ಅಯೋಧ್ಯೆಯಲ್ಲಿ ಹೊಸ ಸವಾಲು; ರಾಮಮಂದಿರ ಪ್ರವೇಶದ್ವಾರದಲ್ಲಿ ಲಕ್ಷ ಲಕ್ಷ ಚಪ್ಪಲಿಗಳ ರಾಶಿ, ವಿಲೇವಾರಿಗೆ ಜೆಸಿಬಿ ಬಳಕೆ
ಅಯೋಧ್ಯೆ ರಾಮಮಂದಿರಕ್ಕೆ ಬರುವ ಭಕ್ತರು ದೇವಾಲಯದ ಪ್ರವೇಶ ದ್ವಾರಗಳ ಬಳಿ ಚಪ್ಪಲಿ, ಶೂಗಳನ್ನು ಬಿಟ್ಟುಹೋಗುತ್ತಿದ್ದಾರೆ. ಹೀಗಾಗಿ ನಿತ್ಯ ಲಕ್ಷಾಂತರ ಪಾದರಕ್ಷೆಗಳು ರಾಶಿಬೀಳುತ್ತಿವೆ. ಬೇರೆ ದಾರಿ ಇಲ್ಲದೆ, ಪುರಸಭೆಯು ಜೆಸಿಬಿ ಬಳಸಿ ಚಪ್ಪಲಿಗಳ ರಾಶಿಗಳನ್ನು ವಿಲೇವಾರಿ ಮಾಡುತ್ತಿದೆ. ಇದಕ್ಕೆ ಕಾರಣ ಏನು ಎಂಬ ವಿವರ ಸುದ್ದಿಯಲ್ಲಿದೆ.

ಶ್ರೀರಾಮನ ಪುಣ್ಯಭೂಮಿ, ರಾಮಮಂದಿರ ಇರುವ ಅಯೋಧ್ಯೆಯಲ್ಲಿ ಇದೀಗ ಹೊಸ ಸವಾಲು ಎದುರಾಗಿದೆ. ಅಯೋಧ್ಯೆ ಪುರಸಭೆಯು ಕಳೆದ ಒಂದು ತಿಂಗಳಿಗೂ ಹೆಚ್ಚು ಸಮಯದಿಂದ ಸಂದಿಗ್ಧತೆಗೆ ಸಿಲುಕಿಕೊಂಡಿದೆ. ರಾಮ ಮಂದಿರಕ್ಕೆ ದಿನನಿತ್ಯ ಲಕ್ಷಾಂತರ ಭಕ್ತರು ಬರುತ್ತಿದ್ದು, ಹಲವರು ಪಾದರಕ್ಷೆಗಳನ್ನು ಅಲ್ಲೇ ಬಿಟ್ಟು ಹೋಗುತ್ತಿದ್ದಾರೆ. ಹೀಗಾಗಿ ಪ್ರವೇಶ ದ್ವಾರದ ಬಳಿ ಉಳಿದ ಪಾದರಕ್ಷೆಗಳ ಬೃಹತ್ ರಾಶಿಯನ್ನು ವಿಲೇವಾರಿ ಮಾಡುವುದು ಸವಾಲಾಗಿ ಪರಿಣಿಸಿದೆ.
ಪ್ರಯಾಗ್‌ರಾಜ್‌ನಲ್ಲಿ ಮಹಾ ಕುಂಭಮೇಳ ಆರಂಭವಾದ ನಂತರ ಉತ್ತರ ಪ್ರದೇಶಕ್ಕೆ ಪ್ರವಾಸಿಗರು ಹೆಚ್ಚು ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಹೀಗಾಗಿ ದೇವಾಲಯದಲ್ಲಿ ಜನಸಂದಣಿಯ ನಿರ್ವಹಣೆಗೆ ಸಮಸ್ಯೆಯಾಗುತ್ತಿದೆ. ದಿನದಿಂದ ದಿನಕ್ಕೆ ಪ್ರವಾಸಿಗರ ಆಗಮನ ಹೆಚ್ಚುತ್ತಿರುವುದು ಪಾದರಕ್ಷೆಗಳ ಸಮಸ್ಯೆಗೆ ಕಾರಣವಾಗಿದೆ.
ರಾಮಮಂದಿರಕ್ಕೆ ಬರುವ ಭಕ್ತರು ದೇವಾಲಯದ ಪ್ರವೇಶ ದ್ವಾರಗಳ ಬಳಿ ಚಪ್ಪಲಿ, ಶೂಗಳನ್ನು ಬಿಟ್ಟುಹೋಗುತ್ತಿದ್ದಾರೆ. ಹೀಗಾಗಿ ನಿತ್ಯ ಲಕ್ಷಾಂತರ ಪಾದರಕ್ಷೆಗಳು ರಾಶಿಬೀಳುತ್ತಿವೆ. ಬೇರೆ ದಾರಿ ಇಲ್ಲದೆ, ಪುರಸಭೆಯು ಜೆಸಿಬಿ ಬಳಸಿ ಚಪ್ಪಲಿಗಳ ರಾಶಿಗಳನ್ನು ವಿಲೇವಾರಿ ಮಾಡುತ್ತಿದೆ. ಇದಕ್ಕೂ ಹೆಚ್ಚಿನ ಸಮಯ ಬೇಕಾಗುತ್ತಿದೆ. ಜನರು ಬಿಟ್ಟು ಹೋದ ಚಪ್ಪಲಿ ಮತ್ತು ಬೂಟುಗಳನ್ನು ಸಂಗ್ರಹಿಸಿ ಅದನ್ನು ಟ್ರಾಲಿಗಳಲ್ಲಿ ತುಂಬಿಸಿ, ಸುಮಾರು 4ರಿಂದ 5 ಕಿ.ಮೀ ದೂರದಲ್ಲಿ ಕಸ ಹಾಕುವ ಸ್ಥಳಕ್ಕೆ ಸಾಗಿಸಲಾಗುತ್ತದೆ ಎಂದು ಪುರಸಭೆಯ ಅಧಿಕಾರಿಗಳು ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ.
ಕಳೆದ 30 ದಿನಗಳಿಂದ ವ್ಯವಸ್ಥೆಗಳಲ್ಲಿ ಬದಲಾವಣೆ
ಕುಂಭಮೇಳದ ಬಳಿಕ ಈ ಸಮಸ್ಯೆ ಎದುರಾಗಿದೆ. “ಅನಿರೀಕ್ಷಿತ ಜನಸಂದಣಿಯಿಂದಾಗಿ, ಯಾವುದೇ ಅವ್ಯವಸ್ಥೆಯಿಲ್ಲದೆ ಸುಲಭವಾಗಿ ದರ್ಶನ ಪಡೆಯುವಂತಾಗಲು ಕಳೆದ 30 ದಿನಗಳಿಂದ ವ್ಯವಸ್ಥೆಗಳಲ್ಲಿ ಬದಲಾವಣೆಗಳನ್ನು ಮಾಡಲಾಗಿದೆ” ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಸದಸ್ಯ ಅನಿಲ್ ಮಿಶ್ರಾ ಪಿಟಿಐಗೆ ತಿಳಿಸಿದ್ದಾರೆ.
ಸಮಸ್ಯೆಗೆ ಕಾರಣವೇನು?
ಪಾದರಕ್ಷೆಗಳ ರಾಶಿ ಬೀಳಲು ಕಾರಣವೂ ಇದೆ. ರಾಮಮಂದಿರಕ್ಕೆ ಬರುವವರು ರಾಮಪಥದಲ್ಲಿರುವ ದೇವಾಲಯದ 1ನೇ ದ್ವಾರದಲ್ಲಿ ಪಾದರಕ್ಷೆಗಳನ್ನು ಇಡಬೇಕಾಗುತ್ತದೆ. ನಂತರ ದೇವಾಲಯದ ಸುತ್ತಲೂ ಸುಮಾರು ಅರ್ಧ ಕಿಲೋಮೀಟರ್ ವೃತ್ತಾಕಾರದ ಮಾರ್ಗವನ್ನು ಅನುಸರಿಸಿ ಸಾಗುತ್ತಾರೆ. ಆದರೆ, 3ನೇ ದ್ವಾರ ಅಥವಾ ಇತರ ದ್ವಾರಗಳ ಮೂಲಕ ಮಂದಿರದಿಂದ ನಿರ್ಗಮಿಸಬೇಕಾಗುತ್ತದೆ. ಹೀಗಾಗಿ ಚಪ್ಪಲಿಯನ್ನು ಮತ್ತೆ ಹಾಕಿಕೊಳ್ಳಲು 5-6 ಕಿ.ಮೀ. ಮತ್ತೆ ನಡೆದು ಮೊದಲ ದ್ವಾರದ ಬಳಿ ಬರಬೇಕಾಗುತ್ತದೆ. ಹೆಚ್ಚಿನ ಜನರು ಚಪ್ಪಲಿಗಾಗಿ ಅಷ್ಟು ದೂರ ನಡೆಯಲು ಸಿದ್ಧರಿರುವುದಿಲ್ಲ. ಹೀಗಾಗಿ ಪಾದರಕ್ಷೆಗಳನ್ನು ಅಲ್ಲೇ ಬಿಟ್ಟು ಬರಿಗಾಲಿನಲ್ಲಿ ಹೋಗುತ್ತಿದ್ದಾರೆ.
ಈ ಹಿಂದೆ ಒಂದೇ ಗೇಟ್‌ನಲ್ಲಿ ಪ್ರವೇಶ ಮತ್ತು ನಿರ್ಗಮನಕ್ಕೆ ವ್ಯವಸ್ಥೆ ಇತ್ತು. ಈಗ ಪ್ರವೇಶಕ್ಕೆ ಒಂದು ದ್ವಾರ, ನಿರ್ಗಮನಕ್ಕೆ ಒಂದು ದ್ವಾರದ ವ್ಯವಸ್ಥೆ ಇರುವುದು ದೊಡ್ಡ ಗೊಂದಲಕ್ಕೆ ಕಾರಣ. ಪರಿಣಾಮವಾಗಿ ದೇವಾಲಯದ ದ್ವಾರಗಳಲ್ಲಿ ಕೈಬಿಟ್ಟ ಪಾದರಕ್ಷೆಗಳು ಬೆಟ್ಟದಂಥಾ ರಾಶಿಯಾಗಿದೆ. ಹೀಗಾಗಿ ವಿಲೇವಾರಿಯ ಸಮಸ್ಯೆ ಎದುರಾಗಿದೆ.


