US President Oath: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪದಗ್ರಹಣಕ್ಕೆ ಕ್ಷಣಗಣನೆ, ಕೆಲವೇ ಹೊತ್ತಿನಲ್ಲಿ ಪ್ರಮಾಣ ವಚನ ಪಡೆಯುವ ಹಿರಿಯಣ್ಣ
US President Oath: ಅಮೆರಿಕದ ಅಧ್ಯಕ್ಷರಾಗಿ ರಿಪಬ್ಲಿಕನ್ ಪಾರ್ಟಿಯನ್ನು ಚುನಾವಣೆಯಲ್ಲಿ ಮುನ್ನಡೆಸಿ ಮತ್ತೆ ಅಧಿಕಾರಕ್ಕೆ ತಂದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ ಪ್ರಮಾಣ ವಚನ ಸ್ವೀಕರಿಸುವರು. ನಾಲ್ಕು ವರ್ಷ ಟ್ರಂಪ್ ಯುಎಸ್ ಅಧ್ಯಕ್ಷರಾಗಿರುವರು.

US President Oath: ಅಮೆರಿಕದ ವಾಷಿಂಗ್ಟನ್ ಡಿಸಿಯಲ್ಲಿರುವ ಶ್ವೇತಭವನವನ್ನು ನಾಲ್ಕು ವರ್ಷದ ಬಳಿಕ ಅಧ್ಯಕ್ಷರಾಗಿ ಪ್ರವೇಶ ಮಾಡಲು ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಣಿಯಾಗಿದ್ದಾರೆ. ಎರಡು ತಿಂಗಳ ಹಿಂದೆ ನಡೆದ ಯುಎಸ್ ಚುನಾವಣೆಯಲ್ಲಿ ಭಾರೀ ಬಹುಮತದೊಂದಿಗೆ ಗೆಲುವು ಸಾಧಿಸಿ ವಿಶ್ವದ ಪ್ರಮುಖ ಹಾಗೂ ಪ್ರಭಾವಿ ದೇಶವಾಗಿರುವ ಅಮೆರಿಕದ ಅತ್ಯುನ್ನತ ಹುದ್ದೆಯನ್ನು ಟ್ರಂಪ್ ಅಲಂಕರಿಸಲಿದ್ದಾರೆ. ಅಮೆರಿಕದ ಹಾಲಿ ಅಧ್ಯಕ್ಷ ಜೋ ಬೈಡನ್ ಮತ್ತವರ ತಂಡದ ಅವಧಿ 2025 ಜನವರಿ 20ಕ್ಕೆ ಅಂದರೆ ಇಂದು ಮುಕ್ತಾಯವಾಗಲಿದೆ. ಭಾರತೀಯ ಕಾಲಮಾನದ ಪ್ರಕಾರ ರಾತ್ರಿ ಸೋಮವಾರ ರಾತ್ರಿ 10 ಗಂಟೆಗೆ ಡೊನಾಲ್ಡ್ ಟ್ರಂಪ್ ಅವರು ಅಧ್ಯಕ್ಷರಾಗಿ ಎರಡನೇ ಅವಧಿಗೆ ಪ್ರಮಾಣ ವಚನ ಸ್ವೀಕರಿಸುವರು. ಈ ಹಿಂದೆ ಒಮ್ಮೆ ಗೆದ್ದು ಆನಂತರ ಸೋತು ಈಗ ಎರಡನೇ ಅವಧಿಗೆ ಅವರು ಅಧ್ಯಕ್ಷರಾಗುತ್ತಿರುವುದು ವಿಶೇಷ.
ಮರು ಆಯ್ಕೆಯಾದ ಟ್ರಂಪ್
ಅಮೆರಿಕದಲ್ಲಿ ಎರಡು ಅವಧಿಗೆ ಅಂದರೆ ಎಂಟು ವರ್ಷಗಳ ಕಾಲ ಒಬ್ಬರು ಅಧ್ಯಕ್ಷರಾಗಲು ಅಲ್ಲಿನ ಸಂವಿಧಾನ ಅವಕಾಶ ಮಾಡಿಕೊಟ್ಟಿದೆ. ಕೆಲವರು ಸತತ ಎಂಟು ವರ್ಷ ಅಧ್ಯಕ್ಷರಾದರೆ ಇನ್ನು ಕೆಲವರು ಸೋತು ಮತ್ತೆ ನಂತರ ಅಧ್ಯಕ್ಷರಾದ ಉದಾಹರಣೆ ಕಡಿಮೆ. ಈವರೆಗೂ ಒಬ್ಬರು ಮಾತ್ರ ಈ ರೀತಿ ಆಯ್ಕೆಯಾಗಿದ್ದು, ಆನಂತರ ಆ ಶ್ರೇಯ ಸಿಕ್ಕಿರುವುದು ಟ್ರಂಪ್‌ಗೆ ಮಾತ್ರ.
ಅದೂ ಎಂಟು ವರ್ಷದ ಹಿಂದೆಯೇ ಆಯ್ಕೆಯಾಗಿ ಎರಡನೇ ಅವಧಿಯಲ್ಲಿ ಸೋತಿದ್ದ ಡೊನಾಲ್ಡ್ ಟ್ರಂಪ್ ಮತ್ತೆ ಸತತ ಮೂರನೇ ಬಾರಿಗೆ ಯುಎಸ್ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದರು. ಅವರು ಡೆಮಾಕ್ರಟಿಕ್ ತಂಡವನ್ನು ಮಣಿಸಿ ಮರಳಿ ರಿಪಬ್ಲಿಕನ್ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಯಶಸ್ವಿಯಾಗಿದ್ದರು.
ಜನವರಿ 20ರಂದೇ ಪದಗ್ರಹಣ
ಅಮೆರಿಕದಲ್ಲಿ ಅಲ್ಲಿನ ಸಂವಿಧಾನದ ಪ್ರಕಾರ ಮೊದಲಿನಿಂದಲೂ ಜನವರಿ 20ರಂದೇ ಪದಗ್ರಹಣ ನಡೆಸಿಕೊಂಡು ಬಂದಿರುವುದು ಸಂಪ್ರದಾಯ. ಆ ದಿನ ಭಾನುವಾರ ಬಂದರೆ ಮಾತ್ರ ಒಂದು ದಿನ ನಂತರ ಪ್ರಮಾಣ ವಚನವನ್ನು ಚುನಾಯಿತ ಅಧ್ಯಕ್ಷರು ಸ್ವೀಕರಿಸಿದ್ಧಾರೆ.
ಈ ಬಾರಿ 20ರಂದು ಸೋಮವಾರ ಬಂದಿರುವುದರಿಂದ ಈ ದಿನವನ್ನೇ ಹೊಸ ಅಧ್ಯಕ್ಷರ ಪದಗ್ರಹಣಕ್ಕೆ ನಿಗದಿ ಮಾಡಲಾಗಿದ್ದು. ಇದಕ್ಕಾಗಿ ಶ್ವೇತಭವನ ಅಲಂಕೃತಗೊಂಡಿದೆ. ಕೆಲವು ಹೊತ್ತಿನಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ಮುಗಿಯಲಿದೆ.
ಅಸೋಸಿಯೇಟೆಡ್ ಪ್ರೆಸ್ (ಎಪಿ) ವರದಿ ಮಾಡಿದಂತೆ, ಮುಖ್ಯ ನ್ಯಾಯಮೂರ್ತಿ ಜಾನ್ ರಾಬರ್ಟ್ಸ್ ಅವರು ಡೊನಾಲ್ಡ್ ಟ್ರಂಪ್ ಅವರಿಗೆ ಪ್ರಮಾಣ ವಚನವನ್ನು ಬೋಧಿಸುತ್ತಾರೆ. ನ್ಯಾಯಮೂರ್ತಿ ಬ್ರೆಟ್ ಕವನಾಗ್ ಅವರು ಉಪಾಧ್ಯಕ್ಷರ ಪ್ರಮಾಣ ವಚನವನ್ನು ನೋಡಿಕೊಳ್ಳಲಿದ್ದಾರೆ.
ಬರುತ್ತಾರಾ ಬೈಡನ್
ಹಿಂದಿನ ಬಾರಿ ಚುನಾವಣೆಯಲ್ಲಿ ಸೋತ ನಂತರ ಡೊನಾಲ್ಡ್ ಟ್ರಂಪ್ ಅವರು ಜೋ ಬೈಡನ್ ಅವರಿಗೆ ಅಧಿಕಾರ ಹಸ್ತಾಂತರಿಸಬೇಕಾಗಿತ್ತು. ಆದರೆ ಟ್ರಂಪ್ ಕಾರ್ಯಕ್ರಮದಿಂದ ದೂರ ಉಳಿದಿದ್ದರು. ಈ ಬಾರಿ ಟ್ರಂಪ್ ಅವರಿಗೆ ಜೋ ಬೈಡನ್ ಅಧಿಕಾರ ಹಸ್ತಾಂತರ ಮಾಡಲು ಆಗಮಿಸುವರೋ ಇಲ್ಲವೋ ಎನ್ನುವ ಕುತೂಹಲವೂ ಇದೆ.
ಇದೇ ವೇಳೆ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ನಾಲ್ಕು ವರ್ಷದ ಹಾದಿಯನ್ನು ಭಾಷಣದಲ್ಲಿ ಬಿಡಿಸಿಡಲಿದ್ದಾರೆ. ಅಮೆರಿಕ ಮಾತ್ರವಲ್ಲದೇ ಇತರೆ ದೇಶಗಳೊಂದಿಗೆ ಅಮೆರಿಕ ನಿಕಟ ಸಂಬಂಧ ಇರುವುದರಿಂದ ವಿಶ್ವದ ಬಹುತೇಕ ಎಲ್ಲ ದೇಶಗಳ ದೃಷ್ಟಿಯೂ ಯುಎಸ್ ಅಧ್ಯಕ್ಷರ ಭಾಷಣದತ್ತಲೇ ನೆಟ್ಟಿರುತ್ತದೆ. ಅಮೆರಿಕದ ವಿದೇಶಾಂಗ ನೀತಿ, ಆರ್ಥಿಕ ಲೆಕ್ಕಾಚಾರ, ದ್ವಿಪಕ್ಷೀಯ ಸಂಬಂಧಗಳ ಕುರಿತು ಅಧ್ಯಕ್ಷರ ಭಾಷಣದಲ್ಲಿ ಉಲ್ಲೇಖವಾಗಲಿದೆ. ಭಾರತ ಕೂಡ ಡೊನಾಲ್ಡ್ ಟ್ರಂಪ್ ಅವರ ಮರು ಆಗಮನವನ್ನು ಸ್ವಾಗತಿಸಿದ್ದರೂ ಅವರ ನೀತಿಗಳತ್ತ ದೃಷ್ಟಿ ನೆಟ್ಟಿದೆ.
ಟ್ರಂಪ್ ಪ್ರಮಾಣ ವಚನ ಸಮಾರಂಭ ಆನ್‌ಲೈನ್‌ನಲ್ಲಿ ಲೈವ್ ವೀಕ್ಷಿಸುವುದು ಹೇಗೆ?
ಅಮೆರಿಕ ಅಧ್ಯಕ್ಷರ ಪ್ರಮಾಣ ವಚನ ಸ್ವೀಕಾರ ಸಮಾರಂಭವನ್ನು ಹಲವು ವಾಹಿನಿಗಳು ನೇರ ಪ್ರಸಾರ ಮಾಡಲಿವೆ. ಎನ್‌ಬಿಸಿ, ಸಿಎನ್‌ಎನ್, ಎಬಿಸಿ, ಸಿಬಿಎಸ್ ಮತ್ತು ಫಾಕ್ಸ್ ನ್ಯೂಸ್‌ನಂತಹ ಪ್ರಮುಖ ಸುದ್ದಿವಾಹಿನಿಗಳು ಯೂಟ್ಯೂಬ್, ಫೇಸ್‌ಬುಕ್ ಮತ್ತು ಎಕ್ಸ್ (ಹಿಂದೆ ಟ್ವಿಟರ್) ಸೇರಿದಂತೆ ವಿವಿಧ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಲ್ಲಿ ಡೊನಾಲ್ಡ್ ಟ್ರಂಪ್ ಅವರ ಉದ್ಘಾಟನಾ ಸಮಾರಂಭದ ಲೈವ್ ಸ್ಟ್ರೀಮ್‌ಗಳನ್ನು ಒದಗಿಸುತ್ತವೆ.
ಹೆಚ್ಚುವರಿಯಾಗಿ, ಈವೆಂಟ್ ಶ್ವೇತಭವನದ ಅಧಿಕೃತ ವೆಬ್‌ಸೈಟ್‌ನಲ್ಲಿ ವೀಕ್ಷಿಸಲು ಲಭ್ಯವಿರುತ್ತದೆ. (www.whitehouse.gov).
