ಕನ್ನಡ ಸುದ್ದಿ  /  Nation And-world  /  Us Air Force General Says We Will Go For War Against China In 2025

US-China War: 2025ರಲ್ಲಿ ಚೀನಾದ ವಿರುದ್ಧ ಯುದ್ಧ ಘೋಷಣೆಯಾಗಲಿದೆ: ಇದು ಅಮೆರಿಕದ ಅಧಿಕಾರಿಯ ಭವಿಷ್ಯವಾಣಿ!

2025ರಲ್ಲಿ ಅಮೆರಿಕ-ಚೀನಾ ನಡುವೆ ನೇರ ಯುದ್ಧ ನಡೆಯಲಿದ್ದು, ಈ ಯುದ್ಧ ಖಂಡಿತವಾಗಿಯೂ ಘೋರವಾಗಲಿದೆ ಎಂದು ಅಮೆರಿಕದ ವಾಯುಸೇನೆಯ ಹಿರಿಯ ಅಧಿಕಾರಿಯೊಬ್ಬರು ಭವಿಷ್ಯ ನುಡಿದಿದ್ದಾರೆ. ಆದರೆ ಪೆಂಟಗನ್‌ ಈ ಅಧಿಕಾರಿಯ ಅಭಿಪ್ರಾಯವನ್ನು ತಳ್ಳಿ ಹಾಕಿದ್ದು, ಇದು ಅಮೆರಿಕದ ಮಿಲಿಟರಿಯ ಮೌಲ್ಯಮಾಪನದೊಂದಿಗೆ ಹೊಂದಿಕೆಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ಮೈಕ್‌ ಮಿನಿಹಾನ್‌ (ಸಂಗ್ರಹ ಚಿತ್ರ)
ಮೈಕ್‌ ಮಿನಿಹಾನ್‌ (ಸಂಗ್ರಹ ಚಿತ್ರ) (Verified Twitter)

ವಾಷಿಂಗ್ಟನ್:‌ 2025ರಲ್ಲಿ ಅಮೆರಿಕ-ಚೀನಾ ನಡುವೆ ನೇರ ಯುದ್ಧ ನಡೆಯಲಿದ್ದು, ಈ ಯುದ್ಧ ಖಂಡಿತವಾಗಿಯೂ ಘೋರವಾಗಲಿದೆ ಎಂದು ಅಮೆರಿಕದ ವಾಯುಸೇನೆಯ ಹಿರಿಯ ಅಧಿಕಾರಿಯೊಬ್ಬರು ಭವಿಷ್ಯ ನುಡಿದಿದ್ದಾರೆ.

ನಾಲ್ಕು-ಸ್ಟಾರ್ ಯುಎಸ್ ಏರ್ ಫೋರ್ಸ್ ಜನರಲ್ ಹಾಗೂ ಏರ್ ಮೊಬಿಲಿಟಿ ಕಮಾಂಡ್‌ನ ಮುಖ್ಯಸ್ಥರಾಗಿರುವ ಜನರಲ್ ಮೈಕ್ ಮಿನಿಹಾನ್, 2025ರಲ್ಲಿ ಅಮೆರಿಕ-ಚೀನಾ ನಡುವೆ ಯುದ್ಧ ಸಂಭವಿಸಲಿದೆ ಎಂದು ಪತ್ರವೊಂದರಲ್ಲಿ ಉಲ್ಲೇಖಿಸಿರುವುದು ಇದಿದೀಗ ಜಾಗತಿಕವಾಗಿ ಗಮನ ಸೆಳೆದಿದೆ.

"ಮುಂದಿನ ಎರಡು ವರ್ಷಗಳಲ್ಲಿ ಅಮೆರಿಕ ಹಾಗೂ ಚೀನಾ ನಡುವೆ ಘೋರ ಯುದ್ಧ ಸಂಭವಿಸಲಿದೆ ಎಂದು ನನ್ನ ಅಂತರಾತ್ಮ ಹೇಳುತ್ತಿದೆ. ಆದರೆ ನನ್ನ ಊಹೆ ತಪ್ಪಾಗಲಿ ಎಂದು ನಾನು ಪ್ರಾರ್ಥಿಸುತ್ತೇನೆ.." ಎಂದು ಮೈಕ್ ಮಿನಿಹಾನ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಸುಮಾರು 110,000 ಸದಸ್ಯರನ್ನು ಹೊಂದಿರುವ ಏರ್ ಮೊಬಿಲಿಟಿ ಕಮಾಂಡ್‌ಗೆ ಪತ್ರ ಬರೆದಿರುವ ಮೈಕ್ ಮಿನಿಹಾನ್, "2025ರಲ್ಲಿ ವಿಶ್ವದ ಎರಡು ಮಹಾಶಕ್ತಿಶಾಲಿ (ಅಮೆರಿಕ-ಚೀನಾ) ರಾಷ್ಟ್ರಗಳ ನಡುವೆ ಯುದ್ಧ ಸಂಭವಿಸಲಿದೆ.." ಅಂದಾಜಿಸಿದ್ದಾರೆ. ಈ ಪತ್ರವು ಫೆಬ್ರವರಿ 1ರ ದಿನಾಂಕವನ್ನು ಹೊಂದಿದೆಯಾದರೂ, ನಿನ್ನೆ(ಜ.೨೯-ಶುಕ್ರವಾರ)ಯೇ ಇದನ್ನು ಕಳುಹಿಸಲಾಗಿದೆ.

ಆದರೆ ಮೈಕ್ ಮಿನಿಹಾನ್ ಊಹೆಯನ್ನು ತಿರಸ್ಕರಿಸಿರುವ ಪೆಂಟಗನ್, ಹಿರಿಯ ವಾಯುಸೇನಾಧಿಕಾರಿಯ ಅಂದಾಜು ಅಮೆರಿಕದ ಮಿಲಿಟರಿ ಮೌಲ್ಯಮಾಪನಗಳೊಂದಿಗೆ ಹೊಂದಿಕೆಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

"ಜನರಲ್‌ ಮೈಕ್ ಮಿನಿಹಾನ್ ಅಭಿಪ್ರಾಯಗಳು ಪೆಂಟಗನ್ ಅನ್ನು ಪ್ರತಿನಿಧಿಸುವುದಿಲ್ಲ. ಆದರೆ ಚೀನಾ ತನ್ನ ಭೂಪ್ರದೇಶವೆಂದು ಹೇಳಿಕೊಳ್ಳುವ ತೈವಾನ್‌ನ ಮೇಲೆ ನಿಯಂತ್ರಣವನ್ನು ಸಾಧಿಸಲು ಪ್ರಯತ್ನಿಸುತ್ತದೆ ಎಂಬುದು ನಮ್ಮ ಊಹೆ. ಚೀನಾದ ಈ ನಡೆ ಜಾಗತಿಕ ಪರಿಣಾಮಗಳನ್ನು ಬೀರಲಿದೆ ಎಂದು ಅಮೆರಿಕದ ಮಿಲಿಟರಿಯ ಉನ್ನತ ನಾಯಕತ್ವ ಕಾಳಜಿ ಹೊಂದಿದೆ.." ಎಂದು ಪೆಂಟಗನ್‌ ಹೇಳಿದೆ.

ಅಮೆರಿಕ ಮತ್ತು ತೈವಾನ್ ಎರಡೂ 2024ರಲ್ಲಿ ಅಧ್ಯಕ್ಷೀಯ ಚುನಾವಣೆಗಳನ್ನು ನಡೆಸಲಿವೆ. ಇದು ಚೀನಾಕ್ಕೆ ಮಿಲಿಟರಿ ಕ್ರಮ ಕೈಗೊಳ್ಳಲು ಅವಕಾಶವನ್ನು ಸೃಷ್ಟಿಸುತ್ತದೆ ಎಂದು ಮೈಕ್‌ ಮಿನಿಹಾನ್ ತಮ್ಮ ಪತ್ರದಲ್ಲಿ ಬರೆದಿದ್ದಾರೆ. ಆದರೆ ಮೈಕ್‌ ಮಿನಿಹಾನ್‌ ಕಾಮೆಂಟ್‌ಗಳು ಚೀನಾದ ಮೇಲಿನ ಅಮೆರಿಕದ ಮಿಲಿಟರಿಯ ದೃಷ್ಟಿಕೋನವನ್ನು ಪ್ರತಿನಿಧಿಸುವುದಿಲ್ಲ ಎಂದು ಯುಎಸ್ ರಕ್ಷಣಾ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಈ ತಿಂಗಳ ಆರಂಭದಲ್ಲಿ ತೈವಾನ್ ಜಲಸಂಧಿಯ ಬಳಿ ಚೀನಾ ಮಿಲಿಟರಿ ಚಟುವಟಿಕೆಗಳನ್ನು ಹೆಚ್ಚಿಸಿದೆ. ಇದು ದ್ವೀಪದ ಮೇಲೆ ಚೀನಾದ ಆಕ್ರಮಣ ಸನ್ನಿಹಿತವಾಗಿದೆ ಎಂಬುದರ ಸಂಕೇತವಾಗಿದೆ ಎಂದು ಯುಎಸ್ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಇತ್ತೀಚಿಗೆ ಎಚ್ಚರಿಸಿದ್ದಾರೆ.

ಬೀಜಿಂಗ್‌ನ ಆಡಳಿತವನ್ನು ಒಪ್ಪಿಕೊಳ್ಳಲು ಸ್ವ-ಆಡಳಿತ ದ್ವೀಪದ ಮೇಲೆ, ಚೀನಾ ಇತ್ತೀಚಿನ ವರ್ಷಗಳಲ್ಲಿ ತನ್ನ ರಾಜತಾಂತ್ರಿಕ, ಮಿಲಿಟರಿ ಮತ್ತು ಆರ್ಥಿಕ ಒತ್ತಡವನ್ನು ಹೆಚ್ಚಿಸಿದೆ. ತೈವಾನ್‌ನನ್ನು ಸದಾ ಯುದ್ಧದ ಭಯದಲ್ಲಿ ಇಡುವುದು ಚೀನಾದ ತಂತ್ರವಾಗಿದ್ದು, ಇದೇ ಕಾರಣಕ್ಕೆ ತೈವಾನ್‌ ಜಲಸಂಧಿಯಲ್ಲಿ ತನ್ನ ಮಿಲಿಟರಿ ಉಪಸ್ಥಿತಿಯನ್ನು ಹೆಚ್ಚಿಸಿದೆ. ತೈವಾನ್ ಸರ್ಕಾರವು ಶಾಂತಿಯನ್ನು ಬಯಸುತ್ತದೆ ಆದರೆ ದಾಳಿಯಾದರೆ ತನ್ನನ್ನು ತಾನು ರಕ್ಷಿಸಿಕೊಳ್ಳುವುದಾಗಿ ಹೇಳುತ್ತಿದೆ.

ಇನ್ನು ಜನರಲ್‌ ಮೈಕ್‌ ಮಿನಿಹಾನ್‌ ಅವರ ಪತ್ರಕ್ಕೆ ಪ್ರತಿಕ್ರಿಯೆ ನೀಡಿರುವ ಅಮೆರಿಕದ ವಾಯುಸೇನೆ ಬ್ರಿಗೇಡಿಯರ್ ಜನರಲ್ ಪ್ಯಾಟ್ರಿಕ್ ರೈಡರ್, ಚೀನಾದೊಂದಿಗಿನ ಮಿಲಿಟರಿ ಸ್ಪರ್ಧೆಯು ಸದ್ಯ ನಮ್ಮ ಮುಂದಿರುವ ಅತ್ಯಂತ ಮುಖ್ಯ ಸವಾಲು ಎಂದು ಹೇಳಿದ್ದಾರೆ.

"ಶಾಂತಿಯುತ, ಮುಕ್ತ ಮತ್ತು ಮುಕ್ತ ಇಂಡೋ-ಪೆಸಿಫಿಕ್ ಅನ್ನು ಸಂರಕ್ಷಿಸಲು, ಮಿತ್ರರಾಷ್ಟ್ರಗಳು ಮತ್ತು ಪಾಲುದಾರರೊಂದಿಗೆ ಕೆಲಸ ಮಾಡುವುದರ ಮೇಲೆ ನಮ್ಮ ಗಮನ ಕೇಂದ್ರೀಕೃತವಾಗಿದೆ.." ಎಂದು ಗೇಡಿಯರ್ ಜನರಲ್ ಪ್ಯಾಟ್ರಿಕ್ ರೈಡರ್ ಹೇಳಿದ್ದಾರೆ.

IPL_Entry_Point

ವಿಭಾಗ