Japan Amar Prem Kahani: ಸುನಾಮಿಯಲ್ಲಿ ಕಣ್ಮರೆಯಾದ ಪತ್ನಿಗಾಗಿ 13 ವರ್ಷದ ನಂತರವೂ ಹುಡುಕಾಟ ನಿಲ್ಲಿಸದ ಪತಿ, ಜಪಾನ್ ನಲ್ಲೊಂದು ಅಮರ ಪ್ರೇಮ
Viral News ಸತತ ಹದಿಮೂರು ವರ್ಷದಿಂದ ಜಪಾನ್‌ನ ವ್ಯಕ್ತಿಯೊಬ್ಬರು ಸುನಾಮಿಯಲ್ಲಿ ಕೊಚ್ಚಿ ಹೋಗಿದ್ದ ಪತ್ನಿಯ ದೇಹಕ್ಕಾಗಿ ಹುಡುಕಾಟ ಮುಂದುವರೆಸಿದ್ದಾರೆ. ಪ್ರೀತಿಯ ದ್ಯೋತಕ ಆ ಕ್ಷಣಗಳು ಹೀಗಿವೆ.
ಟೋಕಿಯೋ: ಇದೊಂದು ನಿಜಕ್ಕೂ ಅಮರ ಪ್ರೇಮ ಕಥೆಯೇ. ಇಬ್ಬರೂ ಮೂರೂವರೆ ದಶಕದ ಹಿಂದೆಯೇ ಪ್ರೀತಿಸಿ ಮದುವೆಯಾಗಿದ್ದರು. ಅನ್ಯೋನ್ಯವಾಗಿ ಬದುಕಿದ್ದರು ಕೂಡ. ಬದುಕಿನಲ್ಲಿ ಸಂಭವಿಸುವ ಕೆಲವೊಂದು ದುರಂತಗಳು ಮಾಯದ ಗಾಯಗಳನ್ನು ಸೃಷ್ಟಿಸಿಬಿಡುತ್ತವೆ. ಸುನಾಮಿ ಅಡಿ ಸಿಲುಕಿ ಪತ್ನಿ ಕೊಚ್ಚಿಕೊಂಡು ಹೋಗೇಬಿಟ್ಟರು. ಪತ್ನಿಯ ದೇಹವೂ ಸಿಗಲಿಲ್ಲ. ಪ್ರೀತಿಸಿ ಮದುವೆಯಾಗಿ ಬದುಕುತ್ತಿದ್ದ ಪತಿಯ ಪರಿಸ್ಥಿತಿ ಏನಾಗಬೇಡ. ಪತ್ನಿಯನ್ನು ಮರೆಯಲೊಲ್ಲದ ಆತ ಈಗಲೂ ಪತ್ನಿಗಾಗಿ ಜಪಾನ್ ನ ಸಮುದ್ರದಲ್ಲಿ ಹುಡುಕಾಟ ನಡೆಸುತ್ತಲೇ ಇದ್ದಾರೆ. ಆಕೆಯ ನೆನಪಾದಾಗಲೆಲ್ಲಾ ಸಮುದ್ರದಲ್ಲಿ ಡೈವ್ ಮಾಡುತ್ತಾರೆ. ಆಕೆಯ ದೇಹ ಸಿಗಬಹುದೇನೋ, ಕಲ್ಲುಗಳ ನಡುವೆ ಇರಬಹುದೇನೋ ಎನ್ನುವ ನಂಬಿಕೆಯೊಂದಿಗೆ ಪ್ರಯತ್ನ ಮುಂದುವರೆಸಿದ್ದಾರೆ.
ಅವರ ಹೆಸರು ಯಾಸವೋ ತಕಮಾಟ್ಸು(Yasuo Takamatsu) ಜಪಾನಿನ ಫುಕೋಶಿಮಾದ(Fukushima) ಕಂಪೆನಿಯೊಂದರಲ್ಲಿ ಉದ್ಯೋಗಿಯಾಗಿದ್ದರು. ಈಗ 65 ವರ್ಷದ ಆಜುಬಾಜು. ಅವರ ಪತ್ನಿ ಯುಕೋ(Yuko) ಈಗ ಬದುಕಿದ್ದರೆ 60 ವರ್ಷ. ಅವರು ಬ್ಯಾಂಕ್ ಒಂದರಲ್ಲಿ ಅಧಿಕಾರಿಯಾಗಿದ್ದವರು. ಜಪಾನ್‌ನವರೇ ಆದ ಇಬ್ಬರೂ ಎಂಬತ್ತರ ದಶಕದಲ್ಲಿ ಕಾರ್ಯಕ್ರಮವೊಂದರಲ್ಲಿ ಭೇಟಿಯಾಗಿದ್ದರು. ಆನಂತರ ಪ್ರೇಮಿಸಿ ಮದುವೆಯಾಗಿದ್ದರು ಕೂಡ. ಅವರ ಬದುಕಿನಲ್ಲಿ ಪ್ರೀತಿಗೇನೂ ಕೊರತೆ ಇರಲಿಲ್ಲ. ಎರಡೂವರೆ ದಶಕ ಕಾಲ ಅವರ ಬದುಕು ಎಂದಿನಂತೆಯೇ ನಡೆದಿತ್ತು. ಆದರೆ 2011 ರಲ್ಲಿ ಸಂಭವಿಸಿದ ಸುನಾಮಿ(Japan Tsunami) ಇಬ್ಬರನ್ನು ಬೇರ್ಪಡಿಸಿಬಿಟ್ಟಿತು. ಬ್ಯಾಂಕ್ ನಲ್ಲಿ ಕಾರ್ಯನಿರತರಾಗಿದ್ದ ಯುಕೋ ಅವರನ್ನು ಸುನಾಮಿ ಕೊಚ್ಚಿಕೊಂಡು ಹೋಗಿತ್ತು. 20 ಸಾವಿರಕ್ಕೂ ಅಧಿಕ ಮಂದಿ ಜೀವ ತೆಗದುಕೊಂಡಿತು ಸುನಾಮಿ.ಯುಕೋ ಕೂಡ ಕೊಚ್ಚಿಕೊಂಡು ಹೋಗಿರುವುದು ಪತಿಗೆ ತಿಳಿಯಿತು. ಹುಡುಕಾಟ ನಡೆಸಿದರೂ ಪ್ರಯೋಜನವಾಗಲಿಲ್ಲ. ಪತ್ನಿ ಮುಖ ನೋಡಬೇಕು ಎಂದು ಹಂಬಲಿಸಿದ ಯಾಸವೋ ಅವರಿಗೆ ಅದು ಈಡೇರಲೇ ಇಲ್ಲ.
ಯಾಸುವೊ ತಕಮಾಟ್ಸು, 2011 ರ ವಿನಾಶಕಾರಿ ಸುನಾಮಿಯಲ್ಲಿ ಕಳೆದುಹೋದ ತನ್ನ ಪತ್ನಿ ಯುಕೊಗಾಗಿ ಅಚಲ ಅನ್ವೇಷಣೆಯನ್ನು ನಿಲ್ಲಿಸಿಯೇ ಇಲ್ಲ. ಜೀವನ ಸಂಗಾತಿಯ ಅಂತಿಮ ವಿಧಿಗಳನ್ನು ಸರಿಯಾಗಿ ನಿರ್ವಹಿಸಬೇಕು. ಆಕೆಗೊಂದು ಗೌರವದ ವಿದಾಯ ಹೇಳಬೇಕು ಎಂಬ ಬಯಕೆಯಿಂದ ತಕಮಾಟ್ಸು, ಜಪಾನ್‌ನ ಫುಕುಶಿಮಾದ ಕೊಳಕು ನೀರಿನಲ್ಲಿ ಡೈವಿಂಗ್ ಮಾಡಿ, ಪತ್ನಿ ಅವಶೇಷಗಳನ್ನು ಹುಡುಕುತ್ತಾ ಒಂದು ದಶಕಕ್ಕೂ ಹೆಚ್ಚು ಕಾಲ ಕಳೆದಿದ್ದಾರೆ ಎಂದು ಮೆಟ್ರೋ ವರದಿ ಮಾಡಿದೆ.
ಇತಿಹಾಸದಲ್ಲೇ ಅತ್ಯಂತ ಮಾರಣಾಂತಿಕವಾದ ಸುನಾಮಿಯು ಸುಮಾರು 20,000 ಜೀವಗಳನ್ನು ಬಲಿ ತೆಗೆದುಕೊಂಡಿತು ಮತ್ತು ಸಾವಿರಾರು ಜನರು ಕಾಣೆಯಾದರು. ಹತ್ತಿರದ ಬ್ಯಾಂಕಿನಲ್ಲಿ ಕೆಲಸ ಮಾಡುತ್ತಿದ್ದ ಯುಕೋ, ಎತ್ತರದ ಅಲೆಗಳಿಂದ ಕೊಚ್ಚಿಹೋದರು. ಪ್ರೀತಿಯ ಯುಕೋ ಸಿಗಲಿಲ್ಲ. ಹುಡುಕಾಟ ನಿಲ್ಲಿಸಿಲ್ಲ ಎಂದು ಅವರು ನೆನಪಿಸಿಕೊಳ್ಳುತ್ತಾರೆ.
ತಕಮಾಟ್ಸು ಅವರ ಹುಡುಕಾಟವು ನಿರಂತರ ಪ್ರಯತ್ನವೇ ಆಗಿ ಹೋಗಿದೆ.. ಮಾಸಯೋಶಿ ತಕಾಹಾಶಿ ಎಂಬ ಸ್ವಯಂಸೇವಕರ ಸಹಾಯದಿಂದ, ತಕಮಾಟ್ಸು ಹೇಗೆ ಡೈವ್ ಮಾಡಬೇಕೆಂದು ಕಲಿತರು. ಏಕೆಂದರೆ ಅವರು ಈ ಹಿಂದೆ ಸುನಾಮಿ ಅವಶೇಷಗಳನ್ನು ನೀರೊಳಗಿನ ಸ್ವಚ್ಛಗೊಳಿಸಿದ ಕಾರಣ ಹುಡುಕಾಟವನ್ನು ಪ್ರಾರಂಭಿಸಲು ಸಹಾಯವಾಗುತ್ತದೆ ಎಂದು ಭಾವಿಸಿ ತಕಾಹಾಶಿ ಸಹಾಯ ಪಡೆದಿದ್ದಾರೆ. ಕೊರೆಯುವ ತಂಪಾದ ನೀರು ಮತ್ತು ಸೀಮಿತ ಗೋಚರತೆ ಸೇರಿದಂತೆ ಅಪಾರ ಸವಾಲುಗಳನ್ನು ಎದುರಿಸುತ್ತಿದ್ದರೂ ಇಬ್ಬರೂ ಯುಕೊ ಅವಶೇಷಗಳನ್ನು ಹುಡುಕುತ್ತಿದ್ದಾರೆ. ಆದರೆ ಅವರಿಗೆ ಪತ್ನಿ ಮಾತ್ರ ಕಂಡಿಲ್ಲ.
ಇದರ ನಡುವೆ ಪತ್ನಿಯ ನೆನಪಿನ ಫೋಟೋಗಳ ಜತೆಗೆ ಸಂದೇಶವನ್ನು ಓದಿದಾಗ ಯಾಸುವೊ ತಕಮಾಟ್ಸು ಅವರು ಭಾವುಕರಾಗುತ್ತಾರೆ. ದುರಂತ ನಡೆದ ದಿನ ಯುಕೋ ತನ್ನ ಫೋನ್ನಲ್ಲಿ ತನ್ನ ಪತಿಗೆ ಎರಡು ಸಂದೇಶಗಳನ್ನು ಬಿಟ್ಟುಹೋಗಿದ್ದರು. ನೀವು ಚೆನ್ನಾಗಿದ್ದೀರಾ? ನಾನು ಮನೆಗೆ ಹೋಗಲು ಬಯಸುತ್ತೇನೆ ಎನ್ನುವ ಸಂದೇಶಗಳು ಇದ್ದವು. ಘಟನೆ ನಡೆದ ಕೆಲವು ದಿನಗಳ ಬಳಿಕ ಪತ್ನಿ ಮೊಬೈಲ್ ಸಿಕ್ಕಾಗ ಈ ಸಂದೇಶಗಳು ದೊರೆತಿದ್ದವು. ಅದನ್ನು ಓದಿದ ತಕಮಾಟ್ಸು ಪತ್ನಿ ಪ್ರೀತಿಯ ಮಾತುಗಳಿಂದ ಕಣ್ಣೀರಾಗಿದ್ದರು. ಇದಕ್ಕಾಗಿಯೇ ಆಗಿನಿಂದಲೇ ಹುಡುಕಾಟವನ್ನು ನಡೆಸಿ ಈಗಲೂ ಮುಂದುವರೆಸಿದ್ದಾರೆ.
ನ್ಯೂಯಾರ್ಕ್ ಟೈಮ್ಸ್ ಗೆ ನೀಡಿದ ಸಂದರ್ಶನದಲ್ಲಿಯಾಸುವೊ ತಕಮಾಟ್ಸು, ಇದು ಕಷ್ಟಕರವಾಗಿರುತ್ತದೆ ಎಂದು ನಾನು ನಿರೀಕ್ಷಿಸಿದ್ದೆ. ಅದು ಹಾಗೆಯೇ ಆಗಿದೆ. ಕಷ್ಟಕ್ಕಿಂತ ನನ್ನನ್ನು ಪ್ರೀತಿಸಿದ ಆಕೆಯನನು ಹುಡುಕುವುದು, ಗೌರವಯುತ ವಿದಾಯ ಹೇಳುವುದು ನಾನು ನೀಡಬಹುದಾದದ ಪ್ರೀತಿ. ಆಕೆಯನ್ನು ಹುಡುಕುವುದನ್ನು ಬಿಟ್ಟು ನನಗೆ ಬೇರೆ ದಾರಿಯಿಲ್ಲ, ನಾನು ಸಮುದ್ರದಲ್ಲಿದ್ದಾಗ ಆಕೆಗೆ ಹತ್ತಿರವಾಗಿದ್ದೇನೆ ಎಂದು ಭಾವಿಸುತ್ತೇನೆ. ಇದರಿಂದಲೇ ಹದಿಮೂರು ವರ್ಷದ ನಂತರವೂ ಆಕೆಯ ಹುಡುಕಾಟ ನಿಲ್ಲಿಸಿಲ್ಲ. ಉಸಿರು ಇರುವವರೆಗೂ ನಿಲ್ಲಿಸೋಲ್ಲ ಎಂದು ಹೇಳಿರುವುದು ಪ್ರೀತಿ ಇನ್ನೂ ಅಮರ ಎನ್ನುವುದನ್ನೂ ಸಾರುತ್ತದೆ. ಅವರ ಮಾತು ಕೇಳಿದವರ ಕಣ್ಣಾಲಿಗಳೂ ತುಂಬಿ ಬರುತ್ತವೆ.