ಸೀರೆ ಕೊಡಿಸಲಿಲ್ಲವೆಂದು ಪತಿಯ ವಿರುದ್ಧ ಕೌಟುಂಬಿಕ ದೌರ್ಜನ್ಯದ ಕೇಸ್ ದಾಖಲಿಸಿದ ಪತ್ನಿ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಸೀರೆ ಕೊಡಿಸಲಿಲ್ಲವೆಂದು ಪತಿಯ ವಿರುದ್ಧ ಕೌಟುಂಬಿಕ ದೌರ್ಜನ್ಯದ ಕೇಸ್ ದಾಖಲಿಸಿದ ಪತ್ನಿ

ಸೀರೆ ಕೊಡಿಸಲಿಲ್ಲವೆಂದು ಪತಿಯ ವಿರುದ್ಧ ಕೌಟುಂಬಿಕ ದೌರ್ಜನ್ಯದ ಕೇಸ್ ದಾಖಲಿಸಿದ ಪತ್ನಿ

ಸರಸ ವಿರಸ ಇದ್ದರೇನೇ ದಾಂಪತ್ಯ ಚೆಂದ. ಆದರೆ ಅತಿಯಾದರೆ ಅದುವೇ ಸಮಾಜದ ಬಾಯಿಗೆ ರಸಗವಳ. ಅಂತಹ ಒಂದು ಪ್ರಕರಣಇದು. ಸೀರೆ ಕೊಡಿಸಲಿಲ್ಲವೆಂದು ಪತಿಯ ವಿರುದ್ಧ ಕೌಟುಂಬಿಕ ದೌರ್ಜನ್ಯದ ಕೇಸ್ ದಾಖಲಿಸಿದ ಪತ್ನಿಯ ವಿಚಾರ ಈಗ ಸಮಾಜದ ನಡುವೆ ಚರ್ಚೆಯಾಗುತ್ತಿದೆ. ಇತ್ತೀಚೆಗಷ್ಟೆ ಕುರ್ಕುರೆ ಕೊಡಿಸದ ಪತಿಗೆ ವಿಚ್ಛೇದನ ನೀಡಲು ಮುಂದಾದ ಪತ್ನಿಯ ವಿಚಾರವೂ ಮುನ್ನೆಲೆಗೆ ಬಂದಿದೆ ನೋಡಿ.

ಸೀರೆ ಕೊಡಿಸಲಿಲ್ಲವೆಂದು ಪತಿಯ ವಿರುದ್ಧ ಕೌಟುಂಬಿಕ ದೌರ್ಜನ್ಯದ ಕೇಸ್ ದಾಖಲಿಸಿದ ಪತ್ನಿ. (ಸಾಂಕೇತಿಕ ಚಿತ್ರ)
ಸೀರೆ ಕೊಡಿಸಲಿಲ್ಲವೆಂದು ಪತಿಯ ವಿರುದ್ಧ ಕೌಟುಂಬಿಕ ದೌರ್ಜನ್ಯದ ಕೇಸ್ ದಾಖಲಿಸಿದ ಪತ್ನಿ. (ಸಾಂಕೇತಿಕ ಚಿತ್ರ) (Canva)

ಆಗ್ರಾ: ಪತಿ-ಪತ್ನಿ ಎಂದ ಮೇಲೆ ಸರಸ, ಮುನಿಸು ಎಲ್ಲವೂ ಸಾಮಾನ್ಯ. ಆದರೆ ಅದು ಕೆಲವೊಮ್ಮೆ ಅತಿರೇಕಕ್ಕೆ ಹೋಗಿ ಜನರ ಗಮನಸೆಳೆಯುವುದೂ ಉಂಟು. ಅಂತಹ ಒಂದು ವಿಲಕ್ಷಣ ಪ್ರಕರಣ ಇದು. ಉತ್ತರ ಪ್ರದೇಶದ ಆಗ್ರಾದಲ್ಲಿ ಸೀರೆ ಕೊಡಿಸಲಿಲ್ಲ ಎಂಬ ಕಾರಣಕ್ಕೆ ಪತಿಯ ವಿರುದ್ಧ ಪೊಲೀಸ್ ದೂರು ದಾಖಲಿಸಿದ್ದಾರೆ!

ಇದೊಂದು ಅಸಹಜ ದೂರು ಎಂಬ ಕಾರಣಕ್ಕೆ ಪೊಲೀಸ್ ಠಾಣೆಯಲ್ಲೂ ಹೈಡ್ರಾಮಾ ನಡೆಯಿತು. ಈ ನಾಟಕೀಯ ವಿದ್ಯಮಾನದಲ್ಲಿ ಆ ಮಹಿಳೆ ಪೊಲೀಸರ ಜೊತೆಗೂ ವಾಕ್ಸಮರ ನಡೆಸಿದ್ದರು. ಬಳಿಕ ಪೊಲೀಸರು ಆ ಮಹಿಳೆಯ ದೂರು ಆಲಿಸುವುದಕ್ಕೆ ಕುಟುಂಬ ಸಲಹಾ ಕೇಂದ್ರದವರ ಮೊರೆ ಹೋದರು ಎಂದು ಮನಿ ಕಂಟ್ರೋಲ್ ವರದಿ ಮಾಡಿದೆ.

ಸೀರೆ ಕೊಡಿಸದ ಪತಿಯ ವಿರುದ್ಧ ಕೌಟುಂಬಿಕ ದೌರ್ಜನ್ಯ ಕೇಸ್ ಹಾಕಿದ ಪತ್ನಿ

ಆಗ್ರಾದ ಆ ಜೋಡಿ 2022ರಲ್ಲಿ ವಿವಾಹವಾಗಿದೆ. ದಾಂಪತ್ಯ ಶುರುಮಾಡಿದ ಬಳಿಕ ಪತಿ ಪತ್ನಿಯರ ನಡುವೆ ನಿತ್ಯವೂ ಜಗಳ. ಕ್ಷುಲ್ಲಕ ವಿಷಯಗಳು ಇವರ ನಡುವೆ ಬೃಹದಾಕಾರ ಪಡೆಯುತ್ತಿದ್ದವು. ಆದರೆ ಇತ್ತೀಚಿನ ಜಗಳ ತಾರಕಕ್ಕೆ ಹೋಗಿದ್ದು, ಹೊಸ ಸೀರೆ ಕೊಡಿಸದ ಕಾರಣ ಸಿಟ್ಟಿಗೆದ್ದ ಪತ್ನಿ ಪೊಲೀಸ್ ಠಾಣೆ ಮಟ್ಟಿಲೇರಿದ್ದರು.

ಪೊಲೀಸರು ಆ ಮಹಿಳೆ ಮತ್ತು ಆಕೆಯ ಪತಿಯನ್ನು ಕುಟುಂಬ ಸಲಹಾ ಕೇಂದ್ರಕ್ಕೆ ಸಮಾಲೋಚನೆಗಾಗಿ ಕಳುಹಿಸಿಕೊಟ್ಟರು. ಅಲ್ಲಿ ಆ ಮಹಿಳೆ ಸಮಾಲೋಚಕರೊಂದಿಗೆ ಮಾತನಾಡುತ್ತ, ಹೊಸ ಸೀರೆ ಕೊಡಿಸದ ವಿಚಾರ ಹೇಳಿದರಲ್ಲದೆ, ಪತಿ ದೈಹಿಕವಾಗಿ ಹಿಂಸಿಸುತ್ತಿದ್ದಾನೆ ಎಂದು ದೂರಿದರು.

ಇದಾದ ಬಳಿಕ ಸಮಾಲೋಚಕರು ಪತಿಯ ವಿಚಾರಣೆ ನಡೆಸಿದಾಗ, ಆತ ಕ್ಷುಲ್ಲಕ ವಿಷಯಗಳ ಜಗಳಗಳನ್ನು ವಿವರಿಸಿದ್ದಲ್ಲದೆ, ತಡರಾತ್ರಿ ಫೋನ್ ಕರೆ ಮಾಡುತ್ತಿರುತ್ತಾಳೆ ಎಂದು ದೂರಿದರು.

ಪರಸ್ಪರ ದೂರುಗಳ ಸಂಖ್ಯೆ ಹೆಚ್ಚಾಗಿದ್ದ ಕಾರಣ ಸಮಾಲೋಚಕರು ಕೊನೆಗೂ ಪತಿಯ ಮನ ಒಲಿಸುವಲ್ಲಿ ಯಶಸ್ವಿಯಾದರು. ಪತ್ನಿ ಬಯಸಿದ ಹೊಸ ಸೀರೆ ಕೊಡಿಸುವುದಾಗಿ ಆತ ಹೇಳಿದ ಬಳಿಕ, ಆ ಮಹಿಳೆಯ ಮನಸ್ಸೂ ಕರಗಿತು. ಪತಿ-ಪತ್ನಿಯರ ನಡುವೆ ಸಾಮರಸ್ಯ ಏರ್ಪಟ್ಟಿತು. ಬಳಿಕ ಇಬ್ಬರೂ ಜೊತೆಯಾಗಿ ಕುಟುಂಬ ಸಮಾಲೋಚನಾ ಕೇಂದ್ರದಿಂದ ಹೊರ ನಡೆದರು ಎಂದು ವರದಿ ವಿವರಿಸಿದೆ.

ಕುರ್ಕುರೆ ಕೊಡಿಸದ ಪತಿಗೆ ಡಿವೋರ್ಸ್ ಕೊಡಲು ಹೋಗಿದ್ದರು ಮತ್ತೊಬ್ಬ ಆಗ್ರಾ ಮಹಿಳೆ

ಈ ಹಿಂದೆ, ಆಗ್ರಾದ ಮತ್ತೊಬ್ಬ ಮಹಿಳೆ ತನ್ನ ಪತಿಗೆ ಕುರ್ಕುರೆ ಪ್ಯಾಕೆಟ್ ಸಿಗದ ಕಾರಣ ವಿಚ್ಛೇದನಕ್ಕೆ ಬೇಡಿಕೆ ಇಟ್ಟಿದ್ದರು. ಮಸಾಲೆಯುಕ್ತ ತಿಂಡಿಯ ಚಟದಿಂದಾಗಿ ಮಹಿಳೆ ಪ್ರತಿದಿನ 5 ರೂಪಾಯಿ ಕುರ್ಕುರೆ ತರುವಂತೆ ತನ್ನ ಗಂಡನನ್ನು ಕೇಳುತ್ತಿದ್ದಳು.

ಲೈವ್ ಹಿಂದೂಸ್ತಾನ್ ವರದಿಯ ಪ್ರಕಾರ, ಒಂದು ದಿನ, ಪತಿ ತನ್ನ ಹೆಂಡತಿಯ ನೆಚ್ಚಿನ ಕುರ್ಕುರೆ ತರಲು ಮರೆತಿದ್ದ. ಇದಕ್ಕಾಗಿ ರಂಪ ಹಿಡಿದ ಪತ್ನಿ ತನ್ನ ಪತಿಯ ಮನೆಯನ್ನು ತೊರೆದು ತನ್ನ ತವರು ಮನೆಗೆ ಹೋಗಿದ್ದರು. ನಿತ್ಯದ ಇಷ್ಟ ತಿನಿಸನ್ನು ನಿರಾಕರಿಸಿದ್ದರಿಂದ ಅಸಮಾಧಾನಗೊಂಡಿದ್ದ ಮಹಿಳೆ ಪೊಲೀಸ್ ಠಾಣೆ ಮೆಟ್ಟಿಲೇರಿ ವಿಚ್ಛೇದನವನ್ನು ಕೇಳಿದ್ದರು.

ಒಂದು ವರ್ಷದ ಹಿಂದೆ ಈ ಜೋಡಿ ಮದುವೆಯಾಗಿದ್ದು, ಆರಂಭದಲ್ಲಿ ಎಲ್ಲವೂ ಸರಿಯಾಗಿಯೇ ಇತ್ತು. ಆದಾಗ್ಯೂ, ತಿಂಗಳು ಕಳೆದಂತೆ, ಕುರ್ಕುರೆಗಾಗಿ ತನ್ನ ಹೆಂಡತಿಯ ಬೇಡಿಕೆಯ ಬಗ್ಗೆ ಪತಿ ಕಳವಳ ವ್ಯಕ್ತಪಡಿಸಿದ್ದ. ಪ್ರತಿದಿನ ಒಂದು ಪ್ಯಾಕೆಟ್ ಕುರ್ಕುರೆ ತರುವಂತೆ ಪತ್ನಿ ಕೇಳಿಕೊಂದ್ದಾಗಿ ಪೊಲೀಸರಿಗೆ ತಿಳಿಸಿದ್ದರು. ಆದರೆ, ಪತಿ ತನ್ನನ್ನು ಥಳಿಸಿದ್ದರಿಂದ ತಾನು ತವರು ಮನೆಗೆ ಹೋಗಿದ್ದೆ ಎಂದು ಪತ್ನಿ ಆರೋಪಿಸಿದ್ದರು. ಈ ಪ್ರಕರಣ ಕೂಡ ಮಧ್ಯಸ್ಥಿಕೆಯಲ್ಲಿ ಬಗೆಹರಿದಿತ್ತು ಎಂದು ವರದಿ ವಿವರಿಸಿದೆ.

(ಕನ್ನಡದಲ್ಲಿ ಸ್ಪಷ್ಟ ಸುದ್ದಿ, ನಿಖರ ವಿಶ್ಲೇಷಣೆ, ಸಮಗ್ರ ಮಾಹಿತಿಗೆಎಚ್‌ಟಿ ಕನ್ನಡ ಬೆಸ್ಟ್‌.ಕರ್ನಾಟಕದ ತಾಜಾ ವಿದ್ಯಮಾನ, ಅದೇ ರೀತಿರಾಜಕೀಯ ವಿಶ್ಲೇಷಣೆ, ದೇಶ ಮತ್ತು ಜಗತ್ತಿನ ವಿದ್ಯಮಾನಗಳ ವರದಿಗಳನ್ನು ಓದಲುkannada.hindustantimes.com/nation-and-world ಕ್ಕೆ ಭೇಟಿ ನೀಡಿ.)

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.