Kailasa in United Nations: ವಿಶ್ವಸಂಸ್ಥೆ ಸಭೆಯಲ್ಲಿ ಸ್ವಯಂಘೋಷಿತ ದೇವಮಾನವ ನಿತ್ಯಾನಂದರ ಕೈಲಾಸದ ಪ್ರತಿನಿಧಿ ಭಾಗಿ, ಇಲ್ಲಿದೆ ವಿಡಿಯೋ
ಕೈಲಾಸ ಎಂಬ ರಾಷ್ಟ್ರವನ್ನು ವಿಶ್ವಸಂಸ್ಥೆ ಗುರುತಿಸಿದೆಯೇ? ಅಥವಾ ಬೇರೆ ಯಾವುದಾದರೂ ವಿಧಾನಗಳ ಮೂಲಕ ಈ ಸಭೆಯಲ್ಲಿ ಕೈಲಾಸದ ಪ್ರತಿನಿಧಿಗಳು ಭಾಗಿಯಾಗಿದ್ದಾರೆಯೇ? ಎಂಬ ಪ್ರಶ್ನೆಗಳು ಉದ್ಭವಿಸಿದೆ.
ಈಕ್ವೆಡಾರ್ ದ್ವೀಪವೊಂದರಲ್ಲಿ ಕೈಲಾಸವೆಂಬ ಕಾಲ್ಪನಿಕ ರಾಷ್ಟ್ರವನ್ನು ನಿರ್ಮಿಸಿಕೊಂಡ ಸ್ವಯಂಘೋಷಿತ ದೇವಮಾನವ ನಿತ್ಯಾನಂದ ಈಗ ಮತ್ತೆ ಸುದ್ದಿಯಲ್ಲಿದ್ದಾರೆ. ಈ ದೇವಮಾನವನ ಕಾಲ್ಪನಿಕ ದೇಶ "ಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸʼದ ಪ್ರತಿನಿಧಿಗಳು ಇತ್ತೀಚೆಗೆ ವಿಶ್ವಸಂಸ್ಥೆಯ ಕಮಿಟಿ ಆನ್ ಎಕಾನಮಿಕ್, ಸೋಷಿಯಲ್ ಆಂಡ್ ಕಲ್ಚರಲ್ ರೈಟ್ಸ್ (ಸಿಇಎಸ್‌ಸಿಆರ್)ನ 19ನೇ ಸಭೆಯ, 73ನೇ ಸೆಷನ್‌ನಲ್ಲಿ ಪಾಲ್ಗೊಂಡಿದ್ದಾರೆ.
ಈ ಸುದ್ದಿ ಕೇಳಿದಾಗ ಬಹುತೇಕರು ಇದು ಸುಳ್ಳು ಸುದ್ದಿಯಾಗಿರಬಹುದು ಎಂದುಕೊಂಡಿದ್ದರು. ಏಕೆಂದರೆ, ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರ ಪ್ರಕರಣದ ಆರೋಪಿಯು ಭಾರತದಿಂದ ತಲೆಮರೆಸಿಕೊಂಡು ದ್ವೀಪವೊಂದಕ್ಕೆ ಕೈಲಾಸವೆಂದು ಹೆಸರಿಟ್ಟು ಬದುಕುತ್ತಿದ್ದರೂ, ಆತನ ದೇಶ ವಿಶ್ವಸಂಸ್ಥೆಯನ್ನು ಪ್ರವೇಶಿಸಿದ್ದು ಹೇಗೆ? ಎಂಬ ಪ್ರಶ್ನೆ ಉದ್ಭವಿಸಿದೆ.
ಕೈಲಾಸ ಎಂಬ ರಾಷ್ಟ್ರವನ್ನು ವಿಶ್ವಸಂಸ್ಥೆ ಗುರುತಿಸಿದೆಯೇ? ಅಥವಾ ಬೇರೆ ಯಾವುದಾದರೂ ವಿಧಾನಗಳ ಮೂಲಕ ಈ ಸಭೆಯಲ್ಲಿ ಕೈಲಾಸದ ಪ್ರತಿನಿಧಿಗಳು ಭಾಗಿಯಾಗಿದ್ದಾರೆಯೇ? ಎಂಬ ಪ್ರಶ್ನೆ ಉದ್ಭವಿಸಿದೆ. ಈ ಕುರಿತು ವಿಶ್ವಸಂಸ್ಥೆ ಪ್ರತಿಕ್ರಿಯೆ ನೀಡಿಲ್ಲ.
ಹಿಂದೂಸ್ತಾನ್ ಟೈಮ್ಸ್ ಕನ್ನಡವು ಕೂಡ ಈ ಸುದ್ದಿಯ ಸತ್ಯಾಸತ್ಯಾತೆಯನ್ನು ಪರಿಶೀಲಿಸಲು ಮುಂದಾದಗ ಸಿಇಎಸ್‌ಸಿಆರ್ ಸಭೆಯ ವಿಡಿಯೋದಲ್ಲಿ ಕೈಲಾಸದ ಪ್ರತಿನಿಧಿಯೊಬ್ಬರು ಮಾತನಾಡುತ್ತಿರುವುದು ಕಾಣಿಸಿದೆ. ಈ ವಿಡಿಯೋದಲ್ಲಿ ಸುಸ್ಥಿರ ಅಭಿವೃದ್ಧಿ ಕುರಿತು ಎ ಅಭಸಿಂಧಜಿ ಅವರು ಮಾತನಾಡುತ್ತಿದ್ದಾರೆ. ಚೇರ್‌ಪರ್ಸನ್ ಪ್ರಶ್ನೆಗೆ ಉತ್ತರವಾಗಿ ವಿಜಯಪ್ರಿಯಾ ಎಂಬ ಕೈಲಾಸದ ರಾಯಭಾರಿ ಮಾತನಾಡಿದ್ದಾರೆ. ಹಲವು ಆಭರಣಗಳನ್ನು ಧರಿಸಿದ ವಿಜಯಪ್ರಿಯಾ ಅವರು ಕೈಲಾಸದ ದೇವಿಯಂತೆ ವೇಷಭೂಷಣ ಧರಿಸಿದ್ದು, ಇವರು ಮಾತನಾಡುತ್ತಿರುವಾಗ ಕೆಲವರು ಅಚ್ಚರಿಯಿಂದ ತಿರುಗಿ ನೋಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.
ನಿತ್ಯಾನಂದರ ಪ್ರತಿನಿಧಿಯು ವಿಶ್ವಸಂಸ್ಥೆಯಲ್ಲಿ ಮಾತನಾಡುತ್ತಿರುವ ವಿಡಿಯೋಗೆ ನೇರ ಲಿಂಕ್ ಇಲ್ಲಿದೆ. ಆ ವಿಡಿಯೋದಲ್ಲಿ 2 ಗಂಟೆ 40 ನಿಮಿಷದ ಬಳಿಕ ಇವರು ಮಾತನಾಡುತ್ತಿರುವುದು ಕಾಣಿಸುತ್ತದೆ.
ಚೇರ್‌ಪರ್ಸನ್ ಅವರು ಸುಸ್ಥಿರ ಅಭಿವೃದ್ಧಿ ಗುರಿಗಳ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸುವ ಅವಕಾಶವನ್ನು ಬಳಸಿಕೊಂಡ ವಿಜಯಪ್ರಿಯ ಅವರು ಆ ವಿಷಯವನ್ನು ಮರೆತು ನೇರವಾಗಿ ಹಿಂದೂ ಧರ್ಮದ ವಿಷಯಕ್ಕೆ ಬಂದಿದ್ದಾರೆ. ಬಳಿಕ ಯೂನೈಟೆಡ್ ಸ್ಟೇಟ್ ಆಫ್ ಕೈಲಾಸದ ಸಂಸ್ಥಾಪಕರಾದ ನಿತ್ಯಾನಂದರು ತಮ್ಮ ಮೂಲ ದೇಶ ಭಾರತದಿಂದ ಹಿಂಸೆಗೆ ಒಳಗಾಗುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಈ ವಿಡಿಯೋದಲ್ಲಿ ಸುಸ್ಥಿರ ಅಭಿವೃದ್ಧಿ ವಿಷಯದಲ್ಲಿ ಕೈಲಾಸ ಯಶಸ್ವಿಯಾಗಿದೆ ಎಂದು ಹೇಳುತ್ತಾರೆ. ಆಹಾರ, ಶಿಕ್ಷಣ, ವೈದ್ಯಕೀಯ ಇತ್ಯಾದಿ ಕ್ಷೇತ್ರಗಳಲ್ಲಿ ಕೈಲಾಸವು ಯಶಸ್ವಿಯಾಗಿದೆ. ಕೈಲಾಸದ ರಕ್ಷಣೆಗೆ ಯಾವ ಕ್ರಮ ಕೈಗೊಳ್ಳಲಾಗುತ್ತಿದೆ... ಇತ್ಯಾದಿ ವಿಷಯಗಳನ್ನು ಅವರು ಮಾತನಾಡಿದ್ದಾರೆ.
ಕೈಲಾಸವೆಂಬ ದೇಶದ ಮೂಲಕ ಹತ್ತು ಸಾವಿರಕ್ಕೂ ಹೆಚ್ಚು ಹಿಂದೂ ಧರ್ಮದ ಸಂಪ್ರದಾಯಗಳನ್ನು ಪುನರ್‌ಜೀವನಗೊಳಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ಇದೀಗ ಈ ವಿಡಿಯೋ ದೇಶದಲ್ಲಿ ಸಾಕಷ್ಟು ಚರ್ಚೆಯಾಗುತ್ತಿದ್ದು, ಕೈಲಾಸವೆಂಬ ಕಾಲ್ಪನಿಕ ದೇಶವು ವಿಶ್ವಸಂಸ್ಥೆಯೊಳಗೆ ಪ್ರವೇಶ ಪಡೆದದ್ದು ಹೇಗೆ ಎಂಬ ಪ್ರಶ್ನೆಗಳೆದ್ದಿವೆ.
2019ರಲ್ಲಿಯೇ ಸ್ವಯಂಘೋಷಿತ ದೇವಮಾನವ ನಿತ್ಯಾನಂದನು ತನ್ನ ಕೈಲಾಸವೆಂಬ ದೇಶಕ್ಕೆ ವಿಶ್ವಸಂಸ್ಥೆಯಿಂದ ಮಾನ್ಯತೆ ಪಡೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ವರದಿಗಳು ಹೇಳಿವೆ. ಈ ಕುರಿತು 2019ರಲ್ಲಿಯೇ ಹಲವು ವರದಿಗಳು ಪ್ರಕಟಗೊಂಡಿವೆ.
"ಸ್ವಯಂ-ಘೋಷಿತ ದೇವಮಾನವ ಸ್ವಾಮಿ ನಿತ್ಯಾನಂದ ಅವರ ಕಾನೂನು ತಂಡವು ವಿಶ್ವಸಂಸ್ಥೆಗೆ ಕಳುಹಿಸುವ ಸಲುವಾಗಿ ಕರಡು ಅರ್ಜಿಯನ್ನು ಸಿದ್ಧಪಡಿಸುತ್ತಿದೆ ಎಂದು ಹೇಳಲಾಗಿತ್ತು. ನಿತ್ಯಾನಂದರ "ಸಾರ್ವಭೌಮ ರಾಷ್ಟ್ರವಾದ ಕೈಲಾಸ" ಕ್ಕೆ ಮಾನ್ಯತೆ ನೀಡುವಂತೆ ಈ ಅರ್ಜಿಯಲ್ಲಿ ಕೋರಲಾಗಿದೆ. ಹಿಂದೂ ಧರ್ಮವನ್ನು ಅಧ್ಯಯನ ಮಾಡುವ ಮತ್ತು ಪ್ರಚಾರ ಮಾಡುವ ಗುರಿ ಹೊಂದಿರುವುದರಿಂದ ಭಾರತದಲ್ಲಿ ನನಗೆ ಜೀವಕ್ಕೆ ಬೆದರಿಕೆ ಇದೆ ಎಂದು ಅವರ ಮನವಿಯನ್ನು ಆಧರಿಸಿ ಈ ವರದಿ ತಯಾರಿಸಲಾಗಿದೆ ಎನ್ನಲಾಗಿದೆ.
ಎಲ್ಲಾದರೂ ಬಳಿಕ ಈ ವರದಿ ಸಲ್ಲಿಸಲಾಗಿದೆಯೇ? ಇವರ ದೇಶಕ್ಕೆ ವಿಶ್ವಸಂಸ್ಥೆ ಮಾನ್ಯತೆ ನೀಡಿದೆಯೇ? ಎನ್ನುವ ಕುರಿತು ಮಾಹಿತಿಯಿಲ್ಲ. ಆದರೆ, ಇದೀಗ ವಿಶ್ವಸಂಸ್ಥೆಯ ಸಭೆಯೊಂದರಲ್ಲಿ ಕೈಲಾಸದ ಪ್ರತಿನಿಧಿಯೊಬ್ಬರು ಮಾತನಾಡಿರುವುದು ಎಲ್ಲರನ್ನೂ ಅಚ್ಚರಿಗೆ ದೂಡಿದೆ.