Union Budget 2025: ಕೇಂದ್ರ ಬಜೆಟ್ ಮೂಲಕ 15 ಲಕ್ಷ ರೂ ತನಕ ಆದಾಯ ತೆರಿಗೆ ವಿನಾಯಿತಿ ನಿರೀಕ್ಷೆಯಲ್ಲಿದೆ ಮಧ್ಯಮ ವರ್ಗ; ಕೇಂದ್ರದ ಒಲವೂ ಇದೆ
Union Budget 2025: ಈ ಸಲದ ಕೇಂದ್ರ ಬಜೆಟ್‌ನಲ್ಲಿ ಮಧ್ಯಮ ವರ್ಗದ ಜನರು ವಿಶೇಷವಾಗಿ ವೇತನದಾರರ ಸಮುದಾಯ ಸ್ವಲ್ಪ ದೊಡ್ಡ ಮಟ್ಟದ ನಿರೀಕ್ಷೆಯನ್ನೇ ಹೊಂದಿದೆ. ಭಾರತ ಸರ್ಕಾರ ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು 15 ಲಕ್ಷ ರೂಪಾಯಿ ತನಕ ವಿಸ್ತರಿಸಬಹುದು ಎಂಬ ನಿರೀಕ್ಷೆ ಅದು.

Union Budget 2025: ಕೇಂದ್ರ ಸರ್ಕಾರವು ಮುಂದಿನ ಹಣಕಾಸು ವರ್ಷಕ್ಕೆ (2025-26) ಸಂಬಂಧಿಸಿದ ಕೇಂದ್ರ ಬಜೆಟ್ ಅನ್ನು ಫೆಬ್ರವರಿ 1 ರಂದು ಮಂಡಿಸಲಿದೆ. ಕೇಂದ್ರ ಬಜೆಟ್‌ನಲ್ಲಿ ಹಲವು ಉಪಕ್ರಮಗಳನ್ನು ಸರ್ಕಾರ ಪ್ರಕಟಿಸುವುದು ವಾಡಿಕೆ. ಹೀಗಾಗಿ ಜನರ ನಿರೀಕ್ಷೆಗಳು ಇರುತ್ತವೆ. ಈ ಸಲದ ಕೇಂದ್ರ ಬಜೆಟ್‌ನಲ್ಲಿ ಮಧ್ಯಮ ವರ್ಗದ ಜನರು ವಿಶೇಷವಾಗಿ ವೇತನದಾರರ ಸಮುದಾಯ ಸ್ವಲ್ಪ ದೊಡ್ಡ ಮಟ್ಟದ ನಿರೀಕ್ಷೆಯನ್ನೇ ಹೊಂದಿದೆ. ಭಾರತ ಸರ್ಕಾರ ಆದಾಯ ತೆರಿಗೆ ವಿನಾಯಿತಿ ಮಿತಿಯನ್ನು 15 ಲಕ್ಷ ರೂಪಾಯಿ ತನಕ ವಿಸ್ತರಿಸಬಹುದು ಎಂಬ ನಿರೀಕ್ಷೆ ಅದು. ಮಧ್ಯಮ ವರ್ಗಕ್ಕೆ ಈ ತೆರಿಗೆ ವಿನಾಯಿತಿ ಲಭಿಸಿದರೆ, ಒಂದಷ್ಟು ಹಣ ಉಳಿತಾಯವಾಗಬಹುದು ಅಥವಾ ಖರ್ಚಿಗೆ ಸಿಗಬಹುದು ಎಂಬ ಆಸೆ ಜನರದ್ದು. ಎಲ್ಲದಕ್ಕೂ ಕೇಂದ್ರ ಬಜೆಟ್ ಉತ್ತರ ಹೇಳಬೇಕಷ್ಟೆ. ಆದಾಗ್ಯೂ, ನಿರೀಕ್ಷೆಗಳ ಕಡೆಗೆ ಗಮನಹರಿಸುವುದು ತಪ್ಪಲ್ಲ.
ಕೇಂದ್ರ ಬಜೆಟ್ 2025; 15 ಲಕ್ಷ ರೂಪಾಯಿ ತನಕ ಆದಾಯ ತೆರಿಗೆ ವಿನಾಯಿತಿ ನಿರೀಕ್ಷೆಯಲ್ಲಿದೆ ಮಧ್ಯಮ ವರ್ಗ
ಮಧ್ಯಮ ವರ್ಗದವರಿಗೆ ಪರಿಹಾರ ನೀಡಲು ಮತ್ತು ಆರ್ಥಿಕತೆ ನಿಧಾನವಾಗುತ್ತಿದ್ದಂತೆ ಅದಕ್ಕೆ ಉತ್ತೇಜನ ನೀಡುವುದಕ್ಕಾಗಿ ಬಳಕೆಯನ್ನು ಹೆಚ್ಚಿಸಲು ಫೆಬ್ರವರಿಯ ಬಜೆಟ್‌ನಲ್ಲಿ ವರ್ಷಕ್ಕೆ 15 ಲಕ್ಷ ರೂಪಾಯಿ ಗಳಿಸುವ ವ್ಯಕ್ತಿಗಳ ಆದಾಯ ತೆರಿಗೆಯನ್ನು ಕಡಿತಗೊಳಿಸುವುದರ ಕಡೆಗೆ ಭಾರತ ಸರ್ಕಾರ ಚಿಂತನೆ ನಡೆಸಿದೆ ಎಂದು ಎರಡು ಪ್ರತ್ಯೇಕ ಸರ್ಕಾರಿ ಮೂಲಗಳು ತಿಳಿಸಿದ್ದಾಗಿ ರಾಯ್ಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಕೇಂದ್ರ ಸರ್ಕಾರದ ಈ ಕ್ರಮವು ಹತ್ತಾರು ದಶಲಕ್ಷ ತೆರಿಗೆದಾರರಿಗೆ ಪ್ರಯೋಜನವನ್ನು ಉಂಟುಮಾಡಬಹುದು. ವಿಸೇಷವಾಗಿ ಹೆಚ್ಚುತ್ತಿರುವ ಜೀವನ ವೆಚ್ಚದ ಪರಿಸ್ಥಿತಿಯಲ್ಲಿ ನಗರವಾಸಿಗಳಿಗೆ ಅನುಕೂಲವಾಗಲಿದೆ. ವಿಶೇಷವಾಗಿ 2020ರ ಹೊಸ ತೆರಿಗೆ ವ್ಯವಸ್ಥೆಯನ್ನು ಆಯ್ಕೆ ಮಾಡಿಕೊಂಡವರಿಗೆ ವಸತಿ ಬಾಡಿಗೆ ವಿನಾಯಿತಿ ಇಲ್ಲದ ಕಾರಣ ಸರ್ಕಾರ ಇಂಥದ್ದೊಂದು ತೀರ್ಮಾನ ತೆಗೆದುಕೊಂಡರೆ ಅನುಕೂಲವಾಗಲಿದೆ ಎಂದು ವರದಿ ವಿವರಿಸಿದೆ.
3 ಲಕ್ಷದಿಂದ 15 ಲಕ್ಷ ರೂ ಆದಾಯಕ್ಕೆ ಶೇ 5 ರಿಂದ 20ರ ತನಕ ತೆರಿಗೆ
ಹೊಸ ಆದಾಯ ತೆರಿಗೆ ಪದ್ಧತಿಯಲ್ಲಿ ವಾರ್ಷಿಕ ಆದಾಯವು 3 ಲಕ್ಷ ರೂಪಾಯಿಯಿಂದ 15 ಲಕ್ಷ ರೂಪಾಯಿ ತನಕದ ಆದಾಯಕ್ಕೆ ಶೇಕಡ 5 ರಿಂದ ಶೇಕಡ 20ರ ತನಕ ತೆರಿಗೆ ಇದೆ. ಅದಕ್ಕೂ ಮೇಲಿನ ಆದಾಯಕ್ಕೆ ಶೇಕಡ 30 ಆದಾಯ ತೆರಿಗೆ ಇದೆ.
ಭಾರತೀಯ ತೆರಿಗೆದಾರರು ಎರಡು ತೆರಿಗೆ ವ್ಯವಸ್ಥೆಗಳ ನಡುವೆ ಆಯ್ಕೆ ಮಾಡಬಹುದು - ವಸತಿ ಬಾಡಿಗೆಗಳು ಮತ್ತು ವಿಮೆಯ ಮೇಲೆ ವಿನಾಯಿತಿಗಳನ್ನು ಅನುಮತಿಸುವ ಹಳೆಯ ತೆರಿಗೆ ಪದ್ಧತಿಯ ಯೋಜನೆ, ಮತ್ತು 2020 ರಲ್ಲಿ ಪರಿಚಯಿಸಲಾದ ಹೊಸ ತೆರಿಗೆ ಪದ್ಧತಿಯಲ್ಲಿ ಸ್ವಲ್ಪ ಕಡಿಮೆ ತೆರಿಗೆ ದರ ಇದೆ. ಆದರೆ, ವಿನಾಯಿತಿಗಳಿಲ್ಲ.
ಸರ್ಕಾರದ ಅಧಿಕಾರಿಗಳು ಈ ಸುದ್ದಿ ನೀಡಿದವರಾಗಿದ್ದು ಅವರಿಗೆ ಮಾಧ್ಯಮದ ಜತೆಗೆ ಮಾತನಾಡುವ ಅಧಿಕಾರ ಇಲ್ಲ. ಹಾಗಾಗಿ ಅವರ ಹೆಸರನ್ನು ಉಲ್ಲೇಖಿಸದಂತೆ ಮನವಿ ಮಾಡಿದ್ದಾರೆ ಎಂದಿರುವ ರಾಯ್ಟಿರ್ಸ್ ಸುದ್ದಿ ಸಂಸ್ಥೆ, ಆದಾಯ ತೆರಿಗೆ ಕಡಿತಕ್ಕೆ ಸಂಬಂಧಿಸಿ ಇದುವರೆಗೆ ಯಾವುದೇ ನಿರ್ಧಾರಗಳಾಗಿಲ್ಲ. ಆದರೆ ಫೆಬ್ರವರಿ 1ರ ಹೊತ್ತಿಗೆ ಖಚಿತ ನಿರ್ಧಾರವನ್ನು ಸರ್ಕಾರ ತೆಗೆದುಕೊಳ್ಳಲಿದೆ ಎಂದು ಅವರು ವಿವರಿಸಿದ್ದಾಗಿ ಹೇಳಿದೆ.
ವಾರ್ಷಿಕ ಕನಿಷ್ಠ 10 ಲಕ್ಷ ರೂ ಆದಾಯ ಹೊಂದಿದವರಿಂದಲೇ ಬಹುಪಾಲು ತೆರಿಗೆ ಆದಾಯ
ಯಾವುದೇ ತೆರಿಗೆ ಕಡಿತದ ಆದಾಯ ನಷ್ಟವನ್ನು ಹಂಚಿಕೊಳ್ಳಲು ಮೂಲಗಳು ನಿರಾಕರಿಸಿದ್ದು, ತೆರಿಗೆ ದರಗಳನ್ನು ಕಡಿಮೆ ಮಾಡುವುದರಿಂದ ಹೆಚ್ಚು ಜನರು ಕಡಿಮೆ ಸಂಕೀರ್ಣ ಹೊಸ ವ್ಯವಸ್ಥೆಯನ್ನು ಆಯ್ಕೆ ಮಾಡುತ್ತಾರೆ ಎಂದು ಒಬ್ಬರು ಹೇಳಿದ್ದಾಗಿ ವರದಿ ವಿವರಿಸಿದೆ. ಭಾರತ ಸರ್ಕಾರಕ್ಕೆ ಆದಾಯ ತೆರಿಗೆ ಮೂಲಕ ಬರುವ ಆದಾಯದಲ್ಲಿ ಬಹುಪಾಲು ವಾರ್ಷಿಕ ಕನಿಷ್ಠ 10 ಲಕ್ಷ ರೂಪಾಯಿ ಆದಾಯ ಹೊಂದಿದವರಿಂದಲೇ ಬರುತ್ತಿದೆ. ಇದು ಶೇಕಡ 30ರ ತೆರಿಗೆ ಸ್ಲ್ಯಾಬ್. ಈ ವಿಚಾರವಾಗಿ ಹಣಕಾಸು ಸಚಿವಾಲಯ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ರಾಯ್ಟಿರ್ಸ್ ವರದಿ ಹೇಳಿದೆ.
ಮಧ್ಯಮ ವರ್ಗದವರ ಕೈಯಲ್ಲಿ ಹೆಚ್ಚು ಹಣ ಇದ್ದರೆ ಅದು, ದೇಶದ ಆರ್ಥಿಕತೆಯನ್ನು ಪುನರುಜ್ಜೀವನಗೊಳಿಸಲು ಸಹಾಯ ಮಾಡುತ್ತದೆ. ಇದು ವಿಶ್ವದ ಐದನೇ ಅತಿದೊಡ್ಡ ಅರ್ಥವ್ಯವಸ್ಥೆಯಾಗಿದ್ದು, ಜುಲೈ ಮತ್ತು ಸೆಪ್ಟೆಂಬರ್ ನಡುವಿನ ಏಳು ತ್ರೈಮಾಸಿಕಗಳಲ್ಲಿ ತನ್ನ ನಿಧಾನಗತಿಯ ಬೆಳವಣಿಗೆ ದಾಖಲಿಸಿದೆ. ಹೆಚ್ಚಿನ ಆಹಾರ ಹಣದುಬ್ಬರವು ಸಾಬೂನುಗಳು ಮತ್ತು ಶಾಂಪೂಗಳಿಂದ ಹಿಡಿದು ಕಾರುಗಳು ಮತ್ತು ದ್ವಿಚಕ್ರ ವಾಹನಗಳವರೆಗಿನ ಸರಕುಗಳ ಬೇಡಿಕೆಯನ್ನು ವಿಶೇಷವಾಗಿ ನಗರ ಪ್ರದೇಶಗಳಲ್ಲಿ ತಗ್ಗಿಸಿದೆ. ಆದ್ದರಿಂದಲೇ, ಕೇಂದ್ರ ಬಜೆಟ್ ಮೇಲಿನ 15 ಲಕ್ಷ ರೂಪಾಯಿ ವೇತನದಾರ ಮಧ್ಯಮ ವರ್ಗದ ನಿರೀಕ್ಷೆ ಆದಾಯ ತೆರಿಗೆ ಕಡೆಗೆ ಹೆಚ್ಚಿದೆ ಎಂದು ವರದಿ ವಿವರಿಸಿದೆ.

ವಿಭಾಗ