ಮಹಾ ಕುಂಭಮೇಳ ಕಾಲ್ತುಳಿತದಲ್ಲಿ 30 ಮಂದಿ ಸಾವು; 60 ಜನರಿಗೆ ಗಾಯ, ಸಹಾಯವಾಣಿ ಆರಂಭಿಸಿದ ಸರ್ಕಾರ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಮಹಾ ಕುಂಭಮೇಳ ಕಾಲ್ತುಳಿತದಲ್ಲಿ 30 ಮಂದಿ ಸಾವು; 60 ಜನರಿಗೆ ಗಾಯ, ಸಹಾಯವಾಣಿ ಆರಂಭಿಸಿದ ಸರ್ಕಾರ

ಮಹಾ ಕುಂಭಮೇಳ ಕಾಲ್ತುಳಿತದಲ್ಲಿ 30 ಮಂದಿ ಸಾವು; 60 ಜನರಿಗೆ ಗಾಯ, ಸಹಾಯವಾಣಿ ಆರಂಭಿಸಿದ ಸರ್ಕಾರ

Stampede at Mahakumbh in Prayagraj: ಉತ್ತರಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 30ಕ್ಕೇರಿದೆ. ಮೌನಿ ಅಮಾವಾಸ್ಯೆ ದಿನ ಪವಿತ್ರ ಸ್ನಾನ ಮಾಡಲು ಯಾತ್ರಿಕರು ಕಿಕ್ಕಿರಿದು ಸೇರಿದ್ದರಿಂದ ದುರ್ಘಟನೆ ಸಂಭವಿಸಿದೆ.

ಮಹಾ ಕುಂಭಮೇಳ ಕಾಲ್ತುಳಿತದಲ್ಲಿ 30 ಮಂದಿ ಸಾವು; 60 ಜನರಿಗೆ ಗಾಯ, ಸಹಾಯವಾಣಿ ಆರಂಭಿಸಿದ ಸರ್ಕಾರ
ಮಹಾ ಕುಂಭಮೇಳ ಕಾಲ್ತುಳಿತದಲ್ಲಿ 30 ಮಂದಿ ಸಾವು; 60 ಜನರಿಗೆ ಗಾಯ, ಸಹಾಯವಾಣಿ ಆರಂಭಿಸಿದ ಸರ್ಕಾರ (Nitin Sharma / ANI)

ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ ಸಂಭವಿಸಿದ ಕಾಲ್ತುಳಿತದಿಂದ, ಈವರೆಗೆ 30ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ಮಹಾ ಕುಂಭಮೇಳದ ಡಿಐಜಿ ವೈಭವ್ ಕೃಷ್ಣ ತಿಳಿಸಿದ್ದಾರೆ. ಬುಧವಾರ (ಜ.29) ಈ ಕುರಿತು ಮಾತನಾಡಿದ ಅವರು, ಘಟನೆಯಲ್ಲಿ 60 ಜನರು ಗಾಯಗೊಂಡಿದ್ದಾರೆ ಎಂದು ಹೇಳಿದ್ದಾರೆ. ಮೃತಪಟ್ಟವರಲ್ಲಿ 25 ಜನರನ್ನು ಈಗಾಗಲೇ ಗುರುತಿಸಲಾಗಿದ್ದು, ಉಳಿದ 5 ಜನರ ಗುರುತು ಇನ್ನಷ್ಟೇ ಪತ್ತೆಯಾಗಬೇಕಿದೆ. ದುರಂತದಲ್ಲಿ ಕರ್ನಾಟಕದ ಬೆಳಗಾವಿ ಜಿಲ್ಲೆಯ ನಾಲ್ವರು ಸಾವನ್ನಪ್ಪಿದ್ದಾರೆ.

ಕಾಲ್ತುಳಿತದಿಂದ ಗಾಯಗೊಂಡವರಲ್ಲಿ 36 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಉಳಿದವರನ್ನು ಅವರ ಕುಟುಂಬಗಳೊಂದಿಗೆ ಕಳುಹಿಸಲಾಗಿದೆ ಎಂದು ಡಿಐಜಿ ಹೇಳಿದ್ದಾರೆ.

“ಜನಸಮೂಹದ ನೂಕುನುಗ್ಗಲಿನಿಂದ ಈ ಘಟನೆ ಸಂಭವಿಸಿದೆ. ಜನಸಮೂಹ ಬ್ಯಾರಿಕೇಡ್‌ಗಳನ್ನು ಮುರಿದು ಇನ್ನೊಂದು ಬದಿಗೆ ಹೋಗಲು ಮುಂದಾಗಿದ್ದಾರೆ. 90ಕ್ಕೂ ಹೆಚ್ಚು ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಅವರಲ್ಲಿ 30 ಜನರು ಸಾವನ್ನಪ್ಪಿದರು” ಎಂದು ಡಿಐಜಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

ಮಹಾ ಕುಂಭಮೇಳದಲ್ಲಿ ಭಾಗವಹಿಸಿ ಪವಿತ್ರ ಸ್ನಾನ ಮಾಡಲು ದೇಶ-ವಿದೇಶಗಳಿಂದ ಕೋಟ್ಯಂತರ ಭಕ್ತರು ಪ್ರಯಾಗ್‌ರಾಜ್‌ಗೆ ಆಗಮಿಸುತ್ತಿದ್ದಾರೆ. ಇಂದು ಮೌನಿ ಅಮಾವಾಸ್ಯೆ ಹಿನ್ನೆಲೆಯಲ್ಲಿ ಪವಿತ್ರ ಸ್ನಾನಕ್ಕಾಗಿ ಯಾತ್ರಿಕರ ಸಂಖ್ಯೆ ಹೆಚ್ಚಾಗಿತ್ತು. ಮಂಗಳವಾರ ರಾತ್ರಿಯಿಂದಲೇ ಕೋಟಿ ಕೋಟಿ ಸಂಖ್ಯೆಯಲ್ಲಿ ತ್ರಿವೇಣಿ ಸಂಗಮದ ಬಳಿ ಸೇರುತ್ತಿದ್ದರು. ಇಂದು ಮುಂಜಾನೆ ಸಮಯದಲ್ಲಿ ಪವಿತ್ರ ಸ್ನಾನಕ್ಕಾಗಿ ಭಕ್ತರ ಸಂಖ್ಯೆ ಹೆಚ್ಚಿದ ಕಾರಣ ನೂಕು-ನುಗ್ಗಲು ಉಂಟಾಗಿ ಕಾಲ್ತುಳಿತ ನಡೆದಿತ್ತು. ಜನರ ನಿಯಂತ್ರಣಕ್ಕೆ ಹಾಕಲಾಗಿದ್ದ ಬ್ಯಾರಿಕೇಟ್‌ ಮುರಿದು ಜನರು ಏಕಾಏಕಿ ನುಗ್ಗಿದ್ದಾರೆ. ಹೀಗಾಗಿ ಒಬ್ಬರ ಮೇಲೆ ಒಬ್ಬರು ಬಿದ್ದು ಕಾಲ್ತುಳಿತ ಸಂಭವಿಸಿದೆ.

ಸಹಾಯವಾಣಿ ಆರಂಭ

ಮಹಾಕುಂಭ ಮೇಳದಲ್ಲಿ ಕಾಲ್ತುಳಿತದಿಂದ ತಮ್ಮ ಪ್ರೀತಿಪಾತ್ರರನ್ನು ಹುಡುಕಲು ಸಾಧ್ಯವಾಗದವರಿಗಾಗಿ ಉತ್ತರ ಪ್ರದೇಶ ಸರ್ಕಾರ ಸಹಾಯವಾಣಿ ಆರಂಭಿಸಿದೆ. ಅಸಹಾಯಕರು 1920 ಸಂಖ್ಯೆಗೆ ಕರೆ ಮಾಡಿ ಅಗತ್ಯ ಮಾಹಿತಿ ಪಡೆದುಕೊಳ್ಳಬಹುದು.

ಬೆಳಗಾವಿಯ ನಾಲ್ವರು ಸಾವು

ಕಾಲ್ತುಳಿತದಲ್ಲಿ ಬೆಳಗಾವಿಯ ಕನಿಷ್ಠ ನಾಲ್ವರು ಭಕ್ತರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ರಾಜ್ಯ ಪೊಲೀಸರು ದೃಢಪಡಿಸಿದ್ದಾರೆ. ಬೆಳಗಾವಿಯ ವಡಗಾವಿ ನಿವಾಸಿ ಜ್ಯೋತಿ ಹತ್ತರವಾಠ (50) ಹಾಗೂ ಅವರ ಮಗಳು ಮೇಘಾ ಹತ್ತರವಾಠ (18), ಶೆಟ್ಟಿಗಲ್ಲಿಯ ಅರುಣ ಕೋಪರ್ಡೆ ಹಾಗೂ ಶಿವಾಜಿ ನಗರದ ನಿವಾಸಿ ಮಹಾದೇವಿ ದುರಂತದಲ್ಲಿ ಸಾವನ್ನಪ್ಪಿದ್ದಾರೆ. ಪ್ರಯಾಗ್‌ರಾಜ್‌ ಕಾಲ್ತುಳಿತದಲ್ಲಿ ಸಾವನ್ನಪ್ಪಿದ ಬೆಳಗಾವಿಯವರ ಸಂಖ್ಯೆ ನಾಲ್ಕಕ್ಕೇರಿದೆ.

ಬೆಳಗಾವಿಯ ನಾಲ್ವರು ಸಾವನ್ನಪ್ಪಿರುವ ಬಗ್ಗೆ ಜಿಲ್ಲಾಧಿಕಾರಿ ಮೊಹಮ್ಮದ್ ರೋಶನ್ ಮಾಹಿತಿ ನೀಡಿದ್ದಾರೆ. ಮೃತದೇಹಗಳನ್ನು ರಾಜ್ಯಕ್ಕೆ ತರಿಸಲು ಪ್ರಯಾಗ್‌ರಾಜ್‌ಗೆ ಪ್ರಯಾಣಿಸಲು ಪೊಲೀಸ್ ಅಧಿಕಾರಿಯ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಲಾಗಿದೆ ಎಂದು ಸುದ್ದಿಸಂಸ್ಥೆ ಎಎನ್‌ಐ ವರದಿ ಮಾಡಿದೆ.

ದುರ್ಘಟನೆ ಕುರಿತು ಪ್ರಧಾನಿ ನರೇಂದ್ರ ಮೋದಿ ಪ್ರತಿಕ್ರಿಯೆ ನೀಡಿದ್ದು, ಘಟನೆಯನ್ನು “ಅತ್ಯಂತ ದುಃಖಕರ” ಎಂದು ಹೇಳಿ ಸಂತಾಪ ಸೂಚಿಸಿದ್ದಾರೆ. ಘಟನೆ ಬಗ್ಗೆ ಮಾತನಾಡಿದ ಪ್ರತ್ಯಕ್ಷದರ್ಶಿ ಸರೋಜಿನಿ, “ಇದ್ದಕ್ಕಿದ್ದಂತೆ ಜನಸಂದಣಿಯಲ್ಲಿ ತಳ್ಳಾಟ ನಡೆಯಿತು. ನಾವು ಕೂಡಾ ಸಿಕ್ಕಿಹಾಕಿಕೊಂಡೆವು. ನಮ್ಮಲ್ಲಿ ಹಲವರು ಕೆಳಗೆ ಬಿದ್ದರು. ಜನರು ನಿಯಂತ್ರಣ ತಪ್ಪಿದರು. ರಕ್ಷಿಸಲು ಯಾವುದೇ ಅವಕಾಶವಿರಲಿಲ್ಲ. ಎಲ್ಲಾ ಕಡೆಯಿಂದಲೂ ತಳ್ಳಾಟ ನಡೆಯುತ್ತಿತ್ತು,” ಎಂದು ಅವರು ಹೇಳಿದರು.

ಮಹಾ ಕುಂಭಮೇಳದಲ್ಲಿ ಕಾಲ್ತುಳಿತ ನಡೆದ ಬಳಿಕ ಮಾತನಾಡಿದ ಯೋಗ ಗುರು ಬಾಬಾ ರಾಮದೇವ್, ಜನರು ಹತ್ತಿರದ ಘಾಟ್‌ಗೆ ಹೋಗಿ ಅಮೃತ ಸ್ನಾನ ಮಾಡುವಂತೆ ಒತ್ತಾಯಿಸಿದ್ದಾರೆ. ಸಂಗಮದಿಂದ ನೀರಿನ ಹರಿವು ಪ್ರಯಾಗ್‌ರಾಜ್‌ನ ಪ್ರತಿಯೊಂದು ಘಾಟ್‌ಗೆ ತಲುಪುತ್ತದೆ ಎಂದು ಅವರು ಸಲಹೆ ನೀಡಿದ್ದಾರೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.