ಯುಪಿಎಸ್ಸಿಗೆ ನೂತನ ಅಧ್ಯಕ್ಷರ ನೇಮಕ, ಕೇರಳ ಕೇಡರ್‌ನ ನಿವೃತ್ತ ಐಎಎಸ್ ಅಧಿಕಾರಿ ಅಜಯಕುಮಾರ್ ಅಧ್ಯಕ್ಷ
ಕೇಂದ್ರೀಯ ಲೋಕಸೇವಾ ಆಯೋಗದ ನೂತನ ಅಧ್ಯಕ್ಷರನ್ನು ಕೇಂದ್ರ ಸರ್ಕಾರ ನೇಮಕ ಮಾಡಿದೆ. ಕೇರಳ ಕೇಡರ್‌ನ ಐಎಎಸ್ ಅಧಿಕಾರಿಯಾಗಿ ಹಲವು ವರ್ಷ ಕೆಲಸ ಮಾಡಿದ್ದ ಅಜಯಕುಮಾರ್ ಅವರಿಗೆ ಈ ಹುದ್ದೆ ಲಭಿಸಿದೆ.

ದೆಹಲಿ: ಭಾರತದ ಅತ್ಯುನ್ನತ ಹುದ್ದೆಗಳಿಗೆ ಆಯ್ಕೆ ಮಾಡುವ ಕೇಂದ್ರೀಯ ಲೋಕಸೇವಾ ಆಯೋಗ( UPSC)ದ ಅಧ್ಯಕ್ಷರನ್ನಾಗಿ ನಿವೃತ್ತ ಐಎಎಸ್ ಅಧಿಕಾರಿ ಅಜಯಕುಮಾರ್ ಅವರನ್ನು ನೇಮಕ ಮಾಡಲಾಗಿದೆ. ಎರಡು ವಾರದಿಂದ ಕೇಂದ್ರೀಯ ಲೋಕಸೇವಾ ಆಯೋಗದ ಅಧ್ಯಕ್ಷರ ಹುದ್ದೆ ಖಾಲಿ ಇತ್ತು. ಒಂದು ವರ್ಷ ಕಾಲ ಅಧ್ಯಕ್ಷರಾಗಿದ್ದ ಮತ್ತೊಬ್ಬ ಹಿರಿಯ ನಿವೃತ್ ಐಎಎಸ್ ಅಧಿಕಾರಿ ಪ್ರೀತಿಸೂಧನ ಅವರ ಅವಧಿ ಕಳೆದ ತಿಂಗಳೇ ಮುಗಿದಿತ್ತು. ಈಗ ಹೊಸ ಅಧ್ಯಕ್ಷರನ್ನು ಯುಪಿಎಸ್ಸಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನೇಮಕ ಮಾಡಿದ್ದಾರೆ.ಕೇಂದ್ರ ಸಿಬ್ಬಂದಿ ಸಚಿವಾಲಯ ಮಂಗಳವಾರ ರಾತ್ರಿ ಹೊರಡಿಸಿರುವ ಆದೇಶದ ಪ್ರಕಾರ, ಮಾಜಿ ರಕ್ಷಣಾ ಕಾರ್ಯದರ್ಶಿ ಅಜಯ್ ಕುಮಾರ್ ಅವರನ್ನು ಮಂಗಳವಾರ ಯುಪಿಎಸ್‌ಸಿ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.
ಏಪ್ರಿಲ್ 29 ರಂದು ಪ್ರೀತಿಸೂಧನ ಅವರ ಅಧಿಕಾರಾವಧಿ ಪೂರ್ಣಗೊಂಡ ನಂತರ ಕೇಂದ್ರ ಸಾರ್ವಜನಿಕ ಸೇವಾ ಆಯೋಗದ (ಯುಪಿಎಸ್‌ಸಿ) ಅಧ್ಯಕ್ಷರ ಹುದ್ದೆ ಖಾಲಿಯಾಗಿತ್ತು. ಆನಂತರ ಹೊಸ ಅಧ್ಯಕ್ಷರ ನೇಮಕ ಪ್ರಕ್ರಿಯೆ ಶುರುವಾಗಿತ್ತು. ಈಗ ಆದೇಶ ಹೊರ ಬಿದ್ದಿದೆ.
1985 ರ ಬ್ಯಾಚ್‌ನ ನಿವೃತ್ತ ಭಾರತೀಯ ಆಡಳಿತ ಸೇವೆ (ಐಎಎಸ್) ಅಧಿಕಾರಿಯಾಗಿದ್ದ ಕುಮಾರ್, ಅವರ ಸೇವಾ ದಾಖಲೆಗಳ ಪ್ರಕಾರ, 2019ರ ಆಗಸ್ಟ್ 23 ರಿಂದ 2022ರ ಅಕ್ಟೋಬರ್ 31, ರವರೆಗೆ ರಕ್ಷಣಾ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದಾರೆ.ಅಲ್ಲದೇ ಕೇರಳದಲ್ಲೂ ವಿವಿಧ ಜಿಲ್ಲೆಗಳು, ಇಲಾಖೆಗಳಲ್ಲಿ ಕೆಲಸ ಮಾಡಿ ಕೇಂದ್ರ ಸೇವೆಯಲ್ಲಿದ್ದರು. ಸೇವೆಯಿಂದ ನಿವೃತ್ತರಾಗಿ ಎರಡೂವರೆ ವರ್ಷ ಕಳೆದಿತ್ತು. ಈಗ ಅವರನ್ನು ಯುಪಿಎಸ್ಸಿ ಅಧ್ಯಕ್ಷರ ಹುದ್ದೆಗೆ ನೇಮಕ ಮಾಡಲಾಗಿದೆ.
ಯುಪಿಎಸ್ಸಿ ಅಧ್ಯಕ್ಷ ಸ್ಥಾನಕ್ಕೆ ನಿವೃತ್ತ ಐಎಎಸ್ ಇಲ್ಲವೇ ಕೇಂದ್ರ ಸೇವೆಯಲ್ಲಿ ಕೆಲಸ ಮಾಡಿದ ಅನುಭವ ಇರುವ ಅಧಿಕಾರಿಗಳು, ಶಿಕ್ಷಣ ತಜ್ಷರನ್ನು ನೇಮಕ ಮಾಡಲಾಗುತ್ತದೆ. ಈ ಹಿಂದೆ ಹಲವು ಶಿಕ್ಷಣ ತಜ್ಞರು ಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ.
ಐಎಎಸ್, ಭಾರತೀಯ ವಿದೇಶಾಂಗ ಸೇವೆ (ಐಎಫ್‌ಎಸ್) ಮತ್ತು ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಸೇರಿದಂತೆ ಇತರ ಸೇವೆಗಳಿಗೆ ಅಧಿಕಾರಿಗಳನ್ನು ಆಯ್ಕೆ ಮಾಡಲು ನಾಗರಿಕ ಸೇವಾ ಪರೀಕ್ಷೆಗಳನ್ನು ನಡೆಸುವ ಯುಪಿಎಸ್‌ಸಿಯು ಅಧ್ಯಕ್ಷರ ನೇತೃತ್ವದಲ್ಲಿ ನಡೆಯುವ ಭಾರಯದ ಪ್ರಮುಖ ಸಂಸ್ಥೆ. ಗರಿಷ್ಠ 10 ಸದಸ್ಯರನ್ನು ಹೊಂದಿರಬಹುದು. ಸದ್ಯ ಎರಡು ಸದಸ್ಯ ಹುದ್ದೆಗಳು ಇಲ್ಲಿ ಖಾಲಿಯಿವೆ.