Ram Mandir: ಅಯೋಧ್ಯೆ ರಾಮಮಂದಿರಕ್ಕೆ ತರಕಾರಿ ವ್ಯಾಪಾರಿಯಿಂದ ವಿಶೇಷ ಉಡುಗೊರೆ ; ಪೇಟೆಂಟ್​ ಪಡೆದ ವಿಶ್ವ ಗಡಿಯಾರವಿದು
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Ram Mandir: ಅಯೋಧ್ಯೆ ರಾಮಮಂದಿರಕ್ಕೆ ತರಕಾರಿ ವ್ಯಾಪಾರಿಯಿಂದ ವಿಶೇಷ ಉಡುಗೊರೆ ; ಪೇಟೆಂಟ್​ ಪಡೆದ ವಿಶ್ವ ಗಡಿಯಾರವಿದು

Ram Mandir: ಅಯೋಧ್ಯೆ ರಾಮಮಂದಿರಕ್ಕೆ ತರಕಾರಿ ವ್ಯಾಪಾರಿಯಿಂದ ವಿಶೇಷ ಉಡುಗೊರೆ ; ಪೇಟೆಂಟ್​ ಪಡೆದ ವಿಶ್ವ ಗಡಿಯಾರವಿದು

Uttar Pradhesh: ಅಯೋಧ್ಯೆ ರಾಮ ಮಂದಿರ ಲೋಕಾರ್ಪಣೆಗೆ ದಿನ ಸನ್ನಿಹಿತವಾಗುತ್ತಿದ್ದಂತೆಯೇ ಸಾಲು ಸಾಲು ಕಾಣಿಕೆಗಳು ಬಾಲ ರಾಮನಿಗೆ ಹರಿದು ಬರುತ್ತಿದೆ. ಉತ್ತರ ಪ್ರದೇಶದ ತರಕಾರಿ ವ್ಯಾಪಾರಿಯೊಬ್ಬರು ಇದೇ ಸಾಲಿಗೆ ಸೇರಿದ್ದು ರಾಮ ಮಂದಿರಕ್ಕೆ ವಿಶೇಷ ಉಡುಗೊರೆ ನೀಡಿದ್ದಾರೆ.

ಅಯೋಧ್ಯೆಯ ರಾಮಮಂದಿರಕ್ಕೆ ಪೇಟೆಂಟ್​ ಪಡೆದಿರುವ ವಿಶ್ವ ಗಡಿಯಾರ ಸಮರ್ಪಿಸಿದ ತರಕಾರಿ ವ್ಯಾಪಾರಿ ಅನಿಲ್​ ಕುಮಾರ್​ ಸಾಹು
ಅಯೋಧ್ಯೆಯ ರಾಮಮಂದಿರಕ್ಕೆ ಪೇಟೆಂಟ್​ ಪಡೆದಿರುವ ವಿಶ್ವ ಗಡಿಯಾರ ಸಮರ್ಪಿಸಿದ ತರಕಾರಿ ವ್ಯಾಪಾರಿ ಅನಿಲ್​ ಕುಮಾರ್​ ಸಾಹು (PC: ANI)

ಉತ್ತರ ಪ್ರದೇಶ: ಈ ಬಾರಿ ಹೊಸ ವರ್ಷ ಅದ್ಯಾವಾಗ ಬರುತ್ತೋ ಅಂತಾ ಕಾಯುತ್ತಿರುವ ರಾಷ್ಟ್ರಗಳ ಪಟ್ಟಿಯೇನಾದರೂ ಮಾಡಿದರೆ ಅದರಲ್ಲಿ ಮೊದಲ ಸ್ಥಾನ ಭಾರತಕ್ಕೆ ಸಿಗಬಹುದು. ಏಕೆಂದರೆ ಭಾರತದ ಹಿಂದೂಗಳು ನೂರಾರು ವರ್ಷಗಳ ಕನಸು ಮುಂದಿನ ವರ್ಷ ನನಸಾಗುತ್ತಿದೆ. ರಾಮನಗರಿ ಅಯೋಧ್ಯೆಯಲ್ಲಿ ಮುಂದಿನ ವರ್ಷ ಜನವರಿ 22ರಂದು ಬಾಲರಾಮ ಪ್ರತಿಷ್ಫಾಪನೆಗೊಳ್ಳಲಿದ್ದಾನೆ. ಉಡುಪಿ ಜಿಲ್ಲೆ ಕಾರ್ಕಳದಿಂದ ರಾಮನ ವಿಗ್ರಹ ಕೆತ್ತನೆಗೆ ಕಲ್ಲು ಕಳುಹಿಸಿಕೊಡಲಾಗಿದ್ದರೆ ಮೈಸೂರಿನ ಶಿಲ್ಪಿ ಬಾಲರಾಮನ ವಿಗ್ರಹ ಕೆತ್ತುವಿಕೆ ಕಾರ್ಯವನ್ನು ಪೂರ್ಣಗೊಳಿಸಿದ್ದಾರೆ.

ದೇಶದ ಮೂಲೆಮೂಲೆಗಳಿಂದ ಹರಿದು ಬರುತ್ತಿದೆ ಉಡುಗೊರೆ

ಅಯೋಧ್ಯೆಯಲ್ಲಿ ಶ್ರೀರಾಮನ ಪ್ರತಿಷ್ಠಾಪನೆ ಕಾರ್ಯದಲ್ಲಿ ಇಡೀ ದೇಶವೇ ಒಂದಾಗಿದೆ. ಹೈದರಾಬಾದ್​ನಲ್ಲಿ ರಾಮ ಮಂದಿರ ದ್ವಾರದ ನಿರ್ಮಾಣ ಕಾರ್ಯ ನಡೆಯುತ್ತಿದ್ದರೆ ಇತ್ತ ತಮಿಳುನಾಡಿನಿಂದ ರಾಮ ಮಂದಿರಕ್ಕೆ ಅಳವಡಿಸಲು 42 ಘಂಟೆಗಳನ್ನು ಕಳುಹಿಸಿಕೊಡಲಾಗಿದೆ. ಕರ್ನಾಟಕದ ಬೆಂಗಳೂರಿನ ಉದ್ಯಮಿ ರಾಜೇಂದ್ರ ನಾಯ್ಡು ತಮಿಳುನಾಡಿನಲ್ಲಿ ಘಂಟೆಗಳನ್ನು ತಯಾರಿಸಿ ಅಯೋಧ್ಯೆಗೆ ಕಳುಹಿಸಿಕೊಟ್ಟಿದ್ದಾರೆ. ಇದೆಲ್ಲದರ ಜೊತೆಯಲ್ಲಿ ಸಾಮಾನ್ಯ ಜನತೆ ಕೂಡಾ ರಾಮಲಲ್ಲಾನ ಪ್ರತಿಷ್ಠಾಪನೆ ಕಾರ್ಯಕ್ಕೆ ತಮ್ಮದೇ ಆದ ರೀತಿಯಲ್ಲಿ ಬೆಂಬಲ ಸೂಚಿಸುತ್ತಿದ್ದಾರೆ. ಕೆಲವು ದಿನಗಳ ಹಿಂದೆಯಷ್ಟೇ ಮಹಾರಾಷ್ಟ್ರದ ಮುಂಬೈನ ಮುಸ್ಲಿಂ ಯುವತಿ ಶಬನಂ ಶೇಖ್​ ರಾಮಮಂದಿರ ಲೋಕಾರ್ಪಣೆ ಕಾರ್ಯಕ್ರಮವನ್ನು ಕಣ್ತುಂಬಿಕೊಳ್ಳಲು ಪಾದಯಾತ್ರೆ ಹೊರಟಿದ್ದಾರೆ ಎಂಬ ಸುದ್ದಿ ವೈರಲ್​ ಆಗಿತ್ತು.

ಇದೆಲ್ಲದರ ನಡುವೆ ಇದೀಗ ಉತ್ತರ ಪ್ರದೇಶದ ತರಕಾರಿ ವ್ಯಾಪಾರಸ್ಥರೊಬ್ಬರು ರಾಮಮಂದಿರಕ್ಕೆ ಅಪರೂಪವಾದ ಕಾಣಿಕೆಗಳನ್ನು ಸಲ್ಲಿಸುವ ಮೂಲಕ ಸುದ್ದಿಯಲ್ಲಿದ್ದಾರೆ. ಲಖನೌದ ತರಕಾರಿ ವ್ಯಾಪಾರಿ ಅನಿಲ್​ ಕುಮಾರ್​ ಸಾಹು, ಅಯೋಧ್ಯೆಯ ರಾಮಮಂದಿರಕ್ಕೆ ಪೇಟೆಂಟ್​ ಪಡೆದಿರುವ ವಿಶ್ವ ಗಡಿಯಾರವನ್ನು ಕಾಣಿಕೆ ರೂಪದಲ್ಲಿ ನೀಡಿದ್ದಾರೆ. ರಾಮ ಮಂದಿರದ ಅಧಿಕಾರಿಗಳಿಗೆ ಇದನ್ನು ಹಸ್ತಾಂತರಿಸಲಾಗಿದ್ದು ರಾಮಮಂದಿರದ ಆವರಣದಲ್ಲಿ ಅಳವಡಿಸುವ ಸಾಧ್ಯತೆಯಿದೆ ಎನ್ನಲಾಗಿದೆ.

ಜನವರಿ 22 ರಂದು ಲೋಕಾರ್ಪಣೆ

ತರಕಾರಿ ವ್ಯಾಪಾರಿ ಅನಿಲ್​ ಕುಮಾರ್​ ಸಾಹು ಅಯೋಧ್ಯಾ ರಾಮಮಂದಿರ ಟ್ರಸ್ಟ್​ ಪ್ರಧಾನ ಕಾರ್ಯದರ್ಶಿ ಚಂಪತ್​ ರೈ ಅವರಿಗೆ ವಿಶ್ವ ಗಡಿಯಾರವನ್ನು ಹಸ್ತಾಂತರಿಸಿದ್ದಾರೆ. 22 ಜನವರಿ 2024ರಂದು ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಲೋಕಾರ್ಪಣೆ ಕಾರ್ಯ ನಡೆಯಲಿದೆ. ಈಗಾಗಲೇ ಭಕ್ತಾದಿಗಳಿಗೆ ಅವಶ್ಯಕವಾಗುವ ಎಲ್ಲಾ ವ್ಯವಸ್ಥೆಗಳನ್ನು ಅಯೋಧ್ಯೆಯಲ್ಲಿ ಮಾಡಲಾಗುತ್ತಿದೆ. ದೇಶಾದ್ಯಂತ ರಾಮಮಂದಿರದ ಅಕ್ಷತೆಯನ್ನು ಹಂಚುವ ಕಾರ್ಯ ಕೂಡಾ ಭರದಿಂದ ಸಾಗಿದೆ. ಇದೇ ಶನಿವಾರ ಅಯೋಧ್ಯೆಯಲ್ಲಿ ವಿಮಾನ ನಿಲ್ದಾಣ ಕೂಡಾ ಲೋಕಾರ್ಪಣೆಗೊಳ್ಳಲಿದೆ. ಪ್ರಧಾನಿ ಶ್ರೀ ನರೇಂದ್ರ ಮೋದಿ ಅಯೋಧ್ಯೆಯಲ್ಲಿ ರಾಮಮಂದಿರ ಲೋಕಾರ್ಪಣೆ ಕಾರ್ಯ ನಡೆಸಲಿದ್ದಾರೆ. ಅಯೋಧ್ಯೆ ರಾಮಮಂದಿರ ಉದ್ಘಾಟನಾ ಕಾರ್ಯಕ್ಕೆ ವಿಪಕ್ಷಗಳು ಸೇರಿದಂತೆ ಎಲ್ಲರಿಗೂ ಆಹ್ವಾನ ನೀಡಲಾಗಿದೆ. ಕರ್ನಾಟಕದಿಂದ ರಾಕಿಂಗ್ ಸ್ಟಾರ್ ಯಶ್​ ಹಾಗೂ ಡಿವೈನ್ ಸ್ಟಾರ್​ ರಿಷಬ್​ ಶೆಟ್ಟಿಗೂ ಆಹ್ವಾನ ನೀಡಲಾಗಿದೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.