UPI One World: ಭಾರತದ ಬ್ಯಾಂಕ್‌ ಖಾತೆ ಇಲ್ಲದಿದ್ರೂ ಯುಪಿಐ ಹಣ ಪಾವತಿಗೆ ಅವಕಾಶ; ವಿದೇಶಿ ಪ್ರವಾಸಿಗರು, ಎನ್‌ಆರ್‌ಐಗಳಿಗೆ ಅನುಕೂಲ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Upi One World: ಭಾರತದ ಬ್ಯಾಂಕ್‌ ಖಾತೆ ಇಲ್ಲದಿದ್ರೂ ಯುಪಿಐ ಹಣ ಪಾವತಿಗೆ ಅವಕಾಶ; ವಿದೇಶಿ ಪ್ರವಾಸಿಗರು, ಎನ್‌ಆರ್‌ಐಗಳಿಗೆ ಅನುಕೂಲ

UPI One World: ಭಾರತದ ಬ್ಯಾಂಕ್‌ ಖಾತೆ ಇಲ್ಲದಿದ್ರೂ ಯುಪಿಐ ಹಣ ಪಾವತಿಗೆ ಅವಕಾಶ; ವಿದೇಶಿ ಪ್ರವಾಸಿಗರು, ಎನ್‌ಆರ್‌ಐಗಳಿಗೆ ಅನುಕೂಲ

UPI One World: ವಿದೇಶಿ ಪ್ರವಾಸಿಗರು ಮತ್ತು ಅನಿವಾಸಿ ಭಾರತೀಯರು ಭಾರತದಲ್ಲಿ ಭಾರತೀಯ ಬ್ಯಾಂಕ್‌ ಖಾತೆ ಹೊಂದಿಲ್ಲದೆ ಇದ್ದರೂ ಯುಪಿಐ ಹಣ ಪಾವತಿ ಮಾಡಬಹುದು. ನಗದು ಅಥವಾ ಫಾರೆಕ್ಸ್‌ ಕಾರ್ಡ್‌ ಬದಲು ಯುಪಿಐ ಒನ್‌ ವರ್ಲ್ಡ್‌ ಬಳಸಬಹುದು. ತಮ್ಮ ಯುಪಿಐ ವ್ಯಾಲೆಟ್‌ಗೆ ಯುಪಿಐ ಕ್ಯೂಆರ್‌ ಕೋಡ್‌ ಮೂಲಕ ಭಾರತದ ಕರೆನ್ಸಿಯನ್ನು ಹಾಕಿಕೊಂಡು ಬಳಸಬಹುದು.

ವಿದೇಶಿಗರು ಭಾರತದಲ್ಲಿ ನಗದು ಅಥವಾ ಫಾರೆಕ್ಸ್‌ ಕಾರ್ಡ್‌ ಬದಲು ಯುಪಿಐ ಒನ್‌ ವರ್ಲ್ಡ್‌ ಬಳಸಬಹುದು.
ವಿದೇಶಿಗರು ಭಾರತದಲ್ಲಿ ನಗದು ಅಥವಾ ಫಾರೆಕ್ಸ್‌ ಕಾರ್ಡ್‌ ಬದಲು ಯುಪಿಐ ಒನ್‌ ವರ್ಲ್ಡ್‌ ಬಳಸಬಹುದು.

ಬೆಂಗಳೂರು, ಮೈಸೂರು, ಹಂಪಿ, ಮಂಗಳೂರು ಸೇರಿದಂತೆ ಕರ್ನಾಟಕದ ವಿವಿಧೆಡೆಗೆ ಸಾಕಷ್ಟು ವಿದೇಶಿ ಪ್ರವಾಸಿಗರು ಬರುತ್ತಾರೆ. ಇದೇ ರೀತಿ, ತಾಜ್‌ ಮಹಲ್‌, ಮುಂಬೈ, ದೆಹಲಿ ಸೇರಿದಂತೆ ವಿವಿಧ ನಗರಗಳಿಗೆ, ಪ್ರವಾಸಿ ತಾಣಗಳಿಗೆ, ಪ್ರೇಕ್ಷಣಿಯ ಸ್ಥಳಗಳಿಗೆ ಪ್ರವಾಸಿಗರು ಭೇಟಿ ನೀಡುತ್ತಾರೆ. ಆದರೆ, ಈ ಸಮಯದಲ್ಲಿ ಅವರು ಕರೆನ್ಸಿ ಎಕ್ಸ್‌ಚೇಂಜ್‌ನಿಂದ ಭಾರತದ ರೂಪಾಯಿಯನ್ನು ವಿನಿಮಯ ಮಾಡಿಕೊಳ್ಳಬೇಕಾಗುತ್ತದೆ ಅಥವಾ ಫಾರೆಕ್ಸ್‌ ಕಾರ್ಡ್‌ಗಳನ್ನು ಬಳಸಬೇಕಾಗುತ್ತದೆ. ಇದೀಗ ಯುಪಿಐ ಒನ್‌ ವರ್ಲ್ಡ್‌ ಮೂಲಕ ವಿದೇಶಿಗರು ಮತ್ತು ಅನಿವಾಸಿ ಭಾರತೀಯರ ಈ ಸಮಸ್ಯೆ ಬಗೆಹರಿದಿದೆ.

ಏನಿದು ಯುಪಿಐ ಒನ್‌ ವರ್ಲ್ಡ್‌?

ವಿದೇಶಿಗರು ಯುಪಿಐ ಒನ್‌ ವರ್ಲ್ಡ್‌ನ ವ್ಯಾಲೆಟ್‌ಗೆ ತಮ್ಮ ದೇಶದ ಕರೆನ್ಸಿ ಮೂಲಕ ಭಾರತೀಯ ರೂಪಾಯಿಯನ್ನು ಹಾಕಿಕೊಳ್ಳಬಹುದು. ಆ ವ್ಯಾಲೆಟ್‌ನಲ್ಲಿರುವ ಭಾರತೀಯ ಕರೆನ್ಸಿಯನ್ನು ಭಾರತದಲ್ಲಿ ಯುಪಿಐ ವಹಿವಾಟಿಗೆ ಬಳಸಬಹುದು. ಭಾರತಕ್ಕೆ ಭೇಟಿ ನೀಡುವ ವಿದೇಶಿ ವಿದ್ಯಾರ್ಥಿಗಳಿಗೆ, ವಿದೇಶಿ ಪ್ರವಾಸಿಗರಿಗೆ, ಅಲ್ಪಾವಧಿಗೆ ತರಬೇತಿಗೆ ಬರುವ ಉದ್ಯೋಗಿಗಳಿಗೆ ಸೇರಿದಂತೆ ಭಾರತಕ್ಕೆ ಬರುವ ಎಲ್ಲಾ ವಿದೇಶಿಗರು ಮತ್ತು ಅನಿವಾಸಿ ಭಾರತೀಯರಿಗೆ ಇದರಿಂದ ಪ್ರಯೋಜನವಾಗಲಿದೆ.

ಯುಪಿಐ ಒನ್ ವರ್ಲ್ಡ್‌ ಹೇಗೆ ಕಾರ್ಯನಿರ್ವಹಿಸುತ್ತದೆ?

ವಿಶೇಷವಾಗಿ ವಿದೇಶಿಗರು ಮತ್ತು ಎನ್‌ಆರ್‌ಐಗಳನ್ನು ಗಮನದಲ್ಲಿಟ್ಟುಕೊಂಡು ಯುಪಿಐ ಒನ್‌ ವರ್ಲ್ಡ್‌ ವಿನ್ಯಾಸ ಮಾಡಲಾಗಿದೆ. ಇದು ಭಾರತದ ಯುಪಿಐನಿಂದ ಕಾರ್ಯನಿರ್ವಹಿಸುತ್ತದೆ. ನಾವು ಯುಪಿಐಯನ್ನು ಗೂಗಲ್‌ ಪೇ, ಫೋನ್‌ ಪೇ ಮುಂತಾದವುಗಳಲ್ಲಿ ಬಳಸುತ್ತಿರಬಹುದು. ಯುಪಿಐ ಒನ್‌ ವರ್ಲ್ಡ್‌ ಕೂಡ ಇದೇ ರೀತಿ ಕಾರ್ಯನಿರ್ವಹಿಸುತ್ತದೆ. ನಾವು ನಮ್ಮ ಯುಪಿಐ ಖಾತೆಗೆ ನಮ್ಮ ಬ್ಯಾಂಕ್‌ ಖಾತೆಗಳನ್ನು ಲಿಂಕ್‌ ಮಾಡಿರುತ್ತೇವೆ. ಯುಪಿಐ ಒನ್‌ ವರ್ಲ್ಡ್‌ನಲ್ಲಿ ವ್ಯಾಲೆಟ್‌ ಇರುತ್ತದೆ, ಅದಕ್ಕೆ ವಿದೇಶಿಗರು ತಮ್ಮ ಕರೆನ್ಸಿ ಮೂಲಕ ಭಾರತದ ಕರೆನ್ಸಿಯನ್ನು ತುಂಬಿಕೊಳ್ಳಬಹುದು. ಈ ಪ್ರಿಪೇಯ್ಡ್‌ ವ್ಯಾಲೆಟ್‌ ಅನ್ನು ಭಾರತದಲ್ಲಿ ಯುಪಿಐ ವಹಿವಾಟು ಇರುವ ಎಲ್ಲಾ ಕಡೆಗಳಲ್ಲಿಯೂ ಬಳಸಬಹುದು.

ಭಾರತದಲ್ಲಿ ಸುತ್ತಾಡುವ ಸಮಯದಲ್ಲಿ ವಿದೇಶಿಗರಿಗೆ ತಮ್ಮೊಂದಿಗೆ ಸಾವಿರಾರು, ಲಕ್ಷಾಂತರ ರೂಪಾಯಿ ನಗದು ಹಣವನ್ನು ತೆಗೆದುಕೊಂಡು ಹೋಗುವ ತಾಪತ್ರಯ ತಪ್ಪಲಿದೆ. ಫಾರೆಕ್ಸ್‌ ಕಾರ್ಡ್‌ ಅನ್ನು ಎಲ್ಲಾ ಕಡೆಗಳಲ್ಲಿ ಅವಲಂಬಿಸುವುದೂ ಕಡಿಮೆಯಾಗಲಿದೆ.

"ವಿದೇಶಿ ಪ್ರವಾಸಿಗರಿಗೆ ಆಗಾಗ ಫಾರೆಕ್ಸ್‌ ಕಾರ್ಡ್‌ ತೊಂದರೆ ನೀಡುತ್ತ ಇರುತ್ತದೆ. ವಿಶೇಷವಾಗಿ ಸಣ್ಣ ಪಟ್ಟಣಗಳಲ್ಲಿ ಫಾರೆಕ್ಸ್‌ ಕಾರ್ಡ್‌ ಬಳಕೆ ಕಷ್ಟವಾಗುತ್ತದೆ. ಯುಪಿಐ ಒನ್‌ ವರ್ಲ್ಡ್‌ ಈ ತೊಂದರೆಯನ್ನು ನಿವಾರಿಸಲಿದೆ. ಭಾರತಕ್ಕೆ ಭೇಟಿ ನೀಡುವ ವಿದೇಶಿಗರು ನಗದು ಅಥವಾ ಫಾರೆಕ್ಸ್‌ ಕಾರ್ಡ್‌ ಅವಲಂಬಿಸದೆ ಡಿಜಿಟಲ್‌ ವಹಿವಾಟು ನಡೆಸಲು ಇದು ನೆರವಾಗುತ್ತದೆ" ಎಂದು ಟ್ರಾನ್ಸ್‌ಕಾರ್ಪ್‌ನ ಸಿಇಒ ಅಯಾನ್ ಅಗರ್ವಾಲ್ ಹೇಳಿದ್ದಾರೆ.

ಡೌನ್‌ಲೋಡ್‌ ಮಾಡಿಕೊಳ್ಳುವುದು ಹೇಗೆ?

ಯುಪಿಐ ಒನ್‌ ವರ್ಲ್ಡ್‌ ಎಂಬ ಹೆಸರಿನ ಅಪ್ಲಿಕೇಷನ್‌ ಇಲ್ಲ. ಬಳಕೆದಾರರು ಪಿಪಿಐ (ಪ್ರಿಪೇಯ್ಡ್‌ ಪೇಮೆಂಟ್‌ ಇನ್‌ಸ್ಟ್ರುಮೆಂಟ್‌) ವ್ಯಾಲೆಟ್‌ ಆ್ಯಪ್‌ಗಳನ್ನು ಡೌನ್‌ಲೋಡ್‌ ಮಾಡಿಕೊಳ್ಳಬೇಕು. ಅಂದರೆ, ಟ್ರಾನ್ಸ್‌ಕಾರ್ಪ್‌ನ ಚೆಕ್‌ಕ್ಯೂ (CheQ), ಐಡಿಎಫ್‌ಸಿ ಫಸ್ಟ್‌ನ ಫಸ್ಟ್‌ ರುಪಿ (First Rupee), ಇತರೆ ಕಂಪನಿಗಳ Mony ಅಥವಾ NamasPayನಂತಹ ಅಪ್ಲಿಕೇಷನ್‌ಗಳನ್ನು ಡೌನ್‌ಲೋಡ್‌ ಮಾಡಿಕೊಳ್ಳಬಹುದು. ಈ ಸೇವೆಯನ್ನು ಸಕ್ರೀಯಗೊಳಿಸಲು ವಿದೇಶಿಗರು ಅಥವಾ ಎನ್‌ಆರ್‌ಐಗಳು ಭಾರತದ ವಿಮಾನ ನಿಲ್ದಾಣಗಳಲ್ಲಿ ಅಥವಾ ವಿಮಾನ ನಿಲ್ದಾಣಗಳ ಹೊರಗಡೆ ಮಾಡಿರುವ ವಿಶೇಷ ಕೌಂಟರ್‌ಗಳಲ್ಲಿ ಕೆವೈಸಿ ಪ್ರಕ್ರಿಯೆ ಮಾಡಿಕೊಳ್ಬೇಕು. ತಮ್ಮ ಪಾಸ್‌ಪೋರ್ಟ್‌ ಅಥವಾ ವೀಸಾದ ಮೂಲಕ ದೃಢೀಕರಣ ಮಾಡಿಸಿಕೊಂಡು ಇಂತಹ ಸೇವೆಯನ್ನು ಪಡೆಯಬಹುದು.

ಎಲ್ಲಾದರೂ ಐಡಿಎಫ್‌ಸಿ ಫಸ್ಟ್‌ನ ಫಸ್ಟ್‌ ರುಪಿ ಅಪ್ಲಿಕೇಷನ್‌ ಬಳಸುವವರು ವಿಮಾನ ನಿಲ್ದಾಣಗಳ ಕೌಂಟರ್‌ ಅಥವಾ ಐಡಿಎಫ್‌ಸಿ ಫಸ್ಟ್‌ ಬ್ಯಾಂಕ್‌ಗಳಲ್ಲಿ ಇಂತಹ ಸೇವೆ ಆ್ಯಕ್ಟಿವೇಟ್‌ ಮಾಡಿಕೊಳ್ಳಬಹುದು. ಚೆಕ್‌ಕ್ಯೂ ಬಳಸುವವರು ಚೆಕ್‌ಕ್ಯೂನ ಯಾವುದಾದರೂ ಬ್ರ್ಯಾಂಚ್‌ಗೆ ಹೋಗಬಹುದು. "ನಾವು ಭಾರತದಲ್ಲಿ ಕೆವೈಸಿ ದೃಢೀಕರಣಕ್ಕಾಗಿ 28 ಬ್ರ್ಯಾಂಚ್‌ಗಳನ್ನು ಹೊಂದಿದ್ದೇವೆ" ಎಂದು ಟ್ರಾನ್ಸ್‌ಕಾರ್ಪ್‌ನ ಅಗರ್‌ವಾಲ್‌ ಹೇಳಿದ್ದಾರೆ. "ಈ ರೀತಿ ಕೆವೈಸಿ ಪ್ರಕ್ರಿಯೆಗೆ ಸುಮಾರು 15 ನಿಮಿಷ ತೆಗೆದುಕೊಳ್ಳುತ್ತದೆ. ಒಮ್ಮೆ ಇದು ಸಕ್ರಿಯಗೊಂಡರೆ ಭಾರತದ ಯಾವುದೇ ಭಾಗದಲ್ಲಿ ಬೇಕಾದರೂ ಯುಪಿಐ ಪಾವತಿ ಮಾಡಬಹುದು" ಎಂದು ಅವರು ಹೇಳಿದ್ದಾರೆ.

ಯುಪಿಐ ಒನ್‌ ವರ್ಲ್ಡ್‌ ಬಳಕೆ ಹೇಗೆ
ಯುಪಿಐ ಒನ್‌ ವರ್ಲ್ಡ್‌ ಬಳಕೆ ಹೇಗೆ

ಭಾರತದಿಂದ ವಾಪಸ್‌ ಹೋಗುವ ವೇಳೆ ತಮ್ಮ ವ್ಯಾಲೆಟ್‌ನಲ್ಲಿರುವ ಹಣವನ್ನು ತಮ್ಮ ಕ್ರೆಡಿಟ್‌ ಕಾರ್ಡ್‌ ಅಥವಾ ಅಂತಾರಾಷ್ಟೀಯ ಬ್ಯಾಂಕ್‌ ಖಾತೆಗೆ ರಿಫಂಡ್‌ ಮಾಡಿಕೊಳ್ಳಬಹುದು. ಪಿಪಿಐ ವ್ಯಾಲೆಟ್ ಬಳಸುವವರಿಗೆ ಯಾವುದೇ ವಹಿವಾಟು ಶುಲ್ಕಗಳು ಇರುವುದಿಲ್ಲ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.