Viral News: ಎಐ ಮೂಲಕ 1 ಸಾವಿರ ಉದ್ಯೋಗಗಳಿಗೆ ಅರ್ಜಿ ಸಲ್ಲಿಸಿದ ವ್ಯಕ್ತಿ, ನಿದ್ರೆಯಲ್ಲಿದ್ದಾಗ ಕಳುಹಿಸಿದ ಅರ್ಜಿಗಳಿಗೆ ಅಚ್ಚರಿಯ ಮಾರುತ್ತರ
ವ್ಯಕ್ತಿಯೊಬ್ಬರು ಎಐ ಬಾಟ್ ಬಳಸಿ 1 ಸಾವಿರ ಉದ್ಯೋಗಗಳಿಗೆ ಅರ್ಜಿ ಸಲ್ಲಿಸಿರುವ ತನ್ನ ಅನುಭವವನ್ನು ರೆಡ್ಡಿಟ್‌ನಲ್ಲಿ ಹಂಚಿಕೊಂಡಿದ್ದಾರೆ. ಇವರಿಗೆ ಒಂದು ತಿಂಗಳಲ್ಲಿ 50 ಉದ್ಯೋಗ ಸಂದರ್ಶನ ದೊರಕಲು ಇದು ನೆರವಾಗಿದೆಯಂತೆ.
ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಈ ಜಗತ್ತಿನಲ್ಲಿ ಸಾಕಷ್ಟು ಹೊಸತನ ತರುತ್ತಿದೆ. ಬರವಣಿಗೆ, ವಿನ್ಯಾಸ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಎಐ ಪಾರುಪತ್ಯವಿದೆ. ಒಬ್ಬರಿಗಿಂತ ಒಬ್ಬರು ಎಐಯನ್ನು ಭಿನ್ನವಾಗಿ ಬಳಸುತ್ತಿದ್ದಾರೆ. ಉದ್ಯೋಗ ಕ್ಷೇತ್ರದಲ್ಲಿಯೂ ಎಐ ಸಾಕಷ್ಟು ಕೆಲಸ ಮಾಡುತ್ತಿದೆ. ರೆಸ್ಯುಮೆ ರಚನೆ, ಕವರ್ ಲೆಟರ್ ರಚನೆ ಇತ್ಯಾದಿಗಳನ್ನು ರಚಿಸಲು ನೆರವಾಗುತ್ತದೆ. ಸಾವಿರಾರು ರೆಸ್ಯುಮೆಗಳು, ಸಿವಿಗಳ ನಡುವೆ ಕಂಪನಿಗೆ ಬೇಕಾಗಿರುವ ಕೌಶಲವಿರುವ ಉದ್ಯೋಗಿಗಳನ್ನು ಶಾರ್ಟ್ ಲಿಸ್ಟ್ ಮಾಡಲು ಕೂಡ ಎಐ ನೆರವಾಗುತ್ತದೆ. ಆದರೆ, ಇಲ್ಲೊಬ್ಬರು ವಿವಿಧ ಕಂಪನಿಗಳಿಗೆ ಉದ್ಯೋಗದ ಅರ್ಜಿ ಕಳುಹಿಸಲು ಎಐ ಬಾಟ್ ಕಳುಹಿಸಿ ಸುದ್ದಿಯಲ್ಲಿದ್ದಾರೆ. ಅವರು ಎಐ ಟೂಲ್ ಮೂಲಕ 1 ಸಾವಿರ ಉದ್ಯೋಗಗಳಿಗೆ ಅರ್ಜಿ ಸಲ್ಲಿಸಿದ್ದಾನೆ. ಎಐ ಬಾಟ್ ಅರ್ಜಿ ಸಲ್ಲಿಕೆ ಮಾಡುವ ಸಮಯದಲ್ಲಿ ಇವರು ನಿದ್ರಿಸುತ್ತಿದ್ದರು. ಇದರ ಫಲಿತಾಂಶ ಕಂಡು ಸಾಕಷ್ಟು ಜನರು ಅಚ್ಚರಿಗೊಂಡಿದ್ದಾರೆ.
ರೆಡ್ಡಿಟ್ ತಾಣದಲ್ಲಿ ತನ್ನ ಅನುಭವವನ್ನು ಅವರು ಬರೆದಿದ್ದಾರೆ. ತನಗೆ ಉದ್ಯೋಗ ಹುಡುಕಲು ನೆರವಾಗುವಂತಹ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಟೂಲ್ ಅನ್ನು ಇವರು ಮನೆಯಲ್ಲಿಯೇ ರಚಿಸಿದ್ದಾರೆ. ಈ ಎಐ ಬಾಟ್ ತನಗೆ ನಿಗದಿಪಡಿಸಿದ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿ ಮುಗಿಸಿದೆಯಂತೆ. ರೆಡ್ಡಿಟ್‌ನ ಗೆಟ್ ಎಂಪ್ಲಾಯ್ಡ್ ಫೋರಮ್‌ನಲ್ಲಿ ಇವರು ಈ ಪೋಸ್ಟ್ ಹಂಚಿಕೊಂಡಿದ್ದಾರೆ.
"ಅಭ್ಯರ್ಥಿಯ ಮಾಹಿತಿ ವಿಶ್ಲೇಷಣೆ, ಉದ್ಯೋಗದ ಡಿಸ್ಕ್ರಿಪ್ಷನ್ ಪರಿಶೀಲನೆ, ಯೂನಿಕ್ ಆದ ಸಿವಿಗಳ ರಚನೆ, ಪ್ರತಿಯೊಂದು ಉದ್ಯೋಗಕ್ಕೂ ಸೂಕ್ತವಾದ ಕವರ್ ಲೆಟರ್ ರಚನೆ, ಉದ್ಯೋಗದಾತರು ಕೇಳುವ ನಿರ್ದಿಷ್ಟ ಪ್ರಶ್ನೆಗಳಿಗೆ ಉತ್ತರ ಮತ್ತು ಸ್ವಯಂಚಾಲಿತವಾಗಿ ಪ್ರತಿಯೊಂದು ಉದ್ಯೋಗಕ್ಕೂ ಅರ್ಜಿ ಸಲ್ಲಿಸುವಂತೆ ಈ ಎಐ ಟೂಲ್ ರಚಿಸಲಾಗಿತ್ತು.
ಕೇವಲ ಒಂದು ತಿಂಗಳಲ್ಲಿ 50 ಉದ್ಯೋಗ ಸಂದರ್ಶನಗಳನ್ನು ಎಟೆಂಡ್ ಮಾಡಲು ಇದು ನೆರವಾಯಿತು ಎಂದು ಅವರು ರೆಡ್ಡಿಟ್‌ನಲ್ಲಿ ಬರೆದಿದ್ದಾರೆ. ತನ್ನ ಈ ಟೂಲ್‌ನ ಕೆಲಸವನ್ನು ಹೊಗಳಿರುವ ಇವರು ಭವಿಷ್ಯದಲ್ಲಿ ಅರ್ಜಿ ಸಲ್ಲಿಸುವ ಪ್ರಕ್ರಿಯೆಗೆ ಮನುಷ್ಯರ ಸಹಾಯ ಬೇಕಿರದು ಎಂದೂ ಹೇಳಿದ್ದಾರೆ.
ನನ್ನ ಈ ವಿಧಾನವು ಹೆಚ್ಚು ಉದ್ಯೋಗ ಸಂದರ್ಶನಗಳನ್ನು ಪಡೆಯಲು ನೆರವಾಗಿದೆ. ಏಕೆಂದರೆ, ಈಗ ಉದ್ಯೋಗದಾತರು ಅಭ್ಯರ್ಥಿಗಳ ರೆಸ್ಯುಮ್ ಪರಿಶೀಲನೆಗೆ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಬಳಸುತ್ತಾರೆ. ಎಐ ಮತ್ತು ಮನುಷ್ಯರ ನೋಟಕ್ಕೆ ಪೂರಕವಾಗಿ ನನ್ನ ರೆಸ್ಯುಮೆ ಸ್ಕ್ರಿಪ್ಟ್ ಇತ್ತು ಎಂದು ಅವರು ಹೇಳಿದ್ದಾರೆ.
"ಈ ವಿಧಾನವನ್ನು ಈಗಿನ ಉದ್ಯೋಗ ಜಗತ್ತಿಗೆ ಅಳವಡಿಸಬಹುದೇ ಎಂದು ನಾನು ಖಚಿತವಾಗಿ ಹೇಳಲಾರೆ. ಆಟೋಮೇಷನ್‌ನಿಂದ ವೃತ್ತಿಪರ ಬಾಂಧವ್ಯ ಕಳೆದುಕೊಳ್ಳಬೇಕಾಗಬಹುದು. ಇದರಿಂದ ಆಯ್ಕೆ ಪ್ರಕ್ರಿಯೆಯು ಯಾಂತ್ರಿಕವಾಗಿ ಬಿಡಬಹುದು. ಮಾನವ ಹಸ್ತಕ್ಷೇಪ ಇಲ್ಲದ ಇಂತಹ ಪ್ರಕ್ರಿಯೆಗಳು ಭವಿಷ್ಯದ ಉದ್ಯೋಗ ಸ್ಥಳದಲ್ಲಿ ವ್ಯತ್ಯಾಸ ತರಬಹುದು" ಎಂದು ಅವರು ಆತಂಕವನ್ನೂ ವ್ಯಕ್ತಪಡಿಸಿದ್ದಾರೆ.