Union Budget 2025: ನಿರ್ಮಲಾ ಸೀತಾರಾಮನ್ ಬಜೆಟ್‌ನಲ್ಲಿ ಯಾವುದು ಅಗ್ಗ, ಯಾವುದು ದುಬಾರಿ?
2024ರ ಲೋಕಸಭಾ ಚುನಾವಣೆಯಲ್ಲಿ ಕೇಂದ್ರದಲ್ಲಿ ಅಧಿಕಾರಕ್ಕೆ ಮರಳಿದ ಮೋದಿ 3.0 ಸರ್ಕಾರ ಎರಡನೇ ಪೂರ್ಣ ಬಜೆಟ್ ಮಂಡನೆಯಾಗಿದೆ. ನಿರ್ಮಲಾ ಸೀತಾರಾಮನ್ ಬಜೆಟ್‌ನಲ್ಲಿ ಯಾವುದು ಅಗ್ಗ ಹಾಗೂ ಯಾವುದೆಲ್ಲಾ ದುಬಾರಿಯಾಗಿವೆ ನೋಡೋಣ.

Union Budget 2025: ನಿರ್ಮಲಾ ಸೀತಾರಾಮನ್ ಬಜೆಟ್‌ನಲ್ಲಿ ಯಾವುದು ಅಗ್ಗ, ಯಾವುದು ದುಬಾರಿ? (Sansad TV)
ನವದೆಹಲಿ: ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2025-2026ನೇ ಸಾಲಿನ ಕೇಂದ್ರ ಬಜೆಟ್ ಮಂಡಿಸಿದ್ದಾರೆ. ಮಧ್ಯಮ ವರ್ಗದವರನ್ನು ಗಮದಲ್ಲಿಟ್ಟುಕೊಂಡು ಕೆಲವು ಪ್ರಮುಖ ಘೋಷಣೆಗಳನ್ನು ಮಾಡಲಾಗಿದೆ. ಇದೇ ವೇಳೆ ಬಜೆಟ್‌ನಲ್ಲಿ ಯಾವುದೇಲ್ಲಾ ಅಗ್ಗವಾಗಿದೆ ಹಾಗೂ ಯಾವೆಲ್ಲಾ ವಸ್ತುಗಳು ದುಬಾರಿಯಾಗಿವೆ ಎಂಬುದನ್ನು ತಿಳಿಯೋಣ. 2024ರ ಲೋಕಸಭಾ ಚುನಾವಣೆಯಲ್ಲಿ ಕೇಂದ್ರದಲ್ಲಿ ಅಧಿಕಾರಕ್ಕೆ ಮರಳಿದ ಮೋದಿ 3.0 ಸರ್ಕಾರದ ಎರಡನೇ ಪೂರ್ಣ ಪ್ರಮಾಣದ ಬಜೆಟ್ ಇದಾಗಿದೆ. ಈ ವರ್ಷದ ಬಜೆಟ್‌ನಲ್ಲಿ ಕೃಷಿ, ಉತ್ಪಾದನೆ, ಉದ್ಯೋಗ, ಎಂಎಸ್ಎಂಇಗಳು, ಗ್ರಾಮೀಣ ಪ್ರದೇಶಗಳ ಉನ್ನತೀಕರಣ, ನಾವೀನ್ಯತೆ ಸೇರಿದಂತೆ 10 ವಿಶಾಲ ಕ್ಷೇತ್ರಗಳ ಮೇಲೆ ಕೇಂದ್ರೀಕರಿಸಿದೆ.
ಇವುಗಳು ಅಗ್ಗ
- ಕ್ಯಾನ್ಸರ್, ಅಪರೂಪದ ಕಾಯಿಲೆಗಳಿಗೆ ನೀಡುವ 36 ಔಷಧಿಗಳಿಗೆ ಮೂಲ ಕಸ್ಟಮ್ಸ್ ಸುಂಕದಿಂದ ವಿನಾಯಿತಿ ನೀಡಲಾಗುವುದು. ಹೀಗಾಗಿ ಇವು ಅಗ್ಗವಾಗಲಿದೆ.
- ಇನ್ನೂ 37 ಔಷಧಿಗಳ ಮೇಲೆ ಮೂಲ ಕಸ್ಟಮ್ ಸುಂಕವನ್ನು ವಿನಾಯಿತಿ ನೀಡಲು ಸರ್ಕಾರ ಪ್ರಸ್ತಾಪಿಸಿದೆ.
- ಕೋಬಾಲ್ಟ್ ಉತ್ಪನ್ನ, ಎಲ್ಇಡಿ, ಸತು, ಲಿಥಿಯಂ-ಐಯಾನ್ ಬ್ಯಾಟರಿ ಸ್ಕ್ರ್ಯಾಪ್ ಮತ್ತು 12 ನಿರ್ಣಾಯಕ ಖನಿಜಗಳಿಗೆ ಮೂಲ ಕಸ್ಟಮ್ಸ್ ಸುಂಕದಿಂದ ಸಂಪೂರ್ಣವಾಗಿ ವಿನಾಯಿತಿ ನೀಡಲು ಕೇಂದ್ರ ಪ್ರಸ್ತಾಪಿಸಿದೆ.
- ವೈಯರ್‌ಡ್ ಹೆಡ್‌ಸೆಟ್, ಮೈಕ್ರೊಫೋನ್ ಮತ್ತು ರಿಸೀವರ್, ಯುಎಸ್‌ಬಿ ಕೇಬಲ್ ಇತ್ಯಾದಿಗಳ ತಯಾರಿಕೆಗೆ ಬಳಸುವ ಕಚ್ಚಾ ವಸ್ತುಗಳ ಮೂಲ ಕಸ್ಟಮ್ಸ್ ಸುಂಕದಲ್ಲಿ ವಿನಾಯಿತಿ ನೀಡಲಾಗುತ್ತದೆ. ಹೀಗಾಗಿ ಈ ವಸ್ತುಗಳು ಅಗ್ಗವಾಗಲಿದೆ.
- 1600 ಸಿಸಿವರೆಗಿನ ಎಂಜಿನ್ ಸಾಮರ್ಥ್ಯದ ಮೋಟಾರ್‌ಸೈಕಲ್‌ಗಳಿಗೆ ಶೇಕಡಾ 50ರ ಬದಲು ಶೇಕಡಾ 40ರಷ್ಟು ಮೂಲ ಕಸ್ಟಮ್ಸ್ ಸುಂಕ ಮಾಡಲಾಗುತ್ತದೆ.
- 1600 ಸಿಸಿ ಮತ್ತು ಅದಕ್ಕಿಂತ ಹೆಚ್ಚಿನ ಎಂಜಿನ್ ಸಾಮರ್ಥ್ಯದ ಬೈಕುಗಳ ಮೂಲ ಕಸ್ಟಮ್ಸ್ ಸುಂಕ ಶೇಕಡಾ 50ರಿಂದ 30ಕ್ಕೆ ಇಳಿಕೆ ಮಾಡಲಾಗುತ್ತಿದೆ. ಹೀಗಾಗಿ ಬೈಕ್ ಬೆಲೆ ಇಳಿಕೆಯಾಗಲಿದೆ.
- ಕ್ರಸ್ಟ್ ಲೆದರ್ ಮೇಲಿನ ರಫ್ತು ಸುಂಕವನ್ನು ಶೇಕಡಾ 20ರಿಂದ ಶೂನ್ಯಕ್ಕೆ ಇಳಿಸಲಾಗಿದೆ.
- ಪ್ಲಾಟಿನಂ ಮೇಲಿನ ಮೂಲ ಕಸ್ಟಮ್ಸ್ ಸುಂಕವನ್ನು ಶೇಕಡಾ 25ರಿಂದ 6.4 ಕ್ಕೆ ಇಳಿಸಲಾಗುತ್ತಿದೆ.
- ಹಡಗು ತಯಾರಿಸಲು ಬಳಸುವ ಕಚ್ಚಾ ವಸ್ತುಗಳ ಮೇಲೆ ಮೂಲ ಕಸ್ಟಮ್ಸ್ ಸುಂಕವನ್ನು ಇನ್ನೂ 10 ವರ್ಷಗಳವರೆಗೆ ವಿನಾಯಿತಿ ನೀಡಲಾಗಿದೆ.
ಇವುಗಳು ದುಬಾರಿ
- ನೇಯ್ದ ಬಟ್ಟೆಗಳ ಮೇಲಿನ ಮೂಲ ಕಸ್ಟಮ್ಸ್ ಸುಂಕವು ಶೇಕಡಾ 10/20ರಿಂದ 20 ಅಥವಾ ಪ್ರತಿ ಕೆಜಿಗೆ 115ರೂ.ಗೆ (ಯಾವುದು ಹೆಚ್ಚು ಅದು) ಹೆಚ್ಚಾಗುತ್ತದೆ.
- ಇಂಟರ್ಯಾಕ್ಟಿವ್ ಫ್ಲಾಟ್ ಪ್ಯಾನಲ್ ಡಿಸ್‌ಪ್ಲೇ ಮೇಲಿನ ಮೂಲ ಕಸ್ಟಮ್ಸ್ ಸುಂಕವನ್ನು ಶೇಕಡಾ 10ರಿಂದ 20ಕ್ಕೆ ಹೆಚ್ಚಿಸಲು ಸರ್ಕಾರ ಪ್ರಸ್ತಾಪಿಸಿದೆ.
ಇದನ್ನೂ ಓದಿ | Income Tax Rules: ಮಧ್ಯಮ ವರ್ಗಕ್ಕೆ ಭರ್ಜರಿ ಗಿಫ್ಟ್ ಕೊಟ್ಟ ಮೋದಿ ಸರ್ಕಾರ: 12 ಲಕ್ಷದವರೆಗೂ ಯಾವುದೇ ತೆರಿಗೆ ಇಲ್ಲ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.