ಯುಪಿಎಸ್‌ಸಿ ನಾಗರಿಕ ಸೇವೆಗಳ ಪೂರ್ವಭಾವಿ ಪರೀಕ್ಷೆಗೆ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ; ಫೆ 18ರವರೆಗೆ ಅವಕಾಶ
ಯುಪಿಎಸ್‌ಸಿ ನಾಗರಿಕ ಸೇವೆಗಳ ಪ್ರಿಲಿಮ್ಸ್ ಪರೀಕ್ಷೆ 2025ರ ನೋಂದಣಿ ದಿನಾಂಕವನ್ನು ವಿಸ್ತರಿಸಲಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ, ಹಾಗೂ ಅರ್ಜಿ ಸಲ್ಲಿಕೆ ವಿಧಾನ ಇಲ್ಲಿದೆ.

ಕೇಂದ್ರ ಲೋಕಸೇವಾ ಆಯೋಗ (UPSC) 2025ರ ನಾಗರಿಕ ಸೇವೆಗಳ ಪೂರ್ವಭಾವಿ ಪರೀಕ್ಷೆಗೆ ಅರ್ಜಿ ಸಲ್ಲಿಸಲು ನಿಗದಿಯಾದ ಕೊನೆಯ ದಿನಾಂಕವನ್ನು ವಿಸ್ತರಿಸಿದೆ. ಯುಪಿಎಸ್‌ಸಿ ನಾಗರಿಕ ಸೇವೆಗಳ ಪ್ರಿಲಿಮ್ಸ್ ಪರೀಕ್ಷೆ 2025ರ ನೋಂದಣಿ ಮಾಡಿಕೊಳ್ಳಲು ಇದೀಗ ಫೆಬ್ರುವರಿ 18 (ಮಂಗಳವಾರ) ರವರೆಗೆ ಅವಕಾಶವಿದೆ. ಸಿಎಸ್ (ಪಿ) ಮತ್ತು ಐಎಫ್ಒಎಸ್ (ಪಿ) 2025ಕ್ಕೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು, ಯುಪಿಎಸ್‌ಸಿಯ ಅಧಿಕೃತ ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದು. ಸದ್ಯ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು ಫೆಬ್ರುವರಿ 18ರವರೆಗೆ ವಿಸ್ತರಿಸಲಾಗಿದೆ. ಅದರ ಬೆನ್ನಲ್ಲೇ ತಿದ್ದುಪಡಿ ವಿಂಡೋ ಫೆಬ್ರುವರಿ 19ರಂದು ತೆರೆಯಲಾಗುತ್ತಿದ್ದು, ಫೆಬ್ರುವರಿ 25ರಂದು ಕೊನೆಗೊಳ್ಳಲಿದೆ
ಸಿಎಸ್ (ಪಿ) -2025 ಮತ್ತು ಐಎಫ್ಒಎಸ್ (ಪಿ) 2025ಕ್ಕೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು ಫೆ. 18ರ ಸಂಜೆ 06 ಗಂಟೆಯವರೆಗೆ ವಿಸ್ತರಿಸಲಾಗಿದೆ. ಇದಲ್ಲದೆ, 7 ದಿನಗಳ ತಿದ್ದುಪಡಿ ವಿಂಡೋ, ಅರ್ಜಿ ಸಲ್ಲಿಕೆ ಅವಧಿ ಮುಗಿದ ಮರುದಿನದಿಂದ ಅಂದರೆ 19ರಿಂದ ಆರಂಭವಾಗಿ ಫೆ.25ರವರೆಗೆ 7 ದಿನಗಳ ಅವಧಿಗೆ ಲಭ್ಯವಿರುತ್ತದೆ, ಎಂದು ಅಧಿಕೃತ ನೋಟಿಸ್ ತಿಳಿಸಿದೆ. ಈ ಹಿಂದೆ, 2025ರ ನಾಗರಿಕ ಸೇವೆಗಳ (ಪ್ರಿಲಿಮಿನರಿ) ಪರೀಕ್ಷೆಗೆ ಅರ್ಜಿ ಸಲ್ಲಿಸಲು ಫೆಬ್ರುವರಿ 11 ಕೊನೆಯ ದಿನಾಂಕ ಆಗಿತ್ತು. ಇದೀಗ ಅದನ್ನು ವಿಸ್ತರಿಸಲಾಗಿದೆ.
ನಾಗರಿಕ ಸೇವೆಗಳ ಪರೀಕ್ಷೆಯನ್ನು UPSC ವಾರ್ಷಿಕವಾಗಿ ಮೂರು ಹಂತಗಳಲ್ಲಿ ನಡೆಸುತ್ತದೆ. ಪೂರ್ವಭಾವಿ (preliminary), ಮುಖ್ಯ ಪರೀಕ್ಷೆ (mains) ಮತ್ತು ಸಂದರ್ಶನ (interview). ಭಾರತೀಯ ಆಡಳಿತ ಸೇವೆ (IAS), ಭಾರತೀಯ ವಿದೇಶಾಂಗ ಸೇವೆ (IFS) ಮತ್ತು ಭಾರತೀಯ ಪೊಲೀಸ್ ಸೇವೆ (IPS) ಸೇರಿದಂತೆ ಇತರ ಅಧಿಕಾರಿಗಳನ್ನು ಆಯ್ಕೆ ಮಾಡಲು ಈ ಪರೀಕ್ಷೆ ನಡೆಸಲಾಗುತ್ತದೆ.
ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿ
ಅಭ್ಯರ್ಥಿಗಳು upsconline.gov.in ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವುದಕ್ಕೂ ಮೊದಲು, ಅಭ್ಯರ್ಥಿಗಳು ವನ್-ಟೈಮ್ ರಿಜಿಸ್ಟ್ರೇಷನ್ (ಒಟಿಆರ್) ಪ್ರೊಫೈಲ್ ರಚಿಸಬೇಕು. ಈ ಒಟಿಆರ್ ಪ್ರೊಫೈಲ್ ಜೀವಿತಾವಧಿಯವರೆಗೆ ಮಾನ್ಯವಾಗಿರುತ್ತದೆ. ಹೀಗಾಗಿ ಈಗಾಗಲೇ ಪ್ರೊಫೈಲ್ ರಚಿಸಿರುವರು ನೇರವಾಗಿ ಅರ್ಜಿ ನಮೂನೆಯನ್ನು ಭರ್ತಿ ಮಾಡಬಹುದು.
ಈ ವರ್ಷ ಸುಮಾರು 979 ಹುದ್ದೆಗಳಿಗೆ ಪರೀಕ್ಷೆ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಯುಪಿಎಸ್‌ಸಿಯ ಅಧಿಕೃತ ವೆಬ್‌ಸೈಟ್ ಅನ್ನು ಪರಿಶೀಲಿಸಬಹುದು.
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ಹಂತಗಳು
1. ಯುಪಿಎಸ್‌ಸಿ ಅಧಿಕೃತ ವೆಬ್‌ಸೈಟ್ upsc.gov.in ಕ್ಕೆ ಭೇಟಿ ನೀಡಿ.
2. ಮುಖಪುಟದಲ್ಲಿ ಲಭ್ಯವಿರುವ ಸಿವಿಲ್ ಸರ್ವೀಸಸ್ ಪ್ರಿಲಿಮ್ಸ್ ಲಿಂಕ್ ಅನ್ನು ಕ್ಲಿಕ್ ಮಾಡಿ.
3. ಆಗ ಹೊಸ ಪುಟ ತೆರೆದುಕೊಳ್ಳುತ್ತದೆ. ಅಲ್ಲಿ ಅಭ್ಯರ್ಥಿಗಳು ಒಟಿಆರ್ ಪ್ರೊಫೈಲ್ ಅನ್ನು ರಚಿಸಬೇಕಾಗುತ್ತದೆ.
4. ಈಗ ಪ್ರೊಫೈಲ್‌ಗೆ ಲಾಗಿನ್ ಆಗಿ, ಅರ್ಜಿ ನಮೂನೆಯನ್ನು ಭರ್ತಿ ಮಾಡಿ.
5. ಅರ್ಜಿ ಶುಲ್ಕವನ್ನು ಪಾವತಿಸಿ ಮತ್ತು ಸಬ್ಮಿಟ್ ಮೇಲೆ ಕ್ಲಿಕ್ ಮಾಡಿ.
6. ಬರುವ ದೃಢೀಕರಣ ಪುಟವನ್ನು ಡೌನ್‌ಲೋಡ್ ಮಾಡಿ ಇಟ್ಟುಕೊಳ್ಳಿ. ಅದರ ಹಾರ್ಡ್ ಕಾಪಿಯನ್ನು ಇರಿಸಿಕೊಳ್ಳಿ.
ಅರ್ಜಿ ಶುಲ್ಕ 100 ರೂ. ಆಗಿದ್ದು, ಶುಲ್ಕವನ್ನು ಆನ್ ಲೈನ್ ಮೂಲಕ ಪಾವತಿಸಬೇಕು. ಮಹಿಳಾ / ಎಸ್‌ಸಿ / ಎಸ್‌ಟಿ / ವಿಕಲಚೇತನ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕದಲ್ಲಿ ವಿನಾಯಿತಿ ನೀಡಲಾಗಿದೆ.
