Donald Trump Arrest: ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಂಧನ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Donald Trump Arrest: ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಂಧನ

Donald Trump Arrest: ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಂಧನ

ಬಂಧನದ ವೇಳೆ ಡೊನಾಲ್ಡ್ ಟ್ರಂಪ್ ಅವರು ಹಾಲಿ ಅಧ್ಯಕ್ಷ ಜೋ ಬೈಡೆನ್ ಮತ್ತು ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ವಿರುದ್ಧ ಹರಿಹಾಯ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶರ ಬಗ್ಗೆ ಹಗುರ ಮಾತುಗಳನ್ನು ಆಡಿದರು.

ನ್ಯೂಯಾರ್ಕ್‌ನಲ್ಲಿ ಕೋರ್ಟ್‌ಗೆ ತೆರಳುವ ಮೊದಲು ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್
ನ್ಯೂಯಾರ್ಕ್‌ನಲ್ಲಿ ಕೋರ್ಟ್‌ಗೆ ತೆರಳುವ ಮೊದಲು ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್

ನ್ಯೂಯಾರ್ಕ್: ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರನ್ನು ಪೊಲೀಸರು ಮಂಗಳವಾರ (ಏ 4) ಬಂಧಿಸಿದ್ದಾರೆ. 'ಅನೈತಿಕ ಸಂಬಂಧ ಬಹಿರಂಗಪಡಿಸಬಾರದು' ಎಂಬ ಷರತ್ತಿನ ಮೇಲೆ ಅಶ್ಲೀಲ ಚಿತ್ರಗಳಲ್ಲಿ ನಟಿಸುವ ನೀಲಿಚಿತ್ರ ತಾರೆ ಸ್ಟಾರ್ಮಿ ಡೇನಿಯಲ್ಸ್‌ ಅವರಿಗೆ ಹಣ ಸಂದಾಯ ಮಾಡಿದ್ದ ಆರೋಪವನ್ನು ಅವರು ಎದುರಿಸುತ್ತಿದ್ದಾರೆ. ಕ್ರಿಮಿನಲ್ ಆರೋಪದ ವಿಚಾರಣೆ ಎದುರಿಸಿದ, ಬಂಧನಕ್ಕೆ ಒಳಗಾದ ಮೊದಲ ಮಾಜಿ ಅಧ್ಯಕ್ಷ ಎಂದು ಇತಿಹಾಸದಲ್ಲಿ ಟ್ರಂಪ್ ಹೆಸರು ದಾಖಲಾಗಲಿದೆ. ಬಂಧನದ ವೇಳೆ ಅವರು ಹಾಲಿ ಅಧ್ಯಕ್ಷ ಜೋ ಬೈಡೆನ್ (US President Joe Biden) ಮತ್ತು ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ (Kamala Harris) ವಿರುದ್ಧ ಹರಿಹಾಯ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶರ ಬಗ್ಗೆ ಹಗುರ ಮಾತುಗಳನ್ನು ಆಡಿದರು.

ಅಮೆರಿಕದ ಇತಿಹಾಸದಲ್ಲಿ ಯಾವೊಬ್ಬ ಮಾಜಿ ಅಧ್ಯಕ್ಷ ಈವರೆಗೆ ಕ್ರಿಮಿನಲ್ ಪ್ರಕರಣದಲ್ಲಿ ವಿಚಾರಣೆ ಎದುರಿಸಿರಲಿಲ್ಲ. ಬಂಧನಕ್ಕೂ ಒಳಗಾಗಿರಲಿಲ್ಲ. ವಿಚಾರಣೆ ವೇಳೆ ಟ್ರಂಪ್ ಅವರು ತಮ್ಮನ್ನು ತಾವು ನಿರಪರಾಧಿ ಎಂದು ಹಲವು ಬಾರಿ ಪ್ರತಿಪಾದಿಸಿಕೊಂಡರು. ತಮ್ಮ ವಕೀಲರೊಂದಿಗೆ ಕಾನೂನು ತಜ್ಞರನ್ನೂ ನ್ಯಾಯಾಲಯಕ್ಕೆ ಕರೆತಂದಿದ್ದ ಟ್ರಂಪ್, 'ಈ ಪ್ರಕರಣದಲ್ಲಿ ನನ್ನಿಂದ ಯಾವುದೇ ತಪ್ಪು ಆಗಿಲ್ಲ. ನಾನು ನಿರ್ದೋಷಿ' ಎಂದು ಹೇಳಿದರು. ಮ್ಯಾನ್‌ಹಟನ್ ನ್ಯಾಯಾಲಯದಲ್ಲಿ ಟ್ರಂಪ್ ವಿಚಾರಣೆ ನಡೆಯಿತು.

ಅಮೆರಿಕದಲ್ಲಿ ಈಗಾಗಲೇ ಅಧ್ಯಕ್ಷ ಚುನಾವಣೆಗೆ ಬಿರುಸಿನ ಸಿದ್ಧತೆ ಆರಂಭವಾಗಿದೆ. ಮುಂದಿನ ವರ್ಷ (2024) ನಡೆಯಲಿರುವ ಚುನಾವಣೆಗೆ ಟ್ರಂಪ್‌ ಕೂಡ ಸ್ಪರ್ಧಿಸಲು ತಯಾರಿ ಮಾಡಿಕೊಳ್ಳುತ್ತಿದ್ದರೆ. ಈ ಬಂಧನ ಮಹತ್ವ ಪಡೆಯಲು ಈ ಅಂಶವೂ ಮುಖ್ಯ ಕಾರಣ ಎನಿಸಿದೆ. ಈ ವಿಚಾರಣೆ ಮತ್ತು ಬಂಧನ ಅಮೆರಿಕ ನಾಗರಿಕರಲ್ಲಿ ಅಚ್ಚರಿಯೊಂದಿಗೆ ಆಘಾತವನ್ನೂ ತಂದೊಡ್ಡಿದೆ. ಮುಂದಿನ ದಿನಗಳಲ್ಲಿ ಏನೆಲ್ಲಾ ಆಗಬಹುದು ಎಂಬ ವಿಶ್ಲೇಷಣೆಗೆ ಸ್ಥಳೀಯ ಮಾಧ್ಯಮಗಳು ಒತ್ತು ನೀಡಿವೆ.

ಫ್ಲಾರಿಡಾ ಸೇರಿದಂತೆ ಹಲವು ನಗರಗಳಲ್ಲಿ ಟ್ರಂಪ್ ಬೆಂಬಲಿಗರು ಪ್ರತಿಭಟನಾ ರ‍್ಯಾಲಿ ನಡೆಸಿದರು. ವಿಚಾರಣೆ ನಡೆದ ನ್ಯಾಯಾಲಯದಲ್ಲಿ ಮಾಧ್ಯಮ ಪ್ರತಿನಿಧಿಗಳು ಸಾಕಷ್ಟು ಸಂಖ್ಯೆಯಲ್ಲಿದ್ದರು. ತಮ್ಮನ್ನು ಬಂಧಿಸಬಹುದು ಎಂಬ ಮುನ್ಸೂಚನೆ ಮೊದಲೇ ಸಿಕ್ಕಿದ್ದ ಟ್ರಂಪ್, ಟ್ರೂತ್ ಸಾಮಾಜಿಕ ತಾಣದಲ್ಲಿ ಪೋಸ್ಟ್ ಒಂದನ್ನು ಪ್ರಕಟಿಸಿದ್ದರು. 'ಅಮೆರಿಕದಲ್ಲಿ ಹೀಗಾಗಬಹುದು ಎಂಬುದನ್ನು ನಂಬಲು ಆಗುತ್ತಿಲ್ಲ' ಎಂದು ಹೇಳಿದ್ದರು.

ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಕೆಲ ದಿನಗಳ ಮೊದಲಷ್ಟೇ, ನ್ಯೂಯಾರ್ಕ್ ನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ಬಗ್ಗೆ ತಮ್ಮ ವಿಶ್ವಾಸವನ್ನು ವ್ಯಕ್ತಪಡಿಸಿದ್ದರು. 'ನನಗೆ ನ್ಯೂಯಾರ್ಕ್ ಪೊಲೀಸ್ ಇಲಾಖೆಯಲ್ಲಿ ನಂಬಿಕೆ ಇದೆ' ಎಂಬ ಅವರ ಮಾತನ್ನು ಅವರ ಇಂಗಿತ ಎಂದು ವಿಶ್ಲೇಷಿಸಲಾಗಿತ್ತು.

ಕ್ರಿಮಿನಲ್ ಪ್ರಕರಣದಲ್ಲಿ ತಪ್ಪಿತಸ್ಥರೆಂದು ಸಾಬೀತಾದರೆ ಮತ್ತು ಜೈಲು ಶಿಕ್ಷೆ ಅನುಭವಿಸಿದರೂ ಚುನಾವಣೆ ಪ್ರಚಾರದಲ್ಲಿ ಭಾಗವಹಿಸಲು ಅಮೆರಿಕದಲ್ಲಿ ಅವಕಾಶವಿದೆ. ತಪ್ಪಿತಸ್ಥನೆಂದು ಸಾಬೀತಾಗಿರುವ ಅಭ್ಯರ್ಥಿ ಜೈಲಿನಿಂದ ಪ್ರಚಾರ ಮಾಡುವುದನ್ನು ತಡೆಯುವ ಕಾನೂನು ಅಮೆರಿಕದಲ್ಲಿ ಇಲ್ಲ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.