ಕನ್ನಡ ಸುದ್ದಿ  /  Nation And-world  /  Us Starts Fiscal Year With National Debt Reaches A New Record High

US National Debt: ಹೆಚ್ಚುತ್ತಿದೆ ಅಮೆರಿಕದ ಸಾಲದ ಪ್ರಮಾಣ: ಮೂಗಿನ ಮೇಲಿನ ತುಪ್ಪಕ್ಕೆ ಆಸೆಪಡುತ್ತಿದೆ ವಿಶ್ವದ ದೊಡ್ಡಣ್ಣ!

ಅಮೆರಿಕವನ್ನು ಕಳೆದ 40 ವರ್ಷಗಳಲ್ಲೇ ಅತ್ಯಂತ ಭೀಕರ ಹಣದುಬ್ಬರ ಕಾಡುತ್ತಿದ್ದು, ದೇಶದ ಒಟ್ಟು ರಾಷ್ಟ್ರೀಯ ಸಾಲ 31.123 ಟ್ರಿಲಿಯನ್‌ ಯುಎಸ್ ಡಾಲರ್‌ಗೆ ಏರಿಕೆಯಾಗಿದೆ. ಈ ಮೂಲಕ ಅಮೆರಿಕ ಅಕ್ಟೋಬರ್‌ 1ರಿಂದ ಶುರುವಾಗುವ ತನ್ನ ಹೊಸ ಆರ್ಥಿಕ ವರ್ಷವನ್ನು ಭಾರೀ ಸಾಲದೊಂದಿಗೆ ಆರಂಭಿಸಿದೆ. ಆರ್ಥಿಕ ತಜ್ಞರು ದೇಶದ ಭವಿಷ್ಯದ ದಿನಗಳ ಕುರಿತಂತೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

ಶ್ವೇತ ಭವನ (ಸಂಗ್ರಹ ಚಿತ್ರ)
ಶ್ವೇತ ಭವನ (ಸಂಗ್ರಹ ಚಿತ್ರ) (HT)

ವಾಷಿಂಗ್ಟನ್: ವಿಶ್ವದ ದೊಡ್ಡಣ್ಣ ಎಂದು ಕರೆಸಿಕೊಳ್ಳುವ ಮತ್ತು ಹಾಗೆ ಕರೆಸಿಕೊಳ್ಳುವುದರಲ್ಲೇ ಖುಷಿಪಡುವ ಅಮೆರಿಕ, ಜಗತ್ತಿನಲ್ಲೇ ಅತ್ಯಂತ ಬಲಾಢ್ಯ ಆರ್ಥಿಕ ವ್ಯವಸ್ಥೆ ಹೊಂದಿರುವುದಾಗಿ ಜಂಭ ಕೊಚ್ಚಿಕೊಳ್ಳುತ್ತದೆ. ಅದರೆ ಅಮೆರಿಕದ ಅರ್ಥ ವ್ಯವಸ್ಥೆ ಅದು ಹೇಳುವಷ್ಟು ಬಲಾಢ್ಯವಾಗಿಲ್ಲ ಎಂಬುದು ಆಗಾಗ ಸಾಬೀತಾಗುತ್ತಲೇ ಇರುತ್ತದೆ.

ಇದಕ್ಕೆ ಪುಷ್ಠಿ ಎಂಬಂತೆ ಅಮೆರಿಕವನ್ನು ಕಳೆದ 40 ವರ್ಷಗಳಲ್ಲೇ ಅತ್ಯಂತ ಭೀಕರ ಹಣದುಬ್ಬರ ಕಾಡುತ್ತಿದ್ದು, ದೇಶದ ಒಟ್ಟು ರಾಷ್ಟ್ರೀಯ ಸಾಲ 31.123 ಟ್ರಿಲಿಯನ್‌ ಯುಎಸ್ ಡಾಲರ್‌ಗೆ ಏರಿಕೆಯಾಗಿದೆ. ಈ ಮೂಲಕ ಅಮೆರಿಕ ಅಕ್ಟೋಬರ್‌ 1ರಿಂದ ಶುರುವಾಗುವ ತನ್ನ ಹೊಸ ಆರ್ಥಿಕ ವರ್ಷವನ್ನು ಭಾರೀ ಸಾಲದೊಂದಿಗೆ ಆರಂಭಿಸಿದೆ.

ಆರ್ಥಿಕ ತಜ್ಞರು ದೇಶದ ಭವಿಷ್ಯದ ದಿನಗಳ ಕುರಿತಂತೆ ತೀವ್ರ ಕಳವಳ ವ್ಯಕ್ತಪಡಿಸಿದ್ದು, ಈ ಪ್ರಮಾಣದ ಸಾಲ ದೇಶದ ಅರ್ಥ ವ್ಯವಸ್ಥೆಯನ್ನು ಹಿಂದಕ್ಕೆ ಕೊಂಡೊಯ್ಯಲಿದೆ ಎಂದು ಎಚ್ಚರಿಸಿದ್ದಾರೆ. ಅಮೆರಿಕ ಸರ್ಕಾರದ ಖಜಾನೆ ಇಲಾಖೆ ಬಿಡುಗಡೆ ಮಾಡಿರುವ ಹಣಕಾಸಿನ ಸ್ಥಿತಿಗತಿ ನಿಜಕ್ಕೂ ಆಘಾತಕಾರಿ ಎಂದು ಹಲವು ಆರ್ಥಿಕ ತಜ್ಞರು ಹೇಳಿದ್ದಾರೆ.

ಅಮೆರಿಕ ಸರ್ಕಾರ ರಾಷ್ಟ್ರೀಯ ಸಾಲದ ಮಿತಿಯನ್ನು 31.4 ಲಕ್ಷ ಕೋಟಿ ಡಾಲರ್‌ಗೆ ನಿಗದಿಪಡಿಸಿತ್ತು. ಇದೀಗ ತನ್ನ ಮಿತಿಯ ಸಮೀಪಕ್ಕೆ ಅಮೆರಿಕದ ರಾಷ್ಟ್ರೀಯ ಸಾಲ ಪ್ರಮಾಣ ಬಂದು ನಿಂತಿರುವುದನ್ನು ನೋಡಿ, ಅಧ್ಯಕ್ಷ ಜೋ ಬೈಡನ್‌ ನೇತೃತ್ವದ ಸರ್ಕಾರ ಚಿಂತೆಗೀಡಾಗಿದೆ. ಹೆಚ್ಚುತ್ತಿರುವ ಹಣದುಬ್ಬರ, ಮಿತಿ ಮೀರಿದ ಸಾಲದ ಹೊರೆಯಿಂದ ಅಮೆರಿಕದಲ್ಲಿ ಬಡ್ಡಿ ದರ ಗರಿಷ್ಠ ಮಟ್ಟ ತಲುಪಿದೆ.

ಹಣಕಾಸು ಕೊರತೆ ನೀಗಿಸಲು ಹಾಗೂ ಹಣದುಬ್ಬರ ತಗ್ಗಿಸಲು, ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಇತ್ತೀಚೆಗೆ ಬಹು ಚರ್ಚಿತ ಹಣದುಬ್ಬರ ನಿಯಂತ್ರಣ ಕಾಯ್ದೆಗೆ ಸಹಿ ಹಾಕಿದ್ದರು. ಆದರೆ ರಾಷ್ಟೀಯ ಸಾಲದ ಮೀತಿಯನ್ನು ಮೀರದಿರಲು ಜೋ ಬೈಡನ್‌ ಸರ್ಕಾರಕ್ಕೆ ಸಾಧ್ಯವಾಗುವುದಿಲ್ಲ ಎಂದು ಹಲವು ಆರ್ಥಿಕ ತಜ್ಞರು ಅಂದಾಜಿಸಿದ್ಧಾರೆ.

ಹೆಚ್ಚುತ್ತಿರುವ ಬಡ್ಡಿ ದರ ಪ್ರಮಾಣ ದೇಶದ ಸಾಲದ ಮೇಲೆ ಒತ್ತಡ ಉಂಟು ಮಾಡಿದೆ. ದೇಶಕ್ಕೆ ಸಾಲದ ಹೊರೆ ದುಬಾರಿಯಾಗಿ ಪರಿಣಮಿಸಿದೆ. ಹಣದುಬ್ಬರ ನಿಯಂತ್ರಣಕ್ಕಾಗಿ ಫೆಡರಲ್‌ ರಿಸರ್ವ್‌ ಬ್ಯಾಂಕ್‌ ಹಲವಾರು ಬಾರಿ ಬಡ್ಡಿ ದರ ಹೆಚ್ಚಳ ಮಾಡಿದೆ. ಆದರೆ ಈ ಯಾವ ಕ್ರಮಗಳೂ ರಾಷ್ಟ್ರೀಯ ಸಾಲದ ಪ್ರಮಾಣವನ್ನು ತಗ್ಗಿಸುವಲ್ಲಿ ನೆರವಾಗಿಲ್ಲ ಎಂದು ಪ್ರಿನ್ಸ್‌ಟನ್‌ನ ಅರ್ಥಶಾಸ್ತ್ರಜ್ಞ ಒವೆನ್‌ ಜಿಡಾರ್‌ ಅಭಿಪ್ರಾಯಪಟ್ಟಿದ್ದಾರೆ.

ಬಡ್ಡಿ ದರ ಹೆಚ್ಚಳ ಮಾಡುವ ಬದಲು ಹಾಲಿ ಪ್ರಮಾಣವನ್ನೇ ಮುಂದುವರಿಸಿದರೆ, ಹಣದ ಹರಿವು ಸರಾಗವಾಗುತ್ತದೆ. ಇದರಿಂದ ಆರ್ಥಿಕ ಚಟುವಟಿಕೆ ಚಲನಶೀಲವಾಗುತ್ತದೆ. ಶ್ರೀಮಂತರ ಮೇಲೆ ಹೆಚ್ಚಿನ ತೆರಿಗೆ ವಿಧಿಸುವ ಮೂಲಕ ಖಜಾನೆಯನ್ನು ತುಂಬಿಸಬೇಕು ಎಂದು ಒವೆನ್‌ ಜಿಡಾರ್‌ ಸಲಹೆ ನೀಡಿದ್ದಾರೆ.

ಅಮೆರಿಕವು ಸಾಲಕ್ಕೆ ಹೊಂದಿಕೊಳ್ಳುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಕಳೆದ 10 ತಿಂಗಳುಗಳಲ್ಲಿ ಅಮೆರಿಕದಲ್ಲಿ ದಾಖಲೆ ಮಟ್ಟದ ಗರಿಷ್ಠ ಹಣದುಬ್ಬರ ಕಂಡು ಬಂದಿದೆ. ಯಾವುದೇ ಕಾಯ್ದೆ ಅಥವಾ ನಿರ್ಬಂಧನೆಗಳಿಂದ ಇದನ್ನು ಸುಧಾರಿಸಲು ಸಾಧ್ಯವಿಲ್ಲ. ಅರ್ಥ ವ್ಯವಸ್ಥೆಗೆ ಸಂಬಂಧಿಸಿದಂತೆ ನಾವು ಹೆಮ್ಮೆಪಡುವ ಸ್ಥಿತಿಯಲ್ಲಿ ಅಮೆರಿಕ ಇಲ್ಲ ಎಂದು ಫೆಡರಲ್‌ ಬಜೆಟ್‌ ಸಮಿತಿ ಅಧ್ಯಕ್ಷೆ ಮಾಯಾ ಮ್ಯಾಕ್‌ಗಿನೀಸ್‌ ಹೇಳಿದ್ದಾರೆ

ಅಮೆರಿಕ ಮತ್ತು ಭಾರತದಲ್ಲಿ ಕ್ಯಾಲೆಂಡರ್‌ ವರ್ಷವು ಜನವರಿ 1ರಿಂದ ಆರಂಭವಾದರೂ, ಭಾರತದಲ್ಲಿ ಹಣಕಾಸು ವರ್ಷ ಏಪ್ರಿಲ್‌ 1ರಿಂದ ಆರಂಭವಾಗುತ್ತದೆ. ಅಮೆರಿಕದಲ್ಲಿ ಆರ್ಥಿಕ ವರ್ಷವು ಅಕ್ಟೋಬರ್‌ 1ರಿಂದ ಆರಂಭವಾಗುವುದು ವಿಶೇಷ.

ಒಟ್ಟಿನಲ್ಲಿ ಹೆಚ್ಚುತ್ತಿರುವ ರಾಷ್ಟ್ರೀಯ ಸಾಲದಿಂದ ಅಮೆರಿಕ ಕಂಗಾಲಾಗಿದ್ದು, ಸಾಲದ ಪ್ರಮಾಣ ತಗ್ಗಿಸುವ ಬಗೆ ಹೇಗೆಂದು ಗಂಭೀರ ಚಿಂತನೆಯಲ್ಲಿ ತೊಡಿಗಿದೆ. ಅಮೆರಿಕ ವಿಶ್ವದ ಆಗು-ಹೋಗುಗಳ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳದೇ, ತನ್ನ ಆಂತರಿಕ ವ್ಯವಹಾರದತ್ತ ಹೆಚ್ಚು ಗಮನಹರಿಸುವುದು ಇದು ಸಕಾಲ ಎಂದೂ ಹಲವು ಆರ್ಥಿಕ ತಜ್ಞರು ಸಲಹೆ ನೀಡಿದ್ದಾರೆ.

IPL_Entry_Point

ವಿಭಾಗ