Union Budget 2025: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಈ ಸಲ ಯಾವಾಗ ಕೇಂದ್ರ ಬಜೆಟ್ ಮಂಡಿಸುತ್ತಾರೆ, ದಿನಾಂಕ ಮತ್ತು ಸಮಯದ ವಿವರ
Union Budget 2025: ಕೇಂದ್ರ ಬಜೆಟ್ ಮಂಡನೆಗೆ ದಿನಗಣನೆ ಶುರುವಾಗಿದೆ. ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಈ ಸಲ ಯಾವಾಗ ಬಜೆಟ್ ಮಂಡಿಸಲಿದ್ದಾರೆ. ಸರ್ಕಾರ ಇನ್ನೂ ಈ ಬಗ್ಗೆ ಅಧಿಕೃತ ಪ್ರಕಟಣೆ ಹೊರಡಿಸಿಲ್ಲ. ವಾಡಿಕೆಯಂತಾದರೆ, ದಿನಾಂಕ ಮತ್ತು ಸಮಯದ ವಿವರ ಇಲ್ಲಿದೆ.

Union Budget 2025: ಮುಂದಿನ ಹಣಕಾಸು ವರ್ಷಕ್ಕೆ (2025-26) ಸಂಬಂಧಿಸಿದ ಕೇಂದ್ರ ಬಜೆಟ್ 2025-26 ಅನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಈ ಬಾರಿಯೂ ವಾಡಿಕೆಯಂತೆ ಹೇಳುವುದಾದರೆ, ಫೆಬ್ರವರಿ 1ರಂದೇ ಮಂಡಿಸಲಿದ್ದಾರೆ. ಆದರೆ, ಕೇಂದ್ರ ಸರ್ಕಾರದಿಂದ ಈ ಕುರಿತು ಅಧಿಕೃತ ಪ್ರಕಟಣೆ ಹೊರಬಿದ್ದಿಲ್ಲ. ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಮೂರನೇ ಅವಧಿಯ ಮೊದಲ ಪೂರ್ಣ ಪ್ರಮಾಣದ ಬಜೆಟ್ ಇದು. ಮಂದಿನ ತಿಂಗಳ ಮೊದಲ ದಿನ ಮಂಡನೆಯಾಗುವ ಸಾಧ್ಯತೆ ಇದೆ.
ಕೇಂದ್ರ ಬಜೆಟ್ ಮಂಡನೆ ಫೆಬ್ರವರಿ 1 ರಂದು, ನಡೆಯಲಿದೆ ಷೇರುಪೇಟೆ ವಹಿವಾಟು
ಕೇಂದ್ರ ಬಜೆಟ್ 2025ರ ಮಂಡನೆ ಹಿನ್ನೆಲೆಯಲ್ಲಿ ಭಾರತೀಯ ಷೇರುಪೇಟೆ ( ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್ (ಬಿಎಸ್‌ಇ) ಮತ್ತು ನ್ಯಾಷನಲ್ ಸ್ಟಾಕ್ ಎಕ್ಸ್‌ಚೇಂಜ್ (ಎನ್‌ಎಸ್‌ಇ) ಶನಿವಾರದ ರಜಾದಿನವಾಗಿದ್ದರೂ ತೆರೆದು ಕಾರ್ಯ ನಿರ್ವಹಿಸಲಿದೆ ಎಂದು ಪ್ರಕಟಿಸಿದೆ. ಕೇಂದ್ರ ಬಜೆಟ್ ಮಂಡನೆಯಾಗುವ ಕಾರಣ ಷೇರುಪೇಟೆಯಲ್ಲಿ ಲೈವ್ ಟ್ರೇಡಿಂಗ್ ಸೆಷನ್ ಕೂಡ ಇರಲಿದೆ ಎಂದು ಷೇರು ವಿನಿಮಯ ಕೇಂದ್ರಗಳು ಸುತ್ತೋಲೆಯಲ್ಲಿ ತಿಳಿಸಿವೆ. ಭಾರತೀಯ ಷೇರು ವಿನಿಮಯ ಕೇಂದ್ರಗಳು ಸಾಮಾನ್ಯವಾಗಿ ಎಲ್ಲಾ ಶನಿವಾರ ಮತ್ತು ಭಾನುವಾರದಂದು ವಹಿವಾಟು ನಡೆಸುವುದಿಲ್ಲ. ಕೇಂದ್ರ ಬಜೆಟ್ ಮಂಡನೆ ಈ ಹಿಂದೆ ಶನಿವಾರ ನಡೆಸಿದ ಉದಾಹರಣೆಗಳೂ ಇದೆ. ಆಗ ವಹಿವಾಟು ನಡೆಸಿದ್ದೂ ಇದೆ.
ಕೇಂದ್ರ ಬಜೆಟ್ 2025ರ ದಿನಾಂಕ ಮತ್ತು ಸಮಯ
ಕೇಂದ್ರ ಬಜೆಟ್ 2025 ಅನ್ನು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಂಸತ್ ಅಧಿವೇಶನದ ವೇಳೆ ಮಂಡಿಸುತ್ತಾರೆ. ಸಂಸತ್‌ನ ಬಜೆಟ್ ಅಧಿವೇಶ ಜನವರಿ ಕೊನೆಯಲ್ಲಿ ಶುರುವಾಗುವ ಸಾಧ್ಯತೆ ಇದ್ದು, ಫೆಬ್ರವರಿ 1 ರಂದು ಬೆಳಗ್ಗೆ 11 ಗಂಟೆಗೆ ಬಜೆಟ್ ಮಂಡನೆಯಾಗಲಿದೆ. ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಲೋಕಸಭೆಯಲ್ಲಿ ಬಜೆಟ್ ಮಂಡಿಸಲಿದ್ದಾರೆ. ನಿರ್ಮಲಾ ಸೀತಾರಾಮನ್ ಅವರು ಮಂಡಿಸುತ್ತಿರುವ 8ನೇ ಬಜೆಟ್ ಇದು. ಇದರಲ್ಲಿ 6 ಪೂರ್ಣ ಮತ್ತು 2 ಮಧ್ಯಂತರ ಬಜೆಟ್‌ಗಳು ಸೇರಿಕೊಂಡಿವೆ.
ನಿರ್ಮಲಾ ಸೀತಾರಾಮನ್ ಬಜೆಟ್ ಭಾಷಣದ ನೇರ ಪ್ರಸಾರ ನೋಡುವುದೆಲ್ಲಿ
ಸರ್ಕಾರದ ಅಧಿಕೃತ ವಾಹಿನಿಗಳಾದ ದೂರದರ್ಶನ ಮತ್ತು ಸಂಸದ್ ಟಿವಿಗಳು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಬಜೆಟ್ ಭಾಷಣದ ನೇರ ಪ್ರಸಾರವನ್ನು ಪ್ರಸಾರ ಮಾಡಲಿದೆ. ಸಂಸತ್ತಿನ ಸಂಸದ್ ಟಿವಿ ಮತ್ತು ದೂರದರ್ಶನ ಯೂಟ್ಯೂಬ್ ಪ್ಲಾಟ್‌ಫಾರ್ಮ್‌ಗಳು ಕೇಂದ್ರ ಬಜೆಟ್ 2025-26 ರ ಮಂಡನೆಯನ್ನು ಪ್ರಸಾರ ಮಾಡುತ್ತವೆ.
ಕೇಂದ್ರ ಬಜೆಟ್ 2025-26ರ ಬಜೆಟ್ ಪ್ರತಿ ಎಲ್ಲಿ ಸಿಗುತ್ತೆ
ಕೇಂದ್ರ ಬಜೆಟ್ 2025-26ರ ಬಜೆಟ್ ಪ್ರತಿ ಕೇಂದ್ರ ಸರ್ಕಾರದ ಯೂನಿಯನ್ ಬಜೆಟ್ ಮೊಬೈಲ್ ಆಪ್‌ನಲ್ಲಿ ಪಿಡಿಎಫ್ ಪ್ರತಿಯ ರೂಪದಲ್ಲಿ ಲಭ್ಯವಿದೆ. ಅಥವಾ ಯೂನಿಯನ್ ಬಜೆಟ್ ವೆಬ್ ಪೋರ್ಟಲ್ (www.indiabudget.gov.in) ಅಥವಾ Android ಮತ್ತು iOS ಬಳಕೆದಾರರು ಯೂನಿಯನ್ ಬಜೆಟ್‌ನ ಬಹುಭಾಷಾ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬಹುದು. ಬಜೆಟ್ ಪ್ರತಿ ಇಂಗ್ಲಿಷ್ ಮತ್ತು ಹಿಂದಿ ಭಾಷೆಯಲ್ಲಿ ಲಭ್ಯವಿದೆ.
ಕೇಂದ್ರ ಬಜೆಟ್ 2025-26; ಆದಾಯ ತೆರಿಗೆ ಸಂಬಂಧಿಸಿದ ನಿರೀಕ್ಷೆಗಳಿವು
ಕೇಂದ್ರ ಬಜೆಟ್ 2025 ಮಂಡನೆ ದಿನ ಸಮೀಪಿಸುತ್ತಿದ್ದಂತೆ, ಸಂಭಾವ್ಯ ಆದಾಯ ತೆರಿಗೆ ವಿನಾಯಿತಿ ಎಷ್ಟು ಸಿಗಬಹುದು ಎಂಬ ಲೆಕ್ಕಾಚಾರ ಜೋರಾಗಿದೆ. ವೇತನದಾರರು ಈ ಬಗ್ಗೆ ಹೆಚ್ಚು ನಿರೀಕ್ಷೆಯಲ್ಲಿರುವುದು ಕಂಡುಬಂದಿದೆ.
"ವಾರ್ಷಿಕ ಬಜೆಟ್ ಚಾಲಿತ ತೆರಿಗೆ ಬದಲಾವಣೆಗಳು ದೀರ್ಘಾವಧಿಯ ಹಣಕಾಸು ಯೋಜನೆಯನ್ನು ಅಡ್ಡಿಪಡಿಸುವುದು ಸಹಜ" ಎಂದು ಟ್ಯಾಕ್ಸ್‌ಪಾನರ್‌ನ ಸಹ-ಸಂಸ್ಥಾಪಕ ಮತ್ತು CEO ಸುಧೀರ್ ಕೌಶಿಕ್ ಹೇಳಿದ್ದಾರೆ.
"ಕೇಂದ್ರ ಸರ್ಕಾರದ ಹೊಸ ತೆರಿಗೆ ಪದ್ಧತಿಯನ್ನು ಉಳಿಸುವವರಲ್ಲದವರಿಗೆ ಖರ್ಚು ಮಾಡಲು ಪ್ರೋತ್ಸಾಹಿಸಲು ವಿನ್ಯಾಸಗೊಳಿಸಲಾಗಿದೆ. ಆದಾಗ್ಯೂ, ಉಳಿತಾಯದ ಮೇಲೆ ಗಮನ ಕೇಂದ್ರೀಕರಿಸಿದ ತೆರಿಗೆದಾರರು ತಮ್ಮ ಅಸ್ತಿತ್ವದಲ್ಲಿರುವ ಯೋಜನೆಗಳನ್ನು ಉಳಿಸಿಕೊಳ್ಳಲು ಅವಕಾಶ ನೀಡಬೇಕು. ಇದು ನಿರ್ಣಾಯಕವಾಗಿದೆ. ಕಡಿಮೆ ತೆರಿಗೆ ದರಗಳು ಬಲೆಯಾಗಬಾರದು. ಹೊಸದಾಗಿ ಪರಿಚಯಿಸಿರುವ ಸರಳೀಕೃತ ತೆರಿಗೆ ಪದ್ಧತಿಗಳು ಹಾಗೆ ಮಾಡುವುದಿಲ್ಲ. ಈಗಿರುವ ವ್ಯವಸ್ಥೆಯು ಪ್ರಜಾಪ್ರಭುತ್ವದ ತತ್ತ್ವಕ್ಕೆ ಅನುಗುಣವಾಗಿ ಯಾರಿಗೆ ಯಾವುದು ಬೇಕೋ ಅದನ್ನು ಆಯ್ಕೆ ಮಾಡಲು ಅವಕಾಶ ನೀಡಿದೆ ಎಂದು ಅವರು ಹೇಳಿದ್ದಾರೆ.
