Viral Video; ಶಾಲಾ ಧ್ವಜಸ್ತಂಭದ ತಿರಂಗಾ ಅರಳಿಸಲು ಬಂದು ಹೋದ ಬಾನಾಡಿ, ಕೇರಳದ ಈ ವೈರಲ್ ವಿಡಿಯೋ ಇಲ್ಲಿದೆ ನೋಡಿ
Kerala News; ಶಾಲಾ ಧ್ವಜಸ್ತಂಭದ ತಿರಂಗಾ ಅರಳಿಸಲು ಬಂದು ಹೋದ ಬಾನಾಡಿ ಈಗ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಒಳಗಾಗಿದೆ. ಕೇರಳದ ಈ ವೈರಲ್ ವಿಡಿಯೋ ಕುರಿತ ಚರ್ಚೆಯ ಕಿರು ವಿವರ ಇಲ್ಲಿದೆ. ವಿಡಿಯೋವನ್ನೂ ಇಲ್ಲಿ ನೋಡಬಹುದು.
ಬೆಂಗಳೂರು: ನಮ್ಮ ದೇಶದ ಸ್ವಾತಂತ್ರ್ಯ ದಿನಾಚರಣೆಯ ಮಾರನೇ ದಿನ ಮೈಕ್ರೋಬ್ಲಾಗಿಂಗ್ ತಾಣದಲ್ಲಿ ಕಂಡ ವಿಡಿಯೋ ಈಗ ವ್ಯಾಪಕ ಚರ್ಚೆಗೆ ಒಳಗಾಗಿದೆ. ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದ ನಡುವೆ ಗಮನ ಸೆಳೆದ ವಿಡಿಯೋಗಳಿಗಿಂತ ಇದು ಸ್ವಲ್ಪ ಭಿನ್ನ. ಹಾಗಾಗಿ ಹೆಚ್ಚು ಚರ್ಚೆಗೀಡಾಗಿದೆ. ಇದು ಶಾಲಾ ಅಥವಾ ಅಂಗನವಾಡಿ ಆವರಣದಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಯ ವಿಡಿಯೋ.
ತಿರಂಗಾ ಅರಳಿಸಲು ಬಂದು ಹೋದ ಬಾನಾಡಿ ವಿಡಿಯೋದಲ್ಲಿ ಗಮನಸೆಳೆಯುತ್ತದೆ. ಇದು ಕೇರಳದ ವಿಡಿಯೋ ಎಂದು ಹೇಳಲಾಗುತ್ತಿದ್ದು, ಈ ಘಟನೆ ಯಾವಾಗ ಮತ್ತು ಎಲ್ಲಿ ನಡೆಯಿತು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ತಿರಂಗಾ ಅರಳಿಸಲು ಬಂದು ಹೋದ ಬಾನಾಡಿ; ವೈರಲ್ ವಿಡಿಯೋದಲ್ಲಿರುವುದು ಇಷ್ಟು
ಪಕ್ಷಿಯೊಂದು ತಿರಂಗಾ ಅರಳಿಸಲು ಬಂದು ಹೋದ ವಿದ್ಯಮಾನದ ವಿಡಿಯೋವನ್ನು ನಚಿಕೇತಸ್ (@nach1keta) ಹೆಸರಿನ ಮಲಯಾಳಿಯೊಬ್ಬರು ಮೈಕ್ರೋ ಬ್ಲಾಗಿಂಗ್ ತಾಣ ಎಕ್ಸ್ (ಟ್ವಿಟರ್) ತನ್ನ ಖಾತೆಯಲ್ಲಿ ಶೇರ್ ಮಾಡಿದ್ದಾರೆ.
ವಿಡಿಯೋ ಗಮನಿಸಿದರೆ ಅದರಲ್ಲಿ ಝಂಡಾ ಊಂಚಾ ರಹಾ ಹಮಾರಾ ಎಂಬ ಹಿಂದಿ ಭಾಷೆಯ ದೇಶ ಭಕ್ತಿಗೀತೆ ಹಾಡುತ್ತಿರುವುದು ಕೇಳುತ್ತಿದೆ. ಅದೇ ರೀತಿ ಕೊನೆಯಲ್ಲಿ ಮಲಯಾಳಂನಲ್ಲಿ ಕೈಯಡಿ ಕೈಯಡಿ ( ಚಪ್ಪಾಳೆ ತಟ್ಟಿ, ಚಪ್ಪಾಳೆ ತಟ್ಟಿ) ಎನ್ನುತ್ತಿರುವುದು ಕೇಳಿದೆ.
ನಚಿಕೇತಸ್ ಈ ವೈರಲ್ ವಿಡಿಯೋವನ್ನು ಆಗಸ್ಟ್ 16ರ ರಾತ್ರಿ 11.24ಕ್ಕೆ ಶೇರ್ ಮಾಡಿದ್ದು, ಈಗ ಅದು ವೈರಲ್ ಆಗಿದೆ. ವಿಡಿಯೋ ನೋಡಿದವರು ಒಂದೊಂದು ರೀತಿ ಕಾಮೆಂಟ್ ಮಾಡುತ್ತಿದ್ದು, ಹಲವರು ಅದೇ ವಿಡಿಯೋ ಡೌನ್‌ಲೋಡ್ ಮಾಡಿ ತಮ್ಮ ಖಾತೆಯಿಂದ ಶೇರ್ ಕೂಡ ಮಾಡಿದ್ದಾರೆ.
ಕೇರಳದ ಈ ವೈರಲ್ ವಿಡಿಯೋ ಇಲ್ಲಿದೆ
ನಚಿಕೇತಸ್ ಅವರು ಶೇರ್ ಮಾಡಿದ ವಿಡಿಯೋ ಈಗಾಗಲೇ 7700ಕ್ಕೂ ಹೆಚ್ಚು ಲೈಕ್ಸ್ ಪಡೆದಿದೆ. 11 ಸಾವಿರಕ್ಕೂ ಹೆಚ್ಚು ವೀಕ್ಷಣೆಯನ್ನು ಹೊಂದಿದೆ. 1600ಕ್ಕೂ ಹೆಚ್ಚು ರೀಟ್ವೀಟ್ ಮತ್ತು 50ರಷ್ಟು ಕಾಮೆಂಟ್ ಕೂಡ ಬಂದಿವೆ.
ಆ ಹಕ್ಕಿ ದೂರದಲ್ಲೆಲ್ಲೋ ತೆಂಗಿನ ಮರದ ಮೇಲಿತ್ತು. ಅದು ರಾಷ್ಟ್ರಧ್ವಜಕ್ಕೆ ಸಮೀಪದಲ್ಲೆಲ್ಲೂ ಇರಲಿಲ್ಲ. ಇದ್ದಕ್ಕಿದ್ದಂತೆ ಬಂದಿದೆ. ಮರ ಹಿನ್ನೆಲೆಯಲ್ಲಿರುವ ಕಾರಣ ಅದು ವಿಷುವಲ್ ಎಫೆಕ್ಟ್ ಇರಬೇಕು ಎಂದು ಎಸ್ ಶೆಟ್ಟಿ ಎಂಬ ವೀಕ್ಷಕ ಕಾಮೆಂಟ್ ಮಾಡಿದ್ದಾರೆ.
ಪ್ರಿಯಾಂಶು ಎಂಬುವವರು ಕೇರಳದ ವಿಡಿಯೋ ನೋಡಿ, " ಆ ಹಕ್ಕಿ ಉದ್ದೇಶಪೂರ್ವಕವಾಗಿಯೇ ತಿರಂಗಾ ಸಮೀಪ ಬಂದಿದೆ. ತಿರಂಗಾ ಅರಳಿಸಿದ ಕೂಡಲೇ ಬಂದ ದಾರಿಯಲ್ಲೇ ಅಚ್ಚುಕಟ್ಟಾಗಿ ಹಿಂದಿರುಗಿದೆ, ನಿಜಕ್ಕೂ ಪವಾಡದಂತೆಯೇ ಇದೆ ಎಂದು ಕಾಮೆಂಟ್ ಮಾಡಿದ್ದಾರೆ.
ವಿಘ್ನೇಶ್ ಶಿಶಿರ್ ಎಂಬುವವರು, ಈ ಹಕ್ಕಿ ಹಿಂದಿನ ಜನ್ಮದಲ್ಲಿ ಭಾರತಕ್ಕಾಗಿ ದುಡಿದಿರಬೇಕು. ಜೈಹಿಂದ್ ಎಂದು ಕಾಮೆಂಟ್ ಮಾಡಿದ್ದಾರೆ.
ಆ ಹಕ್ಕಿ ನಮ್ಮೆಲ್ಲರಿಗಿಂತ ದೇಶಭಕ್ತಿಯುಳ್ಳದ್ದು ಎಂದು ನಿಧಿ ಎಂಬುವವರು ಪ್ರತಿಕ್ರಿಯಿಸಿದ್ದಾರೆ. ಇನ್ನು ಮಿಥ್ ಬಸ್ಟರ್ ಎಂಬ ಖಾತೆಯಿಂದ, ಕೇರಳ ಅಂದ್ರೆ ದೇವರ ಸ್ವಂತ ಊರು ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ಇಡೀ ಜಗತ್ತಿಗೇ ಗೊತ್ತಿದೆ ತಿರಂಗಾದ ಮೌಲ್ಯ ಏನು ಎಂಬುದು ಎಂದು ಪ್ರತಿಕ್ರಿಯಿಸಿದ್ದಾರೆ.
ಕಾಮೆಂಟ್ ವಿಭಾಗ ಗಮನಿಸುತ್ತ ಸಾಗಿದರೆ, ಹಲವರು ವಾವ್ ಎಂದು ಉದ್ಗರಿಸಿದ್ದರೆ, ಅನೇಕರು ಈ ವಿಡಿಯೋದ ಸಾಚಾತನದ ಬಗ್ಗೆ ಸಂದೇಹ ವ್ಯಕ್ತಪಡಿಸಿದ್ದಾರೆ.
ಆದಾಗ್ಯೂ ಈ ಸುದ್ದಿ ಕೇರಳದ ಮಾಧ್ಯಮಗಳಲ್ಲಿ ಬಿತ್ತರವಾದಂತೆ ಕಂಡುಬಂದಿಲ್ಲ. ಇದರ ಸಾಚಾತನವನ್ನು ಹಿಂದೂಸ್ತಾನ್ ಟೈಮ್ಸ್ ಕನ್ನಡ ದೃಢೀಕರಿಸುವುದು ಕೂಡ ಸಾಧ್ಯವಾಗಿಲ್ಲ. ಸೋಷಿಯಲ್ ಮೀಡಿಯಾದಲ್ಲಿ ಇದು ಚರ್ಚೆಗೊಳಗಾಗಿ ವೈರಲ್ ಆಗಿರುವ ಕಾರಣ ಗಮನಸೆಳೆಯುತ್ತಿರುವ ವಿಚಾರ ಎಂದು ವರದಿ ಮಾಡಲಾಗಿದೆ.