ಅಮೆರಿಕದ ಹೊರಗೆ ನಿರ್ಮಾಣವಾಗುವ ಚಲನಚಿತ್ರಗಳ ಮೇಲೆ ಶೇ 100ರಷ್ಟು ಸುಂಕ: ಡೊನಾಲ್ಡ್ ಟ್ರಂಪ್ ಆದೇಶ
ಅಮೆರಿಕದಿಂದ ಹೊರಗಡೆ ನಿರ್ಮಾಣವಾಗಿ, ನಂತರ ಅಮೆರಿಕದಲ್ಲಿ ಪ್ರದರ್ಶನಗೊಳ್ಳುವ ಎಲ್ಲ ಚಲನಚಿತ್ರಗಳ ಮೇಲೆ ಶೇ 100ರಷ್ಟು ಸುಂಕ ವಿಧಿಸುವ ಪ್ರಸ್ತಾಪವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುಂದಿಟ್ಟಿದ್ದಾರೆ.

ವಾಷಿಂಗ್ಟನ್: ಅಮೆರಿಕದಲ್ಲಿ ಪ್ರದರ್ಶನಗೊಳ್ಳುವ ಎಲ್ಲಾ ವಿದೇಶಿ ನಿರ್ಮಿತ ಚಲನಚಿತ್ರಗಳ ಮೇಲೆ ಶೇಕಡಾ 100 ರಷ್ಟು ಸುಂಕ ವಿಧಿಸುವ ಕ್ರಮವನ್ನು ಪ್ರಾರಂಭಿಸಲು ವಾಣಿಜ್ಯ ಇಲಾಖೆ ಮತ್ತು ಯುಎಸ್‌ಟಿಆರ್‌ಗೆ ಸೂಚನೆ ನೀಡಿದ್ದೇನೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಿಸಿದ್ದಾರೆ. ಟ್ರೂತ್ ಸೋಷಿಯಲ್ ಬಗ್ಗೆ ಮಾತನಾಡಿರುವ ಡೊನಾಲ್ಡ್ ಟ್ರಂಪ್, ಇತರ ದೇಶಗಳು ಅಮೆರಿಕದ ಚಲನಚಿತ್ರ ನಿರ್ಮಾಪಕರು ಮತ್ತು ಸ್ಟುಡಿಯೋಗಳನ್ನು ದೇಶದಿಂದ ದೂರ ಸೆಳೆಯುತ್ತಿವೆ ಎಂದು ಆರೋಪಿಸಿದ್ದಾರೆ. ಹೀಗಾಗಿ ದುಬಾರಿ ಸುಂಕ ವಿಧಿಸುವ ಕ್ರಮವನ್ನು ಜಾರಿಗೆ ತರುತ್ತಿರುವುದಾಗಿ ಅವರು ಹೇಳಿದ್ದಾರೆ.
ಅಮೆರಿಕದ ಚಲನಚಿತ್ರೋದ್ಯಮವು ಬಹಳ ವೇಗವಾಗಿ ಸಾಯುತ್ತಿದೆ. ನಮ್ಮ ಚಲನಚಿತ್ರ ನಿರ್ಮಾಪಕರು ಮತ್ತು ಸ್ಟುಡಿಯೋಗಳನ್ನು ಅಮೆರಿಕದಿಂದ ದೂರವಿರಿಸಲು ಇತರ ದೇಶಗಳು ಎಲ್ಲಾ ರೀತಿಯ ಪ್ರೋತ್ಸಾಹವನ್ನು ನೀಡುತ್ತಿವೆ. ಹಾಲಿವುಡ್ ಮತ್ತು ಅಮೆರಿಕದೊಳಗಿನ ಇತರ ಅನೇಕ ಸ್ಟುಡಿಯೋ, ನಿರ್ಮಾಣ ಸಂಸ್ಥೆಗಳು ನಾಶವಾಗುತ್ತಿವೆ. ಇದು ಇತರ ರಾಷ್ಟ್ರಗಳ ಸಂಘಟಿತ ಪ್ರಯತ್ನವಾಗಿದೆ ಮತ್ತು ಆದ್ದರಿಂದ ರಾಷ್ಟ್ರೀಯ ಭದ್ರತೆಗೆ ಬೆದರಿಕೆಯಾಗಿದೆ. ಹೀಗಾಗಿ ಈ ಕ್ರಮ ಅನಿವಾರ್ಯ ಎಂದು ಅವರು ವಾಣಿಜ್ಯ ಇಲಾಖೆ ಮತ್ತು ಯುಎಸ್‌ಟಿಆರ್‌ಗೆ ನೀಡಿರುವ ಸೂಚನೆಯಲ್ಲಿ ತಿಳಿಸಿದ್ದಾರೆ.
ಡೊನಾಲ್ಡ್ ಟ್ರಂಪ್ ಅವರು ಎಲ್ಲ ರೀತಿಯ ಚಲನಚಿತ್ರಗಳನ್ನು ಅಮೆರಿಕದಲ್ಲಿಯೇ ನಿರ್ಮಾಣ ಮಾಡಬೇಕು ಎಂದು ಕರೆ ನೀಡಿದ್ದಾರೆ. ಜತೆಗೆ ವಿದೇಶದಿಂದ ಬರುವ ಎಲ್ಲಾ ಚಲನಚಿತ್ರಗಳ ಮೇಲೆ ಶೇಕಡಾ 100 ರಷ್ಟು ಸುಂಕ ವಿಧಿಸಲು ಅಧಿಕಾರ ನೀಡುತ್ತಿದ್ದೇನೆ ಎಂದು ಘೋಷಿಸಿದ್ದಾರೆ.
ಆದ್ದರಿಂದ, 100% ಸುಂಕವನ್ನು ಸ್ಥಾಪಿಸುವ ಪ್ರಕ್ರಿಯೆಯನ್ನು ತಕ್ಷಣವೇ ಪ್ರಾರಂಭಿಸಲು ನಾನು ವಾಣಿಜ್ಯ ಇಲಾಖೆ ಮತ್ತು ಯುನೈಟೆಡ್ ಸ್ಟೇಟ್ಸ್ ವ್ಯಾಪಾರ ಸಂಸ್ಥೆಗೆ ಅಧಿಕಾರ ನೀಡುತ್ತಿದ್ದೇನೆ. ನಾವು ಮತ್ತೆ ಅಮೆರಿಕದಲ್ಲಿಯೇ ತಯಾರಿಸಿದ ಚಲನಚಿತ್ರಗಳನ್ನು ಬಯಸುತ್ತೇವೆ ಎಂದು ಟ್ರಂಪ್ ಹೇಳಿದ್ದಾರೆ.