ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಭಾರತ ಭೇಟಿ ದಿನಾಂಕ ನಿಗದಿ, ಮುಂದಿನ ವಾರವೇ ಪ್ರಧಾನಿ ಮೋದಿ ಜತೆಗೆ ಮಾತುಕತೆ
ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಅವರ ಬಹುನಿರೀಕ್ಷಿತ ಭಾರತ ಭೇಟಿಗೆ ದಿನಾಂಕ ನಿಗದಿಯಾಗಿದೆ. ಮುಂದಿನವಾರವೇ ಜೆಡಿ ವ್ಯಾನ್ಸ್ ಮತ್ತು ಅವರ ಕುಟುಂಬ ಭಾರತಕ್ಕೆ ಭೇಟಿ ನೀಡಲಿದೆ. ಇದೇ ವೇಳೆ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಜತೆಗೆ ಮಾತುಕತೆ ನಡೆಸಲಿದ್ದಾರೆ.

ನವದೆಹಲಿ: ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಅವರ ಭಾರತ ಪ್ರವಾಸಕ್ಕೆ ದಿನಾಂಕ ನಿಗದಿಯಾಗಿದೆ. ಜೆಡಿ ವ್ಯಾನ್ಸ್ ಮತ್ತು ಅವರ ಕುಟುಂಬ ಏಪ್ರಿಲ್ 18 ರಿಂದ ಏಪ್ರಿಲ್ 24ರ ತನಕ ಭಾರತ ಹಾಗೂ ಇಟೆಲಿ ಪ್ರವಾಸ ಮಾಡಲಿದೆ. ಈ ಸಂದರ್ಭದಲ್ಲಿ ಜೆಡಿ ವ್ಯಾನ್ಸ್ ಅವರು ಎರಡೂ ದೇಶಗಳ ನಾಯಕರೊಂದಿಗೆ ಜಾಗತಿಕ ಆರ್ಥಿಕ ಹಾಗೂ ಭೌಗೋಳಿಕ ಆದ್ಯತೆಗಳ ಬಗ್ಗೆ ಮಾತುಕತೆ ನಡೆಸಲಿದ್ದಾರೆ.
ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಭಾರತ ಭೇಟಿ ದಿನಾಂಕ ನಿಗದಿ
ಭಾರತಕ್ಕೆ ಆಗಮಿಸುವ ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ನವದೆಹಲಿ, ಜೈಪುರ ಮತ್ತು ಆಗ್ರಾಕ್ಕೆ ಭೇಟಿ ನೀಡಲಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರೊಂದಿಗೆ ಮಹತ್ವದ ಮಾತುಕತೆ ನಡೆಸಲಿದ್ದಾರೆ. ಜೆಡಿ ವ್ಯಾನ್ಸ್ ಅವರ ಕುಟುಂಬವೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದೆ.
ಇಟಲಿಯ ರೋಮ್‌ಗೆ ಭೇಟಿ ನೀಡಲಿರುವ ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಮತ್ತು ಅವರ ಕುಟುಂಬ ಅಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದೆ. ಜೆಡಿ ವ್ಯಾನ್ಸ್ ಅವರು ಇಟೆಲಿ ಪ್ರಧಾನಿ ಜಿಯೋರ್ಜಿಯಾ ಮೆಲೋನಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ. ಇದೇ ವೇಳೆ ಅವರು ವ್ಯಾಟಿಕನ್ ಸೆಕ್ರಟರಿ ಆಫ್ ಸ್ಟೇಟ್ ಕಾರ್ಡಿನಲ್ ಪಿಯೆಟ್ರೋ ಪರೋಲಿನ್ ಅವರನ್ನೂ ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ ಎಂದು ಶ್ವೇತ ಭವನ ತಿಳಿಸಿದೆ.
