UPS vs NPS: ಕೇಂದ್ರ ಸರ್ಕಾರಿ ನೌಕರರಿಗೆ ಹೊಸ ಪಿಂಚಣಿ ಆಯ್ಕೆ; ಈ 2 ಯೋಜನೆ ಕುರಿತು ಈ ಮಾಹಿತಿ ನಿಮಗೆ ತಿಳಿದಿರಲಿ
ಕೇಂದ್ರ ಸರ್ಕಾರಿ ನೌಕರರಿಗೆ ಏಪ್ರಿಲ್ 1ರಿಂದ ಏಕೀಕೃತ ಪಿಂಚಣಿ ಯೋಜನೆ (ಯುಪಿಎಸ್) ಕಾರ್ಯರೂಪಕ್ಕೆ ಬಂದಿದೆ. ರಾಷ್ಟ್ರೀಯ ಪಿಂಚಣಿ ಯೋಜನೆ ಅಥವಾ ಎನ್ಪಿಎಸ್ ಆಯ್ಕೆ ಮಾಡಿಕೊಂಡ ಉದ್ಯೋಗಿಗಳು, ಯುಪಿಎಸ್ಗೆ ಬದಲಾಗಬಹುದೇ? ಈ ಕುರಿತು ಮಾಹಿತಿ ಇಲ್ಲಿದೆ.

ಕೇಂದ್ರ ಸರ್ಕಾರಿ ನೌಕರರಿಗಿರುವ ಪಿಂಚಣಿ ಯೋಜನೆಗಳಾದ ಯುಪಿಎಸ್ ಮತ್ತು ಎನ್ಪಿಎಸ್ ಕುರಿತ ಕೆಲವು ಗೊಂದಲಗಳಿಗೆ ಇಲ್ಲಿ ಉತ್ತರವಿದೆ. ಈ ತಿಂಗಳ ಆರಂಭದಲ್ಲಿ ಯುಪಿಎಸ್ ಜಾರಿಗೆ ಬಂದಾಗ ಜನರಲ್ಲಿ ಹಲವು ಪ್ರಶ್ನೆಗಳು ಬೆಳಕಿಗೆ ಬಂದವು. ಎನ್ಪಿಎಸ್ (NPS) ಅಡಿಯಲ್ಲಿ ಕೇಂದ್ರ ಸರ್ಕಾರಿ ನೌಕರರಿಗೆ ಮತ್ತೊಂದು ಆಯ್ಕೆಯಾಗಿ ಯುಪಿಎಸ್ ಅನ್ನು ಕೇಂದ್ರ ಸರ್ಕಾರವು ಏಪ್ರಿಲ್ 1ರಂದು (2025) ಪರಿಚಯಿಸಿತು. 2025ರ ಏಪ್ರಿಲ್ 1ಕ್ಕೆ ಅನ್ವಯಿಸುವಂತೆ ಸೇವೆಯಲ್ಲಿರುವ ಹಾಗೂ ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (ಎನ್ಪಿಎಸ್) ಅಡಿಯಲ್ಲಿ ಬರುವ ಯಾವುದೇ ಹಾಲಿ ಕೇಂದ್ರ ಸರ್ಕಾರಿ ಉದ್ಯೋಗಿಯು ಯುಪಿಎಸ್ ಆಯ್ಕೆ ಮಾಡಲು ಅರ್ಹತೆ ಪಡೆಯುತ್ತಾರೆ.
ಸರ್ಕಾರಿ ಉದ್ಯೋಗಿಗಳಿಗೆ ನಿವೃತ್ತಿಗೆ ಮೊದಲು ಕಳೆದ 12 ತಿಂಗಳುಗಳಲ್ಲಿ ಪಡೆದ ಸರಾಸರಿ ಮೂಲ ವೇತನದ 50 ಶೇಕಡದಷ್ಟು ಖಚಿತ ಪಿಂಚಣಿ ಯುಪಿಎಸ್ ಅಡಿ ಸಿಗುತ್ತದೆ. ಭಾರತದಾದ್ಯಂತ 23 ಲಕ್ಷ ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ NPS ಮತ್ತು UPS ಆಯ್ಕೆಗಳು ಲಭ್ಯವಿದೆ. ಆದರೆ ಸರ್ಕಾರಿ ಸೇವೆಯಿಂದ ತೆಗೆದುಹಾಕಲ್ಪಟ್ಟ, ವಜಾಗೊಳಿಸಲ್ಪಟ್ಟ ಅಥವಾ ರಾಜೀನಾಮೆ ನೀಡಿದ ಉದ್ಯೋಗಿಗಳಿಗೆ ಅನ್ವಯಿಸುವುದಿಲ್ಲ.
ಹಾಗಿದ್ದರೆ ಯುಪಿಎಸ್ ಅಥವಾ ಏಕೀಕೃತ ಪಿಂಚಣಿ ಯೋಜನೆ (Unified Pension Scheme) ಮತ್ತು ಎನ್ಪಿಎಸ್ ಅಥವಾ ರಾಷ್ಟ್ರೀಯ ಪಿಂಚಣಿ ಯೋಜನೆ (National Pension Scheme) ನಡುವಿನ ವ್ಯತ್ಯಾಸಗಳೇನು? ಈ ಹಿಂದೆ ಎನ್ಪಿಎಸ್ ಪಿಂಚಣಿ ಆಯ್ಕೆ ಮಾಡಿಕೊಂಡಿದ್ದ ಉದ್ಯೋಗಿಗಳು ಈಗ ಯುಪಿಎಸ್ಗೆ ಬದಲಾಗಬಹುದೇ? ಇಂತಹ ಪ್ರಶ್ನೆಗಳು ಹಲವರಲ್ಲಿದೆ. ಇದಕ್ಕೆ ಉತ್ತರ ಇಲ್ಲಿದೆ.
ನಿವೃತ್ತ ಉದ್ಯೋಗಿ ಯುಪಿಎಸ್ಗೆ ಅರ್ಹರೇ?
2025ರ ಮಾರ್ಚ್ 31ರಂದು ಅಥವಾ ಅದಕ್ಕೂ ಮೊದಲು ನಿವೃತ್ತಿ ಪಡೆದ ಮತ್ತು ನಿಗದಿತ ಷರತ್ತುಗಳನ್ನು ಪೂರೈಸುವ ಯಾವುದೇ ಕೇಂದ್ರ ಸರ್ಕಾರಿ ಉದ್ಯೋಗಿ ಯುಪಿಎಸ್ ಪಿಂಚಣಿಗೆ ಬದಲಾಗಬಹುದು. ಮೃತ ಚಂದಾದಾರರ ವಿವಾಹಿತ (ಕಾನೂನುಬದ್ಧವಾಗಿ) ಸಂಗಾತಿ ಕೂಡಾ ಯುಪಿಎಸ್ ಅಡಿಯಲ್ಲಿ ಅರ್ಹರು.
2025ರ ಏಪ್ರಿಲ್ 1ರಂದು ಅಥವಾ ನಂತರ ಸೇವೆಗೆ ಸೇರುವ ಹೊಸದಾಗಿ ನೇಮಕಗೊಂಡ ಕೇಂದ್ರ ಸರ್ಕಾರಿ ನೌಕರರು ಫಾರ್ಮ್ ಎ ಅನ್ನು ಭರ್ತಿ ಮಾಡಬೇಕು. ಇದೇ ವೇಳೆ ಪ್ರಸ್ತುತ ಎನ್ಪಿಎಸ್ಗೆ ಚಂದಾದಾರರಾಗಿರುವ ಅರ್ಹ ಕೇಂದ್ರ ಸರ್ಕಾರಿ ಉದ್ಯೋಗಿಗಳು, ಯುಪಿಎಸ್ ಆಯ್ಕೆಮಾಡಲು ಫಾರ್ಮ್ A2 ಅನ್ನು ಭರ್ತಿ ಮಾಡಬೇಕು. ಫಾರ್ಮ್ ಅನ್ನು ಆನ್ಲೈನ್ನಲ್ಲಿ ಅಥವಾ ತಾವು ಕೆಲವ ಮಾಡುವ ಕಚೇರಿ ಮುಖ್ಯಸ್ಥರಿಗೆ ಭೌತಿಕವಾಗಿ ಸಲ್ಲಿಸಬಹುದು.
ಎಷ್ಟು ದಿನದೊಳಗೆ ಬದಲಾವಣೆ ಮಾಡಲು ಅವಕಾಶವಿದೆ?
ಈಗಲೇ ಉದ್ಯೋಗದಲ್ಲಿರುವ ಕೇಂದ್ರ ಸರ್ಕಾರಿ ನೌಕರರು, ಏಪ್ರಿಲ್ 1ರಿಂದ ಮೂರು ತಿಂಗಳ ಒಳಗೆ ತಮ್ಮ ಅಂತಿಮ ಆಯ್ಕೆ ಮಾಡಬೇಕು. ಏಪ್ರಿಲ್ 1ರಂದು ಅಥವಾ ಆ ನಂತರ ಉದ್ಯೋಗಕ್ಕೆ ಸೇರುವವರು, ಸರ್ಕಾರಿ ಸೇವೆಗಳಿಗೆ ಸೇರಿದ ದಿನಾಂಕದಿಂದ ಮೂವತ್ತು ದಿನಗಳ ಒಳಗೆ ಆಯ್ಕೆಯನ್ನು ಮಾಡಬೇಕು.
ಒಂದು ವೇಳೆ ಯಾವುದೇ ಆಯ್ಕೆ ಮಾಡದಿದ್ದರೆ?
ನಿಗದಿತ ಸಮಯದ ಮಿತಿಯೊಳಗೆ ಯುಪಿಎಸ್ ಆಯ್ಕೆ ಮಾಡದವರು, ಈ ಹಿಂದಿನಂತೆ ಎನ್ಪಿಎಸ್ ಅಡಿಯಲ್ಲಿ ಮುಂದುವರಿಯಲು ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಪರಿಗಣಿಸಲಾಗುತ್ತದೆ.
ಒಮ್ಮೆ ಯುಪಿಎಸ್ ಆಯ್ಕೆ ಮಾಡಿದವರು ಮತ್ತೆ ಎನ್ಪಿಎಸ್ಗೆ ಬದಲಾಯಿಸಬಹುದೇ?
ಇಲ್ಲ, ಒಮ್ಮೆ ಆಯ್ಕೆ ಮಾಡಿದ ನಂತರ ಮತ್ತೆ ಬದಲಾಯಿಸಲಾಗದು. ಒಮ್ಮೆ ಯುಪಿಎಸ್ ಆಯ್ಕೆ ಮಾಡಿದರೆ ಅದುವೇ ಅಂತಿಮ.
PRAN ಎಂದರೇನು?
ಯುಪಿಎಸ್ ಆಯ್ಕೆ ಮಾಡಿಕೊಂಡರೆ, ಶಾಶ್ವತ ನಿವೃತ್ತಿ ಖಾತೆ ಸಂಖ್ಯೆ ಅಥವಾ PRAN ಸಂಖ್ಯೆ ನೀಡಲಾಗುತ್ತದೆ. ಯುಪಿಎಸ್ ಆಯ್ಕೆ ಮಾಡಿಕೊಳ್ಳುವ ಚಂದಾದಾರರಿಗೆ ನಿಗದಿಪಡಿಸಲಾದ ಸಂಖ್ಯೆ ಇದಾಗಿದ್ದು, ಅದರ ಅಡಿಯಲ್ಲಿ ಎಲ್ಲಾ ವಹಿವಾಟುಗಳನ್ನು ದಾಖಲಿಸಲಾಗುತ್ತದೆ.