Viral News: ಪಾನಿಪುರಿ ಮಾರಾಟಗಾರನಿಗೆ ಜಿಎಸ್‌ಟಿ ನೋಟಿಸ್, ವರ್ಷದಲ್ಲಿ 40 ಲಕ್ಷ ರೂಪಾಯಿ ಆನ್‌ಲೈನ್ ವಹಿವಾಟು
ತಮಿಳುನಾಡಿನ ಪಾನಿಪುರಿ ಮಾರಾಟಗಾರನಿಗೆ ದೊರಕಿದ ಜಿಎಸ್‌ಟಿ ನೋಟಿಸ್‌ವೊಂದರ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಆತ 40 ಲಕ್ಷ ರೂಪಾಯಿ ಆನ್‌ಲೈನ್ ಪೇಮೆಂಟ್ ಸ್ವೀಕರಿಸಿದ್ದ. ಇದು ಸಣ್ಣ ವ್ಯವಹಾರಗಳ ತೆರಿಗೆ ಬಾಧ್ಯತೆ ಕುರಿತಾದ ಚರ್ಚೆಗೆ ನಾಂದಿ ಹಾಡಿದೆ.
ತಮಿಳುನಾಡಿನ ಪಾನಿ ಪುರಿ ಮಾರಾಟಗಾರನಿಗೆ ಬಂದಿರುವ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ನೋಟೀಸ್ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಕೆಲವರು ಈ ನೋಟಿಸ್‌ಗೆ ತಮಾಷೆಯಾಗಿ ಕಾಮೆಂಟ್ ಮಾಡುತ್ತಿದ್ದಾರೆ. ನಾನು ಐಟಿ ಜಾಬ್ ಬಿಟ್ಟು ಪಾನಿಪುರಿ ಅಂಗಡಿ ಇಡುವೆ ಎಂದೆಲ್ಲ ಜನರು ಪ್ರತಿಕ್ರಿಯೆ ನೀಡುತ್ತಿದ್ದಾರೆ. ತಮಿಳುನಾಡಿನ ಈ ಪಾನಿಪುರಿ ಅಂಗಡಿಯವನಿಗೆ 2023-24ನೇ ಸಾಲಿನಲ್ಲಿ 40 ಲಕ್ಷ ರೂಪಾಯಿಯನ್ನು ಆನ್‌ಲೈನ್ ಪಾವತಿ ಮೂಲಕ ಸ್ವೀಕರಿಸಿದ್ದಕ್ಕೆ ನೋಟಿಸ್ ನೀಡಲಾಗಿದೆ. ಈ ಕುರಿತು ರೆಡ್ಡಿಟ್ ತಾಣದಲ್ಲಿ ಚರ್ಚೆ ನಡೆಯುತ್ತಿದೆ.
ನೋಟಿಸ್‌ನಲ್ಲಿ ಏನಿದೆ?
ಈ ಪಾನಿಪುರಿ ಅಂಗಡಿಯವನಿಗೆ ಡಿಸೆಂಬರ್ 17, 2024ರಂದು ಬಂದ ನೋಟಿಸ್‌ನಲ್ಲಿ ಒಂದು ವರ್ಷದಲ್ಲಿ ನಡೆದ ಆನ್‌ಲೈನ್ ವ್ಯವಹಾರದ ಕುರಿತು ಮಾಹಿತಿ ಕೇಳಲಾಗಿದೆ. ತಮಿಳುನಾಡು ಸರಕು ಮತ್ತು ಸೇವಾ ತೆರಿಗೆ ಕಾಯಿದೆ ಮತ್ತು ಕೇಂದ್ರ ಜಿಎಸ್‌ಟಿ ಕಾಯಿದೆಯ ಸೆಕ್ಷನ್ 70ರ ನಿಬಂಧನೆಗಳ ಅಡಿಯಲ್ಲಿ ನೀಡಲಾದ ಸಮನ್ಸ್ ನೀಡಲಾಗಿದ್ದು, ಪಾನಿಪುರಿ ಮಾರಾಟಗಾರರನ್ನು ಖುದ್ದಾಗಿ ಹಾಜರಾಗಲು ಮತ್ತು ದಾಖಲೆಗಳನ್ನು ಒದಗಿಸುವಂತೆ ಕೇಳಿದೆ.
"ರೋಝರ್‌ಪೇ ಮತ್ತು ಫೋನ್‌ಪೇಯಲ್ಲಿ ಹಣ ಸ್ವೀಕರಿಸಿರುವ ಮಾಹಿತಿ ಆಧಾರದ ಮೇಲೆ ಈ ನೋಟಿಸ್ ಕಳುಹಿಸಲಾಗಿದೆ. ನೀವು ಸರಕುಗಳು/ಸೇವೆಗಳ ಔಟ್‌ವಾರ್ಡ್ ಪೂರೈಕೆಗಾಗಿ ಯುಪಿಐ ಪಾವತಿಗಳನ್ನು ಸ್ವೀಕರಿಸಿದ್ದೀರಿ. 2021-22, 2022-23 ಮತ್ತು 2023-24 ವರ್ಷಗಳಿಗೆ ಸ್ವೀಕರಿಸಿದ ಪಾವತಿಗಳು ಕೆಳಗಿವೆ" ಎಂದು ಸಮನ್ಸ್‌ನಲ್ಲಿ ತಿಳಿಸಲಾಗಿದೆ. 2023-24ರಲ್ಲಿ ಆನ್‌ಲೈನ್ ಪಾವತಿ ಮೂಲಕ ಈತ 40 ಲಕ್ಷ ರೂಪಾಯಿ ಸ್ವೀಕರಿಸಿರುವುದನ್ನು ಈ ನೋಟಿಸ್‌ನಲ್ಲಿ ನಮೂದಿಸಲಾಗಿದೆ.
ವಹಿವಾಟು ಮಿತಿಯನ್ನು ದಾಟಿದ ನಂತರವೂ ಜಿಎಸ್‌ಟಿ ನೋಂದಣಿ ಪಡೆಯದೆ ಸರಕು/ಸೇವೆಗಳನ್ನು ಪೂರೈಸುವುದು ಅಪರಾಧ ಎಂದು ನೋಟಿಸ್‌ನಲ್ಲಿ ತಿಳಿಸಲಾಗಿದೆ. ಈ ನೋಟಿಸ್‌ನ ಸತ್ಯಾಸತ್ಯತೆಯನ್ನು ಹಿಂದೂಸ್ತಾನ್ ಟೈಮ್ಸ್ ಕನ್ನಡ ದೃಢೀಕರಣ ಮಾಡಿಲ್ಲ. ಆದರೆ, ಸೋಷಿಯಲ್ ಮೀಡಿಯಾದಲ್ಲಿ ಈ ನೋಟಿಸ್ ಕುರಿತು ಬಿಸಿಬಿಸಿ ಚರ್ಚೆ ನಡೆಯುತ್ತಿದೆ.
ಸೋಷಿಯಲ್ ಮೀಡಿಯಾದಲ್ಲಿ ಪ್ರತಿಕ್ರಿಯೆ
"40 ಲಕ್ಷ ರೂಪಾಯಿ ಆನ್‌ಲೈನ್ ಪಾವತಿ ಪಡೆದಿರುವುದು ಆತನ ಆದಾಯ ಆಗಿರಬಹುದು ಅಥವಾ ಆಗಿರದೆ ಇರಬಹುದು. ಆತನಿಗೆ ಪಾನಿಪುರಿ ಸಿದ್ಧಪಡಿಸುವ ವಸ್ತುಗಳು, ಕೆಲಸಗಾರರ ಸಂಬಳ ಮತ್ತು ಇತರೆ ಖರ್ಚುಗಳು ಇರುತ್ತವೆ. ಹೀಗಿದ್ದರೂ ಆತನ ಗಳಿಕ ಸಾಕಷ್ಟಿದೆ" ಎಂದು ಎಕ್ಸ್‌ನಲ್ಲಿ ಒಬ್ಬರು ಪ್ರತಿಕ್ರಿಯೆ ನೀಡಿದ್ದಾರೆ.
ಸೈಕ್ಯಾಟ್ರಿ ಪ್ರೊಫೆಸರ ಡಾಕ್ಟರ್ ಧೀರಜ್ ಕೆ ಇದಕ್ಕೆ ಪ್ರತಿಕ್ರಿಯೆ ನೀಡಿದ್ದು, "ಇದು ಮೆಡಿಕಲ್ ಕಾಲೇಜಿನ ಪ್ರೊಫೆಸರ್ ವೇತನಕ್ಕಿಂತಲೂ ಅಧಿಕ" ಎಂದಿದ್ದಾರೆ. "ಪಾನಿ ಪುರಿ ಮಾರಾಟಗಾರ ಜಿಎಸ್‌ಟಿ ಪಡೆದು ಸರಕಾರಕ್ಕೆ ತೆರಿಗೆ ಕಟ್ಟಬಹುದು. ಈ ರೀತಿ ತೆರಿಗೆ ಪಾವತಿಸುವುದು ಜನರನ್ನು ನಗದು ವಹಿವಾಟಿಗೆ ಪ್ರೇರೇಪಿಸಬಹುದು" ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ.
"ಆತ ಜಿಎಸ್‌ಟಿ ಕಾಯಿದೆಯಡಿ ನೋಂದಣಿ ಮಾಡುವುದು ಸೂಕ್ತ" ಎಂದು ರೆಡ್ಡಿಟ್ ಬಳಕೆದಾರರೊಬ್ಬರು ಅಭಿಪ್ರಾಯಪಟ್ಟಿದ್ದಾರೆ. ಇನ್ನೊಬ್ಬರು ಜಿಎಸ್‌ಟಿ ಎಂದರೆ "ಗೋಲ್‌ಗಪ್ಪ ಸೇವ್‌ಪುರಿ ಟ್ಯಾಕ್ಸ್" ಎಂದು ತಮಾಷೆ ಮಾಡಿದ್ದಾರೆ.
ಇದು ಒಳ್ಳೆಯ ನಡೆ ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ. "ಇದು ಎಲ್ಲಾ ಬಿಸಿನೆಸ್ ಮಾಲೀಕರಿಗೆ ಅನ್ವಯವಾಗಬೇಕು. ಲಕ್ಷಾಂತರ ರೂಪಾಯಿ ಗಳಿಕೆ ಮಾಡಿದರೂ ತೆರಿಗೆ ಕಟ್ಟದೆ ಸಾಕಷ್ಟು ಜನ ನರು ಆರಾಮವಾಗಿದ್ದಾರೆ. ಆದರೆ, ಉದ್ಯೋಗಿಗಳು ತಮ್ಮ ವೇತನ ಹೆಚ್ಚಿದಂತೆ ಹೆಚ್ಚು ಹೆಚ್ಚು ತೆರಿಗೆ ಪಾವತಿಸುತ್ತಿದ್ದಾರೆ" ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನು ಕೆಲವರು ಈ ನೋಟಿಸ್‌ನ ಸತ್ಯಾಸತ್ಯತೆಯ ಕುರಿತು ಅನುಮಾನ ವ್ಯಕ್ತಪಡಿಸಿದ್ದಾರೆ. "ಪಾನಿಪುರಿ ಮಾರಾಟದಿಂದ ಇಷ್ಟು ಆದಾಯ ಸಂಪಾದಿಸಿದರೆ ಅಚ್ಚರಿಯಿಲ್ಲ. ಆದರೆ, ಈ ನೋಟಿಸ್ ಸತ್ಯಾಸತ್ಯತೆ ಕುರಿತು ಅನುಮಾನವಿದೆ" ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ.
ಸೇವ್‌ಪುರಿ ಅಂಗಡಿಯಾತನಲ್ಲಿ ಮರ್ಸಿಡಿಸ್ ಬೆಂಜ್
ಮುಂಬೈನಲ್ಲಿ ಬೀದಿಬದಿಯಲ್ಲಿ ಬೇಲ್‌ಪುರಿ ಮಾರಾಟ ಮಾಡುತ್ತಿರುವ ವ್ಯಕ್ತಿಯೊಬ್ಬರು ಮರ್ಸಿಡಿಸ್ ಬೆಂಜ್ ಕಾರು ಹೊಂದಿದ್ದಾರೆ ಎಂದು ಕರ್ನಾಟಕದ ಶ್ರೀನಿಧಿ ಹಂದೆ ಮಾಡಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಈ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ