Union Budget 2025: ಕೇಂದ್ರ ಬಜೆಟ್ ಅಧಿವೇಶನ ಇಂದು ಶುರು, ಆರ್ಥಿಕ ಸಮೀಕ್ಷೆ ಮಂಡಿಸಲಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Union Budget 2025: ಕೇಂದ್ರ ಬಜೆಟ್ ಅಧಿವೇಶನ ಇಂದು ಶುರು, ಆರ್ಥಿಕ ಸಮೀಕ್ಷೆ ಮಂಡಿಸಲಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌

Union Budget 2025: ಕೇಂದ್ರ ಬಜೆಟ್ ಅಧಿವೇಶನ ಇಂದು ಶುರು, ಆರ್ಥಿಕ ಸಮೀಕ್ಷೆ ಮಂಡಿಸಲಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌

Union Budget session 2025: ಕೇಂದ್ರ ಬಜೆಟ್ ಅಧಿವೇಶನ ಇಂದು ಶುರುವಾಗುತ್ತಿದ್ದು, ಸಂಸತ್ತಿನ ಉಭಯ ಸದನಗಳ ಜಂಟಿ ಅಧಿವೇಶನದ ಬೆನ್ನಿಗೆ ಆರ್ಥಿಕ ಸಮೀಕ್ಷೆ ಮಂಡನೆಯಾಗಲಿದೆ. ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಲೋಕಸಭೆಯಲ್ಲಿ ಇಂದು (ಜನವರಿ 31) ಮಧ್ಯಾಹ್ನ 12 ಗಂಟೆಗೆ, ರಾಜ್ಯಸಭೆಯಲ್ಲಿ ಅಪರಾಹ್ನ 2 ಗಂಟೆಗೆ ಆರ್ಥಿಕ ಸಮೀಕ್ಷೆ ಮಂಡಿಸಲಿದ್ದಾರೆ.

ಕೇಂದ್ರ ಬಜೆಟ್ ಅಧಿವೇಶನ ಇಂದು ಶುರುವಾಗಲಿದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಇಂದು ಮಂಡಿಸಲಿರುವ ಆರ್ಥಿಕ ಸಮೀಕ್ಷೆ ಕಡೆಗೆ ಎಲ್ಲರ ಗಮನೆ ನೆಟ್ಟಿದೆ. (ಕಡತ ಚಿತ್ರ)
ಕೇಂದ್ರ ಬಜೆಟ್ ಅಧಿವೇಶನ ಇಂದು ಶುರುವಾಗಲಿದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಇಂದು ಮಂಡಿಸಲಿರುವ ಆರ್ಥಿಕ ಸಮೀಕ್ಷೆ ಕಡೆಗೆ ಎಲ್ಲರ ಗಮನೆ ನೆಟ್ಟಿದೆ. (ಕಡತ ಚಿತ್ರ)

Union Budget session 2025: ಕೇಂದ್ರ ಬಜೆಟ್ ಅಧಿವೇಶನ ಇಂದು (ಜನವರಿ 31) ಶುರುವಾಗುತ್ತಿದೆ. ಪೂರ್ವಾಹ್ನ 11 ಗಂಟೆಗೆ ಸಂಸತ್ತಿನ ಉಭಯ ಸದನಗಳ (ರಾಜ್ಯಸಭೆ ಮತ್ತು ಲೋಕಸಭೆ) ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಭಾಷಣ ಮಾಡಲಿದ್ದಾರೆ. ಈ ಭಾಷಣದೊಂದಿಗೆ ಸಂಸತ್ತಿನ ಬಜೆಟ್ ಅಧಿವೇಶನ ಶುರುವಾಗಲಿದೆ. ಇದಾದ ಬಳಿಕ, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಆರ್ಥಿಕ ಸಮೀಕ್ಷೆಯನ್ನು ಮಂಡಿಸಲಿದ್ದಾರೆ. ನಾಳೆ (ಫೆ 1) ಕೇಂದ್ರ ಬಜೆಟ್ 2025-26 (Union Budget 2025-26) ಮಂಡನೆಯಾಗಲಿದೆ.

ಬಜೆಟ್ ಅಧಿವೇಶನ ಇಂದು ಶುರು, ಆರ್ಥಿಕ ಸಮೀಕ್ಷೆ ಮಂಡಿಸಲಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌

ಕೇಂದ್ರ ಬಜೆಟ್ ಅಧಿವೇಶನ ಇಂದು ಶುರುವಾಗುತ್ತಿದ್ದು, ಸಂಸತ್ತಿನ ಉಭಯ ಸದನಗಳ ಜಂಟಿ ಅಧಿವೇಶನದ ಬೆನ್ನಿಗೆ ಆರ್ಥಿಕ ಸಮೀಕ್ಷೆ ಮಂಡನೆಯಾಗಲಿದೆ. ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಇಂದು (ಜನವರಿ 31) ಲೋಕಸಭೆಯಲ್ಲಿ ಮಧ್ಯಾಹ್ನ 12 ಗಂಟೆಗೆ, ರಾಜ್ಯಸಭೆಯಲ್ಲಿ ಅಪರಾಹ್ನ 2 ಗಂಟೆಗೆ ಆರ್ಥಿಕ ಸಮೀಕ್ಷೆ ಮಂಡಿಸಲಿದ್ದಾರೆ.

ಕೇಂದ್ರ ಹಣಕಾಸು ಸಚಿವಾಲಯದ ಮುಖ್ಯ ಆರ್ಥಿಕ ಸಲಹೆಗಾರರ ಮೇಲ್ವಿಚಾರಣೆಯಲ್ಲಿ ಆರ್ಥಿಕ ಸಮೀಕ್ಷೆ ರೂಪಿಸಲ್ಪಡುತ್ತದೆ. ಇದನ್ನು ಸಚಿವಾಲಯದ ಆರ್ಥಿಕ ವಿಭಾಗ ಸಿದ್ಧಪಡಿಸುತ್ತದೆ. ಇದು ಭಾರತದ 2024-25ರ ಅರ್ಥ ವ್ಯವಸ್ಥೆಯ ಸ್ಥಿತಿಗತಿ ಮೇಲೆ ಮತ್ತು ವಿವಿಧ ಸೂಚಕ ಅಂಶಗಳ ಒಳನೋಟವನ್ನು ಒದಗಿಸುತ್ತದೆ. ಇದು ಮುಂದಿನ ಹಣಕಾಸು ವರ್ಷವನ್ನು ಸರ್ಕಾರ ನೋಡುವ ದೃಷ್ಟಿಕೋನವನ್ನೂ ಬಿಂಬಿಸುತ್ತದೆ.

ಸಂಸತ್‌ನ ಬಜೆಟ್ ಅಧಿವೇಶನದ ಮೊದಲ ಭಾಗವು ಫೆಬ್ರವರಿ 13 ರವರೆಗೆ ಮುಂದುವರಿಯುತ್ತದೆ. ಬಜೆಟ್ ಅಧಿವೇಶನದ ಎರಡನೇ ಭಾಗ ಮಾರ್ಚ್ 10ಕ್ಕೆ ಶುರುವಾಗಿ ಏಪ್ರಿಲ್ 4 ರಂದು ಕೊನೆಯಾಗುತ್ತದೆ.

ಕೇಂದ್ರ ಬಜೆಟ್ ಅಧಿವೇಶನದಲ್ಲಿ ಮಂಡನೆಯಾಗಬಹುದಾದ ಪ್ರಮುಖ ಮಸೂದೆಗಳಿವು

ಅಧಿವೇಶನದಲ್ಲಿ ಪ್ರಮುಖ ಮಸೂದೆಗಳು ಮಂಡನೆಯಾಗುವ ಸಾಧ್ಯತೆ ಇದೆ. ಬ್ಯಾಂಕಿಂಗ್ ನಿಯಮಗಳು ಮತ್ತು ಮೇಲ್ವಿಚಾರಣೆಯನ್ನು ಬಲಪಡಿಸಬಲ್ಲ ಬ್ಯಾಂಕಿಂಗ್ ಕಾನೂನು ತಿದ್ದುಪಡಿ ಮಸೂದೆ 2024, ಭಾರತೀಯ ರೈಲ್ವೆಯ ಕಾರ್ಯಾಚರಣೆ ದಕ್ಷತೆ ಹೆಚ್ಚಿಸಬಲ್ಲ ರೈಲ್ವೆ (ತಿದ್ದುಪಡಿ) ಮಸೂದೆ 2024 ಮಂಡನೆಯಾಗುವ ಸಾಧ್ಯತೆ ಇದೆ. ಇನ್ನೊಂದು ಮುಖ್ಯ ಮಸೂದೆ ವಿಪತ್ತು ನಿರ್ವಹಣಾ (ತಿದ್ದುಪಡಿ) ಮಸೂದೆ 2024. ಇದು ದೇಶದ ಉದ್ದಗಲಕ್ಕೂ ವಿಪತ್ತು ಪ್ರತಿಕ್ರಿಯಾ ವ್ಯವಸ್ಥೆಯನ್ನು ಸುಧಾರಿಸುವ ಉದ್ದೇಶ ಹೊಂದಿದೆ. ಇದಲ್ಲದೆ, ವಕ್ಫ್‌ (ತಿದ್ದುಪಡಿ) ಮಸೂದೆ 2024, ಮುಸಾಲ್ಮಾನ್ ವಕ್ಫ್‌ (ರಿಪೀಲ್) ಬಿಲ್‌ 2024 ಕೂಡ ಇದೇ ಅಧಿವೇಶನದಲ್ಲಿ ಮಂಡನೆಯಾಗಬಹುದು ಎಂದು ಎಎನ್‌ಐ ವರದಿ ಮಾಡಿದೆ.

ಇದಲ್ಲದೆ, ತೈಲ ಪರಿಶೋಧನೆ ಮತ್ತು ಹೊರತೆಗೆಯುವಿಕೆಯ ಸುತ್ತಲಿನ ಕಾನೂನುಗಳಿಗೆ ನವೀಕರಣಗಳನ್ನು ಪ್ರಸ್ತಾಪಿಸುವ ತೈಲಕ್ಷೇತ್ರಗಳು (ನಿಯಂತ್ರಣ ಮತ್ತು ಅಭಿವೃದ್ಧಿ) ತಿದ್ದುಪಡಿ ಮಸೂದೆ 2024 ಮಂಡನೆಯಾಗಬಹುದು. ಅದೇ ರೀತಿ, 2024ರ ಬಾಯ್ಲರ್ ಮಸೂದೆ ಕೂಡ ಸಿದ್ಧವಾಗಿದ್ದು, ಕೈಗಾರಿಕಾ ಅನ್ವಯಿಕೆಗಳಲ್ಲಿ ಬಾಯ್ಲರ್‌ಗಳಿಗಾಗಿ ಹೊಸ ಸುರಕ್ಷತೆ ಮತ್ತು ಕಾರ್ಯಾಚರಣೆಯ ಮಾನದಂಡಗಳನ್ನು ಪರಿಚಯಿಸಲು ಸಜ್ಜಾಗಿದೆ.

ಎಲ್ಲಕ್ಕಿಂತ ಹೆಚ್ಚಾಗಿ, ಹಣಕಾಸು ಮಸೂದೆ 2025 ಫೆ 1 ರಂದು ಮಂಡನೆಯಾಗಲಿದೆ. ಇದರಲ್ಲಿ ಬಜೆಟ್ ಪ್ರಸ್ತಾಪಗಳು ಮತ್ತು ತೆರಿಗೆ ಸುಧಾರಣೆಗಳನ್ನು ಅನುಷ್ಠಾನಗೊಳಿಸುವುದಕ್ಕೆ ಅಗತ್ಯ ಅಂಶಗಳಿರಲಿವೆ. ಕೇಂದ್ರ ಬಜೆಟ್ ಭಾಷಣದ ವೇಳೆ ಕೇಂದ್ರ ಹಣಕಾಸು ಸಚಿವರು ಇದನ್ನು ಓದಿ ಹೇಳಲಿದ್ದಾರೆ. ಹಣಕಾಸಿನ ವ್ಯವಹಾರದ ದೃಷ್ಟಿಯಿಂದ ಈ ಅಧಿವೇಶನವು 2025-26ರ ಅನುದಾನದ ಬೇಡಿಕೆಗಳ ಕುರಿತು ಚರ್ಚೆ ಮತ್ತು ಮತದಾನವನ್ನು ಕಾಣಲಿದೆ. ಅನುದಾನದ ಬೇಡಿಕೆಗಳು ಮೂಲಭೂತವಾಗಿ ಸರ್ಕಾರವು ಸಂಸತ್ತಿಗೆ ಮಾಡಿದ ವಿನಂತಿಗಳಾಗಿವೆ. ಒಂದು ನಿರ್ದಿಷ್ಟ ವರ್ಷಕ್ಕೆ ತನ್ನ ಖರ್ಚುಗಳನ್ನು ಪೂರೈಸಲು ಅಗತ್ಯವಿರುವ ಹಣವನ್ನು ಸೂಚಿಸುತ್ತದೆ. ನಂತರ ಸಂಬಂಧಿತ ವಿನಿಯೋಗ ಮಸೂದೆಯ ಪರಿಚಯ, ಪರಿಗಣನೆ ಮತ್ತು ಅಂಗೀಕಾರ ಪಡೆಯುವುದರ ಕಡೆಗೆ ಗಮನಹರಿಸಲಿದೆ.

ಒಟ್ಟಿನಲ್ಲಿ ಈಗ, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಲಿರುವ ಕೇಂದ್ರ ಬಜೆಟ್ 2025ಕ್ಕೆ ಕ್ಷಣಗಣನೆ ಶುರುವಾಗಿದ್ದು, ಆದಾಯ ತೆರಿಗೆ ಸುಧಾರಣೆ, ಹಣದುಬ್ಬರ ತಡೆಗೆ ಕ್ರಮ ಸೇರಿ ಹಲವಾರು ನಿರೀಕ್ಷೆಗಳಿಗೆ ಕೇಂದ್ರ ಸರ್ಕಾರ ಹೇಗೆ ಸ್ಪಂದಿಸಲಿದೆ ಎಂಬುದು ಸದ್ಯದ ಕುತೂಹಲ.

Whats_app_banner

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.