ತಿರುಪತಿ ದೇವಸ್ಥಾನದ ಲಡ್ಡು ವಿತರಣಾ ಕೇಂದ್ರದಲ್ಲಿ ಬೆಂಕಿ ಅವಘಡ; ಭಕ್ತರಲ್ಲಿ ಆತಂಕ ಸೃಷ್ಟಿ -ವಿಡಿಯೋ
ಕಾಲ್ತುಳಿತ ದುರಂತ ಸಂಭವಿಸಿದ ಕೆಲವೇ ದಿನಗಳಲ್ಲಿ ತಿರುಪತಿ ದೇವಸ್ಥಾನದ ಲಡ್ಡು ಪ್ರಸಾದ ವಿತರಿಸುತ್ತಿದ್ದ ಕೌಂಟರ್‌ನಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಬೆಂಕಿ ಕಾಣಿಸಿಕೊಂಡಿದ್ದರಿಂದ ಜನಜಂಗುಳಿಯಲ್ಲಿ ಆತಂಕ ಸೃಷ್ಟಿಯಾಗಿತ್ತು.

ತಿರುಪತಿ ದೇವಸ್ಥಾನದ ಲಡ್ಡು ವಿತರಣಾ ಕೇಂದ್ರದಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಕೌಂಟರ್ ಸಂಖ್ಯೆ 47ರಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕಂಪ್ಯೂಟರ್‌ಗೆ ಸಂಪರ್ಕ ಮಾಡಲಾಗಿದ್ದ ಯುಪಿಎಸ್ ವ್ಯವಸ್ಥೆಯಲ್ಲಿ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಬೆಂಕಿ ಕಾಣಿಸಿಕೊಂಡಿದೆ ಎಂದು ತಿರುಮಲ ತಿರುಪತಿ ದೇವಸ್ಥಾನಂನ ಜಂಟಿ ಕಾರ್ಯನಿರ್ವಾಹಕ ಅಧಿಕಾರಿ ವೆಂಕಯ್ಯ ಚೌಧರಿ ಹೇಳಿದ್ದಾರೆ.
ಲಡ್ಡು ಪ್ರಸಾದ ವಿತರಿಸುತ್ತಿದ್ದ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡಿದ್ದರಿಂದ ಜನಜಂಗುಳಿಯಲ್ಲಿ ಆತಂಕ ಸೃಷ್ಟಿಸಿದೆ. "ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಿಯಂತ್ರಣಕ್ಕೆ ತರಲು ಪ್ರಯತ್ನಿಸಿದ್ದಾರೆ" ಎಂದು ವೆಂಕಯ್ಯ ಚೌಧರಿ ಹೇಳಿದರು. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಅವಘಡ ಸಂಭವಿಸಿದ ನಂತರ, ಲಡ್ಡು ಪ್ರಸಾದ ವಿತರಣಾ ಕೌಂಟರ್ ಆವರಣದಲ್ಲಿ ಹೊಗೆ ತುಂಬಿತ್ತು. ಬೆಂಕಿಯ ಬಗ್ಗೆ ವಿವರಗಳನ್ನು ನೀಡಿದ ಜೆಇಒ ವೆಂಕಯ್ಯ ಚೌಧರಿ, "ಭಕ್ತರಿಗೆ ಲಡ್ಡು ಪ್ರಸಾದ ವಿತರಿಸುವ ಪ್ರದೇಶದಲ್ಲಿ ಬೆಂಕಿ ಅವಘಡ ಸಂಭವಿಸಿದ್ದರಿಂದ ಜನಸಮೂಹದಲ್ಲಿ ಭಯ ಹುಟ್ಟಿತು. ಸಿಬ್ಬಂದಿ ತಕ್ಷಣ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಿಯಂತ್ರಣಕ್ಕೆ ತರಲು ಪ್ರಯತ್ನಿಸಿದರು," ಎಂದು ತಿಳಿಸಿದರು.
ಇತ್ತೀಚೆಗಷ್ಟೇ ಕಾಲ್ತುಳಿತ ಸಂಭವಿಸಿ 6 ಮಂದಿ ಸಾವನ್ನಪ್ಪಿದ ಘಟನೆ ನಡೆದಿತ್ತು. ಅದಾದ ಕೆಲವೇ ದಿನಗಳ ಅಂತರದಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಜನವರಿ 8ರ ಬುಧವಾರದ ದೇವಾಲಯದ ಆವರಣದಲ್ಲಿರುವ ದರ್ಶನ ಟಿಕೆಟ್ ಕೌಂಟರ್‌ನಲ್ಲಿ ಕಾಲ್ತುಳಿತ ಸಂಭವಿಸಿ ಆರು ಜನರು ಸಾವನ್ನಪ್ಪಿದರೆ, ಹಲವಾರು ಜನರು ಗಾಯಗೊಂಡಿದ್ದರು. ತಿರುಪತಿಯ ಎಂಜಿಎಂ ಶಾಲೆಯ ಬಳಿಯ ಬೈರಾಗಿ ಪಟ್ಟೇಡಾದಲ್ಲಿ ನೂರಾರು ಭಕ್ತರು ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವೈಕುಂಠ ದ್ವಾರ ದರ್ಶನಕ್ಕೆ ಟಿಕೆಟ್‌ಗಾಗಿ ನೂಕಾಟ ನಡೆಸುತ್ತಿದ್ದಾಗ ಕಾಲ್ತುಳಿತವಾಗಿತ್ತು.
ಆಂಧ್ರಪ್ರದೇಶ ಸರ್ಕಾರವು ಮೃತರ ಸಂಬಂಧಿಕರಿಗೆ 25 ಲಕ್ಷ ರೂ. ಪರಿಹಾರವನ್ನು ಘೋಷಿಸಿದೆ. ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಕಾಲ್ತುಳಿತ ಘಟನೆಯ ಸಂತ್ರಸ್ತರನ್ನು ಭೇಟಿಯಾಗಿ ಸಾಂತ್ವನ ಹೇಳಿದ್ದಾರೆ.
