US elections: ಭಾರತದಲ್ಲಾಗಿದ್ರೆ ಟ್ರಂಪ್, ಕಮಲಾ ಹ್ಯಾರಿಸ್ ಚುನಾವಣಾ ಪ್ರಚಾರ ಹೀಗಿರುತ್ತಿತ್ತು- ಎಐ ಕಟ್ಟಿಕೊಟ್ಟ ಚಿತ್ರಣ ಇಲ್ಲಿದೆ
US elections: ಅಮೆರಿಕ ಅಧ್ಯಕ್ಷೀಯ ಚುನಾವಣೆ ಕಾವು ಏರಿದೆ. ನವೆಂಬರ್ 5ಕ್ಕೆ ಮತದಾನ ನಡೆಯಲಿದೆ. ಈ ನಡುವೆ, ಪ್ರಚಾರ ಅಂತಿಮ ಹಂತದಲ್ಲಿದೆ. ಚಿತ್ರ ಕಲಾವಿದರೊಬ್ಬರು ಭಾರತದಲ್ಲಾಗಿದ್ರೆ ಟ್ರಂಪ್, ಕಮಲಾ ಹ್ಯಾರಿಸ್ ಚುನಾವಣಾ ಪ್ರಚಾರ ಹೀಗಿರುತ್ತಿತ್ತು ಎಂದು ಎಐ ಚಿತ್ರಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಎಐ ಕಟ್ಟಿಕೊಟ್ಟ ಚಿತ್ರಣ ಇಲ್ಲಿದೆ.
US president elections: ಅಮೆರಿಕದ ಅಧ್ಯಕ್ಷ ಪದವಿಗಾಗಿ ನಡೆಯುವ ಅಧ್ಯಕ್ಷೀಯ ಚುನಾವಣೆ ಈ ಬಾರಿ ನವೆಂಬರ್ 5 ರಂದು ನಡೆಯುತ್ತಿದೆ. 47ನೇ ಅಧ್ಯಕ್ಷರ ಆಯ್ಕೆಗಾಗಿ ಲಕ್ಷಾಂತರ ಅಮೆರಿಕನ್ನರು ಅಂದು ಮತದಾನ ಮಾಡಲಿದ್ದಾರೆ. ಅಧ್ಯಕ್ಷೀಯ ಚುನಾವಣೆಯ ಸ್ಪರ್ಧಿಗಳಾಗಿ ರಿಪಬ್ಲಿಕನ್ ಪಕ್ಷದಿಂದ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಂದು ಬಾರಿ ಸ್ಪರ್ಧಿಸಿದ್ದಾರೆ. ಇನ್ನು ಡೆಮಾಕ್ರಟ್ ಪಕ್ಷದಿಂದ ಕಮಲಾ ಹ್ಯಾರಿಸ್ ಸ್ಪರ್ಧಿಸಿದ್ದು, ಇವರಿಬ್ಬರ ನಡುವೆ ಪೈಪೋಟಿ ಜೋರಾಗಿದೆ. ಈ ನಡುವೆ, ಈ ಇಬ್ಬರು ಸ್ಪರ್ಧಿಗಳು ಭಾರತದಲ್ಲೇನಾದರೂ ಚುನಾವಣೆಗೆ ಸ್ಪರ್ಧಿಸಿದ್ದರೆ ಆಗ ಇವರ ಪ್ರಚಾರ ಹೇಗಿರುತ್ತಿತ್ತು ಎಂಬುದನ್ನು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಚಿತ್ರ ಕಟ್ಟಿಕೊಟ್ಟಿದೆ.
ಭಾರತದಲ್ಲಾಗಿದ್ದರೆ ಹೀಗಿರುತ್ತಿತ್ತು ಪ್ರಚಾರ
ಡೊನಾಲ್ಡ್ ಟ್ರಂಪ್ ಮತ್ತು ಕಮಲಾ ಹ್ಯಾರಿಸ್ ಅವರು ಭಾರತೀಯ ರಾಜಕಾರಣಿಗಳಾಗಿ ಭಾರತದಲ್ಲಿ ಪ್ರಚಾರ ಮಾಡಿದರೆ ಹೇಗಿರುತ್ತದೆ ಎಂಬುದನ್ನು ತೋರಿಸಲು ಶಾಹಿದ್ ಎಸ್‌ಕೆ ಎಂಬ ಕಲಾವಿದ ಎಐ (ಆರ್ಟಿಫಿಶಿಯಲ್ ಇಂಟೆಲಿಜೆನ್ಸ್) ರಚಿತ ಫೋಟೋಗಳನ್ನು ರಚಿಸಿದ್ದಾರೆ. ಅವರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಅವುಗಳನ್ನು ಪೋಸ್ಟ್ ಮಾಡಿದ್ದಾರೆ. ಭಾರತದಲ್ಲಿ ಚುನಾವಣಾ ಸಮಯದಲ್ಲಿ ರಾಜಕಾರಣಿಗಳು ಹೇಗೆ ಪ್ರಚಾರ ಮಾಡುತ್ತಾರೆ ಎಂಬುದನ್ನು ಎಐ ಚಿತ್ರಗಳು ವಿವರಿಸುತ್ತವೆ.
ರೋಡ್ ಶೋ, ದಲಿತರ ಮನೆಯಲ್ಲಿ ಊಟ..
ಶಾಹಿದ್ ಎಸ್‌ಕೆ ತಮ್ಮ ಇನ್‌ಸ್ಟಾಗ್ರಾಮ್ ಪುಟದಲ್ಲಿ ಪೋಸ್ಟ್ ಮಾಡಿದ ಚಿತ್ರದಲ್ಲಿ ಟ್ರಂಪ್ ಮತ್ತು ಹ್ಯಾರಿಸ್ (ಕಮಲಾ ಹ್ಯಾರಿಸ್) ತೆರೆದ ಜೀಪ್‌ನಲ್ಲಿ ರೋಡ್ ಶೋ ನಡೆಸುತ್ತಿರುವ ದೃಶ್ಯವಿದೆ. ಅವರ ಬೆಂಬಲಿಗ ಅಮೆರಿಕದ ಬಿಲಿಯನೇರ್ ಎಲೋನ್ ಮಸ್ಕ್ ಜತೆಗಿದ್ದರು. ರೋಡ್ ಶೋ ನಡೆಸುವುದಲ್ಲದೆ, ಇಬ್ಬರು ನಾಯಕರು ಮತದಾರರ ಮಕ್ಕಳನ್ನು ಎತ್ತಿಕೊಂಡು ಮುತ್ತಿಕ್ಕುವ, ವಿಜಯದ ಚಿಹ್ನೆಗಳನ್ನು ಪ್ರದರ್ಶಿಸುವ ಮತ್ತು ದಲಿತರ ಮನೆಗಳಲ್ಲಿ ಊಟ ಮಾಡುತ್ತಿರುವ ಚಿತ್ರಗಳಿವೆ. ಭಾರತದಲ್ಲಿ ಚುನಾವಣೆಯ ಸಮಯದಲ್ಲಿ ರಾಜಕಾರಣಿಗಳು ಸಾಮಾನ್ಯವಾಗಿ ಈ ಎಲ್ಲಾ ಕೆಲಸಗಳನ್ನು ಮಾಡುತ್ತಾರೆ. ಹಾಗಾಗಿ ಇದನ್ನೇ ಎಐ ಕಾಪಿ ಮಾಡಿ ತೋರಿಸಿದೆ.
ಅಮೇರಿಕ ಚುನಾವಣೆ, ಅಂತಿಮ ಹಂತದಲ್ಲಿದೆ ಪ್ರಚಾರ ಅಭಿಯಾನ
ಅಮೆರಿಕ ಅಧ್ಯಕ್ಷೀಯ ಚುನಾವಣಾ ಪ್ರಚಾರ ಅಂತಿಮ ಹಂತದಲ್ಲಿದೆ. ಕಮಲಾ ಹ್ಯಾರಿಸ್ ಮತ್ತು ಡೊನಾಲ್ಡ್ ಟ್ರಂಪ್ ಪ್ರಮುಖ ರಾಜ್ಯಗಳಲ್ಲಿ ಪೈಪೋಟಿಗೆ ಬಿದ್ದವರಂತೆ ಚುನಾವಣಾ ಪ್ರಚಾರ ನಡೆಸುತ್ತಿದ್ದಾರೆ. ಸ್ವಿಂಗ್ ರಾಜ್ಯಗಳು ಅಥವಾ ನೇರಳೆ ರಾಜ್ಯಗಳು ಅಂದರೆ ಗೆಲುವನ್ನು ನಿರ್ಧರಿಸುವ ರಾಜ್ಯಗಳಲ್ಲಿ ಪ್ರತಿ ಚುನಾವಣೆಯಲ್ಲೂ ಒಂದೇ ಪಕ್ಷವನ್ನು ಆಯ್ಕೆ ಮಾಡುವುದಿಲ್ಲ. ಪ್ರತಿ ಚುನಾವಣೆಗೂ ಅವರ ನಿರ್ಧಾರ ಭಿನ್ನವಾಗಿರುತ್ತದೆ.
ಚುನಾವಣೆಗೆ ಮೂರು ದಿನಗಳ ಮೊದಲು ಶನಿವಾರ ಉತ್ತರ ಕೆರೊಲಿನಾದಲ್ಲಿ ಟ್ರಂಪ್ ಮತ್ತು ಹ್ಯಾರಿಸ್ ಪ್ರತ್ಯೇಕವಾಗಿ ಪ್ರಚಾರಕ್ಕೆ ಹೋಗುತ್ತಿದ್ದಾರೆ. ಕಮಲಾ ಹ್ಯಾರಿಸ್ ಮತ್ತು ಟ್ರಂಪ್ ಇಬ್ಬರೂ ಒಂದೇ ದಿನ ನಿರ್ಣಾಯಕ ರಾಜ್ಯಕ್ಕೆ ಸತತ ನಾಲ್ಕನೇ ದಿನ ಭೇಟಿ ನೀಡುತ್ತಿದ್ದಾರೆ.