ಪೊಲೀಸ್ ಉಡುಗೆಯಲ್ಲೇ ಪ್ರೀ ವೆಡ್ಡಿಂಗ್ ಶೂಟಿಂಗ್ ಮಾಡಿಸಿಕೊಂಡ ಪೊಲೀಸ್ ಜೋಡಿ, ಸಿನಿಮಾ ನೆನಪಿಸುವಂತಹ ವೈರಲ್ ವಿಡಿಯೋ ಇಲ್ಲಿದೆ ನೋಡಿ
ಹೈದರಾಬಾದ್ ಪೊಲೀಸ್ ಜೋಡಿಯ ವಿವಾಹ ಪೂರ್ವ ವಿಡಿಯೋ ಶೂಟಿಂಗ್ ವಿಡಿಯೋವೊಂದು ಇಂಟರ್‌ನೆಟ್‌ನಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಈ ಪೊಲೀಸ್ ಜೋಡಿ ಪೊಲೀಸ್ ಕಾರು, ಪೊಲೀಸ್ ಉಡುಗೆ ಬಳಸಿದ್ದಾರೆ.
ಬೆಂಗಳೂರು: ಈಗ ಎಲ್ಲೆಡೆ ಪ್ರಿ ವೆಡ್ಡಿಂಗ್ ಶೂಟ್‌ಗಳದ್ದೇ ಹವಾ. ಮದುವೆಯಾಗುವ ಮುನ್ನ ಥರೇವಾರಿ ವಿಡಿಯೋ ಶೂಟ್ ಮಾಡಲಾಗುತ್ತದೆ. ಕೆಲವೊಂದು ವಿಡಿಯೋಗಳು ತಮ್ಮ ಕ್ರಿಯೆಟಿವಿಟಿಯಿಂದ ಗಮನ ಸೆಳೆಯುತ್ತದೆ. ಪ್ರತಿಯೊಬ್ಬರೂ ವಿವಾಹ ಪೂರ್ವ ವಿಡಿಯೋ ಶೂಟ್, ಫೋಟೋ ಶೂಟ್ ವಿಭಿನ್ನವಾಗಿರಲು ಬಯಸುತ್ತಾರೆ. ಎಲ್ಲರೂ ಉಳಿದವರಿಗಿಂತ ಭಿನ್ನವಾಗಿ ಪ್ರಿ ವೆಡ್ಡಿಂಗ್ ಶೂಟಿಂಗ್ ಮಾಡಿಕೊಳ್ಳಲು ಬಯಸುತ್ತಾರೆ. ಇದೀಗ ಹೈದರಾಬಾದ್ ಪೊಲೀಸ್ ಜೋಡಿಯ ಇಂತಹದ್ದೇ ಪ್ರಿ ವೆಡ್ಡಿಂಗ್ ಶೂಟಿಂಗ್ ವೈರಲ್ ಆಗಿದೆ. ಈ ವಿಡಿಯೋ ಕುರಿತು ನೆಟ್ಟಿಗರ ಮಿಶ್ರ ಪ್ರತಿಕ್ರಿಯೆಯೂ ವ್ಯಕ್ತವಾಗಿದೆ.
ಟ್ರೆಂಡಿಂಗ್ ಸುದ್ದಿ
ಈ ಎರಡು ನಿಮಿಷದ ವಿಡಿಯೋದಲ್ಲಿ ಮೊದಲಿಗೆ ಯುವತಿ ಪೊಲೀಸ್ ಡ್ರೆಸ್‌ನಲ್ಲಿಯೇ ಪೊಲೀಸ್ ಕಾರ್‌ನಲ್ಲಿ ಸಿನಿಮಾ ಶೈಲಿಯಲ್ಲಿ ಆಗಮಿಸುವ ದೃಶ್ಯವಿದೆ. ಆಕೆಗೆ ಅಲ್ಲಿನ ಪೊಲೀಸರು ಸೆಲ್ಯೂಟ್ ಹೊಡೆಯುತ್ತಾರೆ. ಪೊಲೀಸರಿಗೆ ಈ ಯುವತಿ ಕೆಲವು ಸಲಹೆ ನೀಡುತ್ತಾ ಇರುತ್ತಾರೆ. ಇದೇ ಸಮಯದಲ್ಲಿ ಮದುಮಗ ಪೊಲೀಸ್ ಮತ್ತೊಂದು ಪೊಲೀಸ್ ಕಾರ್‌ನಲ್ಲಿ ಸ್ಟೇಷನ್‌ಗೆ ಎಂಟ್ರಿ ನೀಡುತ್ತಾರೆ. ಸ್ಟೇಷನ್ ಒಳಗೆ ಹೋಗುವ ಮುನ್ನ ಈ ಮಹಿಳಾ ಪೊಲೀಸ್ ಅಧಿಕಾರಿಯತ್ತ ನೋಡಿ ಫಿದಾ ಆಗುತ್ತಾರೆ. ಅಲ್ಲಿಂದ ದೃಶ್ಯ ಹಾಡಿನ ರೂಪಕ್ಕೆ ಮರಳುತ್ತದೆ.
ಹೈದರಾಬಾದ್‌ನ ಪ್ರೇಕ್ಷಣೀಯ ಸ್ಥಳದಲ್ಲಿ ಸಿನಿಮಾ ಹಾಡಿಗೆ ಇವರಿಬ್ಬರು ಡ್ಯಾನ್ಸ್ ಮಾಡುತ್ತಾರೆ. ಚಾರ್ ಮಿನಾರ್, ಲಾಡ್ ಬಜಾರ್ ಮುಂತಾದ ಸ್ಥಳಗಳು ಕಾಣಿಸಿಕೊಳ್ಳುತ್ತವೆ. ಒಟ್ಟಾರೆ, ಯಾವುದೋ ಸಿನಿಮಾ ಹಾಡಿನಂತೆ ಈ ವಿಡಿಯೋ ಇದೆ. ಅಂದಹಾಗೆ ಈ ಇಬ್ಬರಿಗೆ ಕಳೆದ ಆಗಸ್ಟ್ ತಿಂಗಳಿನಲ್ಲಿ ವಿವಾಹವಾಗಿದೆ. ಅದಕ್ಕೂ ಮುನ್ನ ಮಾಡಿರುವ ಪ್ರಿ ವೆಡ್ಡಿಂಗ್ ವಿಡಿಯೋ ಇದಾಗಿದೆ.
ಈ ವಿಡಿಯೋ ಇಂಟರ್‌ನೆಟ್‌ನಲ್ಲಿ ಇದೀಗ ವೈರಲ್ ಆಗಿದೆ. ಇದಕ್ಕೆ ನೆಟ್ಟಿಗರು ಮಿಶ್ರ ಪ್ರತಿಕ್ರಿಯೆ ನೀಡಿದ್ದಾರೆ. ಪೊಲೀಸ್ ಪ್ರಾಪರ್ಟಿಯನ್ನು ವೈಯಕ್ತಿಕ ವಿಡಿಯೋ ಶೂಟಿಂಗ್‌ಗೆ ಬಳಸಿದ ಔಚಿತ್ಯವನ್ನು ಕೆಲವರು ಪ್ರಶ್ನಿಸಿದ್ದಾರೆ. ಇನ್ನು ಕೆಲವರು ಈ ಕ್ರಿಯೆಟಿವ್ ವಿಡಿಯೋಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಒಬ್ಬರು ಈ ವಿಡಿಯೋಗೆ ಹೀಗೆ ಪ್ರತಿಕ್ರಿಯೆ ನೀಡಿದ್ದಾರೆ. "ಸಾಮಾನ್ಯ ಜನರು ಯಾವುದೇ ವಿಡಿಯೋ ಕ್ಲಿಪ್ ಮಾಡಲು ಪ್ರಯತ್ನಿಸಿದರೆ ಪೊಲೀಸರು ಮೊಬೈಲ್ ಎಳೆದು ಬಿಸಾಕುತ್ತಾರೆ. ಆದರೆ, ಪೊಲೀಸರು ಸರಕಾರದ ಸೌಕರ್ಯಗಳನ್ನು ಖಾಸಗಿ ಕಾರ್ಯಕ್ರಮಕ್ಕೆ ದುರುಪಯೋಗ ಮಾಡಿಕೊಳ್ಳುತ್ತಾರೆ" ಎಂದು ಒಬ್ಬರು ಪ್ರತಿಕ್ರಿಯೆ ನೀಡಿದ್ದಾರೆ. "ತಮಗೆ ಬೇಕಾದ ಯಾವುದೇ ವಿಡಿಯೋ ಶೂಟ್ ಮಾಡಲು ಅವರಿಗೆ ಮುಕ್ತ ಸ್ವಾತಂತ್ರ್ಯ ಇದೆ. ಆದರೆ, ನಿಜವಾದ ಪೊಲೀಸ್ ಕಾರು, ಪೊಲೀಸ್ ಯೂನಿಫಾರ್ಮ್ ಬಳಸಬೇಕಿತ್ತೇ" ಎಂದು ಇನ್ನೊಬ್ಬರು ಪ್ರಶ್ನಿಸಿದ್ದಾರೆ.
ಸಾಕಷ್ಟು ಜನರು ಈ ವಿಡಿಯೋವನ್ನು ಇಷ್ಟಪಟ್ಟಿದ್ದಾರೆ. "ವಾಹ್, ಎಂತಹ ಅಧಿಕಾರಯುತ ಜೋಡಿ. ನವ ಜೋಡಿಗೆ ಶುಭಾಶಯ" ಎಂದು ಸಾಕಷ್ಟು ಜನರು ಕಾಮೆಂಟ್ ಮಾಡಿದ್ದಾರೆ.
ಈ ವಿಡಿಯೋಗೆ ಹಿರಿಯ ಐಪಿಎಸ್ ಅಧಿಕಾರಿ ಸಿವಿ ಆನಂದ್ ಪ್ರತಿಕ್ರಿಯೆ ನೀಡಿದ್ದಾರೆ. ಅವರ ಪ್ರಕಾರ ಈ ರೀತಿ ಶೂಟಿಂಗ್ ಮಾಡಿರುವುದು ತಪ್ಪಲ್ಲ, ಆದರೆ ಎಚ್ಚರಿಕೆ ಅಗತ್ಯ ಎಂದಿದ್ದಾರೆ. ಅಂದರೆ, ಈ ದಂಪತಿ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಿದ ಬಳಿಕ ಈ ರೀತಿ ವಿಡಿಯೋ ಶೂಟಿಂಗ್ ಮಾಡಿದ್ದಾರೆ. ಇದನ್ನು ಸ್ಪೂರ್ತಿಯಾಗಿ ತೆಗೆದುಕೊಂಡು ಇತರರು ಈ ರೀತಿ ವಿಡಿಯೋ ಮಾಡುವುದಾದರೆ ಈ ಅಂಶವನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂದು ಅವರು ಹೇಳಿದ್ದಾರೆ.
ಇಲ್ಲಿದೆ ನೋಡಿ ವಿಡಿಯೋ