ಲೋಕಸಭಾ ಚುನಾವಣೆ ಫಲಿತಾಂಶ; ಉತ್ತರ ಪ್ರದೇಶದಲ್ಲಿ ಬಿಜೆಪಿ ಎಡವಿದ್ದು ಹೇಗೆ, ಯಾಕೆ, ಆಘಾತಕ್ಕೆ ಕಾರಣವಾದ 5 ಅಂಶಗಳಿವು
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಲೋಕಸಭಾ ಚುನಾವಣೆ ಫಲಿತಾಂಶ; ಉತ್ತರ ಪ್ರದೇಶದಲ್ಲಿ ಬಿಜೆಪಿ ಎಡವಿದ್ದು ಹೇಗೆ, ಯಾಕೆ, ಆಘಾತಕ್ಕೆ ಕಾರಣವಾದ 5 ಅಂಶಗಳಿವು

ಲೋಕಸಭಾ ಚುನಾವಣೆ ಫಲಿತಾಂಶ; ಉತ್ತರ ಪ್ರದೇಶದಲ್ಲಿ ಬಿಜೆಪಿ ಎಡವಿದ್ದು ಹೇಗೆ, ಯಾಕೆ, ಆಘಾತಕ್ಕೆ ಕಾರಣವಾದ 5 ಅಂಶಗಳಿವು

ಲೋಕಸಭಾ ಚುನಾವಣೆ 2024ರ ಫಲಿತಾಂಶ ಪ್ರಕಟವಾಗುತ್ತಿದ್ದು, ಇತ್ತೀಚಿನ ಟ್ರೆಂಡ್ ಪ್ರಕಾರ ಉತ್ತರ ಪ್ರದೇಶದ 80 ಸ್ಥಾನಗಳಲ್ಲಿ ಬಿಜೆಪಿ 25ಕ್ಕೂ ಹೆಚ್ಚು ಸ್ಥಾನಗಳನ್ನು ಕಳೆದುಕೊಂಡಿದೆ. ಉತ್ತರ ಪ್ರದೇಶದಲ್ಲಿ ಬಿಜೆಪಿ ಎಡವಿದ್ದು ಹೇಗೆ, ಯಾಕೆ, ಆಘಾತಕ್ಕೆ ಕಾರಣವಾದ 5 ಅಂಶಗಳಿವು.

ಲೋಕಸಭಾ ಚುನಾವಣೆ ಫಲಿತಾಂಶ; ಉತ್ತರ ಪ್ರದೇಶದಲ್ಲಿ ಬಿಜೆಪಿ ಎಡವಿದ್ದು ಹೇಗೆ, ಯಾಕೆ, ಆಘಾತಕ್ಕೆ ಕಾರಣವಾದ 5 ಅಂಶಗಳಿವು (ಸಾಂಕೇತಿಕ ಚಿತ್ರ)
ಲೋಕಸಭಾ ಚುನಾವಣೆ ಫಲಿತಾಂಶ; ಉತ್ತರ ಪ್ರದೇಶದಲ್ಲಿ ಬಿಜೆಪಿ ಎಡವಿದ್ದು ಹೇಗೆ, ಯಾಕೆ, ಆಘಾತಕ್ಕೆ ಕಾರಣವಾದ 5 ಅಂಶಗಳಿವು (ಸಾಂಕೇತಿಕ ಚಿತ್ರ)

ಲಖನೌ: ಲೋಕಸಭಾ ಚುನಾವಣೆ 2024ರ ಫಲಿತಾಂಶ ಪ್ರಕಟವಾಗುತ್ತಿದ್ದು ಇತ್ತೀಚಿನ ಟ್ರೆಂಡ್ ಪ್ರಕಾರ, ಎನ್‌ಡಿಎ ಮತ್ತು ಇಂಡಿಯಾ ಒಕ್ಕೂಟದ ನಡುವೆ ಜಿದ್ದಾಜಿದ್ದಿನ ಪೈಪೋಟಿ ಕಂಡುಬಂದಿದೆ. ಆದಾಗ್ಯೂ ಈ ಬಾರಿ ಬಿಜೆಪಿಗೆ ಕಳೆದ ಎರಡು ಅವಧಿಗೆ ಸಿಕ್ಕಂತೆ ಸರಳ ಬಹುಮತ ಇಲ್ಲ. ಅದು ಮರೀಚಿಕೆಯಾಗಿಬಿಟ್ಟಿದೆ.

ಮೂರನೇ ಅವಧಿಗೆ ಅಧಿಕಾರ ಚುಕ್ಕಾಣಿ ಭದ್ರಪಡಿಸಿಕೊಳ್ಳಲು ಬಯಸಿದ್ದ ಬಿಜೆಪಿಗೆ ಇದು ಅನಿರೀಕ್ಷಿತ ಆಘಾತ. ಬಹುತೇಕ ಉತ್ತರ ಪ್ರದೇಶದಲ್ಲೇ ಮತದಾರರು ಬಿಜೆಪಿಗೆ ದೊಡ್ಡ ಆಘಾತವನ್ನು ನೀಡಿದ್ದಾರೆ. ಉತ್ತರ ಪ್ರದೇಶದ 80 ಸ್ಥಾನಗಳ ಪೈಕಿ 2014ರ ಚುನಾವಣೆಯಲ್ಲಿ 71 ಸ್ಥಾನಗಳನ್ನು ಗೆದ್ದುಕೊಂಡಿದ್ದ ಬಿಜೆಪಿಗೆ 2019ರಲ್ಲಿ 62 ಸ್ಥಾನಗಳಲ್ಲಷ್ಟೇ ಗೆಲ್ಲುವುದು ಸಾಧ್ಯವಾಯಿತು. ಈ ಸಲ ಇದು 36 ಸ್ಥಾನಗಳಷ್ಟೇ ಸಿಗುವ ಸಾಧ್ಯತೆ ಕಂಡುಬಂದಿದೆ.

ಉತ್ತರ ಪ್ರದೇಶದಲ್ಲಿ ಮತದಾರರು ಆಘಾತ ನೀಡಿದ್ದು ಇದಕ್ಕೆ- 5 ಅಂಶಗಳು

1) ಹಳೆಯ ಅಭ್ಯರ್ಥಿಗಳನ್ನೆ ಪುನಃ ಕಣಕ್ಕೆ ಇಳಿಸಿದ್ದು ಮತದಾರರ ಅಸಮಾಧಾನಕ್ಕೆ ಕಾರಣವಾಗಿತ್ತು. ಸುಲ್ತಾನ್‌ಪುರದಲ್ಲಿ ಮೇನಕಾ ಗಾಂಧಿ, ಚಾಂದೌಲಿಯಲ್ಲ ಮಹೇಂದ್ರನಾಥ್ ಪಾಂಡೆ ಮುಂತಾದವರು ಕ್ಷೇತ್ರದಲ್ಲಿ ಕಾಣಿಸಿಕೊಂಡದ್ದು ವಿರಳ.

2) ಸಂಸತ್ ಕ್ಷೇತ್ರಗಳಲ್ಲಿ ಪ್ರದೇಶಾಭಿವೃದ್ಧಿ ಸರಿಯಾಗಿ ನಡೆದಿಲ್ಲ. ದೆಹಲಿಯಲ್ಲಿ ಈಶಾನ್ಯ ದೆಹಲಿ ಹೊರತು ಪಡಿಸಿ ಉಳಿದೆ ಅಭಿವೃದ್ಧಿ ಆಗಿಲ್ಲ. ಅದೇ ರೀತಿ ಉತ್ತರ ಪ್ರದೇಶದಲ್ಲೂ ಕೆಲವು ಪ್ರದೇಶ ಹೊರತು ಪಡಿಸಿ ಅಭಿವೃದ್ಧಿಗಳೇ ಆಗಿಲ್ಲ.

3) ಬಿಎಸ್‌ಪಿಯ ಮತ ಬ್ಯಾಂಕ್ ಪೂರ್ತಿಯಾಗಿ ಇಂಡಿಯಾ ಮೈತ್ರಿಕೂಟದ ಕಡೆಗೆ ಹೋಗಿದೆ. 2019ರ ಲೋಕಸಭಾ ಚುನಾವಣೆಯಲ್ಲ ಬಿಎಸ್‌ಪಿ ಶೇಕಡ 19ಕ್ಕಿಂತ ಹೆಚ್ಚು ಮತ ಗಳಿಸಿತ್ತು. ಈ ಬಾರಿ ಬಿಎಸ್‌ಪಿ ಚುನಾವಣೆಯಲ್ಲಿ ಯಾವುದೇ ಸ್ಥಾನಗಳಿಸಿಲ್ಲ. ಮತಗಳಿಕೆ ಶೇಕಡ 9ಕ್ಕೆ ಇಳಿದಿದೆ.

4) ಸಮಾಜವಾದಿ ಪಕ್ಷದ ಕಳೆದ ಚುನಾವಣೆಯಲ್ಲಿ ಶೇ.18ರಷ್ಟು ಮತಗಳನ್ನು ಪಡೆದಿದ್ದು, ಈ ಬಾರಿ ಶೇ.31ಕ್ಕೆ ಏರಿಕೆಯಾಗಿದೆ. ಈ ಬಾರಿ ಬಿಎಸ್ಪಿಯ ಮತಗಳು ಎಸ್ಪಿ ಖಾತೆಗೆ ಹೋಗಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ.

5) ಮತದಾರರು ತಮ್ಮ ಕೈಬಿಡರು ಎಂಬ ಅತಿಯಾದ ಆತ್ಮವಿಶ್ವಾಸದ ನಡೆ ಮತ್ತು ನುಡಿಗಳು ಬಿಜೆಪಿಗೆ ಮುಳುವಾಗಿದೆ ಎಂಬುದು ಕೆಲವು ವಿಶ್ಲೇಷಕರ ಅಭಿಪ್ರಾಯ.

ಪ್ರಧಾನಿ ಮೋದಿಯವರ ವಿಶ್ವಾಸದ “ಅಬ್‌ ಕೀ ಬಾರ್ 400 ಪಾರ್‌” ಘೋಷಣೆ

ಲೋಕಸಭೆ ಚುನಾವಣೆಯಲ್ಲಿ ಈ ಸಲ ಬಿಜೆಪಿ 370 ಸ್ಥಾನಗಳನ್ನು ಪಡೆಯಲಿದೆ. ಎನ್‌ಡಿಎ 400 ಸ್ಥಾನಗಳನ್ನು ಪಡೆಯಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಚುನಾವಣೆಗೂ ಮುನ್ನ ಪ್ರಚಾರದ ವೇಳೆ ಇದೇ ಉತ್ತರ ಪ್ರದೇಶದಲ್ಲಿ ಹೇಳಿದ್ದರು. ಜನವರಿ 22 ರಂದು ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣಪ್ರತಿಷ್ಠೆ ಮಾಡಿದ್ದರು. ಉತ್ತರ ಪ್ರದೇಶದಲ್ಲಿ ಮೂಲಸೌಕರ್ಯ ಒದಗಿಸಿದ ಬಗ್ಗೆ ಸಂತೃಪ್ತಿ ಇತ್ತು. ಹೀಗಾಗಿಯೇ ಪ್ರಧಾನಿ ಮೋದಿ ಅವರು ಅದೇ ವಿಶ್ವಾಸದಲ್ಲಿ “ಅಬ್‌ ಕೀ ಬಾರ್ 400 ಪಾರ್‌” ಘೋಷಣೆ ಮಾಡಿದ್ದರು.

ಆದರೆ, ಈಗ ಲೋಕಸಭಾ ಚುನಾವಣೆಯ ಫಲಿತಾಂಶಗಳು ಬರುತ್ತಿರುವುದು ಗಮನಿಸಿದರೆ, ಪ್ರಧಾನಿ ಮೋದಿ ಅವರ ವಿಶ್ವಾಸಕ್ಕೆ ವಿರುದ್ಧವಾದ ಚಿತ್ರಣ ಕಂಡುಬರುತ್ತಿದೆ. ಉತ್ತರ ಪ್ರದೇಶ ಮತ್ತು ರಾಜಸ್ಥಾನದಲ್ಲಿ ಬಿಜೆಪಿಗೆ ಬಹಳಷ್ಟ ನಷ್ಟ ಸಂಭವಿಸಿದೆ. ಇದನ್ನು ಅಲ್ಲಿನ ಸಟ್ಟಾ ಬಜಾರ್‌ಗಳು ಮೊದಲೇ ಬಿಂಬಿಸಿದ್ದವು. ಉತ್ತರ ಪ್ರದೇಶದ ಚುನಾವಣಾ ಫಲಿತಾಂಶ ಗಮನಿಸಿದರೆ, ಸ್ಮೃತಿ ಇರಾನಿ, ಅನುಪ್ರಿಯಾ ಪಟೇಲ್ ಮತ್ತು ಮಹೇಂದ್ರನಾಥ್ ಪಾಂಡೆ ಅವರಂತಹ ನಾಯಕರು ಸೋಲಿನ ಸುಳಿಗೆ ಸಿಲುಕಿದ್ದಾರೆ.

ಇದಲ್ಲದೆ, 2019 ರಲ್ಲಿ ಬಿಜೆಪಿ ಕ್ಲೀನ್ ಸ್ವೀಪ್ ಮಾಡಿದ ರಾಜಸ್ಥಾನದಲ್ಲಿ ಈ ಬಾರಿ 14 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಇಲ್ಲಿ ಕಾಂಗ್ರೆಸ್ 8 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಅಷ್ಟೇ ಅಲ್ಲ, ಬಂಗಾಳ ಮತ್ತು ಬಿಹಾರದಲ್ಲೂ ಬಿಜೆಪಿ ನಿರೀಕ್ಷೆಗಿಂತ ಕಡಿಮೆ ಸ್ಥಾನ ಕಂಡುಬಂದಿದೆ. ಉತ್ತರ ಪ್ರದೇಶ ಮತ್ತು ರಾಜಸ್ಥಾನದಂತಹ ರಾಜ್ಯಗಳಲ್ಲಿ ಬಿಜೆಪಿ ಸ್ಥಾನಗಳ ಕಡಿಮೆಯಾಗಿದ್ದು ಯಾಕೆ ಎಂಬ ಪ್ರಶ್ನೆ ಈಗ ಮುನ್ನೆಲೆಗೆ ಬಂದಿದೆ.

ಈ ಕುರಿತು ಚುನಾವಣಾ ವಿಶ್ಲೇಷಕರು '400 ಮೀರಿ' ಘೋಷಣೆ ಬಿಜೆಪಿಗೆ ಒಳ್ಳೆಯದಕ್ಕಿಂತ ಹೆಚ್ಚು ಹಾನಿ ಮಾಡಿದೆ ಎಂದು ನಂಬುತ್ತಾರೆ. ಈ ಘೋಷವಾಕ್ಯ ಅತಿಯಾದ ಆತ್ಮವಿಶ್ವಾಸದಿಂದ ಕೂಡಿದ್ದು, ಮತದಾರರನ್ನು ಸೆಳೆಯುವಲ್ಲಿ ವಿಫಲವಾಯಿತು ಎನ್ನುತ್ತಾರೆ.

👉🏻 ಲೋಕಸಭಾ ಚುನಾವಣೆ ಫಲಿತಾಂಶ: ಸ್ಪಷ್ಟ & ನಿಖರ ಮಾಹಿತಿಗೆ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.