ದೆಹಲಿಯ ಓಲಾ ಫುಡ್ಸ್ ವಿತರಣಾ ಪಾಲುದಾರನ ವಿಡಿಯೋ ವೈರಲ್; ಆತನ ನಡವಳಿಕೆಗೆ ಖಂಡನೆ, ಟ್ರೋಲ್‌ಗೊಳಗಾದ ವರ್ತನೆ
ದೆಹಲಿಯ ಓಲಾ ಫುಡ್ಸ್ ವಿತರಣಾ ಪಾಲುದಾರನ ವಿಡಿಯೋ ವೈರಲ್ ಆಗಿದೆ. ಗ್ರಾಹಕರ ಜೊತೆಗೆ ಆತನ ನಡವಳಿಕೆಗೆ ಖಂಡನೆ ವ್ಯಕ್ತವಾಗಿದ್ದು, ಸಾಮಾಜಿಕ ತಾಣಗಳನ್ನು ಆತನ ವರ್ತನೆ ಟ್ರೋಲ್‌ಗೆ ಒಳಗಾಗಿದೆ.
ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಓಲಾ ಫುಡ್ಸ್ ವಿತರಣಾ ಪಾಲುದಾರ (Ola Foods delivery partner) ಗ್ರಾಹಕರು ಆರ್ಡರ್ ಮಾಡಿದ ಆಹಾರವನ್ನು ಸೇವಿಸುತ್ತಿರುವುದು ಮತ್ತು ಆತನ ನಡವಳಿಕೆ ವಿಚಾರ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
ನೋಯ್ಡಾ ಮೂಲದ ಉದ್ಯಮಿ ಅಮನ್ ಬಿರೇಂದ್ರ ಜೈಸ್ವಾಲ್ ಅವರು ಓಲಾ ಫುಡ್ಸ್‌ನಿಂದ ಊಟವನ್ನು ಆರ್ಡರ್ ಮಾಡಿದ್ದು ಅವರು ಈ ವಿಲಕ್ಷಣ ಅನುಭವವನ್ನು ಸೋಷಿಯಲ್ ಮೀಡಿಯಾ ತಾಣ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಓಲಾ ಫುಡ್ಸ್‌ನ ಆಹಾರ ವಿತರಣಾ ಪಾಲುದಾರ ಅವರು ಆರ್ಡರ್ ಮಾಡಿದ್ದ ಆಹಾರ ಸೇವಿಸುತ್ತಿರುವ ಮತ್ತು ಅತ್ಯಂತ ನಿರ್ಲಜ್ಜ ನಡವಳಿಕೆ ಪ್ರದರ್ಶಿಸುತ್ತಿರುವ ದೃಶ್ಯವಿರುವ ವಿಡಿಯೋವನ್ನು ಅಮನ್ ಜೈಸ್ವಾಲ್ ಶೇರ್ ಮಾಡಿದ್ಧಾರೆ.
ಓಲಾ ಫುಡ್ಸ್ ವಿತರಣಾ ಪಾಲುದಾರನ ವಿಡಿಯೋ ವೈರಲ್; ಅಮನ್ ಜೈಸ್ವಾಲ್ ಹೇಳಿರುವುದೇನು
ಓಲಾ ಫುಡ್ಸ್ ವಿತರಣಾ ಪಾಲುದಾರ ಮೊದಲು ತನಗೆ ಕರೆ ಮಾಡಿ ಆಹಾರ ವಿತರಿಸಲು ಹೆಚ್ಚುವರಿಯಾಗಿ 10 ರೂಪಾಯಿ ನೀಡುವಂತೆ ಒತ್ತಾಯಿಸಿದ್ದಾಗಿ ಅಮನ್ ಬೀರೇಂದ್ರ ಜೈಸ್ವಾಲ್ ಹೇಳಿಕೊಂಡಿದ್ದಾರೆ. ಆದರೆ, ಆರಂಭದಲ್ಲಿ ಈ ಬೇಡಿಕೆ ಈಡೇರಿಸಲು ನಿರಾಕರಿಸಿದ್ದು, ಅಂತಿಮವಾಗಿ ಹೆಚ್ಚುವರಿ 10 ರೂಪಾಯಿ ಪಾವತಿಸಲು ಒಪ್ಪಿಕೊಂಡೆ. ಆದರೆ, ಇದು ಈಗಾಗಲೇ ಓಲಾ ಫುಡ್ಸ್ ವಿಧಿಸಿರುವ ವಿತರಣಾ ಶುಲ್ಕಕ್ಕಿಂತ ಹೆಚ್ಚಿನದ್ದು. ಆದಾಗ್ಯೂ, 45 ನಿಮಿಷಗಳು ಕಳೆದ ಬಳಿಕವೂ ವಿತರಣಾ ಪಾಲುದಾರ ಆಹಾರ ವಿತರಣೆ ಮಾಡಿಲ್ಲ. ಯಾಕೆ ತಡವಾಯಿತು ಎಂದು ಪರಿಶೀಲಿಸಲು ಹೊರಗೆ ಹೋದಾಗ, ಅಲ್ಲಿ ಓಲಾ ಫುಡ್ಸ್ ವಿತರಣಾ ಪಾಲುದಾರ ಪಾರ್ಕ್ ಮಾಡಿದ್ದ ತನ್ನ ಬೈಕ್ ಮೇಲೆ ಕುಳಿತುಕೊಂಡು ಅದೇ ಆಹಾರ ಪೊಟ್ಟಣದಿಂದ ಆಹಾರ ಸೇವಿಸುತ್ತಿದ್ದ" ಎಂದು ಅಮನ್ ಜೈಸ್ವಾಲ್ ಹೇಳಿಕೊಂಡಿದ್ದಾರೆ.
ಆಘಾತದಿಂದ ಆತನ ಸಮೀಪಕ್ಕೆ ಹೋಗಿ ತನ್ನ ಫುಡ್ ಆರ್ಡರ್ ವಿಚಾರ ಕೇಳಿದಾಗ, "ಹಾನ್ ತೋ ಕರ್ತೆ ರಹೋ ಜೋ ಕರ್ನಾ ಹೈ (ನಿಮಗೆ ಬೇಕಾದುದನ್ನು ಮಾಡಿ)" ಎಂದು ದಾರ್ಷ್ಟ್ಯತನದಿಂದ ಉತ್ತರ ನೀಡಿದ್ದ. ಪುನಃ ಕೇಳಿದಾಗ, ಇನ್ನೇನು ಮಾಡೋಣ ಎಂದು ಉತ್ತರಿಸಿದ್ದ ಎಂದು ಜೈಸ್ವಾಲ್ ಖೇದ ವ್ಯಕ್ತಪಡಿಸಿದ್ದಾರೆ.
ಓಲಾ ಫುಡ್ಸ್ ವಿತರಣಾ ಪಾಲುದಾರನ ವೈರಲ್ ವಿಡಿಯೋ ಇಲ್ಲಿದೆ
“ಓಲಾ ಫುಡ್ಸ್ ನಿಮ್ಮ ವಿತರಣಾ ಪಾಲುದಾರರು ತಮ್ಮ ಕೆಲಸವನ್ನು ಹೇಗೆ ಮಾಡುತ್ತಿದ್ದಾರೆ, ಮೊದಲು ಅವರು ವಿತರಣೆ ನೀಡಲು ಹೆಚ್ಚುವರಿ 10 ರೂಪಾಯಿ ತೆಗೆದುಕೊಳ್ಳುತ್ತೇವೆ ಎಂದರು. ಆರಂಭದಲ್ಲಿ ನಾನಿದನ್ನು ನಿರಾಕರಿಸಿದರೂ, ಬಳಿಕ ಹೇಗಾದರೂ ಸರಿ ಬನ್ನಿ ಕೊಡುತ್ತೇನೆ ಎಂದು ಹೇಳಿದ್ದೆ. ಆದರೆ ಅವರು ನನ್ನನ್ನು ಸುಮಾರು 45 ನಿಮಿಷಗಳ ಕಾಲ ಕಾಯುವಂತೆ ಮಾಡಿದರು. ನಾನು ಆತನನ್ನು ಕಂಡಾಗ ಆತ ಹೇಳಿದ್ದು ಇದನ್ನೇ [sic] ”ಎಂದು ಜೈಸ್ವಾಲ್ ವೀಡಿಯೊವನ್ನು ಹಂಚಿಕೊಳ್ಳುವಾಗ ಇನ್‌ಸ್ಟಾಗ್ರಾಂನಲ್ಲಿ ಬರೆದಿದ್ದಾರೆ.
ಈ ವಿಡಿಯೋ ಮೈಕ್ರೋಬ್ಲಾಗಿಂಗ್ ಸೈಟ್ ಎಕ್ಸ್‌ನಲ್ಲೂ ಶೇರ್ ಆಗಿದ್ದು, ಅಲ್ಲಿ ಇದು 10 ಲಕ್ಷ ವೀಕ್ಷಣೆ ಪಡೆದಿದೆ. ಇದು ಆಕ್ರೋಶ ಮತ್ತು ಟ್ರೋಲ್‌ಗೆ ಒಳಗಾಗಿದೆ. ಅನೇಕರು ಹಲವು ರೀತಿಯ ಪ್ರತಿಕ್ರಿಯೆಯನ್ನು ನೀಡಿದ್ದಾರೆ.
(ಕನ್ನಡದಲ್ಲಿ ಸ್ಪಷ್ಟ ಸುದ್ದಿ, ನಿಖರ ವಿಶ್ಲೇಷಣೆ, ಸಮಗ್ರ ಮಾಹಿತಿಗೆಎಚ್‌ಟಿ ಕನ್ನಡ ಬೆಸ್ಟ್.ಕರ್ನಾಟಕದ ತಾಜಾ ವಿದ್ಯಮಾನ, ಅದೇ ರೀತಿರಾಜಕೀಯ ವಿಶ್ಲೇಷಣೆ, ದೇಶ ಮತ್ತು ಜಗತ್ತಿನ ವಿದ್ಯಮಾನಗಳ ವರದಿಗಳನ್ನು ಓದಲುkannada.hindustantimes.com/nation-and-world ಕ್ಕೆ ಭೇಟಿ ನೀಡಿ.)