ವಾರಕ್ಕೆ 70 ಗಂಟೆ ಕೆಲಸದ ಚರ್ಚೆ ನಡುವೆ ಭಾರತದ ಪಂದ್ಯ ವೀಕ್ಷಿಸಿದ ನಾರಾಯಣ ಮೂರ್ತಿ; ಬಗೆಬಗೆಯ ಮೀಮ್ಸ್ ವೈರಲ್
ಇನ್ಫೋಸಿಸ್ ಸಹ ಸಂಸ್ಥಾಪಕರಾದ ನಾರಾಯಣ ಮೂರ್ತಿ, ಭಾರತ ಮತ್ತು ಇಂಗ್ಲೆಂಡ್ ನಡುವಿನ ಪಂದ್ಯ ವೀಕ್ಷಿಸಿದರು. ಇದು ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಯ ವಿಷಯವಾಗಿದೆ. ಬಗೆಬಗೆಯ ಮೀಮ್‌ಗಳು ವೈರಲ್ ಆಗಿವೆ.

ಭಾರತದ ಐಟಿ ವಲಯದ ದೈತ್ಯ ಇನ್ಫೋಸಿಸ್ ಸಹ ಸಂಸ್ಥಾಪಕ ಎನ್. ಆರ್. ನಾರಾಯಣ ಮೂರ್ತಿ ಅವರು, ಕಳೆದ ರಾತ್ರಿ (ಫೆಬ್ರುವರಿ 2ರ ಭಾನುವಾರ) ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ಇಂಗ್ಲೆಂಡ್ ನಡುವಿನ 5ನೇ ಟಿ20 ಪಂದ್ಯವನ್ನು ವೀಕ್ಷಿಸಿದರು. ಇವರೊಂದಿಗೆ ಸಿನಿಮಾ ಹಾಗೂ ಉದ್ಯಮ ವಲಯದ ಸೆಲೆಬ್ರಿಟಿಗಳು ಕೂಡಾ ಸ್ಟೇಡಿಯಂನಲ್ಲಿ ಕಾಣಿಸಿಕೊಂಡರು. ಇವೆಲ್ಲದರ ನಡುವೆ ನಾರಾಯಣ ಮೂರ್ತಿಯವರು ಪಂದ್ಯ ವೀಕ್ಷಿಸುತ್ತಿರುವುದು ಸಾಮಾಜಿಕ ಮಾಧ್ಯಮದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ವಾಂಖೆಡೆ ಸ್ಟೇಡಿಯಂನ ಸ್ಟ್ಯಾಂಡ್‌ನಲ್ಲಿ ಕುಳಿತು ಮೂರ್ತಿ ಅವರು ಪಂದ್ಯ ವೀಕ್ಷಿಸುವ ಪೋಸ್ಟ್, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಭಾರತ ಮತ್ತು ಇಂಗ್ಲೆಂಡ್ ನಡುವಿನ ಪಂದ್ಯವನ್ನು ರಾಜೀವ್ ಶುಕ್ಲಾ, ಮುಖೇಶ್ ಅಂಬಾನಿ ಮತ್ತು ಆಕಾಶ್ ಅಂಬಾನಿಯಂತಹ ಉದ್ಯಮ ಮತ್ತು ರಾಜಕೀಯ ವಲಯದ ವ್ಯಕ್ತಿಗಳು ವೀಕ್ಷಿಸಿದರು. ಇದೇ ವೇಳೆ ಬ್ರಿಟನ್‌ನ ಮಾಜಿ ಪ್ರಧಾನಿ ರಿಷಿ ಸುನಕ್, ಉದ್ಯಮಿ ಮನೋಜ್ ಬಾದಲೆ ಜೊತೆಗಿದ್ದರು.
ಇವೆಲ್ಲದರ ನಡುವೆ, ನಾರಾಯಣ ಮೂರ್ತಿಯವರ ಕುರಿತ ಮೀಮ್‌ಗಳು ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡಿವೆ. ಇದಕ್ಕೆ ಕಾರಣವೂ ಇದೆ. ವಾರಕ್ಕೆ 90 ಗಂಟೆಗಳ ಕಾಲ ಕೆಲಸ ಮಾಡುವ ವಿಚಾರವಾಗಿ ನಾರಾಯಣ ಮೂರ್ತಿ ಈ ಹಿಂದೆ ಹೇಳಿದ್ದರು. ಇದು ವ್ಯಾಪಕ ಚರ್ಚೆಗೆ ಕಾರಣವಾಗಿತ್ತು. ಹೀಗಾಗಿ ನಾರಾಯಣ ಮೂರ್ತಿ ಅವರು ಪಂದ್ಯ ವೀಕ್ಷಿಸಲು ಬಂದಾಗ ಮೀಮ್‌ಗಳು ಸದ್ದು ಮಾಡಿವೆ.
“ನಾರಾಯಣ ಮೂರ್ತಿ ಅವರು ಭಾನುವಾರ ಸಂಜೆ ತಮ್ಮ ಜೀವನವನ್ನು ಆನಂದಿಸುತ್ತಿದ್ದಾರೆ. ಇದು ಎಲ್ ಆಂಡ್ ಟಿ ಚೇರ್‌ಮೆನ್ ಕಂಡ ಕನಸು” ಎಂದು ಟ್ರೆಂಡುಲ್ಕರ್ ಹೆಸರಿನಲ್ಲಿರುವ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಟ್ವೀಟ್ ಮಾಡಲಾಗಿದೆ.
ನಾರಾಯಣ ಮೂರ್ತಿ ವಾರಾಂತ್ಯದಲ್ಲಿ ಕೆಲಸ ಮಾಡದಿರುವುದು ಅಪರೂಪದ ದೃಶ್ಯ ಎಂದು ಸೋಷಿಯಲ್ ಮೀಡಿಯಾದಲ್ಲಿ ಕೆಲವು ನೆಟ್ಟಿಗರು ಹೇಳಿದ್ದಾರೆ. "ನಾರಾಯಣ ಮೂರ್ತಿ ಅವರು ಭಾನುವಾರದಂದು ಕೆಲಸ ಮಾಡದ ಅಪರೂಪದ ದೃಶ್ಯ" ಎಂದು ವಿನೇಶ್ ಪ್ರಭು ಎಂಬವರು ತಮ್ಮ ಎಕ್ಸ್ ಪೋಸ್ಟ್‌ನಲ್ಲಿ ಬರೆದಿದ್ದಾರೆ.
ಅನಿರುದ್ಧ ನಾಯಕ್ ಎಂಬವರ ಮೀಮ್ ಹೀಗಿದೆ. “ನೀವು ನನ್ನನ್ನು ಏಕೆ ನೋಡುತ್ತಿದ್ದೀರಿ? ನಾನು ವಾರಕ್ಕೆ 70 ಗಂಟೆಗಳ ಕೆಲಸವನ್ನು ಪೂರ್ಣಗೊಳಿಸಿದ್ದೇನೆ. ಹೀಗಾಗಿ ನಾನು ನನ್ನ ಅಳಿಯನೊಂದಿಗೆ ಪಂದ್ಯ ನೋಡಲು ಬಂದಿದ್ದೇನೆ,” ಎಂದು ನಾರಾಯಣ ಮೂರ್ತಿ ಅವರು ಹೇಳುತ್ತಿರುವ ಅರ್ಥದಲ್ಲಿ ಮೀಮ್ ಹಂಚಿಕೊಂಡಿದ್ದಾರೆ.
ವೃತ್ತಿಬದುಕಿನ ಸಮತೋಲನದ ಚರ್ಚೆ
ನಾರಾಯಣ ಮೂರ್ತಿ ಅವರ ಕುರಿತ ಮೀಮ್ ವೈರಲ್ ಆಗಲು ಕಾರಣವೂ ಇವೆ. ವಾರಕ್ಕೆ 70 ಗಂಟೆಗಳ ಕಾಲ ಕೆಲಸ ಮಾಡುವ ಬಗ್ಗೆ ನಾರಾಯಣ ಮೂರ್ತಿ ಅವರು ಹೇಳಿಕೆ ನೀಡಿದ್ದರು. ಇದು ಕೆಲಸ ಮತ್ತು ವೈಯಕ್ತಿಕ ಜೀವನದ ಸಮತೋಲನದ ಕುರಿತ ಚರ್ಚೆ ಹುಟ್ಟುಹಾಕಿತ್ತು. ಹೀಗಾಗಿ ಈ ಕಾರ್ಪೊರೇಟ್ ಸಂಸ್ಕೃತಿ ಚರ್ಚೆಯ ಬಗ್ಗೆ ಜನರು ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
