Kannada News  /  Nation And-world  /  Uttar Pradesh Crime News Gangster Sanjeev Jeeva Shot Outside Lucknow Court Attacker Dressed As Lawyer Mgb

UP Crime: ಉತ್ತರ ಪ್ರದೇಶದ ಕೋರ್ಟ್​ನಲ್ಲೇ ಗ್ಯಾಂಗ್​ಸ್ಟರ್​ ಸಂಜೀವ್ ಜೀವಾ ಮೇಲೆ ಗುಂಡಿನ ದಾಳಿ; ಲಾಯರ್​ ವೇಷ ಧರಿಸಿ ಬಂದಿದ್ದ ದುಷ್ಕರ್ಮಿ

ಗ್ಯಾಂಗ್​ಸ್ಟರ್​ ಸಂಜೀವ್ ಜೀವಾ (ಎಡಚಿತ್ರ)
ಗ್ಯಾಂಗ್​ಸ್ಟರ್​ ಸಂಜೀವ್ ಜೀವಾ (ಎಡಚಿತ್ರ)
Meghana B • HT Kannada
Jun 07, 2023 05:16 PM IST

Gangster Sanjeev Jeeva: ಗುಂಡಿನ ದಾಳಿಯಿಂದ ಸಂಜೀವ್ ಜೀವಾ ಸ್ಥಳದಲ್ಲೇ ಕುಸಿದು ಬಿದ್ದಿದ್ದು, ಘಟನೆಯಲ್ಲಿ ಓರ್ವ ಪೊಲೀಸ್ ಅಧಿಕಾರಿ ಕೂಡ ಗಾಯಗೊಂಡಿದ್ದಾರೆ. ಅವರನ್ನು ಲಖನೌ ಸಿವಿಲ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಲಾಯರ್​ ವೇಷದಲ್ಲಿ ಕೋರ್ಟ್​ ಆವರಣ ಪ್ರವೇಶಿಸಿದ್ದ ದುಷ್ಕರ್ಮಿ ದರೋಡೆಕೋರ ಸಂಜೀವ್ ಜೀವಾ ಮೇಲೆ ಗುಂಡು ಹಾರಿಸಿದ್ದಾನೆ.

ಲಖನೌ (ಉತ್ತರ ಪ್ರದೇಶ): ಗ್ಯಾಂಗ್‌ಸ್ಟರ್ ಸಂಜೀವ್ ಜೀವಾ (Gangster Sanjeev Jeeva) ಮೇಲೆ ಉತ್ತರ ಪ್ರದೇಶದ ಲಖನೌ ನ್ಯಾಯಾಲಯದ ಹೊರಗಡೆ ಗುಂಡಿನ ದಾಳಿ ನಡೆದಿದೆ.

ಟ್ರೆಂಡಿಂಗ್​ ಸುದ್ದಿ

ಗುಂಡಿನ ದಾಳಿಯಿಂದ ಜೀವಾ ಸ್ಥಳದಲ್ಲೇ ಕುಸಿದು ಬಿದ್ದಿದ್ದು, ಘಟನೆಯಲ್ಲಿ ಓರ್ವ ಪೊಲೀಸ್ ಅಧಿಕಾರಿ ಕೂಡ ಗಾಯಗೊಂಡಿದ್ದಾರೆ. ಅವರನ್ನು ಲಖನೌ ಸಿವಿಲ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಲಾಯರ್​ ವೇಷದಲ್ಲಿ ಕೋರ್ಟ್​ ಆವರಣ ಪ್ರವೇಶಿಸಿದ್ದ ದುಷ್ಕರ್ಮಿ ದರೋಡೆಕೋರ ಸಂಜೀವ್ ಜೀವಾ ಮೇಲೆ ಗುಂಡು ಹಾರಿಸಿದ್ದಾನೆ.

ಬಿಜೆಪಿ ನಾಯಕ ಬ್ರಹ್ಮ ದತ್ ದ್ವಿವೇದಿ ಹತ್ಯೆ ಪ್ರಕರಣದಲ್ಲಿ (Brahm Dutt Dwivedi murder case) ಸಂಜೀವ್ ಜೀವಾ ಆರೋಪಿಯಾಗಿದ್ದು, ವಿಚಾರಣೆಗಾಗಿ ಇಂದು ( ಜೂನ್​ 7, ಬುಧವಾರ) ನ್ಯಾಯಾಲಯಕ್ಕೆ ಕರೆತರಲಾಗಿತ್ತು.

ಘಟನೆಯ ಮಾಹಿತಿ ತಿಳಿದ ಕೋಡಲೇ ಡಿಸಿಪಿ ಪಶ್ಚಿಮ ಮತ್ತು ಡಿಸಿಪಿ ಸೆಂಟ್ರಲ್ ನ್ಯಾಯಾಲಯವನ್ನು ತಲುಪಿದ್ದಾರೆ ಎಂದು ಸಹಾಯಕ ಪೊಲೀಸ್ ಕಮಿಷನರ್ ಸುನೀಲ್ ಕುಮಾರ್ ಮಿಶ್ರಾ ತಿಳಿಸಿದ್ದಾರೆ.

"ನನ್ನ ಬಳಿ ಈ ಬಗ್ಗೆ ಮಾಹಿತಿ ಇಲ್ಲ ಆದರೆ, ಅಂತಹ ಕೊಲೆಗಳಲ್ಲಿ ಯಾರಾದರೂ ಭಾಗಿಯಾಗಿದ್ದರೆ, ಪೊಲೀಸರು ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುತ್ತಾರೆ, ಅವರನ್ನು ಬಿಡುವುದಿಲ್ಲ" ಎಂದು ಉತ್ತರ ಪ್ರದೇಶ ಉಪ ಮುಖ್ಯಮಂತ್ರಿ ಕೆಪಿ ಮೌರ್ಯ ಹೇಳಿದ್ದಾರೆ.

ಘಟನೆಯನ್ನು ಖಂಡಿಸಿರುವ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, "ಇದು ಪ್ರಜಾಪ್ರಭುತ್ವವೇ? ಯಾರು ಕೊಲ್ಲಲ್ಪಡುತ್ತಾರೆ ಎಂಬುದು ಪ್ರಶ್ನೆಯಲ್ಲ, ಆದರೆ ಭದ್ರತೆಯು ಹೆಚ್ಚು ಇರುವಲ್ಲಿಯೂ ಒಬ್ಬ ವ್ಯಕ್ತಿಯನ್ನು ಕೊಲ್ಲಲಾಗುತ್ತದೆ ಎಂದರೆ ಯುಪಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹೇಗಿದೆ ಎಂಬುದು ಪ್ರಶ್ನೆ" ಎಂದು ಹೇಳಿದ್ದಾರೆ.

ಏಪ್ರಿಲ್​ 15 ರಂದು ಗ್ಯಾಂಗ್​ಸ್ಟರ್​ ಅತೀಕ್​ ಅಹ್ಮದ್​ ಹತ್ಯೆ

ಈ ವರ್ಷ ಫೆಬ್ರವರಿ 24 ರಂದು ಉತ್ತರ ಪ್ರದೇಶದಲ್ಲಿ ವಕೀಲ ಉಮೇಶ್ ಪಾಲ್ ಮತ್ತು ಇಬ್ಬರು ಪೊಲೀಸರ ಹತ್ಯೆಯ ನಡೆದಿತ್ತು. ಆ ಘಟನೆ ನಡೆದ 50 ದಿನಗಳಲ್ಲಿ ದರೋಡೆಕೋರ-ರಾಜಕಾರಣಿ ಅತೀಕ್ ಅಹ್ಮದ್, ಅವರ ಪುತ್ರ, ಅವರ ಸಹೋದರ ಸೇರಿದಂತೆ ಆರು ಆರೋಪಿಗಳು ಹತ್ಯೆಯಾಗಿದ್ದರು. ಏಪ್ರಿಲ್ 13 ರಂದು ಡಿವೈಎಸ್ಪಿ ನಾವೇಂದು ಮತ್ತು ಡಿವೈಎಸ್ಪಿ ವಿಮಲ್ ನೇತೃತ್ವದಲ್ಲಿ ಉತ್ತರ ಪ್ರದೇಶ ಪೊಲೀಸರ ವಿಶೇಷ ಕಾರ್ಯ ಪಡೆ (UP STF)ಝಾನ್ಸಿಯಲ್ಲಿ ನಡೆಸಿದ ಎನ್​ಕೌಂಟರ್​ನಲ್ಲಿ ಅತೀಕ್ ಅಹ್ಮದ್ ಪುತ್ರ ಅಸಾದ್​ ಅಹ್ಮದ್ ಮತ್ತು ಆತನ ಸಹಾಯಕ ಗುಲಾಮ್​ ಹತ್ಯೆಗೀಡಾಗಿದ್ದರು. ಇವರಿಬ್ಬರೂ ಉಮೇಶ್‌ ಪಾಲ್‌ ಹತ್ಯೆಯ ಶೂಟರ್​ಗಳಾಗಿದ್ದರು.

ಏಪ್ರಿಲ್​ 15 ರಂದು ಅತೀಕ್ ಅಹ್ಮದ್ ಮತ್ತು ಅವರ ಸಹೋದರ ಅಶ್ರಫ್ ಅಹ್ಮದ್ ಅವರನ್ನು, ಇಂದು ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ವೈದ್ಯಕೀಯ ತಪಾಸಣೆಗಾಗಿ ಕರೆದೊಯ್ಯುತ್ತಿದ್ದಾಗ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಲಾಗಿದೆ. ಪತ್ರಕರ್ತರ ಸೋಗಿನಲ್ಲಿ ಬಂದ ಹಂತಕರು, ಅಹ್ಮದ್‌ ಸಹೋದರರನ್ನು ಕೊಲೆ ಮಾಡಿದ್ದರು. ಈ ಘಟನೆ ಬಳಿಕ ಉತ್ತರ ಪ್ರದೇಶದ ಕಾನೂನು ಮತ್ತು ಸುವ್ಯವಸ್ಥೆ ಬಗ್ಗೆ ಸಾಕಷ್ಟು ಟೀಕೆಗಳು ಕೇಳಿಬಂದಿತ್ತು.