Union Budget: ಕೇಂದ್ರ ಬಜೆಟ್‌ಗೆ ಮುನ್ನ ನಡೆಯಲಿದೆ ಹಲ್ವಾ ಕಾರ್ಯಕ್ರಮ, ಏನಿದು, ಇದರ ಮಹತ್ವವೇನು
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Union Budget: ಕೇಂದ್ರ ಬಜೆಟ್‌ಗೆ ಮುನ್ನ ನಡೆಯಲಿದೆ ಹಲ್ವಾ ಕಾರ್ಯಕ್ರಮ, ಏನಿದು, ಇದರ ಮಹತ್ವವೇನು

Union Budget: ಕೇಂದ್ರ ಬಜೆಟ್‌ಗೆ ಮುನ್ನ ನಡೆಯಲಿದೆ ಹಲ್ವಾ ಕಾರ್ಯಕ್ರಮ, ಏನಿದು, ಇದರ ಮಹತ್ವವೇನು

Union Budget Halwa Ceremony: ಕೇಂದ್ರ ಬಜೆಟ್‌ ಮಂಡನೆಗೆ ಮೊದಲು ಬಜೆಟ್ ಪ್ರತಿ ತಯಾರಿಸುವ ಕಾರ್ಯಕ್ರಮ ನಡೆಯುತ್ತದೆ. ಅದಕ್ಕೆ ಮುನ್ನುಡಿಯಾಗಿ ಹಲ್ವಾ ಕಾರ್ಯಕ್ರಮ ನಡೆಯುತ್ತದೆ. ಏನಿದು ಕಾರ್ಯಕ್ರಮ, ಹಲ್ವಾ ಕಾರ್ಯಕ್ರಮದ ಮಹತ್ವ ಮತ್ತು ಇತರೆ ವಿವರ ಇಲ್ಲಿದೆ.

ಕೇಂದ್ರ ಬಜೆಟ್‌ಗೆ ಮುನ್ನ ನಡೆಯಲಿದೆ ಹಲ್ವಾ ಕಾರ್ಯಕ್ರಮ, ಏನಿದು, ಇದರ ಮಹತ್ವವೇನು. ಈ ಹಿಂದೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಹಲ್ವಾ ಕಾರ್ಯಕ್ರಮ ನೆರವೇರಿಸಿದ ಸಂದರ್ಭದ ಚಿತ್ರ.
ಕೇಂದ್ರ ಬಜೆಟ್‌ಗೆ ಮುನ್ನ ನಡೆಯಲಿದೆ ಹಲ್ವಾ ಕಾರ್ಯಕ್ರಮ, ಏನಿದು, ಇದರ ಮಹತ್ವವೇನು. ಈ ಹಿಂದೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಹಲ್ವಾ ಕಾರ್ಯಕ್ರಮ ನೆರವೇರಿಸಿದ ಸಂದರ್ಭದ ಚಿತ್ರ. (HTK (File Photo))

Union Budget Halwa Ceremony: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರವರಿ 1 ರಂದು ಕೇಂದ್ರ ಬಜೆಟ್ 2025 ಅನ್ನು ಸಂಸತ್ತಿನಲ್ಲಿ ಮಂಡಿಸಲಿದ್ದಾರೆ. ಈಗಾಗಲೇ ಸಮಾಲೋಚನೆಗಳನ್ನು ಪೂರ್ತಿಗೊಳಿಸಿ ಬಜೆಟ್ ಪ್ರತಿಯನ್ನು ಸಿದ್ಧಪಡಿಸುವುದರ ಕಡೆಗೆ ವಿತ್ತ ಸಚಿವಾಲಯ ಗಮನಹರಿಸಿದೆ. ಸಾರ್ವಜನಿಕರಿಂದಲೂ ಸಲಹೆ, ಸೂಚನೆಗಳನ್ನು ಆಹ್ವಾನಿಸಲಾಗಿತ್ತು. ಅವೆಲ್ಲವನ್ನೂ ಕ್ರೋಢೀಕರಿಸಿದ ಸಚಿವಾಲಯದ ಅಧಿಕಾರಿಗಳು ಅರ್ಹ ಸಲಹೆ ಸೂಚನೆಗಳನ್ನು ಸಚಿವರ ಗಮನಕ್ಕೆ ತಂದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕೇಂದ್ರ ಬಜೆಟ್ ಮಂಡನೆ ಫೆಬ್ರವರಿ 1ನೇ ತಾರೀಕು ಇರುವ ಕಾರಣ ಅದಕ್ಕೂ ಕೆಲವು ದಿನಗಳ ಮೊದಲು ಕೇಂದ್ರ ಬಜೆಟ್ ಪ್ರತಿ ಅಂತಿಮಗೊಳಿಸಿ ಮುದ್ರಣ ಮಾಡುವ ಕೆಲಸ ನಡೆಯುತ್ತದೆ. ಹಲ್ವಾ ಕಾರ್ಯಕ್ರಮ ಎಂದೇ ಗುರುತಿಸಲ್ಪಟ್ಟ ಹಲ್ವಾ ಹಂಚುವ ಕಾರ್ಯಕ್ರಮವೂ ಆಯೋಜನೆಯಾಗುತ್ತದೆ.

ಕೇಂದ್ರ ಬಜೆಟ್ 2025; ಹಲ್ವಾ ಕಾರ್ಯಕ್ರಮ ಎಂದರೇನು

ಕೇಂದ್ರ ಬಜೆಟ್ ಅಧಿವೇಶನ ಶುರುವಾಗುವ ಕೆಲವು ದಿನಗಳ ಮೊದಲು ನಡೆಯುವ ಕಾರ್ಯಕ್ರಮವೇ ಹಲ್ವಾ ಕಾರ್ಯಕ್ರಮ. ಇದು ಬಜೆಟ್ ಪ್ರತಿಯನ್ನು ಸಿದ್ಧಪಡಿಸುವುದಕ್ಕೆ ಮುಂಚಿತವಾಗಿ ಆ ಕೆಲಸದಲ್ಲಿ ಪಾಲ್ಗೊಳ್ಳುವ ಸಿಬ್ಬಂದಿಗೆ ಸಿಹಿ ತಿನಿಸುವ ಕಾರ್ಯಕ್ರಮ. ಇದಾದ ಬಳಿಕ ಬಜೆಟ್ ಪ್ರತಿ ಸಿದ್ಧಪಡಿಸುವ ಸಿಬ್ಬಂದಿ ಹೊರ ಜಗತ್ತಿನ ಸಂಪರ್ಕವಿಲ್ಲದಂತೆ ಕೆಲಸ ಮಾಡುತ್ತಾರೆ. ಬಜೆಟ್ ಪ್ರತಿ ಕುರಿತಾದ ಗೌಪ್ಯತೆ ಕಾಪಾಡಿಕೊಳ್ಳುವುದಕ್ಕಾಗಿ ಬಜೆಟ್ ಪ್ರತಿ ಸಿದ್ಧಪಡಿಸುವ ನೌಕರರು ತಮ್ಮ ಜತೆಗೆ ಯಾವುದೇ ಸಂಪರ್ಕ ಸಾಧನೆಗಳನ್ನು ಕೊಂಡೊಯ್ಯುವುದಿಲ್ಲ.

ದೀರ್ಘಕಾಲದಿಂದ ನಡೆದುಕೊಂಡು ಬಂದ ವಾಡಿಕೆ ಇದು. ದೊಡ್ಡ ಬಾಣಲೆಯಲ್ಲಿ ಬಿಸಿಬಿಸಿ ಹಲ್ವಾ ಸಿದ್ಧಮಾಡಿ ಸಿಬ್ಬಂದಿಗೆ ಹಂಚಲಾಗುತ್ತದೆ. ಹಣಕಾಸು ಸಚಿವರೇ ಖುದ್ದು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದು, ಅವರೇ ಹಣಕಾಸು ಸಚಿವಾಲಯದ ಸಿಬ್ಬಂದಿಗೆ ಅಂದರೆ ಬಜೆಟ್ ಪ್ರತಿ ಸಿದ್ಧಪಡಿಸುವ ನೌಕರರಿಗೆ ಹಲ್ವಾ ಹಂಚುತ್ತಾರೆ. ಹಣಕಾಸು ಸಚಿವಾಲಯ ಇರುವಂತಹ ನಾರ್ತ್ ಬ್ಲಾಕ್‌ನ ಬೇಸ್‌ಮೆಂಟ್‌ನಲ್ಲಿ ಈ ಕಾರ್ಯಕ್ರಮ ನಡೆಯುತ್ತದೆ. ಹಲ್ವಾ ಪಡೆದುಕೊಂಡ ನೌಕರರು, ನಾರ್ತ್ ಬ್ಲಾಕ್‌ನ ಬೇಸ್‌ಮೆಂಟ್‌ನಲ್ಲಿರುವ ಮುದ್ರಣಾಲಯದಲ್ಲಿ ಬಜೆಟ್ ಪ್ರತಿ ಸಿದ್ದಪಡಿಸುವ ಕೆಲಸಕ್ಕೆ ಹೋಗುತ್ತಾರೆ.

ಕೇಂದ್ರ ಬಜೆಟ್ 2025; ಹಲ್ವಾ ಕಾರ್ಯಕ್ರಮದ ಮಹತ್ವ

ಹಲ್ವಾ ಕಾರ್ಯಕ್ರಮದ ಮಹತ್ವದ ಬಗ್ಗೆ ಹೇಳುವುದಾದರೆ, ಗೌಪ್ಯತೆಯನ್ನು ಕಾಪಾಡಿಕೊಳ್ಳಲು ಮತ್ತು ಯಾವುದೇ ಸೋರಿಕೆಗಳಿಲ್ಲ ಎಂದು ಖಚಿತಪಡಿಸಿಕೊಳ್ಳಲು ನಾರ್ತ್ ಬ್ಲಾಕ್ ನೆಲಮಾಳಿಗೆಯನ್ನು ಕೋಟೆಯಾಗಿ ಪರಿವರ್ತಿಸಲಾಗುತ್ತದೆ. ಬಜೆಟ್ ತಯಾರಿಕೆ ಅಥವಾ ಮುದ್ರಣದಲ್ಲಿ ನೇರವಾಗಿ ತೊಡಗಿಸಿಕೊಂಡಿರುವ ಸುಮಾರು 100 ಅಧಿಕಾರಿಗಳು ಮತ್ತು ಇತರ ಸಿಬ್ಬಂದಿ ಹೊರ ಜಗತ್ತಿನಿಂದ ದೂರ ಉಳಿಯುತ್ತಾರೆ. ಹಣಕಾಸು ಸಚಿವರು ಬಜೆಟ್ ಮಂಡಿಸುವ ತನಕ ಇವರು ಯಾರೂ ಹೊರಗೆ ಬರುವುದಿಲ್ಲ.

ಈ ನೌಕರರು ತಮ್ಮ ಮನೆಯವರೊಂದಿಗೂ ನೇರವಾಗಿ ಮಾತನಾಡುವಂತೆ ಇಲ್ಲ. ಗುಪ್ತಚರ ಇಲಾಖೆಯ ಬಿಗಿ ನಿಗಾದೊಂದಿಗೆ ಬಜೆಟ್ ಪ್ರತಿ ಮುದ್ರಿಸುವ ಕೆಲಸ ನಡೆಯುತ್ತದೆ. ತುರ್ತು ಇದ್ದರೆ ಮಾತ್ರವೇ ಈ ನೌಕರರೊಂದಿಗೆ ಮನೆಯವರು ಸಂಪರ್ಕಿಸುವುದಕ್ಕೆ ಸಾಧ್ಯವಿದೆ. ಬಜೆಟ್ ಪ್ರತಿ ಮುದ್ರಣವಾಗುವ ಪ್ರದೇಶ ಬಿಗಿ ಸಿಸಿಟಿವಿ ಜಾಲ, ಇಲೆಕ್ಟ್ರಾನಿಕ್ ಜಾಮರ್‌, ಸೈಬರ್‌ ಸೆಕ್ಯುರಿಟಿಗಳನ್ನು ಬಳಸಲಾಗುತ್ತದೆ. ಹಣಕಾಸು ಸಚಿವರು ಮಾತ್ರವೇ ಮುದ್ರಣ ಸ್ಥಳಕ್ಕೆ ಬಂದು ಹೋಗಬಹುದು. ಆದರೆ ಮೊಬೈಲ್ ಫೋನ್ ಕೊಂಡೊಯ್ಯುವಂತೆ ಇಲ್ಲ. 1950ನೇ ಇಸವಿಯಲ್ಲಿ ಬಜೆಟ್ ಪ್ರತಿಯ ವಿವರ ಸೋರಿಕೆಯಾದ ಬಳಿಕ ಈ ರೀತಿ ಮುಂಜಾಗ್ರತಾ ಕ್ರಮವನ್ನು ಹಣಕಾಸು ಸಚಿವಾಲಯ ತೆಗೆದುಕೊಳ್ಳುತ್ತಿದೆ. 1980ರಲ್ಲಿ ನಾರ್ತ್ ಬ್ಲಾಕ್‌ನ ಬೇಸ್‌ಮೆಂಟ್‌ನಲ್ಲಿ ಮುದ್ರಣಾಲಯ ಸ್ಥಾಪಿಸಲಾಯಿತು. ಅಲ್ಲಿಂದೀಚೆಗೆ ಇದೇ ಮುದ್ರಣಾಲಯದಲ್ಲಿ ಕೇಂದ್ರ ಬಜೆಟ್ ಪ್ರತಿಗಳ ಮುದ್ರಣ ನಡೆಯುತ್ತದೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.