Vehicle scrappage policy 2022: 15 ವರ್ಷಕ್ಕಿಂತ ಹಳೆಯ ಸರ್ಕಾರಿ ವಾಹನ ಸ್ಕ್ರ್ಯಾಪ್‌ಗೆ ಹಾಕಿ; ಹಣಕಾಸು ಸಚಿವಾಲಯದ ನಿರ್ದೇಶನ
Vehicle scrappage policy 2022: ಅಂತಹ ವಾಹನಗಳನ್ನು ಸ್ಕ್ರ್ಯಾಪ್ ಮಾಡುವುದು ನೋಂದಾಯಿತ ವಾಹನ ಸ್ಕ್ರ್ಯಾಪಿಂಗ್ ಸೌಲಭ್ಯಗಳಲ್ಲಿ ಮಾತ್ರ ಇರಬೇಕು. ಗುಜರಿಗೆ ಹಾಕಿದ ಅಥವಾ 15 ವರ್ಷ ವಯಸ್ಸಿನ ವಾಹನಗಳನ್ನು ಹರಾಜು ಮಾಡಲಾಗುವುದಿಲ್ಲ ಎಂದು ಅದು ಹೇಳಿದೆ.
ಎಲ್ಲ ಸಚಿವಾಲಯಗಳು ಮತ್ತು ಇಲಾಖೆಗಳಲ್ಲಿರುವ 15 ವರ್ಷಕ್ಕಿಂತ ಹಳೆಯ ಎಲ್ಲ ವಾಹನಗಳನ್ನು ಕೂಡಲೆ ಸ್ಕ್ರ್ಯಾಪ್‌ಗೆ ಹಾಕಬೇಕು ಎಂದು ಕೇಂದ್ರ ಹಣಕಾಸು ಸಚಿವಾಲಯ ನಿರ್ದೇಶನ ಹೊರಡಿಸಿದೆ.
ಹಣಕಾಸು ಸಚಿವಾಲಯದ ಅಧೀನದಲ್ಲಿರುವ ವೆಚ್ಚ ಇಲಾಖೆಯು ಕಚೇರಿ ಮೆಮೋರಂಡಂನಲ್ಲಿ ಈ ವಿಚಾರ ಹೇಳಿದ್ದು, ನೀತಿ ಆಯೋಗ ಮತ್ತು ಸಾರಿಗೆ ಸಚಿವಾಲಯದ ಜತೆಗೆ ಸಮಾಲೋಚನೆ ಮಾಡಿದ ಬಳಿಕ ವಾಹನಗಳನ್ನು ಸ್ಕ್ರ್ಯಾಪ್‌ಗೆ ಹಾಕುವ ತೀರ್ಮಾನ ತೆಗೆದುಕೊಳ್ಳಲಾಗಿದೆ. ಮಾಲಿನ್ಯ ತಗ್ಗಿಸುವುದು, ಪ್ರಯಾಣಿಕ ಸುರಕ್ಷತೆ ಮತ್ತು ಇಂಧನ ಕಾರ್ಯಕ್ಷಮತೆ ಮುಂತಾದ ವಿಶಾಲ ಉದ್ದೇಶಗಳನ್ನು ಗಮನದಲ್ಲಿಟ್ಟುಕೊಂಡು ಈ ಕ್ರಮ ಜರುಗಿಸಲಾಗಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.
ಕಚೇರಿ ಜ್ಞಾಪಕ ಪತ್ರದಲ್ಲೇನಿದೆ?
ನೀತಿ ಆಯೋಗ ಮತ್ತು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಜತೆಗೆ ಸಮಾಲೋಚನೆ ನಡೆಸಿದ ಬಳಿಕ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ಮಾಲಿನ್ಯವನ್ನು ಕಡಿಮೆ ಮಾಡಲು ಪರಿಸರ ವ್ಯವಸ್ಥೆಯನ್ನು ರಚಿಸುವ ಸರ್ಕಾರದ ವಿಶಾಲ ಉದ್ದೇಶಗಳನ್ನು ಪರಿಗಣಿಸಿ, ಪ್ರಯಾಣಿಕರ ಮತ್ತು ವಾಹನ ಸುರಕ್ಷತೆಯನ್ನು ಸುಧಾರಿಸಲು, ಎಲ್ ದಕ್ಷತೆಯನ್ನು ಸುಧಾರಿಸಲು, ವಾಹನ ಮಾಲೀಕರಿಗೆ ನಿರ್ವಹಣಾ ವೆಚ್ಚವನ್ನು ಕಡಿಮೆ ಮಾಡಲು, ವಾಹನಗಳನ್ನು ಗುಜರಿಗೆ ಹಾಕುವ ಕುರಿತ ಅಸ್ತಿತ್ವದಲ್ಲಿರುವ ನಿಬಂಧನೆಗಳನ್ನು ಮರುಪರಿಶೀಲಿಸಿದ ಬಳಿಕ ಕ್ರಮಕ್ಕೆ ನಿರ್ದೇಶನ ನೀಡಲಾಗಿದೆ ಎಂದು ಜ್ಞಾಪಕ ಪತ್ರದ ವಿವರಣೆ ತಿಳಿಸಿದೆ.
“ಇನ್ನು ಮುಂದೆ ಭಾರತ ಸರ್ಕಾರದ ಸಚಿವಾಲಯಗಳು/ಇಲಾಖೆಗಳಿಗೆ ಸೇರಿದ ಎಲ್ಲ ನಿರುಪಯೋಗಿ ವಾಹನಗಳನ್ನು (ಅಕಾಲಿಕವಾಗಿ ಮೂಲೆಗುಂಪು ಮಾಡಿದ ವಾಹನಗಳು ಸೇರಿ) ಮಾತ್ರ ಸ್ಕ್ರ್ಯಾಪ್ ಮಾಡಲಾಗುವುದು ಎಂದು ನಿರ್ಧರಿಸಲಾಗಿದೆ. ಅಂತಹ ವಾಹನಗಳನ್ನು ಸ್ಕ್ರ್ಯಾಪ್ ಮಾಡುವುದು ಸಾರಿಗೆ ಸಚಿವಾಲಯವು ಹೊರಡಿಸಿದ ಮಾರ್ಗಸೂಚಿಗಳಿಗೆ ಅನುಸಾರವಾಗಿ ಸ್ಥಾಪಿಸಲಾದ ನೋಂದಾಯಿತ ವಾಹನ ಸ್ಕ್ರ್ಯಾಪಿಂಗ್ ಸೌಲಭ್ಯಗಳಲ್ಲಿ ಮಾತ್ರ ಇರಲಿದೆ”ಎಂದು ಜ್ಞಾಪಕ ಪತ್ರದಲ್ಲಿ ತಿಳಿಸಲಾಗಿದೆ.
ಖಂಡಂ ಎಂದು ಘೋಷಿಸಲಾದ ಅಥವಾ 15 ವರ್ಷ ವಯಸ್ಸನ್ನು ತಲುಪಿದ ವಾಹನಗಳನ್ನು ಹರಾಜು ಮಾಡಲಾಗುವುದಿಲ್ಲ. ಈ ಎಲ್ಲ ವಾಹನಗಳನ್ನು ಮಾತ್ರ ಸ್ಕ್ರ್ಯಾಪ್ ಮಾಡಲಾಗುತ್ತದೆ. ಯಾವುದೇ ವಿನಾಯಿತಿಗೆ ಕಾರಣಗಳ ರೆಕಾರ್ಡಿಂಗ್ ಜತೆಗೆ ಜಂಟಿ ಕಾರ್ಯದರ್ಶಿಗಿಂತ ಕಡಿಮೆಯಿಲ್ಲದ ಮಟ್ಟದಲ್ಲಿ ಸಂಬಂಧಿಸಿದ ಇಲಾಖೆಯ ಅನುಮೋದನೆ ಅಗತ್ಯವಿರುತ್ತದೆ ಅಂತಹ ಪ್ರತಿಯೊಂದು ಆದೇಶದ ನಕಲನ್ನು ಸಾರಿಗೆ ಇಲಾಖೆಗೆ ತಲುಪಿಸಬೇಕು ಎಂದು ಜ್ಞಾಪಕ ಪತ್ರದಲ್ಲಿ ಸೇರಿಸಲಾಗಿದೆ.
ಅಂತಹ ಎಲ್ಲ ವಾಹನಗಳನ್ನು ಸ್ಕ್ರ್ಯಾಪ್ ಮಾಡುವ ವಿವರವಾದ ಕಾರ್ಯವಿಧಾನವನ್ನು ರಸ್ತೆ ಸಾರಿಗೆ ಸಚಿವಾಲಯವು ಪ್ರತ್ಯೇಕವಾಗಿ ತಿಳಿಸುತ್ತದೆ ಎಂದು ವೆಚ್ಚ ಇಲಾಖೆ ತಿಳಿಸಿದೆ.