Union Budget 2025: ಬಜೆಟ್ ಘೋಷಣೆಯ ಪ್ರಮುಖ ಅಂಶಗಳು: ಚುನಾವಣಾ ವರ್ಷದಲ್ಲಿ ಬಿಹಾರಕ್ಕೆ ಬಂಪರ್‌ ಕೊಡುಗೆ ನೀಡಿದ ನಿರ್ಮಲಾ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Union Budget 2025: ಬಜೆಟ್ ಘೋಷಣೆಯ ಪ್ರಮುಖ ಅಂಶಗಳು: ಚುನಾವಣಾ ವರ್ಷದಲ್ಲಿ ಬಿಹಾರಕ್ಕೆ ಬಂಪರ್‌ ಕೊಡುಗೆ ನೀಡಿದ ನಿರ್ಮಲಾ

Union Budget 2025: ಬಜೆಟ್ ಘೋಷಣೆಯ ಪ್ರಮುಖ ಅಂಶಗಳು: ಚುನಾವಣಾ ವರ್ಷದಲ್ಲಿ ಬಿಹಾರಕ್ಕೆ ಬಂಪರ್‌ ಕೊಡುಗೆ ನೀಡಿದ ನಿರ್ಮಲಾ

Union Budget 2025: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಮಂಡಿಸಿದ ಬಜೆಟ್‌ನಲ್ಲಿ ಬಿಹಾರಕ್ಕೆ ಸಿಂಹಪಾಲು ಇರುವುದು ಕಂಡುಬಂದಿತು.

ನಿರ್ಮಲಾ ಸೀತಾರಾಮನ್‌ ಮಂಡಿಸಿದ ಬಜೆಟ್‌ನಲ್ಲಿ ಬಿಹಾರಕ್ಕೆ ಸಿಂಹಪಾಲು
ನಿರ್ಮಲಾ ಸೀತಾರಾಮನ್‌ ಮಂಡಿಸಿದ ಬಜೆಟ್‌ನಲ್ಲಿ ಬಿಹಾರಕ್ಕೆ ಸಿಂಹಪಾಲು (PTI)

Union Budget 2025: ಈ ವರ್ಷದ ಅಕ್ಟೋಬರ್‌ನಲ್ಲಿ ನಡೆಯಲಿರುವ ಬಿಹಾರ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ನಿರ್ಮಲಾ ಸೀತಾರಾಮನ್‌ ಅವರು ಶನಿವಾರ ಮಂಡಿಸಿದ ಬಜೆಟ್‌ ನಲ್ಲಿ ಬಿಹಾರ ರಾಜ್ಯಕ್ಕೆ ಹೆಚ್ಚಿನ ಮಹತ್ವ ದೊರೆತಿದೆ. ಎನ್‌ಡಿಎ ಪ್ರಮುಖ ಪಾಲುದಾರ ಪಕ್ಷವಾಗಿರುವ ಸಂಯುಕ್ತ ಜನತಾದಳ ಬಿಹಾರದ ಪ್ರಗತಿ ನಿಟ್ಟಿನಲ್ಲಿ ಹಲವು ಬೇಡಿಕೆಗಳನ್ನು ಮಂಡಿಸಿದ್ದು,ಅದರಂತೆಯೇ ಬಜೆಟ್‌ನಲ್ಲಿ ಆದ್ಯತೆಯನ್ನು ನೀಡಿದಂತೆ ಕಾಣುತ್ತಿದೆ. ಬಿಹಾರ ರಾಜ್ಯ ಮೂಲದ ಮಧುಬನಿ ಕಲೆಯ ಹಿನ್ನೆಲೆ ಹೊಂದಿರುವ ವಿಶೇಷ ಸೀರೆಯನ್ನು ಉಟ್ಟು ಬಜೆಟ್‌ ಮಂಡನೆಗೆ ಅಗಮಿಸಿದ ನಿರ್ಮಲಾ ಅವರ ಪ್ರತಿ ವಿಷಯಗಳ ಮಂಡನೆಯಲ್ಲಿ ಬಿಹಾರದ ಹೆಸರು ಉಲ್ಲೇಖವಾಗುತ್ತಿರುವುದು ಕಂಡು ಬಂದಿತು.

ಬಿಹಾರಕ್ಕೆ ಹಲವು ಕೊಡುಗೆಗನ್ನು ನೀಡಲಾಗಿದೆ. ಅದರಲ್ಲಿ ನಾವು ಬಿಹಾರದಲ್ಲಿ ರಾಷ್ಟ್ರೀಯ ಆಹಾರ ತಂತ್ರಜ್ಞಾನ ಸಂಸ್ಥೆಯನ್ನು ಸ್ಥಾಪಿಸುತ್ತೇವೆ, ಇದು ಪೂರ್ವ ಭಾರತದಲ್ಲಿ ಆಹಾರ ಸಂಸ್ಕರಣೆಯನ್ನು ಹೆಚ್ಚಿಸುತ್ತದೆ. ಇದು ಯುವಕರಿಗೆ ಉದ್ಯೋಗವನ್ನು ಸೃಷ್ಟಿಸುತ್ತದೆ ಎನ್ನುವುದು ಸಚಿವರು ನೀಡಿದ ವಿವರಣೆ.

ಆಹಾರವಾಗಿ ಬಳಸುವ ಮಖಾನಾ ಉತ್ಪಾದನೆ, ಸಂಸ್ಕರಣೆ, ಮೌಲ್ಯವರ್ಧನೆ ಮತ್ತು ಮಾರುಕಟ್ಟೆಯನ್ನು ಸುಧಾರಿಸಲು ಬಿಹಾರ ರಾಜ್ಯದಲ್ಲಿ ಮಖಾನಾ ಮಂಡಳಿಯನ್ನು ಸ್ಥಾಪಿಸಲಾಗುವುದು. ಈ ಚಟುವಟಿಕೆಗಳಲ್ಲಿ ತೊಡಗಿರುವ ಜನರನ್ನು ಎಫ್ ಪಿಒಗಳಾಗಿ ಸಂಘಟಿಸಲಾಗುವುದು. ಮಂಡಳಿಯು ಮಖಾನಾ ರೈತರಿಗೆ ಕೈಹಿಡಿಯುವ ಮತ್ತು ತರಬೇತಿ ಬೆಂಬಲವನ್ನು ಒದಗಿಸುತ್ತದೆ ಮತ್ತು ಅವರು ಎಲ್ಲಾ ಸಂಬಂಧಿತ ಸರ್ಕಾರಿ ಯೋಜನೆಗಳ ಪ್ರಯೋಜನಗಳನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ಸಹ ಕೆಲಸ ಮಾಡುತ್ತದೆ ಎಂದು ನಿರ್ಮಲಾ ಪ್ರತಿಪಾದಿಸಿದರು.

ಭಾರತದಲ್ಲಿ ಐಐಟಿಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹತ್ತು ವರ್ಷದಲ್ಲಿ ದ್ವಿಗುಣಗೊಂಡಿದೆ. ಈ ಕಾರಣದಿಂದ ಬಿಹಾರದ ಪಾಟ್ನಾದಲ್ಲಿನ ಐಐಟಿ ಸಹಿತ ಭಾರತದ ಇತರೆ ಐಐಟಿಗಳಲ್ಲಿ ಆರೂವರೆ ಸಾವಿರ ಸೀಟುಗಳನ್ನು ಏರಿಸಲಾಗುವುದು ಎಂದರು ನಿರ್ಮಲಾ ಸೀತಾರಾಮನ್‌.

ಐಐಟಿಗಳಲ್ಲಿ ಹಾಸ್ಟಲ್‌ಗಳು, ಕಟ್ಟಡಗಳ ನಿರ್ಮಾಣ ಸಹಿತ ಹಲವು ಯೋಜನೆಗಳನ್ನು ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದೆ.

ಬಿಹಾರ ರಾಜ್ಯದ ಭವಿಷ್ಯದ ಅಗತ್ಯಗಳನ್ನು ಪೂರೈಸಲು ಬಿಹಾರದಲ್ಲಿ ಗ್ರೀನ್‌ಫೀಲ್ಡ್ ವಿಮಾನ ನಿಲ್ದಾಣಗಳ ಬಳಕೆಯನ್ನು ಸರ್ಕಾರವು ಸುಗಮಗೊಳಿಸಲಿದೆ ಎಂದೂ ಹೇಳಿದ್ದಾರೆ.

ಬಿಹಾರದ ಪಶ್ಚಿಮ ಕೋಶಿ ಕಾಲುವೆ ಆಧುನೀಕರಣಕ್ಕೆ ಹಣಕಾಸಿನ ನೆರವು ನೀಡಲಾಗುವುದು 50,000 ಹೆಕ್ಟೇರ್‌ಗಿಂತಲೂ ಹೆಚ್ಚು ಕೃಷಿ ಮಾಡುತ್ತಿರುವ ಹೆಚ್ಚಿನ ಸಂಖ್ಯೆಯ ರೈತರಿಗೆ ಯೋಜನೆ ಲಾಭದಾಯಕವಾಗಲಿದೆ. ಬಿಹಾರದ ಮಿಥಿಲಾಂಚಲ್ ಪ್ರದೇಶದಲ್ಲಿರುವ ಈ ಯೋಜನೆಗೆ ಆರ್ಥಿಕ ನೆರವು ಸಿಗಲಿದೆ ಎಂದು ನಿರ್ಮಲಾ ತಿಳಿಸಿದ್ದಾರೆ

ಬಿಹಾರದಲ್ಲಿ ರಾಜಕೀಯ ಹಾವು ಏಣಿ ಆಟದಂತೆ ಜೆಡಿಯು ಒಮ್ಮೆ ಎನ್‌ಡಿಎ ಜತೆಗೆ ಮತ್ತೊಮ್ಮೆ ಯುಪಿಎ ಜತೆ ಗುರುತಿಸಿಕೊಂಡಿದೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಎನ್‌ಡಿಒ ಜತೆಯಲ್ಲಿಯೇ ಉಳಿದುಕೊಂಡು ನಂತರವೂ ಎನ್‌ಡಿಎ ಸರ್ಕಾರದ ಭಾಗವಾಗಿದ್ದಾರೆ ಜೆಡಿಯುನ ನಿತೀಶ್‌ಕುಮಾರ್.‌ ಹೊಸ ಸರ್ಕಾರ ರಚನೆಯಾದ ನಂತರ ಬಿಹಾರಕ್ಕೆ ಇನ್ನಿಲ್ಲದ ಒತ್ತನ್ನು ಮೋದಿ ಸಹಿತ ಹಲವು ನಾಯಕರು ನೀಡುತ್ತಿದ್ದಾರೆ. ಈ ವರ್ಷ ವಿಧಾನಸಭೆ ಚುನಾವಣೆಗೆ ಬಿಹಾರ ಅಣಿಯಾಗುತ್ತಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರವು ಬಿಹಾರಕ್ಕೆ ವಿಶೇಷ ಒತ್ತು ನೀಡಿದೆ ಎನ್ನುವ ಮಾತುಗಳು ಕೇಳಿ ಬಂದಿವೆ. ನಿರ್ಮಲಾ ಸೀತಾರಾಮನ್‌ ಅವರು ಬಜೆಟ್‌ ಮಂಡಿಸುವಾಗ ಬಿಹಾರ ಹೆಸರು ಪ್ರಸ್ತಾಪಿಸುತ್ತಿದ್ದಂತೆ ಸಂಸತ್ತಿನಲ್ಲಿ ಪ್ರತಿಪಕ್ಷಗಳ ಕಡೆಯಿಂದ ಹೋ ಎನ್ನುವ ಶಬ್ದ ಜೋರಾಗಿಯೇ ಕೇಳಿ ಬರುತ್ತಿತ್ತು.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.