Sunita Williams: ಭಾರತಕ್ಕೆ ಶೀಘ್ರವೇ ಬರಲಿದ್ದಾರೆ ಗಗನಯಾತ್ರಿ ಸುನೀತಾ ವಿಲಿಯಮ್ಸ್‌; ಕುಟುಂಬಸ್ಥರ ಖುಷಿಯ ನುಡಿ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Sunita Williams: ಭಾರತಕ್ಕೆ ಶೀಘ್ರವೇ ಬರಲಿದ್ದಾರೆ ಗಗನಯಾತ್ರಿ ಸುನೀತಾ ವಿಲಿಯಮ್ಸ್‌; ಕುಟುಂಬಸ್ಥರ ಖುಷಿಯ ನುಡಿ

Sunita Williams: ಭಾರತಕ್ಕೆ ಶೀಘ್ರವೇ ಬರಲಿದ್ದಾರೆ ಗಗನಯಾತ್ರಿ ಸುನೀತಾ ವಿಲಿಯಮ್ಸ್‌; ಕುಟುಂಬಸ್ಥರ ಖುಷಿಯ ನುಡಿ

Sunita Williams: ಭಾರತ ಸಂಜಾತ ಅಮೆರಿಕ ಗಗನಯಾತ್ರಿ ಸುನೀತಾ ವಿಲಿಯಮ್ಸ್‌ ಅವರು ಭೂಮಿಗೆ ಮರಳಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಭಾರತಕ್ಕೂ ಆಗಮಿಸಲಿದ್ದಾರೆ ಎನ್ನುವ ಖುಷಿಯ ಕ್ಷಣಗಳನ್ನು ಭಾರತದಲ್ಲಿರುವ ಅವರ ಕುಟುಂಬಸ್ಥರು ಹಂಚಿಕೊಂಡಿದ್ದಾರೆ.

ಸುನೀತಾ ವಿಲಿಯಮ್ಸ್‌ ಭಾರತಕ್ಕೆ ಬರಲಿದ್ದಾರೆ ಎಂದು ಅವರ ಸಂಬಂಧಿ ಫಲ್ಗುಣಿ ಪಾಂಡ್ಯ ಹೇಳಿದ್ದಾರೆ.
ಸುನೀತಾ ವಿಲಿಯಮ್ಸ್‌ ಭಾರತಕ್ಕೆ ಬರಲಿದ್ದಾರೆ ಎಂದು ಅವರ ಸಂಬಂಧಿ ಫಲ್ಗುಣಿ ಪಾಂಡ್ಯ ಹೇಳಿದ್ದಾರೆ.

Sunita Williams: ಇಡೀ ಜಗತ್ತೇ ಮೆಚ್ಚುತ್ತಿರುವ ಸುನೀತಾ ವಿಲಿಯಮ್ಸ್‌ ನಮ್ಮ ಕುಟುಂಬದವರು ಎನ್ನುವುದೇ ಹೆಮ್ಮೆಯ ಸಂಗತಿ. ಅವರ ತಂದೆ ದೀಪಕ್‌ ಪಾಂಡ್ಯ ಅವರು ಈಗಲೂ ಗುಜರಾತ್‌ನೊಂದಿಗೆ ನಂಟು ಹೊಂದಿದ್ದಾರೆ. ಸಂಬಂಧಿಕರ ಜತೆಗೆ ಆಗಾಗ ಮಾತನಾಡುತ್ತಿರುತ್ತಾರೆ. ಸುನೀತಾ ವಿಲಿಯಮ್ಸ್‌ ಸದ್ಯದಲ್ಲೇ ಭಾರತಕ್ಕೆ ಬರುತ್ತಾರೆ. ಅದು ಬಲು ಬೇಗನೇ ಆಗಬಹುದು ಎನ್ನುವ ನಿರೀಕ್ಷೆಯಂತೂ ಇದೆ. ಅವರು ಭಾರತಕ್ಕೆ ಬಂದರೆ ಅವರೊಂದಿಗೆ ಪ್ರವಾಸಕ್ಕೆ ಹೋಗಿ ಅವರೊಂದಿಗೆ ಕ್ಷಣಗಳನ್ನು ಕಳೆಯುವ ಆಸೆಯಿದೆ. ಜತೆಗೆ ಅವರು ಒಂಬತ್ತು ತಿಂಗಳುಗಳ ಕಾಲ ಉಳಿದಿದ್ದ ಅಂತರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ ಸಮೋಸಾವೇ ಅವರ ನಿತ್ಯದ ಊಟ ಆಗಿತ್ತು. ಅವರು ಭಾರತಕ್ಕೆ ಬಂದರೆ ಖಂಡಿತಾ ಅವರೊಂದಿಗೆ ಸಮೋಸಾ ಪಾರ್ಟಿಯನ್ನು ಮಾಡುತ್ತೇವೆ.

ಜಗತ್ತಿನ ಗಮನ ಸೆಳೆದಿರುವ ಭಾರತದ ಸಂಜಾತೆ, ಅಮೆರಿಕದ ಗಗನಯಾತ್ರಿ ಸುನೀತಾ ವಿಲಿಯಮ್ಸ್‌ ಕುರಿತು ಗುಜರಾತ್‌ನಲ್ಲಿ ನೆಲೆಸಿರುವ ಅವರ ಸಂಬಂಧಿ ಫಲ್ಗುಣಿ ಪಾಂಡ್ಯ ಹೀಗೆ ಹೇಳುತ್ತಿರುವಾಗ ಅವರ ಮೊಗದಲ್ಲಿ ಸಂತಸ. ನಮ್ಮವರೊಬ್ಬರು ಹೆಮ್ಮೆಯ ಸಾಧನೆ ಮಾಡಿದ ಖುಷಿ. ಸುನೀತಾ ವಿಲಿಯಮ್ಸ್‌ ಭೂಮಿಗೆ ವಾಪಸಾದ ನಂತರ ಫಲ್ಗುಣಿ ಅವರು ಎನ್‌ಡಿಟಿವಿ ಜತೆಗೆ ಮಾತನಾಡಿದರು.

ಸುನೀತಾ ವಿಲಿಯಮ್ಸ್‌ ಅವರು ಅಮೆರಿಕಾದ ನಾಸಾ ತಂಡದ ಭಾಗವಾಗಿ ಬಾಹ್ಯಾಕಾಶ ಯಾನವನ್ನು ಕೈಗೊಂಡಿದ್ದರು. ಎಂಟು ದಿನದ ಯಾತ್ರೆ ಮುಗಿಸಿ ಬರಬೇಕಾಗಿತ್ತಾದರೂ ಒಂಬತ್ತು ತಿಂಗಳ ಕಾಲ ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿಯೇ ದಿನ ದೂಡಬೇಕಾಯಿತು. ಏನಾಗುತ್ತದೋ ಎನ್ನುವ ಆತಂಕ ಭಾರತದಲ್ಲಿ ನೆಲೆಸಿರುವ ಅವರ ಕುಟುಂಬದವರೇ ಆಗಿರುವ ನಮಗೆಲ್ಲಾ ಇತ್ತು. ಸುರಕ್ಷಿತವಾಗಿ ಅವರು ಭೂಮಿಗೆ ಮರಳಿರುವ ವಿಚಾರ ತಿಳಿದು, ಅವರು ವಾಪಸಾದ ವಿಡಿಯೋಗಳನ್ನು ನೋಡಿ ಖುಷಿಯಾಯಿತು ಎನ್ನುವುದು ಫಲ್ಗುಣಿ ನುಡಿ.

ಸುನೀತಾ ಅವರು ಗಗನಯಾತ್ರೆಯಲ್ಲಿ ಸುದೀರ್ಘ ಅನುಭವ ಹೊಂದಿದ್ದಾರೆ. ಎಂತಹ ಕಠಿಣ ಸನ್ನಿವೇಶದಲ್ಲೂ ಅಲ್ಲಿನ ಪರಿಸ್ಥಿತಿಯನ್ನು ನಿಭಾಯಿಸುವುದು ಗೊತ್ತಿದೆ. ಅದನ್ನು ನಾವೆಲ್ಲಾ ಚೆನ್ನಾಗಿ ಬಲ್ಲೆವು. ಈ ಬಾರಿಯೂ ಕಷ್ಟದಲ್ಲಿ ಸಿಲುಕಿದಾಗ ಎಲ್ಲವನ್ನೂ ಜಯಿಸಿಕೊಂಡು ಬರುವ ವಿಶ್ವಾಸವಿತ್ತು. ಹಾಗೆಯೇ ಆಗಿದೆ. ಈಗ ಅವರು ನಮಗೆಲ್ಲಾ ಮಾದರಿಯಾಗಿದ್ದಾರೆ ಎಂದರು ಫಲ್ಗುಣಿ.

ಅವರು ಭಾರತಕ್ಕೆ ಶೀಘ್ರವೇ ಬರುವ ವಿಶ್ವಾಸವಿದೆ. ಅವರಿಗೂ ಕುಟುಂಬಸ್ಥರೊಂದಿಗೆ ಸಮಯ ಕಳೆಯಬೇಕು ಎನ್ನುವ ಬಯಕೆ ಇದೆ. ನಮ್ಮ ಪೂರ್ವಜರು ಭಾರತೀಯರು ಎನ್ನುವ ಹೆಮ್ಮೆಯನ್ನು ಸುನೀತಾ ಹೊಂದಿದ್ದಾರೆ. ನಮ್ಮೊಂದಿಗೆ ಅವರು ಸಂಪರ್ಕದಲ್ಲೂ ಇದ್ದಾರೆ. ಅವರ ಭಾರತ ಭೇಟಿಯ ನಿಖರವಾದ ದಿನಾಂಕಗಳು ತಿಳಿದಿಲ್ಲ, ಆದರೆ ಅವರು ಖಂಡಿತವಾಗಿಯೂ ಶೀಘ್ರದಲ್ಲೇ ಭಾರತಕ್ಕೆ ಬರಲಿದ್ದಾರೆ. ಈ ವರ್ಷವೇ ಅದು ಆಗಬಹುದು ನಾನು ಭಾವಿಸುತ್ತೇನೆ. ಆ ಕ್ಷಣಕ್ಕಾಗಿ ನಾವೆಲ್ಲ ಕಾತರದಿಂದಲೇ ಕಾಯುತ್ತಿದ್ದೇವೆ ಎಂದು ಹೇಳುತ್ತಾರೆ.

ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ನಡೆಯುವ ಮಹಾ ಕುಂಭಕ್ಕೆ ಭೇಟಿ ನೀಡುತ್ತಿರುವುದಾಗಿ ನಾವು ಸುನೀತಾ ವಿಲಿಯಮ್ಸ್ ಹೇಳಿದಾಗ ಅವರು ತಮ್ಮ ಬಳಿ ಚಿತ್ರಗಳನ್ನು ಕೇಳಿದ್ದರು. ಅವುಗಳನ್ನು ಕಳುಹಿಸಿದ್ದೆವು. ನೋಡಿ ಖುಷಿಪಟ್ಟಿದ್ದರು. ಭಾರತದ ಬಗ್ಗೆ ಸುನೀತಾಗೆ ಭಾರೀ ಅಭಿಮಾನ. ಇಲ್ಲಿನ ಯಾವುದೇ ಪ್ರಮುಖ ಘಟನಾವಳಿ, ವಿಶೇಷತೆಗಳನ್ನು ಕೇಳಿ ತಿಳಿದುಕೊಳ್ಳುತ್ತಾರೆ. ಅವರು ಭಾರತಕ್ಕೆ ಬಂದರೆ ಪ್ರಮುಖ ತಾಣಗಳಿಗೆ ಪ್ರವಾಸವನ್ನೂ ಹೋಗುತ್ತೇವೆ ಎಂದರು.

ಬಾಹ್ಯಾಕಾಶ ನಿಲ್ದಾಣದಲ್ಲಿ ಸಮೋಸಾ ಸೇವಿಸಿದ ಮೊದಲ ಗಗನಯಾತ್ರಿ ಸುನೀತಾ ವಿಲಿಯಮ್ಸ್ ಆಗಿರುವುದರಿಂದ, ಅವರಿಗಾಗಿ 'ಸಮೋಸಾ ಪಾರ್ಟಿ' ನೀಡಲು ನಾವೆಲ್ಲಾ ಎದುರು ನೋಡುತ್ತಿದ್ದೇವೆ. ಸುನೀತಾ ವಿಲಿಯಮ್ಸ್ ಅವರ ಹುಟ್ಟುಹಬ್ಬದಂದು ಜನಪ್ರಿಯ ಭಾರತೀಯ ಸಿಹಿತಿಂಡಿ, ಕಾಜು ಕಟ್ಲಿಯನ್ನು ನಾವು ಭಾರತದಿಂದ ಕಳುಹಿಸುತ್ತೇವೆ ಎಂದು ನೆನಪಿಸಿಕೊಂಡರು.

ಕುಂದೂರು ಉಮೇಶಭಟ್ಟ ಪಿ.ಎಚ್.: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಡೆಪ್ಯುಟಿ ಚೀಫ್ ಕಂಟೆಂಟ್ ಪ್ರೊಡ್ಯೂಸರ್. ವಿಜಯ ಕರ್ನಾಟಕದಲ್ಲಿ ವಿಜಯಪುರ ಬ್ಯೂರೊ ಚೀಫ್ ಸೇರಿ ಹಲವು ಮಹತ್ವದ ಹುದ್ದೆಗಳ ನಿರ್ವಹಣೆ. ಮಲೆನಾಡು ಮಿತ್ರ, ಆಂದೋಲನ ಸೇರಿ ವಿವಿಧ ಪತ್ರಿಕೆಗಳಲ್ಲಿ 25 ವರ್ಷಗಳ ಅನುಭವ. ಪರಿಸರ, ಅರಣ್ಯ, ವನ್ಯಜೀವಿ, ಅಭಿವೃದ್ದಿ, ರಾಜಕೀಯ ಆಸಕ್ತಿ ಕ್ಷೇತ್ರಗಳು. 'ಕಾಡಿನ ಕಥೆಗಳು' ಅಂಕಣ ಬರೆಯುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಕುಂದೂರು ಸ್ವಂತ ಊರು. ಸದ್ಯಕ್ಕೆ ಮೈಸೂರು ನಿವಾಸಿ.
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.