Union Budget 2025: ತೆರಿಗೆ, ದರ ಏರಿಳಿತ ಹೊರತುಪಡಿಸಿ ಕೇಂದ್ರ ಬಜೆಟ್‌ನಲ್ಲಿ ನೀವು ಗಮನಿಸಲೇಬೇಕಾದ ಪ್ರಮುಖ 10 ಅಂಶಗಳು
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Union Budget 2025: ತೆರಿಗೆ, ದರ ಏರಿಳಿತ ಹೊರತುಪಡಿಸಿ ಕೇಂದ್ರ ಬಜೆಟ್‌ನಲ್ಲಿ ನೀವು ಗಮನಿಸಲೇಬೇಕಾದ ಪ್ರಮುಖ 10 ಅಂಶಗಳು

Union Budget 2025: ತೆರಿಗೆ, ದರ ಏರಿಳಿತ ಹೊರತುಪಡಿಸಿ ಕೇಂದ್ರ ಬಜೆಟ್‌ನಲ್ಲಿ ನೀವು ಗಮನಿಸಲೇಬೇಕಾದ ಪ್ರಮುಖ 10 ಅಂಶಗಳು

Union Budget 2025: ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ತೆರಿಗೆ, ದರ ಏರಿಕೆ ಪ್ರಸ್ತಾವಗಳನ್ನು ಹೊರತುಪಡಿಸಿ ನಗರಾಭಿವೃದ್ದಿ, ಶಿಕ್ಷಣ, ಆರೋಗ್ಯ ವಲಯಗಳಿಗೆ ನೀಡಿರುವ ಪ್ರಮುಖಾಂಶಗಳು ಇಲ್ಲಿವೆ.

ನಿರ್ಮಲಾ ಸೀತಾರಾಮನ್‌ ಮಂಡಿಸಿದ ಬಜೆಟ್‌ನ ಪ್ರಮುಖಾಂಶಗಳು
ನಿರ್ಮಲಾ ಸೀತಾರಾಮನ್‌ ಮಂಡಿಸಿದ ಬಜೆಟ್‌ನ ಪ್ರಮುಖಾಂಶಗಳು

Union Budget 2025: ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಶನಿವಾರ ಮಂಡಿಸಿದ ಆಯವ್ಯಯದಲ್ಲಿ ಹಲವು ವಿಷಯಗಳನ್ನು ಪ್ರಸ್ತಾಪಿಸಿದ್ದಾರೆ. ಶಿಕ್ಷಣ, ಆರೋಗ್ಯ, ನಗರಾಭಿವೃದ್ದಿ, ವಿದ್ಯುತ್‌ ವಲಯ, ನೀರು ಸರಬರಾಜು, ಗಿಗಾ ಕಾರ್ಮಿಕರ ಹಿತ ರಕ್ಷಣೆ ಸಹಿತ ಹಲವು ಪ್ರಮುಖ ವಿಷಯಗಳನ್ನು ಉಲ್ಲೇಖಿಸಿದ್ದಾರೆ, ನಿರ್ಮಲಾ ಅವರ ಬಜೆಟ್‌ ನ ಪ್ರಮುಖ ಹತ್ತು ಅಂಶಗಳು ಇಲ್ಲಿವೆ. 

  1. ಗ್ರಾಮೀಣ ಕ್ರೆಡಿಟ್ ಸ್ಕೋರ್

ಸಾರ್ವಜನಿಕ ವಲಯದ ಬ್ಯಾಂಕ್‌ಗಳು 'ಗ್ರಾಮೀನ್ ಕ್ರೆಡಿಟ್ ಸ್ಕೋರ್' ಚೌಕಟ್ಟನ್ನು ಅಭಿವೃದ್ಧಿಪಡಿಸುತ್ತವೆ. ಸ್ವಸಹಾಯ ಸಂಘಗಳ ಆರ್ಥಿಕ ಬೆಳವಣಿಗೆಗೆ ಇದು ಪೂರಕವಾಗಲಿದೆ. ಸ್ವಯ ಸಹಾಯ ಗುಂಪುಗಳ ಸದಸ್ಯರು ಮತ್ತು ಗ್ರಾಮೀಣ ಪ್ರದೇಶದ ಜನರ ಸಾಲದ ಅಗತ್ಯಗಳನ್ನು ಪೂರೈಸಲು ಕ್ರೆಡಿಟ್‌ ಸ್ಕೋರ್‌ ನೆರವಾಗಲಿದೆ.

2. ಕೆವೈಸಿ ಸರಳೀಕರಣ

ಈಗ ಆಧಾರ್‌ ಸಹಿತ ಅಗತ್ಯ ದಾಖಲೆಗಳನ್ನು ಒದಗಿಸಲು ಆಗಾಗ ಕೆವೈಸಿ ಮಾಡಿಸುವ ಪದ್ದತಿ ಜಾರಿಯಲ್ಲಿದೆ. ಇದನ್ನು ಸರಳೀಕರಣಗೊಳಿಸುವ ಪ್ರಸ್ತಾವವನ್ನು ಮಾಡಲಾಗಿದೆ. ಈಗಾಗಲೇ ಕೆವೈಸಿ ಸರಳೀಕರಣಗೊಳಿಸುವ ಪ್ರಕಟಣೆಯಾಗಿದ್ದರೂ ಸುಧಾರಿತ ಕ್ರಮ ಏನಿರಬಹುದು ಎನ್ನುವ ನಿರೀಕ್ಷೆಯಿತ್ತು. ಈ ವರ್ಷದಿಂದಲೇ ವ್ಯವಸ್ಥಿತ ಮಾರ್ಗೋಪಾಯಗಳ ಯೋಜನೆಯನ್ನು ಕೆವೈಸಿಗಾಗಿ ಜಾರಿಗೊಳಿಸಲಾಗುತ್ತದೆ. ಕೆವೈಸಿ ಕೇಂದ್ರೀಯ ನೋಂದಣಿ ವ್ಯವಸ್ಥೆಯೂ ಜಾರಿಯಾಗಲಿದೆ.

3. ಪರಮಾಣು ಅಣು ಶಕ್ತಿ

ಭಾರತದಲ್ಲಿ ಪರಮಾಣು ಅಣು ಉತ್ಪಾದನೆ ಕುರಿತು ದಶಕಗಳಿಂದಲೂ ಚರ್ಚೆಯಾಗುತ್ತಿದ್ದೂ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಸುಮಾರು 100 ಗೆಗಾ ವ್ಯಾಟ್‌ ಅಣು ವಿದ್ಯುತ್‌ ಉತ್ಪಾದನೆಯ ಗುರಿಯನ್ನು ಪ್ರಕಟಿಸಲಾಗಿದೆ. 2047 ರ ವೇಳೆಗೆ ಕನಿಷ್ಠ ಈ ಗುರಿಯನ್ನು ತಲುಪುವುದು ಕೇಂದ್ರದ ಉದ್ದೇಶ. ಖಾಸಗಿ ಸಂಸ್ಥೆಗಳ ಪಾಲುದಾರಿಕೆ ಹಾಗೂ ಸಾರ್ವಜನಿಕ ಸಹಭಾಗಿತ್ವದಲ್ಲಿ ಹಂತ ಹಂತವಾಗಿ ಅಣು ವಿದ್ಯುತ್‌ ಉತ್ಪಾದನೆ ರೋಡ್‌ ಮ್ಯಾಪ್‌ ಅನ್ನು ತಯಾರಿಸಲಾಗುವುದು. ಇದರಡಿ ಪರಮಾಣು ಶಕ್ತಿ ಕಾಯಿದೆ ಮತ್ತು ನಾಗರಿಕ ತಿದ್ದುಪಡಿಗಳಿಗೂ ಒತ್ತು ನೀಡಲಾಗುವುದು. ಪರಮಾಣು ಹಾನಿಯ ಹೊಣೆಗಾರಿಕೆ ಕಾಯಿದೆಯನ್ನು ಇದರಡಿ ರೂಪಿಸಲಾಗುತ್ತದೆ. ಇದರಡಿಯೇ ಸಣ್ಣ ಮಾಡ್ಯುಲರ್‌ನ ಸಂಶೋಧನೆ ಮತ್ತು ಅಭಿವೃದ್ಧಿಗಾಗಿ ಪರಮಾಣು ಶಕ್ತಿ ಮಿಷನ್ 20,000 ಕೋಟಿ ವೆಚ್ಚದಲ್ಲಿ ರಿಯಾಕ್ಟರ್‌ಗಳನ್ನು (SMR) ಸ್ಥಾಪಿಸಲಾಗುವುದು. ಕನಿಷ್ಠ 5 ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ರಿಯಾಕ್ಟರ್‌ಗಳನ್ನು 2033 ರ ವೇಳೆಗೆ ಸ್ಥಾಪಿಸುವ ಉದ್ದೇಶವನ್ನು ಹೊಂದಲಾಗಿದೆ.

4. ನಗರಗಳ ಸವಾಲು ನಿಧಿ

ಕೇಂದ್ರ ಸರ್ಕಾರಗಳು ಭಾರತದಲ್ಲಿನ ಸಣ್ಣ ಹಾಗೂ ಮಧ್ಯಮ ಪಟ್ಟಣಗಳ ಪ್ರಗತಿ ಉತ್ತೇಜಿಸುವ ನಿಟ್ಟಿನಲ್ಲಿ ನಗರಗಳ ಸವಾಲು ನಿಧಿ ಘೋಷಿಸಿದೆ. ಸರ್ಕಾರವು 1 ಲಕ್ಷ ಕೋಟಿಯ ನಗರಗಳ ಸವಾಲು ನಿಧಿಯನ್ನು ಸ್ಥಾಪಿಸಲಿದೆ. 'ನಗರಗಳು ಬೆಳವಣಿಗೆಯ ಕೇಂದ್ರಗಳಾಗಿ', ಅಲ್ಲಿನ ಸೃಜನಶೀಲ ಪ್ರಸ್ತಾವನೆಗಳನ್ನು ಕಾರ್ಯಗತಗೊಳಿಸಲು ಈ ನಿಧಿ ಸಹಕಾರಿಯಾಗಲಿದೆ. ನಗರಗಳ ಪುನರಾಭಿವೃದ್ಧಿ' ಮತ್ತು 'ನೀರು ಮತ್ತು ನೈರ್ಮಲ್ಯ' ಯೋಜನೆಯನ್ನು ಕಳೆದ ಜುಲೈನಲ್ಲಿ ಘೋಷಿಸಲಾಗಿದ್ದು, ಅದರ ಮುಂದುವರೆದ ಭಾಗವಾಗಿ ನಿಧಿ ಸ್ಥಾಪನೆಯಾಗಲಿದೆ.

5.ಜಲ ಜೀವನ್ ಮಿಷನ್ ವಿಸ್ತರಣೆ

ಭಾರತದಲ್ಲಿ ಪ್ರತಿಯೊಬ್ಬರು ಶುದ್ದ ನೀರನ್ನು ಪಡೆಯಬೇಕು.ಕುಟುಂಬಗಳು ನೀರನ್ನು ಮನೆ ಎದುರಿನ ನಲ್ಲಿಯಲ್ಲೇ ಪಡೆಯಬೇಕು ಎನ್ನುವ ಉದ್ದೇಶದಿಂದ ಜನಜೀವನ್‌ ಮಿಷನ್‌ ಯೋಜನೆಯನ್ನು ಜಾರಿಗೊಳಿಸಲಾಗಿದೆ. 2019 ರಿಂದ ಈವರೆಗ ಭಾರತದ 80 ಪ್ರತಿಶತವನ್ನು ಪ್ರತಿನಿಧಿಸುವ 15 ಕೋಟಿ ಕುಟುಂಬಗಳಿಗೆ ಇದರ ಸೇವೆ ಸಿಕ್ಕಿದೆ ಗ್ರಾಮೀಣ ಜನರಿಗೆ ಕುಡಿಯುವ ನೀರಿನ ಸಂಪರ್ಕಕ್ಕೆ ಅಗತ್ಯ ಮೂಲಸೌಕರ್ಯವನ್ನು ಒದಗಿಸಲಾಗಿದೆ.ಪ್ರತಿಶತ 100 ರಷ್ಟು ವ್ಯಾಪ್ತಿಯನ್ನು ಸಾಧಿಸಲು ಜಲ ಜೀವನ್ ಮಿಷನ್ ಯೋಜನೆಯನ್ನು 2028 ರವರೆಗೆ ವಿಸ್ತರಣೆ ಮಾಡಿರುವುದನ್ನೂ ಘೋಷಿಸಲಾಗಿದೆ.

6.ಬೆಳೆಗಳ ತಳಿ ಬ್ಯಾಂಕ್‌

ಭಾರತದ ಗ್ರಾಮೀಣ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಈಗಲೂ ಬೆಳೆಗಳ ತಳಿಗಳು ಬಳಕೆಯಲ್ಲಿವೆ. ಅವುಗಳನ್ನು ಮುಂದಿನ ಪೀಳಿಗೆಗಳಿಗೂ ಉಳಿಸುವ ನಿಟ್ಟಿನಲ್ಲಿ ತಳಿ ಬ್ಯಾಂಕ್‌ಗಳನ್ನು ಸ್ಥಾಪಿಸಲಾಗುವುದು. ಆ ಮೂಲಕ ಸುಮಾರು 10 ಲಕ್ಷ ಸೂಕ್ಷ್ಮಾಣು ಕೋಶಗಳ ಸಂರಕ್ಷಣೆಗೂ ಇದು ಸಹಕಾರಿಯಾಗಲಿದೆ. ಅಷ್ಟೇ ಅಲ್ಲದೇ ಇದು ಆಹಾರ ಮತ್ತು ಪೌಷ್ಟಿಕಾಂಶದ ಭದ್ರತೆಗೂ ಒತ್ತು ಕೊಡಲಿದೆ. ಸಾರ್ವಜನಿಕ ಮತ್ತು ಖಾಸಗಿ ವಲಯಗಳಲ್ಲಿನ ದೇಸಿಯ ಸಂಪನ್ಮೂಲಗಳ ಸಂರಕ್ಷಣೆಗೂ ಆದ್ಯತೆ ಸಿಕ್ಕಂತೆ ಆಗಲಿದೆ.

7.ಗಿಗ್‌ ಕಾರ್ಮಿಕರಿಗೆ ಆನ್‌ಲೈನ್ ಪ್ಲಾಟ್‌ಫಾರ್ಮ್

ಭಾರತದಲ್ಲಿ ನಿತ್ಯ ಆದಾಯದೊಂದಿಗೆ ಕೆಲಸ ಮಾಡುವ ಗಿಗ್‌ ಕಾರ್ಮಿಕರ ಹಿತರಕ್ಷಣೆಗೆ ಈಗಾಗಲೇ ಒತ್ತು ನೀಡಿದ್ದರೂ ಅವರ ಹಿತರಕ್ಷಣೆಗೆ ಇನ್ನಷ್ಟು ಸುಧಾರಿತ ಕ್ರಮಗಳನ್ನು ಪ್ರಕಟಿಸಲಾಗಿದೆ. ಕಾರ್ಮಿಕರ ಕಲ್ಯಾಣಕ್ಕಾಗಿ ಸಾಮಾಜಿಕ ಭದ್ರತಾ ಯೋಜನೆಯಡಿಯಲ್ಲಿ ಆನ್‌ಲೈನ್‌ ಸೇವೆಯನ್ನು ಇನ್ನಷ್ಟು ಬಲಪಡಿಸಲಾಗುವುದು. ಇ-ಶ್ರಮ್ ಪೋರ್ಟಲ್‌ನಲ್ಲಿ ಅವರ ಗುರುತಿನ ಚೀಟಿ ಮತ್ತು ನೋಂದಣಿಗಾಗಿ ವ್ಯವಸ್ಥೆ ಮಾಡುವುದು.ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆಯಡಿ ಆರೋಗ್ಯ ಸೇವೆ ಒದಗಿಸುವುದು ಇದರಲ್ಲಿ ಸೇರಿದೆ. ಸುಮಾರು 1 ಕೋಟಿ ಗಿಗ್ ಕಾರ್ಮಿಕರಿಗೆ ಆನ್‌ಲೈನ್‌ ಸೇವೆ ಬಲಪಡಿಸುವುದರಿಂದ ಉಪಯೋಗವಾಗಲಿದೆ. ಕೇಂದ್ರ ಸರ್ಕಾರದ ಆರ್ಥಿಕ ಸೌಲಭ್ಯಗಳ ನೇರ ಪ್ರಯೋಜನ ಅವರಿಗೆ ಸಿಗಲಿವೆ

8. ಜಿಲ್ಲಾಸ್ಪತ್ರೆಗಳಲ್ಲಿ ಡೇಕೇರ್‌ ಕೇಂದ್ರ

ಭಾರತದಲ್ಲಿ ಕ್ಯಾನ್ಸರ್‌ ರೋಗಿಗಳಿಗೆ ಹಲವು ಕಡೆ ಆಸ್ಪತ್ರೆ, ಚಿಕಿತ್ಸಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಇದರ ಮುಂದುವರೆದ ಭಾಗವಾಗಿಯೇ ಭಾರತದ ಎಲ್ಲಾ ಜಿಲ್ಲಾ ಕೇಂದ್ರಗಳ ಜಿಲ್ಲಾಸ್ಪತ್ರೆಗಳಲ್ಲಿ ಡೇ ಕೇರ್ ಕ್ಯಾನ್ಸರ್ ಕೇಂದ್ರಗಳನ್ನು ತೆರೆಯಲಾಗುವುದು. ಮುಂದಿನ 3 ವರ್ಷಗಳಲ್ಲಿ ಜಿಲ್ಲಾ ಆಸ್ಪತ್ರೆಗಳಲ್ಲಿ 200 ಕೇಂದ್ರಗಳನ್ನು ಸ್ಥಾಪಿಸುವ ಗುರಿಯನ್ನು ಇಟ್ಟುಕೊಳ್ಳಲಾಗಿದೆ. ಇದರಿಂದ ಕ್ಯಾನ್ಸರ್‌ ಪೀಡಿತ ರೋಗಿಗಳಿಗೆ ಆಗುತ್ತಿರುವ ಖರ್ಚಿನ ಹೊರೆಯೂ ತಪ್ಪಲಿದೆ.

9. ಶಿಕ್ಷಣ ವಲಯದಲ್ಲಿ ಎಐ ಶ್ರೇಷ್ಟತೆಯ ಕೇಂದ್ರ

ಈಗ ಎಲ್ಲಾ ವಲಯಗಳಲ್ಲೂ ಕೃತಕ ಬುದ್ದಿಮತ್ತೆ ತಂತ್ರಜ್ಞಾನದ ಯಥೇಚ್ಛ ಬಳಕೆಯಾಗುತ್ತಿದೆ. ಕೃಷಿ. ಆರೋಗ್ಯ, ಶಿಕ್ಷಣ ವಲಯದಲ್ಲೂ ಇದರ ಬಳಕೆ ಹೆಚ್ಚಿದೆ. ಈ ಕಾರಣದಿಂದಲೇ ಶಿಕ್ಷಣ ವಲಯದಲ್ಲಿ ಎಐ ಸಮರ್ಪಕ ಬಳಕೆ ಹಾಗೂ ಸಂಶೋಧನೆಯಂತಹ ಚಟುವಟಿಕೆಗಳನ್ನು ರೂಪಿಸಲು ಸುಮಾರು 500 ವೆಚ್ಚದಲ್ಲಿ ಕೃತಕ ಬುದ್ಧಿಮತ್ತೆ ಉತ್ಕೃಷ್ಟತಾ ಕೇಂದ್ರವನ್ನು ಸ್ಥಾಪಿಸಲಾಗುವುದು. ಈಗಾಗಲೇ ಕೃಷಿ, ಆರೋಗ್ಯ ಹಾಗೂ ಸುಸ್ಥಿರ ನಗರಗಳ ಪ್ರಗತಿಗೆ ಪೂರಕವಾಗಿ ಕೃತಕ ಬುದ್ಧಿಮತ್ತೆ ಕೇಂದ್ರಗಳನ್ನು ಎರಡು ವರ್ಷದ ಹಿಂದಿನ ಬಜೆಟ್‌ನಲ್ಲಿ ಘೋಷಿಸಲಾಗಿತ್ತು.

10. ಶಾಲೆಗಳಲ್ಲಿ ಅಟಲ್‌ ಪ್ರಯೋಗಾಲಯಗಳು

ಭಾರತದಲ್ಲಿ ಈಗಲೂ ಸರ್ಕಾರಿ ಶಾಲೆಗಳಲ್ಲಿ ಕೋಟ್ಯಂತರ ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ. ಭಾರತದ ಎಲ್ಲಾ ರಾಜ್ಯಗಳಲ್ಲೂ ಸರ್ಕಾರಿ ಶಾಲಾ ಶಿಕ್ಷಣ ಬಲವಾಗಿದೆ. ಮಕ್ಕಳಲ್ಲಿ ಕುತೂಹಲ ಹಾಗೂ ನಾವಿನ್ಯತೆ ರೂಪಿಸುವ ನಿಟ್ಟಿನಲ್ಲಿ ಮಾಜಿ ಪ್ರಧಾನಿ ಅಟಲ್‌ ಬಿಹಾರ ವಾಜಪೇಯಿ ಅವರ ಹೆಸರಲ್ಲಿ ಪ್ರಯೋಗಾಲಯಗಳು ಸ್ಥಾಪನೆಯಾಗಲಿವೆ. ಭಾರತದಾದ್ಯಂತ ಸುಮಾರು ಐವತ್ತು ಸಾವಿರ ಅಟಲ್ ಪ್ರಯೋಗಾಲಯಗಳು ಮುಂದಿನ ವರ್ಷಗಳಲ್ಲಿ ರೂಪುಗೊಳ್ಳಲಿವೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.