ಉತ್ತರ ಪ್ರದೇಶದ ಈ ಗ್ರಾಮದಲ್ಲಿದ್ದಾರೆ 15000 ಕ್ಕೂ ಹೆಚ್ಚು ಯೋಧರು, ಜಮ್ಮು-ಕಾಶ್ಮೀರದ ಗಡಿಕಾವಲಿಗೆ 200ಕ್ಕೂ ಹೆಚ್ಚು ಜನ
ಉತ್ತರ ಪ್ರದೇಶದ ಈ ಗ್ರಾಮದಲ್ಲಿದ್ದಾರೆ 15,000ಕ್ಕೂ ಹೆಚ್ಚು ಯೋಧರು. ಈ ಪೈಕಿ 200ಕ್ಕೂ ಹೆಚ್ಚು ಯೋಧರು ಜಮ್ಮು- ಕಾಶ್ಮೀರದಲ್ಲಿ ಗಡಿ ಕಾಯುತ್ತಿದ್ದಾರೆ. ಹೌದು, ಅಂತಹ ಒಂದು ಮಾದರಿ ಗ್ರಾಮ ದೇಶದ ಗಮನಸೆಳೆದಿದೆ. ಅದರ ವಿವರ ಇಲ್ಲಿದೆ.

ನಮ್ಮ ದೇಶ ಭಾರತದ ಗಡಿ ಭದ್ರತೆ ವಿಚಾರ ಬಂದಾಗ ಯೋಧರು ತಮ್ಮ ಪ್ರಾಣವನ್ನೇ ಪಣವಾಗಿಟ್ಟು ಕಾಯುತ್ತಾರೆ. ದೇಶದ ಎಲ್ಲ ರಾಜ್ಯಗಳ ಜನರೂ ನಮ್ಮ ಸೇನೆಯಲ್ಲಿದ್ದಾರೆ. ಆದಾಗ್ಯೂ ಕೆಲವು ಗ್ರಾಮದವರು ಬಹಳಷ್ಟು ಜನ ಈ ವಿಚಾರದಲ್ಲಿ ಮುಂಚೂಣಿಯಲ್ಲಿದ್ದಾರೆ. ಅಂತಹ ಒಂದು ಗ್ರಾಮ ಉತ್ತರ ಪ್ರದೇಶದಲ್ಲಿದೆ. ಗ್ರಾಮದಲ್ಲಿದ್ದಾರೆ 15,000ಕ್ಕೂ ಹೆಚ್ಚು ಯೋಧರು. ಈ ಪೈಕಿ 200ಕ್ಕೂ ಹೆಚ್ಚು ಯೋಧರು ಜಮ್ಮು- ಕಾಶ್ಮೀರದಲ್ಲಿ ಗಡಿ ಕಾಯುತ್ತಿದ್ದಾರೆ. ಹೌದು ಇಂತಹ ಗ್ರಾಮದ ಕುರಿತು ಬಾಸ್ಕರ್ ಇಂಗ್ಲಿಷ್ ವರದಿ ಮಾಡಿದೆ.
ಉತ್ತರ ಪ್ರದೇಶದ ಈ ಗ್ರಾಮದಲ್ಲಿದ್ದಾರೆ 15000 ಕ್ಕೂ ಹೆಚ್ಚು ಯೋಧರು
ಉತ್ತರ ಪ್ರದೇಶದ ಘಾಜಿಫುರದ ಗಹ್ಮರ್ ಗ್ರಾಮವೇ ಈ ಯೋಧ ಗ್ರಾಮ. ಇಲ್ಲಿ 5000ಕ್ಕೂ ಹೆಚ್ಚು ನಿವೃತ್ತ ಯೋಧರಿದ್ದಾರೆ. ಅವರ ಕುಟುಂಬದ 10,000ಕ್ಕೂ ಹೆಚ್ಚು ಯುವಕರು ಸೇನೆಯ ಸೇವೆಯಲ್ಲಿದ್ದಾರೆ. 90 ಮನೆಗಳ 200ಕ್ಕೂ ಹೆಚ್ಚು ಯುವಕರು ಜಮ್ಮು- ಕಾಶ್ಮೀರದ ಗಡಿಕಾಯುವ ಕೆಲಸದಲ್ಲಿದ್ದಾರೆ. ರಾಷ್ಟ್ರಪ್ರೇಮಕ್ಕೆ ಹೆಸರುವಾಸಿಯಾದ ಗ್ರಾಮ ಇದು. 1965ರಿಂದ 1999ರ ಕಾರ್ಗಿಲ್ ಯುದ್ಧದ ತನಕ ಪ್ರಮುಖ ಯುದ್ಧಗಳಲ್ಲಿ ಈ ಗ್ರಾಮದ 50ಕ್ಕೂ ಹೆಚ್ಚು ಯೋಧರು ಪಾಲ್ಗೊಂಡಿರುವುದು ವಿಶೇಷ. ಗ್ರಾಮದ ಮಧ್ಯಭಾಗದಲ್ಲಿ ಅಶೋಕ ಚಕ್ರ ಸ್ಥಂಭವೂ ಇದ್ದು, ಪ್ರತಿ ಮನೆಯ ಗೇಟ್‌ಗಳಲ್ಲಿ ಯೋಧರ ಹೆಸರು ಬರೆದಿದ್ದಾರೆ. ಮನೆಗಳಲ್ಲಿ ಯೋಧರ ಸಮವಸ್ತ್ರ, ಮೆಡಲ್‌ಗಳನ್ನು ಪ್ರದರ್ಶಿಸಿದ್ದಾರೆ.
ಭಯೋತ್ಪಾದನೆ ವಿರುದ್ಧದ ಸಮರದಲ್ಲಿ ಪಾಲ್ಗೊಳ್ಳುವ ಉತ್ಸಾಹ
ಪಹಲ್ಗಾಮ್ ದಾಳಿ ಬಳಿಕ ಭಯೋತ್ಪಾದನೆ ವಿರುದ್ಧದ ಭಾರತದ ಹೋರಾಟದಲ್ಲಿ ಪಾಲ್ಗೊಳ್ಳುವ ಉತ್ಸಾಹ ಈ ಗ್ರಾಮದ 90 ವರ್ಷದ ಯೋಧನಿಗೂ ಇದೆ ಎಂದು ವರದಿ ಹೇಳಿದೆ. ಹೌದು, 1971ರ ಯುದ್ಧ ವೀರ ಬನ್ಶಿಧರ್ ಸಿಂಗ್ ಇಂತಹ ಉತ್ಸಾಹ ತೋರಿದ್ದು, ಒಂದೊಮ್ಮೆ ಸರ್ಕಾರ ಅನುಮತಿಸಿದರೆ, ಈಗಲೂ ನಾನು ಗಡಿ ಕಾಯಲು ಸಿದ್ಧ ಎಂದಿದ್ದಾರೆ.
ಇನ್ನು, 1977 ರಿಂದ 2008ರ ತನಕ ಭಾರತೀಯ ಸೇನಗೆ ಕೆಲಸ ಮಾಡಿದ್ದ ಮಾಜಿ ಸುಬೇದಾರ್ ಮೇಜರ್ ವೀರ್ ಬಹಾದುರ್ ಸಿಂಗ್ ಅವರು ಭಾರತೀಯ ಸೇನೆ ಪಾಕಿಸ್ತಾನದಲ್ಲಿರುವ ಉಗ್ರ ಶಿಬಿರ ನಾಶ ಮಾಡಿದ್ದರ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ. ಕೆಲವೇ ನಿಮಿಷಗಳಲ್ಲಿ ಎಲ್ಲವೂ ನಾಶವಾಗಿದೆ. ಅವರಿಗೆ ಈಗ ಅಳುವುದು ಬಿಟ್ಟರೆ ಬೇರೇನೂ ಮಾಡಲಾಗದು ಎಂದು ಹೇಳಿದ್ದಾರೆ. ಈ ಗ್ರಾಮದಲ್ಲಿ 42 ಲೆಫ್ಟಿನೆಂಟ್‌ಗಳು, 23 ಬ್ರಿಗೇಡಿಯರ್‌ಗಳು ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಇನ್ನು ಪ್ರಸ್ತುತ 45 ಕರ್ನಲ್‌ಗಳು ಸೇವೆಯಲ್ಲಿದ್ದಾರೆ.
ಜಮ್ಮು-ಕಾಶ್ಮೀರದ ಗಡಿಕಾವಲಿಗೆ 200ಕ್ಕೂ ಹೆಚ್ಚು ಜನ, ಉಳಿದ ರಾಜ್ಯಗಳಲ್ಲೂ ಇದ್ದಾರೆ ಇವರು
ಜಮ್ಮು- ಕಾಶ್ಮೀರದ ಗಡಿ ಕಾವಲಿಗೆ ಈ ಗ್ರಾಮದ 200ಕ್ಕೂ ಹೆಚ್ಚು ಯೋಧರು ಕೆಲಸ ಮಾಡುತ್ತಿದ್ಧಾರೆ. ಇನ್ನು ಕೆಲವರು ಬೇರೆ ಬೇರೆ ರಾಜ್ಯಗಳ ಸೇನಾ ನೆಲೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಗ್ರಾಮಸ್ಥರು ಒಡಿಶಾದಲ್ಲಿ ಸ್ವಲ್ಪ ಹೆಚ್ಚು. ಸ್ವಾತಂತ್ರ್ಯ ಪೂರ್ವದ ಇತಿಹಾಸ ಗಮನಿಸಿದರೂ ಈ ಗ್ರಾಮಸ್ಥರು ಸೇನೆಯಲ್ಲಿದ್ದದ್ದೇ ಹೆಚ್ಚು. ಬ್ರಿಟಿಷ್ ಸೇನೆಯಲ್ಲಿ 228 ಗ್ರಾಮಸ್ಥರಿದ್ದರು. ಅವರು ಮೊದಲ ವಿಶ್ವ ಮಹಾ ಯುದ್ಧದಲ್ಲಿ ಭಾಗವಹಿಸಿದ್ದರು. 21 ಯೋಧರು ಹುತಾತ್ಮರಾಗಿದ್ದರು. ಗ್ರಾಮದ ನಡುವೆ ಇರುವ ಅಶೋಕ ಚಕ್ರ ಸ್ತಂಭದಲ್ಲಿ ಹುತಾತ್ಮರ ಹೆಸರುಗಳಿವೆ.
ಈ ಯೋಧ ಗ್ರಾಮ ಒಂದು ಮಾದರಿ ಗ್ರಾಮದಂತೆ ಇದೆ. ಇಲ್ಲಿ ಎಲ್ಲ ಆಧುನಿಕ ಸೌಕರ್ಯಗಳೂ ಇವೆ. ಪದವಿ, ಪದವಿ ಪೂರ್ವಕಾಲೇಜುಗಳೂ ಇವೆ. ಅತ್ಯುತ್ತಮ ರೈಲ್ವೆ ನಿಲ್ದಾಣವೂ ಇದ್ದು, ನಿತ್ಯವೂ ಇಲ್ಲಿಗೆ ಬಿಹಾರ, ಬಂಗಾಳ, ಉತ್ತರ ಪ್ರದೇಶಕ್ಕೆ ಹೋಗುವ 20 ರೈಲುಗಳು ನಿಲ್ಲುತ್ತವೆ. ಇಲ್ಲಿ ಮಿಲಿಟರಿ ಸ್ಕೂಲ್ ಎಂಟ್ರನ್ಸ್ ಎಕ್ಸಾಂ ಬರೆಯುವುದಕ್ಕೆ ಮಕ್ಕಳಿಗೆ ತರಬೇತಿ ನೀಡಲು ರಫೇಲ್ ಅಕಾಡೆಮಿಯನ್ನು ನಿವೃತ್ತ ಯೋಧರು ಸ್ಥಾಪಿಸಿದ್ದಾರೆ. ಹೀಗಾಗಿ ಇದು ಈಗ ದೇಶದ ಗಮನವನ್ನು ಮತ್ತೊಮ್ಮೆ ಸೆಳೆದಿದೆ ಎಂದು ವರದಿ ಹೇಳಿದೆ.