ಆಪರೇಷನ್ ಸಿಂದೂರ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೊದಲ ಪ್ರತಿಕ್ರಿಯೆ; ದಶಕಗಳ ಸಮಸ್ಯೆಗೆ ಶೀಘ್ರ ಪರಿಹಾರ, ವಿಡಿಯೋ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಆಪರೇಷನ್ ಸಿಂದೂರ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೊದಲ ಪ್ರತಿಕ್ರಿಯೆ; ದಶಕಗಳ ಸಮಸ್ಯೆಗೆ ಶೀಘ್ರ ಪರಿಹಾರ, ವಿಡಿಯೋ

ಆಪರೇಷನ್ ಸಿಂದೂರ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೊದಲ ಪ್ರತಿಕ್ರಿಯೆ; ದಶಕಗಳ ಸಮಸ್ಯೆಗೆ ಶೀಘ್ರ ಪರಿಹಾರ, ವಿಡಿಯೋ

ಆಪರೇಷನ್ ಸಿಂದೂರ್: ಭಾರತ ಸೇನೆ ಪಾಕಿಸ್ತಾನ ಹಾಗೂ ಪಿಒಕೆಯ ಉಗ್ರ ನೆಲೆಗಳ ಮೇಲೆ ಮಾಡಿರುವ ನಿಶ್ಚಿತ ದಾಳಿ ಹಿನ್ನೆಲೆಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ದಶಕಗಳ ಸಮಸ್ಯೆಗೆ ಶೀಘ್ರ ಪರಿಹಾರ ಸಿಗಲಿದೆ ಎಂದು ಟ್ರಂಪ್ ಹೇಳಿದ್ದು, ಅವರ ವಿಡಿಯೋ ಹೇಳಿಕೆ ವಿವರ ಇಲ್ಲಿದೆ.

ಪಾಕಿಸ್ತಾನ ಹಾಗೂ ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ)ದ 9 ಉಗ್ರನೆಲೆಗಳ ಮೇಲೆ ಭಾರತ ನಡೆಸಿರುವ ನಿಶ್ಚಿತ ದಾಳಿ "ಆಪರೇಷನ್ ಸಿಂದೂರ್'' ನಡೆಯುತ್ತಿರುವಾಗಲೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ಪರ ಹೇಳಿಕೆ ನೀಡಿದ್ದಾರೆ.
ಪಾಕಿಸ್ತಾನ ಹಾಗೂ ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ)ದ 9 ಉಗ್ರನೆಲೆಗಳ ಮೇಲೆ ಭಾರತ ನಡೆಸಿರುವ ನಿಶ್ಚಿತ ದಾಳಿ "ಆಪರೇಷನ್ ಸಿಂದೂರ್'' ನಡೆಯುತ್ತಿರುವಾಗಲೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ಪರ ಹೇಳಿಕೆ ನೀಡಿದ್ದಾರೆ. (AFP)

ಆಪರೇಷನ್ ಸಿಂದೂರ್: ಪಹಲ್ಗಾಮ್‌ ದಾಳಿಗೆ ಪ್ರತೀಕಾರವಾಗಿ ಪಾಕಿಸ್ತಾನ ಹಾಗೂ ಪಿಒಕೆ (ಪಾಕಿಸ್ತಾನ ಆಕ್ರಮಿತ ಕಾಶ್ಮೀರ)ಯ 9 ಉಗ್ರ ನೆಲೆಗಳ ಮೇಲೆ ಭಾರತದ ಸಶಸ್ತ್ರ ಪಡೆಗಳು ದಾಳಿ ನಡೆಸಿವೆ. ರಾತ್ರೋರಾತ್ರಿ ನಡೆದ ಆಪರೇಷನ್ ಸಿಂದೂರ ಕಾರ್ಯಾಚರಣೆ ಹಿನ್ನೆಲೆಯಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೊದಲ ಹೇಳಿಕೆ ನೀಡಿದ್ದು, ದಶಕಗಳ ಸಮಸ್ಯೆಗೆ ಶೀಘ್ರವೇ ಪರಿಹಾರ ಸಿಗಲಿದೆ ಎಂದು ಹೇಳಿರುವುದು ಗಮನಸೆಳೆದಿದೆ.

ಪಾಕಿಸ್ತಾನದ ಕುರಿತಾದ ಭಾರತದ ಕಾರ್ಯಾಚರಣೆಯ ಬಗ್ಗೆ ಅವರ ಮೊದಲ ಪ್ರತಿಕ್ರಿಯೆಯಲ್ಲಿ, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ‘ಇದು ಬಹಳ ಬೇಗನೆ ಕೊನೆಗೊಳ್ಳುತ್ತದೆ’ ಎಂಬ ಆಶಯವನ್ನು ವ್ಯಕ್ತಪಡಿಸಿದ್ದಾರೆ. ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯೆಯಾಗಿ ಪಾಕಿಸ್ತಾನದ ಒಂಬತ್ತು ತಾಣಗಳನ್ನು ಗುರಿಯಾಗಿಸಿಕೊಂಡಿದೆ ಎಂದು ಭಾರತೀಯ ರಕ್ಷಣಾ ಸಚಿವಾಲಯ ಘೋಷಿಸಿದ ನಂತರ ಡೊನಾಲ್ಡ್‌ ಟ್ರಂಪ್ ಈ ಹೇಳಿಕೆ ನೀಡಿದರು. ಮಂಗಳವಾರ ಅಧ್ಯಕ್ಷರ ನಿಯತ ಪತ್ರಿಕಾಗೋಷ್ಠಿಯಲ್ಲಿ, ಟ್ರಂಪ್ ಅವರಿಗೆ ಇತ್ತೀಚಿನ ದಾಳಿಗೆ ಪ್ರತಿಕ್ರಿಯೆ ಇದೆಯೇ ಎಂದು ಕೇಳಿದಾಗ ಈ ಪ್ರತಿಕ್ರಿಯೆ ನೀಡಿದ್ದರು.

ಆಪರೇಷನ್ ಸಿಂದೂರ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೊದಲ ಪ್ರತಿಕ್ರಿಯೆ ಹೀಗಿತ್ತು

ಪಹಲ್ಗಾಮ್ ದಾಳಿಯ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಡೊನಾಲ್ಡ್ ಟ್ರಂಪ್, “ಅದು ನಾಚಿಕೆಗೇಡಿನ ಸಂಗತಿ. ಓವಲ್‌ಗೆ ಹೋದಾಗ ಈ ವಿಚಾರ ತಿಳಿಯಿತು. ಕಳೆದ ಕೆಲವು ದಿನಗಳಿಂದಲೇ ಏನೋ ನಡೆಯಲಿದೆ ಎಂಬುದನ್ನು ಜನರು ಅರ್ಥಮಾಡಿಕೊಂಡಿರುತ್ತಾರೆ. ಅವರು ಭಯೋತ್ಪಾದನೆ ವಿರುದ್ಧ ಬಹುಕಾಲದಿಂದ ಹೋರಾಟ ನಡೆಸುತ್ತಲೇ ಇದ್ದಾರೆ. ದಶಕಗಳ ಕಾಲದಿಂದ ನಡೆಯುತ್ತಿರುವ ಹೋರಾಟ ಅದು. ಬಹುಬೇಗ ಅದು ಕೊನೆಯಾಗಲಿದೆ ಎಂದು ಆಶಿಸುವೆ” ಎಂದು ಹೇಳಿದರು.

ಭಯೋತ್ಪಾದನೆ ವಿರುದ್ಧ ಭಾರತದ ಹೋರಾಟದ ಬಗ್ಗೆ ಅಮೆರಿಕದ ನಿಲುವು

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರತಿಕ್ರಿಯೆ ನೀಡುವುದಕ್ಕೂ ಮೊದಲು, ಅಮೆರಿಕದ ಸ್ಪೀಕರ್ ಮೈಕ್ ಜಾನ್ಸನ್ ಅವರು ಭಯೋತ್ಪಾದನೆ ವಿರುದ್ಧ ಭಾರತದ ಹೋರಾಟದ ಬಗ್ಗೆ ಅಮೆರಿಕದ ನಿಲುವು ಸ್ಪಷ್ಟಪಡಿಸಿದ್ದರು. ಭಯೋತ್ಪಾದನೆ ವಿರುದ್ಧ ಹೋರಾಟಕ್ಕೆ ಭಾರತಕ್ಕೆ ಅಗತ್ಯ ನೆರವು ನೀಡುವುದಾಗಿ ಘೋಷಿಸಿದ್ದರು.

ಭಯೋತ್ಪಾದನೆ ವಿರುದ್ಧ ಭಾರತ ಹೋರಾಟ ನಡೆಸಬೇಕು. ನಾವು ಅದಕ್ಕೆ ಅಗತ್ಯ ಇರುವಂತಹ ಎಲ್ಲ ರೀತಿಯ ನೆರವನ್ನೂ ಒದಗಿಸುತ್ತೇವೆ. ಟ್ರಂಪ್ ಆಡಳಿತವು ಭಾರತದ ನೆರವಿಗೆ ನಿಲ್ಲಲಿದ್ದು, ಭಯೋತ್ಪಾದನೆ ವಿರುದ್ಧ ಹೋರಾಟಕ್ಕೆ ಶಕ್ತಿ ಸಂಪನ್ಮೂಲನಗಳನ್ನು ಕೂಡ ಒದಗಿಸಲಿದೆ ಎಂದು ಮೈಕ್ ಜಾನ್ಸನ್ ಘೋಷಿಸಿದ್ದರು.

"ಆ ಪ್ರಯತ್ನಗಳನ್ನು ಬೆಂಬಲಿಸಲು ನಾವು ಅಮೆರಿಕದಲ್ಲಿ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ. ಭಾರತದ ಜತೆಗಿನ ಈ ಸಂಬಂಧವು ಅಭಿವೃದ್ಧಿ ಹೊಂದುತ್ತಿರುವಂತೆ ಈ ಎಲ್ಲ ನೆರವುಗಳೂ ಅದರ ಭಾಗವಾಗಿದೆ ಎಂದು ನಾನು ಭಾವಿಸುತ್ತೇನೆ. ಟ್ರಂಪ್ ಆಡಳಿತವು ಆ ಸಂಬಂಧದ ಮಹತ್ವವನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳುತ್ತದೆ. ಭಯೋತ್ಪಾದನೆಯ ಬೆದರಿಕೆಯ ಗಂಭೀರ ಸ್ವರೂಪವನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳುತ್ತದೆ" ಎಂದು ಮೈಕ್ ಜಾನ್ಸನ್ ಹೇಳಿದ್ದಾರೆ.

ಆಪರೇಷನ್ ಸಿಂದೂರದ ಬಗ್ಗೆ ಭಾರತದ ಹೇಳಿಕೆ

ಪಾಕಿಸ್ತಾನದಲ್ಲಿರುವ ಉಗ್ರ ನೆಲೆಗಳ ಮೇಲೆ ಆಪರೇಷನ್ ಸಿಂಧೂರ ಕಾರ್ಯಾಚರಣೆಯನ್ನು ಭಾರತ ನಡೆಸಿದೆ ಎಂದು ಭಾರತದ ಮಾಹಿತಿ ಪ್ರಸಾರ ಸಚಿವಾಲಯ ಟ್ವೀಟ್ ಮಾಡಿದರೆ, ಭಾರತೀಯ ಸೇನೆ, ಜಸ್ಟೀಸ್ ಈಸ್ ಸರ್ವ್ಡ್. ಜೈ ಹಿಂದ್ ಎಂದು ಘೋಷಿಸಿ ಟ್ವೀಟ್ ಮಾಡಿದೆ.

ಭಾರತದ ರಕ್ಷಣಾ ಸಚಿವಾಲಯವು ದಾಳಿ ವಿಚಾರ ಸ್ಪಷ್ಟಪಡಿಸಿದ್ದು, ಭಾರತ ಪ್ರಚೋದನಕಾರಿ ದಾಳಿ ನಡೆಸಿಲ್ಲ. ನಿಶ್ಚಿತ ಟಾರ್ಗೆಟ್‌ಗಳ ಮೇಲೆ ಅಂದರೆ ಉಗ್ರ ನೆಲೆಗಳ ಮೇಲೆ ದಾಳಿ ನಡೆಸಿದೆ. ಪಾಕಿಸ್ತಾನದ ಸೇನಾ ನೆಲೆಗಳನ್ನು ಗುರಿಯಾಗಿಟ್ಟು ದಾಳಿ ನಡೆಸಿಲ್ಲ. ಭಾರತದ ಸಮರ ಭಯೋತ್ಪಾದನೆ ವಿರುದ್ಧ ಎಂದು ಹೇಳಿಕೊಂಡಿದೆ.

Umesh Kumar S

TwittereMail
ಉಮೇಶ್ ಕುಮಾರ್ ಶಿಮ್ಲಡ್ಕ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದ ಸುದ್ದಿ ಸಂಪಾದಕ. ಜೀವನದ ಕಲಿಕಾರ್ಥಿ. ದೇಶ, ವಿದೇಶಗಳ ಪ್ರಸಕ್ತ ವಿದ್ಯಮಾನ, ವಾಣಿಜ್ಯ, ವಿಜ್ಞಾನ ತಂತ್ರಜ್ಞಾನ ಕುರಿತು ಕುತೂಹಲಿ. ಹೊಸ ದಿಗಂತ, ಉದಯವಾಣಿ, ವಿಜಯ ಕರ್ನಾಟಕ, ವಿಜಯವಾಣಿ ಪತ್ರಿಕೆಗಳು. ಏಷ್ಯಾನೆಟ್ ಸುವರ್ಣ, ಸಮಯ ಸುದ್ದಿವಾಹಿನಿಗಳ ವಿವಿಧ ವಿಭಾಗಗಳು ಸೇರಿ 20 ವರ್ಷಗಳಿಗೂ ಹೆಚ್ಚಿನ ಅನುಭವ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಿವಾಸಿ.
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.