ಡೊನಾಲ್ಡ್ ಟ್ರಂಪ್ ವ್ಯಕ್ತಿ-ವ್ಯಕ್ತಿತ್ವ: ‘ಮಗಾ’ ಅಭಿಯಾನದ ಮೂಲಕ ಅಮೆರಿಕದ ಆಡಳಿತ ಚುಕ್ಕಾಣಿ ಮತ್ತೊಮ್ಮೆ ಹಿಡಿದ ಮಹತ್ವಾಕಾಂಕ್ಷಿ
Donald Trump: ಮಗಾ (MAGA) ಅಭಿಯಾನದ ಮೂಲಕ ಅಮೆರಿಕದ ಆಡಳಿತ ಚುಕ್ಕಾಣಿಯನ್ನು ಮತ್ತೊಮ್ಮೆ ಹಿಡಿದಿದ್ದಾರೆ ರಿಪಬ್ಲಿಕನ್ ಪಕ್ಷದ ನಾಯಕ ಡೊನಾಲ್ಡ್ ಟ್ರಂಪ್. ಅಮೆರಿಕದ ಶತಕೋಟ್ಯಧಿಪತಿ ಉದ್ಯಮಿಯ ರಾಜಕೀಯ ಮಹತ್ವಾಕಾಂಕ್ಷೆಗೆ ಎಲ್ಲೆಯೇ ಇಲ್ಲ. ಇಂತಹ ಡೊನಾಲ್ಡ್ ಟ್ರಂಪ್ ಅವರ ಬದುಕಿನ ಕಿರು ಚಿತ್ರಣ ಇಲ್ಲಿದೆ.

Donald Trump profile: ಅಮೆರಿಕದ 47ನೇ ಅಧ್ಯಕ್ಷರಾಗಿ ಪ್ರಮಾಣ ಸ್ವೀಕರಿಸಿರುವ ಡೊನಾಲ್ಡ್ ಟ್ರಂಪ್ ತಮ್ಮ ಎರಡನೇ ಅವಧಿಯ ಆಡಳಿತ ಶುರುವಾಗುತ್ತಿರುವಂತೆಯೇ ಜಾಗತಿಕ ಮಟ್ಟದಲ್ಲಿ ಸಂಚಲನ ಶುರುವಾಗಿದೆ. ಎರಡನೇ ಅವಧಿಯ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಮಿತ್ರ ದೇಶಗಳ ಪ್ರಮುಖರು, ವಾಣಿಜ್ಯೋದ್ಯಮಿಗಳು ಅತಿಥಿಗಳಾಗಿ ಭಾಗವಹಿಸಿದರು. ‘ಅಮೆರಿಕ ಮೊದಲು’ ನೀತಿ ಅನುಸರಿಸುತ್ತಿರುವ ರಿಪಬ್ಲಿಕನ್ ನಾಯಕನ ಪುನರಾಗಮನಕ್ಕೆ “ಮೇಕ್ ಅಮೆರಿಕ ಗ್ರೇಟ್ ಅಗೇನ್ (Make America Great Again)” - ಮಗಾ (MAGA) ಅಭಿಯಾನ ಬಲ ತುಂಬಿತ್ತು. ಡೊನಾಲ್ಡ್ ಟ್ರಂಪ್ ಅವರು ಉದ್ಯಮಿಯಾಗಿ ಜಾಗತಿಕ ನಂಟು ಹೊಂದಿದ್ದವರು. 8 ವರ್ಷಗಳ ಹಿಂದೆ ಮೊದಲ ಬಾರಿಗೆ ಅಮೆರಿಕದ ಅಧ್ಯಕ್ಷರಾಗಿದ್ದರು. ಅಮೆರಿಕದ 45ನೇ ಅಧ್ಯಕ್ಷರಾಗಿದ್ದ ಅವರ ಮೊದಲ ಅವಧಿ ಹಿಂಸಾಚಾರದೊಂದಿಗೆ ಕೊನೆಗೊಂಡಿತ್ತು. ಒಂದು ರೀತಿಯ ನೇರ, ನಿಷ್ಠುರ ನಿಲುವುಗಳನ್ನು ಹೊಂದಿದ 78 ವರ್ಷ ವಯಸ್ಸಿನ 6.3 ಅಡಿ ಎತ್ತರದ ಡೊನಾಲ್ಡ್ ಟ್ರಂಪ್ ವ್ಯಕ್ತಿತ್ವವೇ ಅಮೆರಿಕನ್ನರನ್ನು ಅವರತ್ತ ಸೆಳೆದಿದೆ.
ಅಮೆರಿಕದ ಶತಕೋಟ್ಯಧಿಪತಿ ಉದ್ಯಮಿಯ ರಾಜಕೀಯ ಮಹತ್ವಾಕಾಂಕ್ಷೆ
ಅಮೆರಿಕ ಅಧ್ಯಕ್ಷೀಯ ಸ್ಥಾನಕ್ಕೆ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾಗಲು ಸತತ ಮೂರು ಸಲ (1987 ರಲ್ಲಿ , 2000ನೇ ಇಸವಿಯಲ್ಲಿ ರಿಫಾರ್ಮ್ ಪಾರ್ಟಿಯಿಂದ, 2012 ರಲ್ಲಿ ರಿಪಬ್ಲಿಕನ್ ಆಗಿ ) ಪ್ರಯತ್ನಿಸಿದ್ದವರು ಡೊನಾಲ್ಡ್ ಟ್ರಂಪ್. ರಾಜಕೀಯ ಪ್ರವೇಶಕ್ಕೂ ಮೊದಲೇ ಅಮೆರಿಕದ ಅತಿ ಶ್ರೀಮಂತ ಶತಕೋಟ್ಯಧಿಪತಿ ರಿಯಲ್‌ಎಸ್ಟೇಟ್ ಉದ್ಯಮಿಯಾಗಿದ್ದರು. 2015-16ರಲ್ಲಿ ಅವರು ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸುವ ವಿಚಾರ ಗಮನಸೆಳೆದಿತ್ತು. ಟ್ರಂಪ್ ಅವರ ಮನೆತನದ ಹೆಸರು, ಪ್ರಭಾವ ಮತ್ತು ಅಸಾಂಪ್ರದಾಯಿಕ ಶೈಲಿಯ ಪ್ರಚಾರವು ಅನುಭವಿ ರಾಜಕಾರಣಿಗಳನ್ನು ಸೋಲಿಸುವಲ್ಲಿ ಅವರಿಗೆ ನೆರವಾಯಿತು. ಮೇಕ್ ಅಮೆರಿಕ ಗ್ರೇಟ್ ಎಂಬ ಪ್ರಚಾರ ಅಭಿಯಾನವನ್ನೂ ನಡೆಸಿ ಗಮನಸೆಳೆದರು. ಮೊದಲ ಅವಧಿ ವಿವಾದಾತ್ಮಕವಾಗಿ, ಹಿಂಸಾಚಾರದೊಂದಿಗೆ ಕೊನೆಗೊಂಡಿತು. ಅಧಿಕಾರ ಕಳೆದುಕೊಂಡು ನಾಲ್ಕು ವರ್ಷ ಹಿನ್ನಡೆ ಅನುಭವಿಸಿದ್ದ ಟ್ರಂಪ್ ಅವರು ಮತ್ತೆ 2024ರ ಚುನಾವಣೆಯಲ್ಲಿ ಸ್ಪರ್ಧಿಸಿ, ರಾಜಕೀಯ ವೈರಿಗಳ ವಿರುದ್ಧ ಗೆಲುವು ದಾಖಲಿಸಿರುವುದು ಅವರ ಪಟ್ಟುಬಿಡದ ವ್ಯಕ್ತಿತ್ವಕ್ಕೆ ಕೈಗನ್ನಡಿ.
ರಾಜಕೀಯಕ್ಕೆ ವರದಾನವಾಯಿತು ಟ್ರಂಪ್ ಮನೆತನದ ಹೆಸರು
ಡೊನಾಲ್ಡ್ ಟ್ರಂಪ್ ಅವರು ನ್ಯೂಯಾರ್ಕ್‌ನ ರಿಯಲ್ ಎಸ್ಟೇಟ್ ಉದ್ಯಮಿ ಫ್ರೆಡ್ ಟ್ರಂಪ್ ಅವರ ನಾಲ್ಕನೇ ಪುತ್ರ. ಅತಿಶ್ರೀಮಂತ ಕುಟುಂಬದಲ್ಲಿ ಜನಿಸಿದರೂ ಡೊನಾಲ್ಡ್ ಟ್ರಂಪ್, ತಮ್ಮ ಕಂಪನಿಯಲ್ಲಿ ಕೆಳಮಟ್ಟದ ನೌಕರಿಗೆ ಸೇರಿ ಬೆಳೆಯಬೇಕು ಎಂಬುದು ಅವರ ತಂದೆ ಫ್ರೆಡ್ ಟ್ರಂಪ್ ಅವರ ಅಭಿಲಾಷೆಯಾಗಿತ್ತು. 13ನೇ ವರ್ಷದಲ್ಲಿ ದುರ್ನಡತೆ ತೋರಿದ್ದಕ್ಕಾಗಿ ಅವರನ್ನು ಸ್ಕೂಲ್‌ನಿಂದ ಹೊರಹಾಕಿದ್ದರು. ಹೀಗಾಗಿ ಡೊನಾಲ್ಡ್ ಟ್ರಂಪ್ ಅವರನ್ನು ಮಿಲಿಟರಿ ಸ್ಕೂಲ್‌ಗೆ ಸೇರಿಸಿದ್ದರು ಎಂದು ಬಿಬಿಸಿ ವರದಿ ಮಾಡಿದೆ. ಪೆನ್ಸಿಲ್ವೇನಿಯಾ ಯೂನಿವರ್ಸಿಟಿಯ ವಾರ್ಟನ್ ಸ್ಕೂಲ್‌ನಲ್ಲಿ ಪದವಿ ಪಡೆದ ಬಳಿಕ ತಂದೆಯ ಉತ್ತರಾಧಿಕಾರಿಯಾಗಿ ಕಂಪನಿ ಸೇರಿದರು.
ಕಂಪನಿಗೆ ಸೇರುವ ಮೊದಲೇ ತಂದೆ ಫ್ರೆಡ್ ಟ್ರಂಪ್ ಬಳಿ 10 ಲಕ್ಷ ಡಾಲರ್ ಕಿರು ಸಾಲ ಪಡೆದಿದ್ದರು. ಅದನ್ನು ಬಳಸಿಕೊಂಡು ನ್ಯೂಯಾರ್ಕ್ ನಗರದಲ್ಲಿ ವಸತಿ ನಿರ್ಮಾಣ ಯೋಜನೆಗಳನ್ನು ಕೈಗೆತ್ತಿಕೊಂಡರು. 1971ರಲ್ಲಿ ಕಂಪನಿಯ ಪೂರ್ತಿ ಹೊಣೆಗಾರಿಕೆವಹಿಸಿಕೊಂಡ ಡೊನಾಲ್ಡ್ ಟ್ರಂಪ್ ಅವರು, ಕಂಪನಿಗೆ ಟ್ರಂಪ್ ಆರ್ಗನೈಸೇಷನ್ ಎಂದು ಮರುನಾಮಕರಣ ಮಾಡಿದರು. ಡೊನಾಲ್ಡ್ ಟ್ರಂಪ್ ಅವರಿಂದ “ಮೈ ಇನ್‌ಸ್ಪಿರೇಷನ್” ಎಂದೇ ವ್ಯಾಖ್ಯಾನಿಸಲ್ಪಟ್ಟಿದ್ದ ಅವತ ತಂದೆ ಫ್ರೆಡ್ ಟ್ರಂಪ್ 1999ರಲ್ಲಿ ಮೃತಪಟ್ಟರು.
ಡೊನಾಲ್ಡ್ ಟ್ರಂಪ್ ಅವರ ನಾಯಕತ್ವದಲ್ಲಿ ದ ಟ್ರಂಪ್ ಆರ್ಗನೈಸೇಷನ್ ವ್ಯವಹಾರ ವಿಸ್ತಾರವಾಯಿತು. ವಸತಿ ನಿರ್ಮಾಣ ಯೋಜನೆಗಳು ಬ್ರೂಕ್ಲಿನ್‌ನಿಂದ ಕ್ವೀನ್ಸ್, ಗ್ಲಿಟ್ಝಿ ಮ್ಯಾನ್‌ಹಟನ್ ಪ್ರಾಜೆಕ್ಟ್‌ಗಳ ತನಕವೂ ಮುಂದುವರಿಯಿತು. ಪ್ರಸಿದ್ಧ ಫಿಫ್ತ್ ಅವೆನ್ಯೂ ಟ್ರಂಪ್ ಟವರ್‌ನ ಭಾಗವಾಯಿತು. ದ ರನ್‌ಡೌನ್ ಕಮ್ಕೊಡೋರ್ ಹೋಟೆಲ್ ಕೂಡ ಗ್ರಾಂಡ್ ಹೈಟ್ ಆಗಿ ಬದಲಾಯಿತು. ಅಟ್ಲಾಂಟಿಕ್ ಸಿಟಿ, ಷಿಕಾಗೋ, ಲಾಸ್ ವೇಗಾಸ್‌ನಿಂದ ಭಾರತ, ಟರ್ಕಿ, ಫಿಲಿಪ್ಪೀನ್ಸ್ ತನಕ ಕ್ಯಾಸಿನೊಗಳು, ಕಾಂಡೋಮಿನಿಯಮ್ಸ್, ಗಾಲ್ಫ್ ಕೋರ್ಸ್, ಹೋಟೆಲ್ ಉದ್ಯಮ ಹೀಗೆ ಟ್ರಂಪ್ ಉದ್ಯಮ ಸಾಮ್ರಾಜ್ಯ ವಿಸ್ತರಣೆಯಾಗುತ್ತಲೇ ಇದೆ. ಮನರಂಜನಾ ಕ್ಷೇತ್ರಕ್ಕೂ ಇದು ವಿಸ್ತರಿಸಿದೆ. ಮಿಸ್ ಯೂನಿವರ್ಸ್, ಮಿಸ್ ಯುಎಸ್‌ಎ, ಮಿಸ್ ಟೀನ್ ಯುಎಸ್‌ಎ ಸೌಂದರ್ಯ ಸ್ಪರ್ಧೆಗಳ ಆಯೋಜನೆಯೂ ಪಟ್ಟಿಗೆ ಸೇರಿಕೊಂಡಿದೆ.
ಬಹುಮುಖ ಪ್ರತಿಭೆಯ ಟ್ರಂಪ್ ಕೈಯಾಡಿಸದ ಕ್ಷೇತ್ರಗಳಿಲ್ಲ
ಡೊನಾಲ್ಡ್ ಟ್ರಂಪ್ ಬಹುಮುಖ ಪ್ರತಿಭೆಯ ವ್ಯಕ್ತಿತ್ವದವರು. ಅನೇಕ ಪುಸ್ತಕಗಳನ್ನು ಬರೆದ ಟ್ರಂಪ್ ಲೇಖಕರೂ ಹೌದು. ಸಿನಿಮಾಗಳಲ್ಲೂ ನಟಿಸಿದ್ದರು. ಪ್ರೋ ರೆಸ್ಲಿಂಗ್ ಕಾರ್ಯಕ್ರಮಗಳಲ್ಲೂ ಭಾಗವಹಿಸಿದ್ದರು. ಪಾನೀಯಗಳಿಂದ ಹಿಡಿದು ನೆಕ್ ಟೈ ತನಕ ಎಲ್ಲ ಉತ್ಪನ್ನಗಳ ಮಾರಾಟವನ್ನೂ ಮಾಡಿದವರು. ಕಳೆದ ಕೆಲವು ವರ್ಷಗಳಿಂದ ರಾಜಕೀಯವಾಗಿ ಹೆಚ್ಚು ಸಕ್ರಿಯರಾಗಿದ್ದಾರೆ. ಹೀಗೆ, ಬಹುಮುಖ ಪ್ರತಿಭೆಯ ಟ್ರಂಪ್ ಕೈಯಾಡಿಸದ ಕ್ಷೇತ್ರಗಳಿಲ್ಲ ಎಂದು ಹೇಳಬಹುದು.
ಇತ್ತೀಚಿನ ವರ್ಷಗಳಲ್ಲಿ ಡೊನಾಲ್ಡ್ ಟ್ರಂಪ್ ಅವರ ಸಂಪತ್ತಿನ ಮೌಲ್ಯ ಕುಸಿತ ಕಂಡಿದೆ ಎಂದು ಕೆಲ ವರದಿಗಳು ಹೇಳಿವೆ. ‘ಫೋರ್ಬ್ಸ್’ ನಿಯತಕಾಲಿಕೆ ಮಾಡಿರುವ ಅಂದಾಜಿನ ಪ್ರಕಾರ, ಡೊನಾಲ್ಡ್ ಟ್ರಂಪ್ ಅವರ ಸಂಪತ್ತು 4 ಲಕ್ಷ ಕೋಟಿ ಡಾಲರ್. ಆರು ಪ್ರತ್ಯೇಕ ಸಂದರ್ಭಗಳಲ್ಲಿ ಅಂದರೆ ಟ್ರಂಪ್ ಸ್ಟೀಕ್ಸ್, ಟ್ರಂಪ್ ಯೂನಿವರ್ಸಿಟಿಗಳು ದಿವಾಳಿಯಾದ ಸಂದರ್ಭವೂ ಸೇರಿ ಉದ್ಯಮ ದಿವಾಳಿ ಘೋಷಿಸಿಕೊಂಡಿದ್ದರು. ತೆರಿಗೆ ಮಾಹಿತಿ ಪರಿಶೀಲನೆಯಿಂದಲೂ ರಕ್ಷಣೆ ಪಡೆದಿದ್ದರು ಎಂಬ ಅಂಶದ ಕಡೆಗೆ ‘ನ್ಯೂಯಾರ್ಕ್ ಟೈಮ್ಸ್’ ಗಮನಸೆಳೆದಿತ್ತು.
ಜಗತ್ತಿನ ಗಮನಸೆಳೆದ ಡೊನಾಲ್ಡ್ ಟ್ರಂಪ್ ವೈಯಕ್ತಿಕ ಬದುಕು
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವೈಯಕ್ತಿಕ ಬದುಕು ಬಹಳ ಕುತೂಹಲಕಾರಿ ಎಂಬುದು ಜನಸಾಮಾನ್ಯರ ಅನಿಸಿಕೆ. ಕಾರಣ ಅದಕ್ಕೆ ಸಿಕ್ಕಿರುವ ಪ್ರಚಾರ ಅಂಥದ್ದು. ಡೊನಾಲ್ಡ್ ಟ್ರಂಪ್ ಅವರ ಮೊದಲ ಪತ್ನಿ ಪ್ರಸಿದ್ಧ ಝೆಕ್ ಅಥ್ಲೀಟ್, ಮಾಡೆಲ್ ಇವಾನಾ ಝೆಲ್ನಿಕೋವಾ. ಈ ದಾಂಪತ್ಯದಲ್ಲಿ ಅವರಿಗೆ ಮೂವರು ಮಕ್ಕಳು - ಡೊನಾಲ್ಡ್ ಜ್ಯೂನಿಯರ್, ಇವಾಂಕಾ ಮತ್ತು ಎರಿಕ್. 1990ರಲ್ಲಿ ಇವಾನಾ ಝೆಲ್ನಿಕೋವಾ ಜೊತೆಗಿನ ದಾಂಪತ್ಯ ಮುರಿದುಬಿತ್ತು. ಅವರ ಈ ವಿವಾಹ ವಿಚ್ಚೇದನ ಹಲವು ಟಾಬ್ಲಾಯ್ಡ್ ಪತ್ರಿಕೆಗಳ ಮುಖ್ಯ ಸುದ್ದಿಯಾಗಿತ್ತು. ಗಾಸಿಪ್‌ಗಳಿಗೂ ಅವಕಾಶ ನೀಡಿತ್ತು. 1993ರಲ್ಲಿ ಡೊನಾಲ್ಡ್ ಟ್ರಂಪ್ಅ ವರು ಮಾರ್ಲಾ ಮೇಪಲ್ಸ್ ಎಂಬ ನಟಿಯನ್ನು ವಿವಾಹವಾದರು. ಈ ದಾಂಪತ್ಯದಲ್ಲಿ ಅವರಿಗೆ ಟಿಫಾನಿ ಎಂಬ ಮಗಳು ಜನಿಸಿದಳು. 1999ರಲ್ಲಿ ಈ ದಾಂಪತ್ಯವೂ ಮುರಿದು ಬಿತ್ತು. ಮುಂದೆ, 2005 ರಲ್ಲಿ, ಡೊನಾಲ್ಡ್ ಟ್ರಂಪ್ ಸ್ಲೋವೇನಿಯನ್ ಮಾಡೆಲ್ ಮೆಲಾನಿಯಾ ಕ್ನಾಸ್ ಅವರನ್ನು ವಿವಾಹವಾದರು. ಈ ದಾಂಪತ್ಯದಲ್ಲಿ ಬ್ಯಾರನ್ ಎಂಬ ಒಬ್ಬ ಮಗನಿದ್ದಾನೆ.
ತಾನು ಎಂದಿಗೂ ಮದ್ಯಪಾನ ಮಾಡಿಲ್ಲ. ಸಿಗರೇಟ್ ಸೇದಿಲ್ಲ. ಮಾದಕ ವಸ್ತು, ಡ್ರಗ್ಸ್ ಸೇವಿಸಿಲ್ಲ. ರಾತ್ರಿ 4 -5 ತಾಸು ನಿದ್ದೆ ಮಾಡುತ್ತೇನೆ ಎಂದು ಡೊನಾಲ್ಡ್ ಟ್ರಂಪ್ ಹೇಳುತ್ತಾರೆ. ಇದಕ್ಕೆ ಪೂರಕವಾಗಿ, 2015 ರಲ್ಲಿ, ಪ್ರಚಾರ ಅಭಿಯಾನದ ಬಳಿಕ ಟ್ರಂಪ್ ಅವರ ವೈಯಕ್ತಿಕ ವೈದ್ಯ ಹೆರಾಲ್ಡ್ ಬೋರ್ನ್‌ಸ್ಟೈನ್ ಅವರು, " ಅಮೆರಿಕದ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದ ಅತ್ಯಂತ ಆರೋಗ್ಯಕರ ವ್ಯಕ್ತಿಯಾಗುತ್ತಾರೆ" ಎಂದು ಹೇಳಿದ್ದರು.
ಅಮೆರಿಕ ಅಧ್ಯಕ್ಷ ಸ್ಥಾನದಲ್ಲಿ 2ನೇ ಅವಧಿಗೆ ಮೊದಲ ಅವಧಿಯ ಬುನಾದಿ
ಅಮೆರಿಕ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಅವರ ಎರಡನೇ ಅವಧಿ ಶುರುವಾಗಿದೆ. ಮೊದಲ ಅವಧಿಯಲ್ಲಿ ಮೇಕ್ ಅಮೆರಿಕ ಗ್ರೇಟ್ ಅಂದಿದ್ದವರು, ಈಗ ಎರಡನೆ ಅವಧಿಗೆ ಮೇಕ್ ಅಮೆರಿಕ ಗ್ರೇಟ್ ಅಗೇನ್ ಎಂದು ಹೇಳುತ್ತ ಅಧಿಕಾರ ಹಿಡಿದಿದ್ದಾರೆ. ಮೊದಲ ಅವಧಿಯ ಕೊನೆಯಲ್ಲಿ ಅನೇಕ ವಿವಾದಗಳನ್ನು ಮೈಮೇಲೆ ಎಳೆದುಕೊಂಡಿದ್ದ ದೊನಾಲ್ಡ್ ಟ್ರಂಪ್, ಆ ಕರಿಛಾಯೆಗಳಿಂದ ಹೊರಬಂದು ಅಮೆರಿಕನ್ನರ ನಿರೀಕ್ಷೆಗಳನ್ನು ಈಡೇರಿಸುವರು ಎಂಬ ಭರವಸೆಯೊಂದಿಗೆ ಎಲ್ಲರೂ ಎದುರು ನೋಡುತ್ತಿದ್ದಾರೆ. ಜಾಗತಿಕ ಮಟ್ಟದಲ್ಲೂ ಡೊನಾಲ್ಡ್ ಟ್ರಂಪ್ ಆಳ್ವಿಕೆ ಪರಿಣಾಮ ಬೀರುವ ಕಾರಣ, ಚುನಾವಣೆಗೂ ಮೊದಲೇ ಹೇಳಿದಂತೆ ರಷ್ಯಾ - ಉಕ್ರೇನ್ ಯುದ್ಧ ಕೊನೆಗಾಣಾಲಿದೆಯೇ ಎಂಬ ಕುತೂಹಲವೂ ಇದೆ. ಬೈಡೆನ್ ಆಡಳಿತ ಉಕ್ರೇನ್‌ಗೆ ಬೆಂಬಲವಾಗಿ ನಿಂತಿಕೊಂಡಿತ್ತು. ಟ್ರಂಪ್ ಆಡಳಿತ ರಷ್ಯಾ ಪರ ಒಲವು ಹೊಂದಿದೆ. ಇನ್ನು ಮಧ್ಯಪ್ರಾಚ್ಯ ಬಿಕ್ಕಟ್ಟು, ಭಾರತದ ಜತೆಗಿನ ಅಮೆರಿಕದ ಸಂಬಂಧ ಎಲ್ಲವೂ ಹೊಸ ಮಜಲುಗಳನ್ನು ಕಾಣುವ ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಇವೆಲ್ಲವೂ ಟ್ರಂಪ್ ಅವರ ಆಲೋಚನೆಗಳಿಗೆ ಅನುಗುಣವಾಗಿ ನಡೆಯಲಿದೆ.
ಒಟ್ಟಾರೆ ಟ್ರಂಪ್ ಅವರ ವೈಯಕ್ತಿಕ ಬದುಕು ಮತ್ತು ಅವರು ಅಧಿಕಾರ ಚಲಾಯಿಸುವ ರೀತಿ ಸದಾ ಸುದ್ದಿಯಾಗಿದೆ ಮತ್ತು ಮುಂದೆಯೂ ಸುದ್ದಿಯಾಗುತ್ತಲೇ ಇರುತ್ತದೆ. ಈ ನಡುವೆ ಅವರ ‘ಅಮೆರಿಕ ಮೊದಲು’ ನೀತಿಯ ಪರಿಣಾಮ ಭಾರತ ಸೇರಿದಂತೆ ವಿಶ್ವದ ಹಲವು ದೇಶಗಳ ಮೇಲೆ ಹೇಗಾಗಬಹುದು ಎನ್ನುವ ಬಗ್ಗೆ ಕುತೂಹಲವೂ ವ್ಯಕ್ತವಾಗುತ್ತಿದೆ.
(ಬರಹ: ಉಮೇಶ್ ಕುಮಾರ್ ಶಿಮ್ಲಡ್ಕ)
