ಬೆಂಗಳೂರಲ್ಲಿ ಅಮೆರಿಕ ದೂತಾವಾಸ ಕಚೇರಿ ಸ್ಥಾಪನೆ; ಅನುಷ್ಠಾನ ಸಾಧನೆ ತಮ್ಮದೆಂದು ಬಿಂಬಿಸಿಕೊಳ್ಳಲು ಕಾಂಗ್ರೆಸ್, ಬಿಜೆಪಿ ನಡುವೆ ಪೈಪೋಟಿ
US Consulate Bengaluru: ಬೆಂಗಳೂರಿಗರ ಅನೇಕ ವರ್ಷಗಳ ಕನಸು ನನಸಾಗುತ್ತಿದೆ. ಅಮೆರಿಕದ ದೂತಾವಾಸ ಕಚೇರಿ ಬೆಂಗಳೂರಲ್ಲಿ ಮುಂದಿನ ತಿಂಗಳು ಸ್ಥಾಪನೆಯಾಗಲಿದೆ. ಈ ವಿಚಾರ ಖಾತ್ರಿಯಾದ ಕೂಡಲೇ ಸಾಧನೆ ತಮ್ಮದೆಂದು ಬಿಂಬಿಸಿಕೊಳ್ಳಲು ಕಾಂಗ್ರೆಸ್, ಬಿಜೆಪಿ ನಡುವೆ ಪೈಪೋಟಿ ಶುರುವಾಗಿದೆ.
US Consulate Bengaluru: ಬೆಂಗಳೂರಲ್ಲಿ ಅಮೆರಿಕ ದೂತಾವಾಸ ಕಚೇರಿಯನ್ನು ಜನವರಿ ತಿಂಗಳಲ್ಲಿ ತೆರೆಯುವುದಾಗಿ ಭಾರತದಲ್ಲಿರುವ ಅಮೆರಿಕ ರಾಯಭಾರಿ ಎರಿಕ್ ಗಾರ್ಸೆಟ್ಟಿ ನವದೆಹಲಿಯಲ್ಲಿ ಹೇಳಿದ್ದರು. ಈ ಹೇಳಿಕೆ ಬೆನ್ನಿಗೆ ಕರ್ನಾಟಕದಲ್ಲಿ ಬಿಜೆಪಿ ಮತ್ತು ಆಡಳಿತಾರೂಢ ಕಾಂಗ್ರೆಸ್ ಪಕ್ಷದ ನಡುವೆ ಈ ಸಾಧನೆ ತಮ್ಮದು ಎಂದು ಬಿಂಬಿಸಿಕೊಳ್ಳುವ ಸಮರ ಶುರುವಾಗಿದೆ. ಸೋಷಿಯಲ್ ಮೀಡಿಯಾ ಪೋಸ್ಟ್‌ಗಳು ಈ ಸಾಧನೆ ತಮ್ಮದೆಂದುಕೊಳ್ಳುವ ಸಮರ ವ್ಯಕ್ತವಾಗಿರುವುದನ್ನು ಗಮನಿಸಬಹುದು. ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರು ಅಮೆರಿಕ ದೂತಾವಾಸದ ವಿಚಾರವನ್ನು ನಿನ್ನೆ ಬೆಳಗ್ಗೆ ಟ್ವೀಟ್ ಮಾಡಿದ್ದರು. ಇನ್ನೊಂದೆಡೆ ಸಿಎಂ ಸಿದ್ದರಾಮಯ್ಯ ನಿನ್ನೆ ಸಂಜೆ ಇದೇ ವಿಚಾರ ಟ್ವೀಟ್ ಮಾಡಿದ್ದರು. ಕೆಲವು ಬಿಜೆಪಿ ನಾಯಕರು ಮತ್ತು ಕಾಂಗ್ರೆಸ್ ನಾಯಕರು ಕೂಡ ಟ್ವೀಟ್ ಮಾಡಿದ್ದು, ಬಹುತೇಕರ ಟ್ವೀಟ್‌ನಲ್ಲಿ ಸಾಧನೆ ತಮ್ಮದೆಂದು ಬಿಂಬಿಸಿಕೊಳ್ಳುವ ಪ್ರಯತ್ನ ನಡೆದಿರುವುದು ಕಂಡುಬಂದಿದೆ.
ಬೆಂಗಳೂರಲ್ಲಿ ಅಮೆರಿಕ ದೂತಾವಾಸ ಕಚೇರಿ ಸ್ಥಾಪನೆ; ದೃಢೀಕರಿಸಿದ ರಾಯಭಾರಿ
ನವದೆಹಲಿಯಲ್ಲಿ ಯುಎಸ್-ಇಂಡಿಯಾ ಬ್ಯುಸಿನೆಸ್ ಕೌನ್ಸಿಲ್ (ಯುಎಸ್‌ಐಬಿಸಿ) ಆಯೋಜಿಸಿದ್ದ ಸಂವಾದದಲ್ಲಿ ಮಾತನಾಡಿದ ಅಮೆರಿಕ ರಾಯಭಾರಿ ಗಾರ್ಸೆಟ್ಟಿ, "ಬೆಂಗಳೂರು ಕಾನ್ಸುಲೇಟ್ ಅನ್ನು ತೆರೆಯುವ ವಿಚಾರದಲ್ಲಿ ನಾವು ಬದ್ಧರಾಗಿದ್ದೇವೆ. ಮುಂದಿನ ತಿಂಗಳು ಅಂದರೆ ಜನವರಿಯಲ್ಲಿ ದೂತಾವಾಸ ಕಚೇರಿ ತೆರೆಯುವ ಪ್ರಯತ್ನದಲ್ಲಿದ್ದೇವೆ. ಅಮೆರಿಕದ ದೂತಾವಾಸ ಕಚೇರಿ ಇಲ್ಲದೇ ಇರುವ ಭಾರತದ ಪ್ರಮುಖ ನಗರ ಬೆಂಗಳೂರು. ಇಲ್ಲಿ ಹೆಚ್ಚು ವಿದೇಶಿ ವಾಣಿಜ್ಯ ಸೇವೆ ಇದ್ದು, ಈ ನಗರದಲ್ಲಿ ಅಮೆರಿಕದ ದೂತಾವಾಸ ಕಚೇರಿ ಅಗತ್ಯ ಇರುವುದನ್ನು ಅಮೆರಿಕ ಮನಗಂಡಿದೆ ಎಂದು ಹೇಳಿದರು.
ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಏನು ಟ್ವೀಟ್ ಮಾಡಿದ್ರು
ಬೆಂಗಳೂರಿಗರಿಗೆ ಒಂದು ದೊಡ್ಡ ಖುಷಿ ಸುದ್ದಿ ಇದೆ. ಜನವರಿಯಲ್ಲಿ ನಮ್ಮ ಊರಲ್ಲಿ ಅಮೆರಿಕ ದೂತಾವಾಸ ಸ್ಥಾಪನೆಯಾಗುತ್ತಿದೆ. ಭಾರತದ ಐಟಿ ರಾಜಧಾನಿ ಎಂದು ಗುರುತಿಸಿಕೊಂಡಿರುವ ಬೆಂಗಳೂರು, ದೇಶದ ಐಟಿ ಆದಾಯಕ್ಕೆ ಶೇಕಡ 40 ಕೊಡುಗೆ ನೀಡುತ್ತಿದೆ. ಆದರೂ ಅಮೆರಿಕ ದೂತಾವಾಸ ಇಲ್ಲದೇ ಇರುವ ಕೊರತೆ ಅನುಭವಿಸಿತ್ತು. ಹೀಗಾಗಿ ವೀಸಾ ಕೆಲಸಕ್ಕೆ ಬೆಂಗಳೂರಿಗರು ಚೆನ್ನೈ ಅಥವಾ ಹೈದರಾಬಾದ್‌ಗೆ ಹೋಗಬೇಕಾಗಿತ್ತು. ಈ ಮಹಾನಗರದ ಸಂಸದನಾಗಿ ಅಮೆರಿಕ ದೂತಾವಾಸ ಕಚೇರಿ ಸ್ಥಾಪನೆಗೆ ಪ್ರಯತ್ನಿಸುವುದು ನನ್ನ ಆದ್ಯತೆಯಾಗಿ ಪರಿಗಣಿಸಿ ಕೆಲಸ ಮಾಡಿದೆ. 2019ರ ನವೆಂಬರ್‌ನಲ್ಲಿ ವಿದೇಶಾಂಗ ಸಚಿವರಿಗೆ ಪತ್ರ ಬರೆದಿದ್ದೆ. 2023ರ ಮಾರ್ಚ್ ತಿಂಗಳಲ್ಲಿ ಅವರು ಬೆಂಗಳೂರಿಗೆ ಬಂದಾಗ ಮತ್ತೊಮ್ಮೆ ನೆನಪಿಸಿದ್ದೆ. ಈ ನಡುವೆ 2020ರಲ್ಲಿ ಅಮೆರಿಕದ ಅಂದಿನ ರಾಯಭಾರಿ ಕೆನ್ನತ್ ಜಸ್ಟರ್ ಜತೆಗೂ ಈ ವಿಚಾರ ಪ್ರಸ್ತಾಪಿಸಿದ್ದೆ. ಕೇಂದ್ರ ಸರ್ಕಾರ ಮತ್ತು ಅಮೆರಿಕದ ರಾಯಭಾರಿಗಳು ಬೆಂಗಳೂರಲ್ಲಿ ಅಮೆರಿಕ ದೂತಾವಾಸ ಸ್ಥಾಪನೆಗೆ ನೆರವಾಗುವುದಾಗಿ ಭರವಸೆ ನೀಡಿದ್ದರು. ಈಗ ಅದು ನನಸಾಗಿದೆ ಎಂದು ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಟ್ವೀಟ್ ಮಾಡಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಟ್ವೀಟ್ ಹೀಗಿದೆ
ಕರ್ನಾಟಕದ ಜಾಗತಿಕ ಆಕಾಂಕ್ಷೆಗಳು ಹಾರುತ್ತಿವೆ! ಸೆಪ್ಟೆಂಬರ್‌ನಲ್ಲಿ, ಬೆಂಗಳೂರಿನಲ್ಲಿ US ದೂತಾವಾಸವನ್ನು ಸ್ಥಾಪಿಸಲು ನಾನು US ರಾಯಭಾರಿ ಶ್ರೀ ಎರಿಕ್ ಗಾರ್ಸೆಟ್ಟಿ ಅವರನ್ನು ಒತ್ತಾಯಿಸಿದೆ. ಇಂದು, ಜನವರಿ 2025 ರ ವೇಳೆಗೆ ಇದನ್ನು ನಿಜವಾಗಿಸುವ ತನ್ನ ಬದ್ಧತೆಯನ್ನು ಯುಎಸ್ ಪುನರುಚ್ಚರಿಸುತ್ತಿರುವುದನ್ನು ನೋಡುವುದು ಹರ್ಷದಾಯಕವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನಿನ್ನೆ (ಡಿಸೆಂಬರ್ 20) ಸಂಜೆ ಟ್ವೀಟ್ ಮಾಡಿದ್ದಾರೆ.
ಬೆಂಗಳೂರಿನಲ್ಲಿರುವ ಅಮೆರಿಕ ದೂತಾವಾಸ ಕಚೇರಿಯು ಕರ್ನಾಟಕದ ಜಾಗತಿಕ ಸಂಪರ್ಕವನ್ನು ಹೆಚ್ಚಿಸುತ್ತದೆ. ವ್ಯಾಪಾರವನ್ನು ಹೆಚ್ಚಿಸುವುದಲ್ಲದೆ, ಹೂಡಿಕೆಗಳನ್ನು ಆಕರ್ಷಿಸುತ್ತದೆ. ನಮ್ಮ ಜನರಿಗೆ ವೀಸಾ ಸೇವೆಗಳನ್ನು ಹೆಚ್ಚು ಸುಲಭವಾಗಿಸುತ್ತದೆ. ಜಾಗತಿಕ ಕೇಂದ್ರವಾಗಿ ಬೆಂಗಳೂರಿನ ಉನ್ನತಿ ಮುಂದುವರೆದಿದೆ ಎಂದು ಸಿಎಂ ಸಿದ್ದರಾಮಯ್ಯ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
ಇದೇ ರೀತಿ, ಐಟಿ ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಕೂಡ ಟ್ವೀಟ್ ಮಾಡಿದ್ದು, ಕೆಲವು ವರ್ಷದ ಹಿಂದೆ ನೀಡಿದ ಭರವಸೆ ಈಗ ಈಡೇರುತ್ತಿದೆ. ಬೆಂಗಳೂರಿನಲ್ಲಿ ದೂತಾವಾಸ ಕಚೇರಿ ಮುಂದಿನ ತಿಂಗಳು ಸ್ಥಾಪನೆಯಾಗಲಿದೆ. ಕಾಂಗ್ರೆಸ್ ಪಕ್ಷದ್ದು ಕಾಮ್ ಕೀ ಬಾತ್, ಮನ್ ಕೀ ಬಾತ್ ಅಲ್ಲ ಎಂದು ಹೇಳಿದ್ದಾರೆ.
ಬಿಜೆಪಿ ರಾಜ್ಯ ಅಧ್ಯಕ್ಷ ಬಿವೈ ವಿಜಯೇಂದ್ರ ಕೂಡ ಟ್ವೀಟ್ ಮಾಡಿದ್ದು, ಅದನ್ನು ರೀಟ್ವೀಟ್ ಮಾಡಿರುವ ಸಂಸದ ತೇಜಸ್ವಿ ಸೂರ್ಯ ಇದು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಸಾಧನೆ. ನೇರವಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ವಿದೇಶಾಂಗ ಸಚಿವ ಜೈಶಂಕರ್ ಅವರ ಪ್ರಯತ್ನ ಫಲ ಎಂದು ಪ್ರತಿಪಾದಿಸಿದ್ದಾರೆ.
ವಿಭಾಗ