3 - 7 ಲಕ್ಷ ರೂಪಾಯಿ ತನಕ - ಶೇ 5 ತೆರಿಗೆ
7-10 ಲಕ್ಷ ರೂಪಾಯಿ ತನಕ - ಶೇ 10 ತೆರಿಗೆ
10- 12 ಲಕ್ಷ ರೂಪಾಯಿ ತನಕ- ಶೇ 15 ತೆರಿಗೆ
12- 15 ಲಕ್ಷ ರೂಪಾಯಿ ತನಕ ಶೇ 20 ತೆರಿಗೆ
15 ಲಕ್ಷ ರೂಪಾಯಿ ಮೇಲ್ಪಟ್ಟು ಶೇ 30 ತೆರಿಗೆ
ಈ ಬದಲಾವಣೆಗಳ ಪರಿಣಾಮವಾಗಿ, ಹೊಸ ತೆರಿಗೆ ಆಡಳಿತ ವ್ಯವಸ್ಥೆಗೆ ಹೋಗುವ ವೇತನದಾರ ಉದ್ಯೋಗಿ ಆದಾಯ ತೆರಿಗೆಯಲ್ಲಿ, 17,500 ರೂಪಾಯಿವರೆಗೆ ಉಳಿತಾಯ ಮಾಡಲು ಸಾಧ್ಯವಿದೆಎಂದು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಹೇಳಿದ್ದರು.
ಹಳೆ ಆದಾಯ ತೆರಿಗೆ ಸ್ಲ್ಯಾಬ್ ಮತ್ತು ವಾರ್ಷಿಕ ಆದಾಯ ಹಾಗೂ ತೆರಿಗೆ ದರ
ಕೇಂದ್ರ ಬಜೆಟ್ 2024-25ರಲ್ಲಿ ಹಳೆಯ ಆದಾಯ ತೆರಿಗೆ ಆಡಳಿತ ವ್ಯವಸ್ಥೆಯನ್ನು ಕೂಡ ಮುಂದುವರಿಸಲಾಗಿದೆ. ಹಳೆ ಆದಾಯ ತೆರಿಗೆ ಸ್ಲ್ಯಾಬ್ ಮತ್ತು ವಾರ್ಷಿಕ ಆದಾಯ ಹಾಗೂ ತೆರಿಗೆ ದರ ಹೀಗಿದೆ.
1) ವಾರ್ಷಿಕ ಆದಾಯವು 2.5 ಲಕ್ಷ ರೂಪಾಯಿ ತನಕ ತೆರಿಗೆ ವಿನಾಯಿತಿ ಪಡೆದಿದೆ.
2) ವಾರ್ಷಿಕ ಆದಾಯವು 2.5 ಲಕ್ಷ ರೂಪಾಯಿಯಿಂದ 5 ಲಕ್ಷ ರೂಪಾಯಿ ತನಕ ಶೇಕಡ 5 ತೆರಿಗೆ ವ್ಯಾಪ್ತಿಗೆ ಒಳಪಟ್ಟಿದೆ.
3) ವಾರ್ಷಿಕ ಆದಾಯವು 5 ಲಕ್ಷ ರೂಪಾಯಿಯಿಂದ 10 ಲಕ್ಷ ರೂಪಾಯಿ ತನಕ ಶೇಕಡ 20 ತೆರಿಗೆ
4) ವಾರ್ಷಿಕ ಆದಾಯವು 10 ಲಕ್ಷ ರೂಪಾಯಿ ಮೇಲ್ಪಟ್ಟ ಆದಾಯವಿದ್ದರೆ ಶೇಕಡ 30 ತೆರಿಗೆ ಪಾವತಿಸಬೇಕು.
ಹಳೆಯ ತೆರಿಗೆ ಆಡಳಿತ ವ್ಯವಸ್ಥೆಯಲ್ಲಿ, ಆದಾಯ ತೆರಿಗೆ ವಿನಾಯಿತಿ ಮಿತಿ 60 ವರ್ಷಕ್ಕಿಂತ ಮೇಲ್ಪಟ್ಟ 80 ಕ್ಕಿಂತ ಕಡಿಮೆ ವಯಸ್ಸಿನ ಹಿರಿಯ ನಾಗರಿಕರಿಗೆ 3 ಲಕ್ಷ ರೂ. ಆದರೆ, 80 ವರ್ಷಕ್ಕಿಂತ ಹೆಚ್ಚಿನವರಿಗೆ ಆದಾಯ ತೆರಿಗೆ ವಿನಾಯಿತಿ ಮಿತಿ 5 ಲಕ್ಷ ರೂಪಾಯಿ.
ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ 8ನೇ ಬಜೆಟ್ ಮಂಡನೆಗೆ ಸಜ್ಜಾಗುತ್ತಿದ್ದಾರೆ. ಈ ಸಲದ ಕೇಂದ್ರ ಬಜೆಟ್‌ನಲ್ಲಿ (ಕೇಂದ್ರ ಬಜೆಟ್ 2025-26) ಆದಾಯ ತೆರಿಗೆ ಸಂಬಂಧಿಸಿದ ಮಹತ್ವದ ಪರಿಷ್ಕರಣೆಗಳು ಘೋಷಣೆಯಾಗುವ ನಿರೀಕ್ಷೆ ಇದೆ.

ವಿಭಾಗ