ವೈರಲ್‌ ಸುದ್ದಿ: ಚೆನ್ನೈ ಬೀಚ್‌ನಲ್ಲಿ ಏನಿದು ಬೆಳಕಿನ ನರ್ತನ; ರಾತ್ರಿ ಹೊಳೆಯುವ ಅಲೆಗಳ ನಡುವೆ ಕಂಡ ಜೈವಿಕ ಬೆಳಕಿನ ಕೌತುಕ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ವೈರಲ್‌ ಸುದ್ದಿ: ಚೆನ್ನೈ ಬೀಚ್‌ನಲ್ಲಿ ಏನಿದು ಬೆಳಕಿನ ನರ್ತನ; ರಾತ್ರಿ ಹೊಳೆಯುವ ಅಲೆಗಳ ನಡುವೆ ಕಂಡ ಜೈವಿಕ ಬೆಳಕಿನ ಕೌತುಕ

ವೈರಲ್‌ ಸುದ್ದಿ: ಚೆನ್ನೈ ಬೀಚ್‌ನಲ್ಲಿ ಏನಿದು ಬೆಳಕಿನ ನರ್ತನ; ರಾತ್ರಿ ಹೊಳೆಯುವ ಅಲೆಗಳ ನಡುವೆ ಕಂಡ ಜೈವಿಕ ಬೆಳಕಿನ ಕೌತುಕ

Bioluminescent waves: ಚೆನ್ನೈ ಬೀಚ್‌ನಲ್ಲಿ ಅಲೆಗಳ ನಡುವೆ ಚೈವಿಕ ಪ್ರಕಾಶಮಾನ ಬೆಳಕನ್ನು ಕಂಡು ನೆಟ್ಟಿಗರು ಚಕಿತರಾಗಿದ್ದಾರೆ. ಈ ಅಲೆಗಳ ಬೆಳಕಿನ ಕೌತುಕದ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಚೆನ್ನೈ ಬೀಚ್‌ನಲ್ಲಿ ಜೈವಿಕ ಬೆಳಕಿನ ಕೌತುಕ
ಚೆನ್ನೈ ಬೀಚ್‌ನಲ್ಲಿ ಜೈವಿಕ ಬೆಳಕಿನ ಕೌತುಕ

ಚೆನ್ನೈನಲ್ಲಿ ಒಂದೆಡೆ ಮಳೆಯ ಅಬ್ಬರ ಆರಂಭವಾಗಿದೆ. ಇದೇ ಸಮಯದಲ್ಲಿ ಅಲ್ಲಿನ ಕಡಲಿನಲ್ಲೂ ಅಬ್ಬರ ಉಬ್ಬರ ಶುರುವಾಗಿದೆ. ಇತ್ತೀಚೆಗೆ ಚೆನ್ನೈನ ಈಸ್ಟ್‌ ಕೋಸ್ಟ್‌ ರೋಡ್‌ (ಇಸಿಆರ್‌) ಬೀಚ್‌ನಲ್ಲಿ ಕರಾಳ ಕತ್ತಲ ರಾತ್ರಿಯಲ್ಲಿ ವ್ಯಕ್ತಿಯೊಬ್ಬರು ಸಮುದ್ರದ ಅಲೆಗಳ ವಿಸ್ಮಯಕಾರಿ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ. ಸಮುದ್ರದಲ್ಲಿ ಬೆಳಕಿನ ಅಲೆಗಳಂತೆ ಸಮುದ್ರದ ಅಲೆಗಳು ನರ್ತನ ಮಾಡುವ, ಹೊಳೆಯುವ ದೃಶ್ಯಗಳನ್ನು ಅವರು ಸೆರೆ ಹಿಡಿದಿದ್ದಾರೆ. ಈ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಇಂತಹ ಅಪರೂಪದ ವಿದ್ಯಮಾನವನ್ನು ರಾಜ್ಯ ಸಭೆಯ ಎಂಪಿ ಮತ್ತು ಮಾಜಿ ಕೇಂದ್ರ ಸಚಿವರಾದ ಅಂಬುಮನಿ ರಾಮದಾಸ್‌ ಎಕ್ಸ್‌(ಹಳೆಯ ಟ್ವಿಟ್ಟರ್‌)ನಲ್ಲಿ ಹಂಚಿಕೊಂಡಿದ್ದಾರೆ. "ಇಸಿಆರ್‌ ಬೀಚ್‌ನಲ್ಲಿ ಸಮ್ಮೋಹನಗೊಳಿಸುವ ಫ್ಲೋರೋಸೆಂಟ್‌ ಅಲೆಗಳನ್ನು ಆನಂದಿಸಿದೆ" ಎಂದು ಅವರು ಟ್ವೀಟ್‌ ಮಾಡಿದ್ದಾರೆ.

ಈ ವಿಡಿಯೋ ಹಂಚಿಕೊಂಡ ಕೆಲವೇ ಕ್ಷಣಗಳಲ್ಲಿ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಈ ವರದಿ ಬರೆಯುವ ಹೊತ್ತಿಗೆ 24 ಸಾವಿರಕ್ಕೂ ಹೆಚ್ಚು ಜನರು ಈ ವಿಡಿಯೋವನ್ನು ವೀಕ್ಷಿಸಿದ್ದಾರೆ. "ಕತ್ತಲಲ್ಲಿ ಬೀಚ್‌ ಬೇರೆ ರೀತಿಯಾಗಿರುತ್ತದೆ" "ಅದ್ಭುತವಾಗಿದೆ" "ನಾನು ಜೀವನದಲ್ಲಿ ಕುಸಿದಾಗ ನನಗೆ ಸಮುದ್ರ ಸ್ಪೂರ್ತಿ ನೀಡುತ್ತದೆ" "ನಾನೂ ಕೂಡ ಈ ದೃಶ್ಯವನ್ನು ಚೆನ್ನೈನ ಪಾಲವಕಮ್‌ ಬೀಚ್‌ನಲ್ಲಿ ನೋಡಿದ್ದೇನೆ, ಅದು ನನ್ನ ಜೀವನದ ಸುಂದರ ಕ್ಷಣ" "ಈ ವಿಡಿಯೋ ನೋಡಿದಾಗ ನನ್ನ ಕಣ್ಣುಗಳೂ ಹೊಳೆದವು" ಎಂದೆಲ್ಲ ಸೋಷಿಯಲ್‌ ಮೀಡಿಯಾದಲ್ಲಿ ಜನರು ಕಾಮೆಂಟ್‌ ಮಾಡಿದ್ದಾರೆ.

ಈ ಕುರಿತು ಇಂಡಿಯನ್‌ ಎಕ್ಸ್‌ಪ್ರೆಸ್‌ನಲ್ಲಿ ಕಾರಣ ನೀಡಲಾಗಿದೆ. "ಬಯೋ ಲ್ಯುಮಿನೇಷನ್ಸ್‌ ಅಥವಾ ಜೈವಿಕ ಹೊಳೆಯುವಿಕೆಯು ಜೀವಂತ ಜೀವಿಗಳೊಳಗಿನ ರಾಸಾಯನಿಕ ಕ್ರಿಯೆಯಿಂದ ಉತ್ಪತ್ತಿಯಾಗುವ ನೈಸರ್ಗಿಕ ವಿದ್ಯಮಾನ. ಹೆಚ್ಚಿನ ಹೊಳೆಯುವ ಜೀವಿಗಳು ಸಮುದ್ರದಲ್ಲಿ ಇರುತ್ತವೆ. ಮೀನು, ಬ್ಯಾಕ್ಟೀರಿಯಾ, ಜೆಲ್ಲಿಗಳು ಹೀಗೆ ಹೊಳೆಯುತ್ತವೆ" ಎಂದು ನ್ಯಾಷನಲ್‌ ಜಿಯೋಗ್ರಫಿಕ್‌ ತಿಳಿಸಿದೆ.

ಈ ರೀತಿ ಸಮುದ್ರ ಜೀವಿಗಳು ಏಕೆ ಬೆಳಕು ಹೊರಸೂಸುತ್ತವೆ ಎನ್ನುವುದಕ್ಕೆ ನೈಜ ಕಾರಣ ಇನ್ನೂ ತಿಳಿದುಬಂದಿಲ್ಲ. ನ್ಯಾಷನಲ್‌ ಒಸೀನ್‌ ಸರ್ವೀಸ್‌ ಪ್ರಕಾರ, ಸಮುದ್ರ ಜೀವಿಗಳು ಪರಭಕ್ಷಕ ಜೀವಿಗಳನ್ನು ಎಚ್ಚರಿಸಲು ಅಥವಾ ಅವುಗಳಿಂದ ತಪ್ಪಿಸಿಕೊಳ್ಳಲು, ಬೇಟೆಯನ್ನು ಸೆಳೆಯುವ ಸಲುವಾಗಿ ಅಥವಾ ಬೇಟೆ ಎಲ್ಲಿದೆ ಎಂದು ಪತ್ತೆಹಚ್ಚುವ ಸಲುವಾಗಿ, ತಮ್ಮ ಬಳಗದ ಇತರೆ ಸದಸ್ಯರ ಜತೆ ಸಂವಹನ ನಡೆಸುವ ಸಲುವಾಗಿ ಜೈವಿಕ ಬೆಳಕು ಹೊರಸೂಸುತ್ತವೆ.

Whats_app_banner

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.