ಕನ್ನಡ ಸುದ್ದಿ  /  Nation And-world  /  Viral News Free Shopping Mall At A Durga Puja Pandal

Free shopping mall: ದುರ್ಗಾ ಪೂಜೆ ಆಯೋಜಕರಿಂದ ಉಚಿತ ಶಾಪಿಂಗ್‌ ಮಾಲ್‌, ಯಾರಿಗುಂಟು ಯಾರಿಗಿಲ್ಲ, ಬನ್ನಿ ಬಾಚಿಕೊಳ್ಳಿ!

ಸಾಕಷ್ಟು ಜನರು ಉಚಿತ ಎಂದು ಬಾಚಿಕೊಳ್ಳಲು ಬಂದಿದ್ದಾರೆ. ಈ ಉಚಿತ ಶಾಪಿಂಗ್‌ ಮಾಲ್‌ನೊಳಗೆ ಜನದಟ್ಟಣೆಯೂ ಹೆಚ್ಚಾಗಿದೆ. ಹೀಗಾಗಿ, ಅಗತ್ಯವಿರುವವರು ಮಾತ್ರ ಉಚಿತ ಶಾಪಿಂಗ್‌ ಮಾಲ್‌ನಿಂದ ತೆಗೆದುಕೊಳ್ಳಿ ಎಂದು ಆಗಾಗ ಮೈಕ್‌ನಲ್ಲಿ ಹೇಳುವ ಪರಿಸ್ಥಿತಿಯೂ ಬಂದಿದೆ

Free shopping mall: ದುರ್ಗಾ ಪೂಜೆ ಪೆಂಡಾಲ್‌ನೊಳಗೆ ಉಚಿತ ಶಾಪಿಂಗ್‌ ಮಾಲ್‌
Free shopping mall: ದುರ್ಗಾ ಪೂಜೆ ಪೆಂಡಾಲ್‌ನೊಳಗೆ ಉಚಿತ ಶಾಪಿಂಗ್‌ ಮಾಲ್‌

ಅಶೋಕ್‌ ನಗರ: ಕಳೆದ ಎರಡು ವರ್ಷಗಳಲ್ಲಿ ಕೊರೊನಾದಿಂದಾಗಿ ಹಬ್ಬದ ಸಂಭ್ರಮ ಮಂಕಾಗಿತ್ತು. ಈ ವರ್ಷ ಎಲ್ಲೆಡೆ ದಸರಾ ಸಂಭ್ರಮ ಜೋರಾಗಿಯೇ ಇದೆ. ಕರ್ನಾಟಕದ ಮೈಸೂರಿನಲ್ಲಿ ವಿಶ್ವವಿಖ್ಯಾತ ದಸರಾ ಸಂಭ್ರಮದಿಂದ ನಡೆಯುತ್ತಿದೆ. ಅಲ್ಲಿ ಜಂಬೂ ಸವಾರಿ ನಡೆಯುತ್ತಿದ್ದು, ಸಾವಿರಾರು ಜನರು ನೆರೆದಿದ್ದಾರೆ. ದೇಶದ ವಿವಿಧೆಡೆಯೂ ಕಳೆದ ಹಲವು ದಿನಗಳಿಂದ ನವರಾತ್ರಿ ಹಬ್ಬವು ವಿಜ್ರಂಭನೆಯಿಂದ ನಡೆಯುತ್ತಿದೆ.

ವಿಶೇಷವಾಗಿ ನವರಾತ್ರಿ ಹಬ್ಬವೆಂದರೆ ಉತ್ತರ ಭಾರತೀಯರಿಗೆ, ಈಶಾನ್ಯ ಭಾರತೀಯರಿಗೆ, ಕೊಲ್ಕೊತ್ತಾ ಮುಂತಾದ ನಗರಗಳಲ್ಲಿ ಭಾರೀ ಸಂಭ್ರಮದ ಹಬ್ಬ. ಅಲ್ಲಿ ದುರ್ಗಾ ಪೂಜೆಗೆ ನಮ್ಮಲ್ಲಿ ಗಣೇಶನ ಮೆರವಣಿಗೆ ಮಾಡುವಂತೆ ಬೃಹತ್‌ ಗಾತ್ರದ ದುರ್ಗೆಯ ಮೂರ್ತಿಗಳನ್ನು ಮೆರವಣಿಗೆ ಮಾಡುತ್ತಾರೆ. ಅಲ್ಲಿ ಬೃಹತ್‌ ಪೆಂಡಾಲ್‌ ಹಾಕಿ ನವರಾತ್ರಿ ಹಬ್ಬವನ್ನು ಆಚರಿಸುತ್ತಾರೆ. ಕೊಲ್ಕೊತ್ತಾದ ಜನಕಲ್ಯಾಣ ಸಭಾ ಅಶೋಕನಗರದ ದುರ್ಗಾ ಪೂಜೆಯು ಈ ಬಾರಿ ವಿಶೇಷ ಕಾರಣದಿಂದ ಗಮನ ಸೆಳೆದಿದೆ.

ಈ ದುರ್ಗಾ ಪೂಜೆ ಆಯೋಜಕರು ತಮ್ಮ ದುರ್ಗಾ ಪೂಜೆ ಮಂಟಪದ ಸಮೀಪ ಉಚಿತ ಶಾಪಿಂಗ್‌ ಮಾಲ್‌ ಹಾಕಿದ್ದಾರೆ. ಹೆಡ್‌ಲೈನ್‌ ನೋಡಿ ಎಲ್ಲರೂ ಉಚಿತವಾಗಿ ಬಾಚಿಕೊಳ್ಳಬಹುದು ಎಂದುಕೊಂಡರೆ ಒಂದ್ನಿಮಿಷ ನಿಲ್ಲಿ. ಶಾಪಿಂಗ್‌ ಮಾಲ್‌ನಲ್ಲಿ ಉಚಿತವಾಗಿ ದೊರಕುತ್ತದೆ ಎಂದು ಟ್ರಾಲಿಗಳನ್ನು ತಂದರೆ ಅಲ್ಲೇ ಇಡಿ. ಇದು ಬಡವರಿಗೆ, ಹಣಕಾಸು ಸಮಸ್ಯೆ ಇರುವವರಿಗೆ ಅನುಕೂಲವಾಗಲಿ ಎಂದು ನಿರ್ಮಿಸಿರುವ ಉಚಿತ ಶಾಪಿಂಗ್‌ ಮಾಲ್‌. ಜನರ ಕಲ್ಯಾಣಕ್ಕಾಗಿ ಸಂಘಟಕರು ನಿರ್ಮಿಸಿರುವ ಉಚಿತ ಶಾಪಿಂಗ್‌ ಮಾಲ್‌.

"ಸಾಕಷ್ಟು ಜನರು ಹಣಕಾಸು ತೊಂದರೆ ಅನುಭವಿಸುತ್ತಾರೆ. ತಮ್ಮ ಕುಟುಂಬಕ್ಕೆ ಹೊಸ ಉಡುಗೆಗಳನ್ನು ಖರೀದಿಸಲು ಅಸಕ್ತರಾಗಿರುತ್ತಾರೆ. ಅಂತಹ ಜನರಿಗಾಗಿ ಈ ಉಚಿತ ಶಾಪಿಂಗ್‌ ಮಾಲ್‌ ಅನ್ನು ಹಬ್ಬದ ಅವಧಿಯಲ್ಲಿ ತೆರೆದಿದ್ದೇವೆʼʼ ಎಂದು ದುರ್ಗಾ ಪೂಜೆಯ ಸಂಘಟಕರಲ್ಲಿ ಒಬ್ಬರಾದ ಸುಮನ್‌ ಪಾಲ್‌ ಹೇಳಿದ್ದಾರೆ.

ವಿಶೇಷವೆಂದರೆ, ಈ ಶಾಪಿಂಗ್‌ ಮಾಲ್‌ಗೆ ಭೇಟಿ ನೀಡುವ ಉಳ್ಳವರು ತಮ್ಮ ಕೈಲಾದಷ್ಟು ಹಣವನ್ನೂ ಇಲ್ಲಿ ನೀಡುತ್ತಿದ್ದಾರೆ. ಈ ಮೂಲಕ ದುರ್ಗಾ ಪೂಜೆ ಹಬ್ಬವನ್ನು ವಿಶೇಷವಾಗಿ ಆಚರಿಸುತ್ತಿದ್ದಾರೆ. ಈ ಉಚಿತ ಶಾಪಿಂಗ್‌ ಮಾಲ್‌ ಕುರಿತು ಸಾಕಷ್ಟು ಸಕಾರಾತ್ಮಕ ಅಭಿಪ್ರಾಯಗಳು ಬಂದಿದೆ ಎಂದು ಸಂಘಟಕರು ಹೇಳಿದ್ದಾರೆ. ವಿಶೇಷವಾಗಿ ಇಲ್ಲಿನ ಗ್ರಾಮೀಣ ಭಾಗದ ಜನರಿಗೆ ಅನುಕೂಲವಾಗಿದೆ ಎಂದು ಅವರು ಹೇಳಿದ್ದಾರೆ.

ಇದೇ ವೇಳೆ, ನಮ್ಮ ಹೆಡ್‌ಲೈನ್‌ನಲ್ಲಿರುವಂತೆ ಸಾಕಷ್ಟು ಜನರು ಉಚಿತ ಎಂದು ಬಾಚಿಕೊಳ್ಳಲು ಬಂದಿದ್ದಾರೆ. ಈ ಉಚಿತ ಶಾಪಿಂಗ್‌ ಮಾಲ್‌ನೊಳಗೆ ಜನದಟ್ಟಣೆಯೂ ಹೆಚ್ಚಾಗಿದೆ. ಹೀಗಾಗಿ, ಅಗತ್ಯವಿರುವವರು ಮಾತ್ರ ಉಚಿತ ಶಾಪಿಂಗ್‌ ಮಾಲ್‌ನಿಂದ ತೆಗೆದುಕೊಳ್ಳಿ ಎಂದು ಆಗಾಗ ಮೈಕ್‌ನಲ್ಲಿ ಹೇಳುವ ಪರಿಸ್ಥಿತಿಯೂ ಬಂದಿದೆ ಎಂದು ಸಂಘಟಕರು ಹೇಳಿದ್ದಾರೆ.

ಜನಕಲ್ಯಾಣ ಸಭಾದ ಈ ಯೋಜನೆ ಹಲವು ಜನರಿಗೆ ಮೋಟಿವೇಷನ್‌ ಕೂಡ ನೀಡಿದೆ. ಸಾಕಷ್ಟು ಜನರು ಈ ಯೋಜನೆಗೆ ಹಣವನ್ನೂ ನೀಡುತ್ತಿದ್ದಾರೆ. ಹೀಗಾಗಿ, ಹೆಚ್ಚಿನ ಸಂಖ್ಯೆಯಲ್ಲಿ ಡ್ರೆಸ್‌ಗಳು ಸೇರಿದಂತೆ ಸಾಕಷ್ಟು ವಸ್ತುಗಳನ್ನು ಉಚಿತ ಮಾಲ್‌ನಲ್ಲಿ ಇಡಲು ಸಾಧ್ಯವಾಗಿದೆ ಎಂದು ಅವರು ಹೇಳಿದ್ದಾರೆ.

IPL_Entry_Point