ಒಂದೇ ತಿಂಗಳಲ್ಲಿ 3 ಬಾರಿ ಬಳಕೆದಾರರನ್ನು ಸಂಕಷ್ಟಕ್ಕೆ ಸಿಲುಕಿಸಿದ UPI; ಹಣ ಪಾವತಿಸಲು ಪರದಾಟ
ಒಂದು ತಿಂಗಳೊಳಗೆ ಮೂರನೇ ಬಾರಿಗೆ ಯುಪಿಐ ವಹಿವಾಟಿನಲ್ಲಿ ಸಮಸ್ಯೆಯಾಗಿದೆ. ಗೂಗಲ್ ಪೇ ಮತ್ತು ಪೇಟಿಯಂ ಬಳಕೆದಾರರು ಹಣದ ವಹಿವಾಟು ನಡೆಸುವಾಗ ಸಮಸ್ಯೆ ಎದುರಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ಗಮನಿಸಿ.

ಭಾರತದಲ್ಲಿ UPI (ಏಕೀಕೃತ ಪಾವತಿ ಇಂಟರ್ಫೇಸ್) ಸೇವೆಗಳು ಇಂದು (ಏ.12) ಶನಿವಾರ ಬೆಳಿಗ್ಗೆಯಿಂದ ಕಾರ್ಯನಿರ್ವಹಿಸುತ್ತಿಲ್ಲ. ಬಳಕೆದಾರರು ಡಿಜಿಟಲ್ ಹಣಕಾಸು ವಹಿವಾಟುಗಳನ್ನು ಮಾಡಲು ಸಾಧ್ಯವಾಗದೆ ಒದ್ದಾಡುವಂತಾಗಿದೆ. ಒಂದು ತಿಂಗಳೊಳಗೆ ಮೂರನೇ ಬಾರಿಗೆ ಈ ರೀತಿ ಸಮಸ್ಯೆ ಉಂಟಾಗಿದೆ. ದೇಶಾದ್ಯಂತ ವ್ಯಕ್ತಿಗಳು ಮತ್ತು ವ್ಯವಹಾರಗಳಿಗೆ ಈ ಅಡಚಣೆಯ ಬಿಸಿ ತಗುಲಿದೆ. ಡೌನ್‌ಡಿಟೆಕ್ಟರ್ ವರದಿಗಳ ಪ್ರಕಾರ ಈ ಸಮಸ್ಯೆ ವ್ಯಾಪಕವಾಗಿದ್ದು, ಮಧ್ಯಾಹ್ನದ ವೇಳೆಗೆ ಸುಮಾರು 1,168 ದೂರುಗಳು ದಾಖಲಾಗಿವೆಯಂತೆ.
ಗೂಗಲ್ ಪೇ ಬಳಕೆದಾರರು 96 ಜನ ಸಮಸ್ಯೆಗಳ ಬಗ್ಗೆ ದೂರು ನೀಡಿದರೆ, ಪೇಟಿಎಂ ಬಳಕೆದಾರರು 23 ಜನ ದೂರುಗಳನ್ನು ನೀಡಿದ್ದಾರೆ. ಅಡಚಣೆಯ ಹಿಂದಿನ ಕಾರಣ ಇನ್ನೂ ತಿಳಿದಿಲ್ಲ. ಏತನ್ಮಧ್ಯೆ, ವಹಿವಾಟು ಸಮಸ್ಯೆಗಳನ್ನು ಎದುರಿಸುತ್ತಿರುವ ಬಳಕೆದಾರರ ಬಗ್ಗೆ NPCI ಅಧಿಕೃತ ಹೇಳಿಕೆಯನ್ನು ನೀಡಿದೆ. “NPCI ಪ್ರಸ್ತುತ ಮಧ್ಯಂತರ ತಾಂತ್ರಿಕ ಸಮಸ್ಯೆಗಳನ್ನು ಎದುರಿಸುತ್ತಿದೆ. ಸಮಸ್ಯೆಯನ್ನು ಪರಿಹರಿಸಲು ನಾವು ಕೆಲಸ ಮಾಡುತ್ತಿದ್ದೇವೆ. ನಿಮಗೆ ಈ ಬಗ್ಗೆ ಅಪ್‌ಡೇಟ್ ನೀಡುತ್ತೇವೆ” ಎಂದು ಉಂಟಾದ ಅನಾನುಕೂಲತೆಗೆ ವಿಷಾದ ವ್ಯಕ್ತಪಡಿಸಿದ್ದಾರೆ.
ಯುಪಿಐ (UPI) ಇತ್ತೀಚೆಗೆ ಸರಣಿ ಸಮಸ್ಯೆಗಳನ್ನು ಎದುರಿಸುತ್ತಿದೆ. ಭಾರತದಾದ್ಯಂತ ಬಳಕೆದಾರರಿಗೆ ಅನಾನುಕೂಲತೆಯನ್ನುಂಟುಮಾಡಿದೆ. ಇತ್ತೀಚಿನ ಅಡಚಣೆ ಇಂದು ಸಂಭವಿಸಿದರೆ ಈ ಹಿಂದೆ ಕೂಡ ಎರಡು ಬಾರಿ ಇದೇ ರೀತಿ ಸಮಸ್ಯೆ ಉಂಟಾಗಿತ್ತು. ಅಚಾನಕ್ ಆಗಿ ಆನ್‌ಲೈನ್ ಪೇಮೆಂಟ್ ಕೆಲಸ ಮಾಡುವುದನ್ನು ಸ್ಥಗಿತಗೊಳಿಸಿದರೆ ಸಾಕಷ್ಟು ಸಮಸ್ಯೆ ಎದುರಿಸಬೇಕಾಗುತ್ತದೆ. ಪ್ರತಿನಿತ್ಯ ಎಲ್ಲರೂ ಆನ್‌ಲೈನ್ ಮೋಡ್‌ನಲ್ಲಿಯೇ ಪೇಮೆಂಟ್ ಮಾಡುತ್ತಿರುತ್ತಾರೆ. ಅಂತಹ ಹಲವು ಬಳಕೆದಾರರಿಗೆ ಸಮಸ್ಯೆ ಉಂಟಾಗುತ್ತಿದೆ.
ಈ ಹಿಂದೆ ಆದ ಸಮಸ್ಯೆಗಳು
ಏಪ್ರಿಲ್ 2ರಂದು ಡೌನ್‌ಡೆಕ್ಟರ್ ವರದಿ ಪ್ರಕಾರ 514 ಜನ ದೂರು ಸಲ್ಲಿಸಿದ್ದರು. ಆ ಸಂದರ್ಭದಲ್ಲಿ ಗಣನೀಯವಾಗಿ ಯುಪಿಐ ಸ್ಥಗಿತಗೊಂಡಿದ್ದು , ಶೇ. 52 ರಷ್ಟು ಬಳಕೆದಾರರು ಯುಪಿಐ ಅಪ್ಲಿಕೇಶನ್‌ಗಳ ಮೂಲಕ ಹಣವನ್ನು ವರ್ಗಾಯಿಸುವಾಗ ಸಮಸ್ಯೆಗಳನ್ನು ಎದುರಿಸಿದ್ದರು.
ಮಾರ್ಚ್ 26ರಂದೂ ಸಹ ಗೂಗಲ್ ಪೇ ಮತ್ತು ಪೇಟಿಎಂನಂತಹ ಜನಪ್ರಿಯ ಯುಪಿಐ ಅಪ್ಲಿಕೇಶನ್‌ಗಳ ಬಳಕೆದಾರರ ಮೇಲೆ ಸ್ಥಗಿತವು ಪರಿಣಾಮ ಬೀರಿತ್ತು. ಡೌನ್‌ಡೆಕ್ಟರ್ ವರದಿ ಪ್ರಕಾರ 3,000 ಕ್ಕೂ ಹೆಚ್ಚು ದೂರುಗಳು ಅಂದು ವರದಿಯಾಗಿವೆ. ಬಳಕೆದಾರರು 2-3 ಗಂಟೆಗಳ ಕಾಲ ಯಾವುದೇ ವಹಿವಾಟು ನಡೆಸಲು ಸಾದ್ಯವಾಗಿರಲಿಲ್ಲ.

ವಿಭಾಗ