ಕೇಂದ್ರ ಬಜೆಟ್ 2025; ಸಂಸತ್ ಅಧಿವೇಶನಕ್ಕೆ ಚಾಲನೆ ನೀಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು, ಭಾರತ ಸರ್ಕಾರದ ಎಐ ಮಿಷನ್ ಬಗ್ಗೆ ಪ್ರಶಂಸೆ
Union Budget 2025 Session: ಕೇಂದ್ರ ಬಜೆಟ್ ಅಧಿವೇಶನ ಶುರುವಾಗಿದೆ. ಸಂಸತ್ತಿನ ಜಂಟಿ ಅಧಿವೇಶನಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಚಾಲನೆ ನೀಡಿದ್ದು, ಭಾರತ ಸರ್ಕಾರದ ಎಐ ಮಿಷನ್ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು. ನಾಳೆ (ಫೆ.1) ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಲೋಕಸಭೆಯಲ್ಲಿ ಕೇಂದ್ರ ಬಜೆಟ್ 2025 ಮಂಡಿಸಲಿದ್ದಾರೆ.

Union Budget 2025 Session: ಸಂಸತ್ತಿನಲ್ಲಿ ಕೇಂದ್ರ ಬಜೆಟ್ ಅಧಿವೇಶನ ಶುರುವಾಗಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಂಸತ್ತಿನ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಿದ್ದು, ಉತ್ತರ ಪ್ರದೇಶದ ಮಹಾಕುಂಭದಲ್ಲಿ ಬುಧವಾರ ನಡೆದ ಕಾಲ್ತುಳಿತದ ಬಗ್ಗೆ ಸಂತಾಪ ಸೂಚಿಸಿದರು. ಬುಧವಾರ ಈ ದುರಂತ ಸಂಭವಿಸಿತ್ತು. ನಂತರ ಭಾರತ ಸರ್ಕಾರ ಕೈಗೊಂಡ ಅನೇಕ ಕಾರ್ಯಕ್ರಮಗಳನ್ನು ಉಲ್ಲೇಖಿಸಿದರು. ಅವುಗಳ ಪರಿಣಾಮಗಳನ್ನು ಉಲ್ಲೇಖಿಸಿ ಪ್ರಶಂಸೆ ವ್ಯಕ್ತಪಡಿಸಿದರು. ಭಾರತ ಸರ್ಕಾರದ ಎಐ ಮಿಷನ್ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು
ಕೇಂದ್ರ ಬಜೆಟ್ ಅಧಿವೇಶನಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಚಾಲನೆ
"ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಐತಿಹಾಸಿಕ ಮಹಾ ಕುಂಭ ನಡೆಯುತ್ತಿದೆ. ಇದು ನಮ್ಮ ಸಾಂಸ್ಕೃತಿಕ ಸಂಪ್ರದಾಯಗಳು ಮತ್ತು ಸಾಮಾಜಿಕ ಜಾಗೃತಿಗಳ ಹಬ್ಬವಾಗಿದೆ. ಪವಿತ್ರ ಹಬ್ಬದಲ್ಲಿ ಮೌನಿ ಅಮಾವಾಸ್ಯೆ ಮತ್ತು ಬುಧವಾರ ಸಂಭವಿಸಿದ ದುರಂತದ ಬಗ್ಗೆ ಸಂತಾಪವಿದೆ. ಗಾಯಗೊಂಡವರ ತ್ವರಿತ ಚೇತರಿಕೆಗಾಗಿ ಪ್ರಾರ್ಥಿಸುವುದಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಹೇಳಿದರು.
ಕಳೆದ ವರ್ಷ ಡಿಸೆಂಬರ್ 26 ರಂದು ನಿಧನರಾದ ಭಾರತದ ಮಾಜಿ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು, ದೇಶದ ಸಂವಿಧಾನವನ್ನು ಅಳವಡಿಸಿಕೊಂಡು 75 ವರ್ಷಗಳಾಗಿರುವ ಹಿನ್ನೆಲೆಯಲ್ಲಿ ಎಲ್ಲರಿಗೂ ಶುಭಕೋರಿದರು.
ಮೋದಿ ಸರ್ಕಾರದ ಕ್ರಮಗಳನ್ನು ಪ್ರಶಂಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು
ಹಿಂದಿನ ಆಡಳಿತಕ್ಕೆ ಹೋಲಿಸಿದರೆ ಈಗ ಮೂರನೇ ಬಾರಿಗೆ ಆಡಳಿತದ ವೇಗ ಹೆಚ್ಚಳವಾಗಿದೆ. ನನ್ನ ಸರ್ಕಾರವು ಮಧ್ಯಮ ವರ್ಗದವರು ತಮ್ಮ ಸ್ವಂತ ಮನೆ ಹೊಂದುವ ಕನಸು ನನಸು ಮಾಡುವುದಕ್ಕೆ ಬದ್ಧವಾಗಿದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಹೇಳಿದರು.
ಎರಡು ತಿಂಗಳ ಹಿಂದೆ ನಾವು ಸಂವಿಧಾನವನ್ನು ಅಳವಡಿಸಿಕೊಂಡು 75 ವರ್ಷಗಳ ಸಂಭ್ರಮವನ್ನು ಆಚರಿಸಿಕೊಂಡೆವು. ಅದಕ್ಕೂ ಕೆಲವು ದಿನಗಳ ಮೊದಲು ನಾವು ನಮ್ಮ ಗಣರಾಜ್ಯದ 75 ವರ್ಷಗಳ ಪ್ರಯಾಣವನ್ನು ಪೂರ್ಣಗೊಳಿಸಿದೆವು. ಎಲ್ಲ ಭಾರತೀಯರ ಪರವಾಗಿ ನಾನು ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಮತ್ತು ಸಂವಿಧಾನ ರಚನಾ ಸಮಿತಿಯ ಎಲ್ಲ ಸದಸ್ಯರಿಗೂ ತಲೆಬಾಗಿ ನಮಿಸುತ್ತೇನೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಹೇಳಿದರು.
ಭಾರತವು ತನ್ನ ಸಂವಿಧಾನವನ್ನು ನವೆಂಬರ್ 26, 1949 ರಂದು ಅಳವಡಿಸಿಕೊಂಡಿತು. ಇದು ಜನವರಿ 26, 1950 ರಂದು ಜಾರಿಗೆ ಬಂದಿತು. ನವೆಂಬರ್ 26 ಅನ್ನು ಸಂವಿಧಾನ ದಿನ ಅಥವಾ ಸಂವಿಧಾನ ದಿನ ಅಥವಾ ಸಂವಿಧನ್ ದಿವಾಸ್ ಎಂದು ಆಚರಿಸಲಾಗುತ್ತದೆ, ಜನವರಿ 26 ಅನ್ನು ಗಣರಾಜ್ಯ ದಿನವೆಂದು ಆಚರಿಸಲಾಗುತ್ತದೆ.
ರಾಷ್ಟ್ರಪತಿ ಮುರ್ಮು ಅವರು, "ನನ್ನ ಸರ್ಕಾರವು ದೇಶದಲ್ಲಿ ಮಹಿಳಾ ನೇತೃತ್ವದಲ್ಲಿ ಅಭಿವೃದ್ಧಿ ಸಾಧಿಸುವುದನ್ನು ನಂಬುತ್ತದೆ. 3 ಕೋಟಿ ಲಕ್ಷಾಧೀಶ ದೀದಿಯರನ್ನು ಸಾಧಿಸುವ ಗುರಿಯನ್ನು ಸರ್ಕಾರ ಹೊಂದಿದೆ ಎಂದು ಹೇಳಿದರಲ್ಲದೆ, ಭಾರತ ಸರ್ಕಾರದ ಎಐ ಮಿಷನ್ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು. ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಕ್ಷೇತ್ರದಲ್ಲಿ ಭಾರತದ ಕೊಡುಗೆಯನ್ನು ಮತ್ತಷ್ಟು ಹೆಚ್ಚಿಸುವುದಕ್ಕೆ ಕೇಂದ್ರ ಸರ್ಕಾರ ಪ್ರಯತ್ನ ಮುಂದುವರಿಸಿದೆ ಎಂದು ಹೇಳಿದರು.
ಡಿಜಿಟಲ್ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತವು ಜಾಗತಿಕ ಮಟ್ಟದ ಸ್ಪರ್ಧೆಯನ್ನು ಇತರೆ ದೇಶಗಳೊಂದಿಗೆ ತನ್ನನ್ನೂ ಗುರುತಿಸಿಕೊಂಡು ಮುನ್ನಡೆಯುತ್ತಿದೆ. ಬಾಹ್ಯಾಕಾಶ ಕ್ಷೇತ್ರದಲ್ಲಿ ಕೂಡ ಸಾಧನೆ ವಿಶೇಷವಾಗಿದ್ದು, ಮಾನವ ಸಹಿತ ಗಗನಯಾನವನ್ನು ಭಾರತ ಕೈಗೊಳ್ಳುವ ದಿನ ದೂರ ಇಲ್ಲ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಹೇಳಿದರು.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಸಂಸತ್ ಅಧಿವೇಶನದಲ್ಲಿ ಮಾತನಾಡುವುದಕ್ಕೆ ಉಪರಾಷ್ಟ್ರಪತಿ ಜಗದೀಪ್ ಧನ್‌ಖಡ್, ಪ್ರಧಾನಿ ನರೇಂದ್ರ ಮೋದಿ, ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು ಮರಮಾಡಿಕೊಂಡರು. ಇದರೊಂದಿಗೆ ಕೇಂದ್ರ ಬಜೆಟ್ ಅಧಿವೇಶನಕ್ಕೆ ಅಧಿಕೃತ ಚಾಲನೆ ಸಿಕ್ಕಂತಾಗಿದೆ. ನಾಳೆ (ಫೆ1) ಕೇಂದ್ರ ಬಜೆಟ್ 2025 ಮಂಡನೆಯಾಗಲಿದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡಿಸಲಿದ್ದಾರೆ.

ವಿಭಾಗ