ಪತಿಯ ಅನೈತಿಕ ಸಂಬಂಧ ಕಾಫಿ ಕಪ್ ಮೂಲಕ ಬಹಿರಂಗಪಡಿಸಿದ ಚಾಟ್‌ಜಿಪಿಟಿ, ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಮಹಿಳೆ !
ಪತಿಯ ಅನೈತಿಕ ಸಂಬಂಧ ಪತ್ತೆಗೆ ಪತ್ನಿ ಮೊರೆ ಹೋಗಿದ್ದು ಚಾಟ್‌ಜಿಪಿಟಿ ತಂತ್ರಜ್ಞಾನಕ್ಕೆ. ಪತಿ ಬಳಸುವ ಕಾಫಿ ಕಪ್ ಮೂಲಕ ಅನೈತಿಕ ಸಂಬಂಧದ ನಂಟನ್ನು ಚಾಟ್‌ಜಿಪಿಟಿ ಪತ್ತೆ ಮಾಡಿಕೊಟ್ಟಿದೆ.

ತಂತ್ರಜ್ಞಾನ ಎನ್ನುವುದು ಎಲ್ಲಿಗೆ ಬಂದಿದೆ ಎನ್ನುವುದಕ್ಕೆ ಈ ವೈರಲ್ ಸುದ್ದಿ ಸಾಕ್ಷಿ ಒದಗಿಸಿದೆ. ಪತಿಯ ಅಕ್ರಮ ಸಂಬಂಧದ ಬಗ್ಗೆ ಅನುಮಾನವಿದ್ದ ಪತ್ನಿ ಅದನ್ನು ಪತ್ತೆ ಮಾಡಲು ಬಳಿಸಿದ್ದು ಚಾಟ್‌ಜಿಪಿಟಿ ಎನ್ನುವ ತಂತ್ರಜ್ಞಾನವನ್ನೂ. ಅದರಲ್ಲೂ ನಿತ್ಯ ಬಳಸುವ ಕಾಫಿ ಕಪ್‌ನ ಮೂಲಕ ಇಂತಹದೊಂದು ಗೂಢಚಾರಿಕೆಯನ್ನೂ ಮಾಡಿದ ಮಹಿಳೆಗೆ ಚಾಟ್‌ಜಿಪಿಟಿ ಮಾಹಿತಿಯನ್ನು ಒದಗಿಸಿದೆ.ಪತಿಯ ವಿರುದ್ದ ಮಹಿಳೆ ನ್ಯಾಯಾಲಯದ ಮೊರೆ ಹೋಗಿದ್ದಾಳೆ. ಆದರೆ ಇಬ್ಬರು ಮಕ್ಕಳ ತಾಯಿಯಾದ ನಂತರವೂ ಪತ್ನಿಗೆ ಅನುಮಾನ, ತಂತ್ರಜ್ಞಾನವನ್ನು ಎಲ್ಲೆಡೆ ಬಳಸುವ ಖಯಾಲಿ. ಈಗ ನನ್ನ ಮೇಲೆಯೇ ಅನಗತ್ಯ ಗುಮಾನಿ ವ್ಯಕ್ತಪಡಿಸಿದ್ದಾಳೆ ಎನ್ನುವುದು ಪತಿ ನೀಡಿರುವ ವಿವರಣೆ. ನ್ಯಾಯಾಲಯಲ್ಲಿ ಈಗಾಗಲೇ ಪತ್ನಿ ದಾಖಲಿಸಿದ ದೂರು ಆಧರಿಸಿ ವಿಚಾರಣೆ ನಡೆದಿದ್ದು, ತೀರ್ಪು ಬಾಕಿಯಿದೆ.
ಇದು ನಡೆದಿರುವುದು ಗ್ರೀಸ್ ದೇಶದಲ್ಲಿ.
ಮದುವೆಯಾಗಿ ಹನ್ನೆರಡು ವರ್ಷದ ದಾಂಪತ್ಯ ಯಾನ ಮುಗಿಸಿ ಎರಡು ಮಕ್ಕಳ ತಾಯಿಯೂ ಆಗಿರುವ ಮಹಿಳೆಗೆ ಪತಿಯ ನಡವಳಿಕೆಗೆ ಬಗ್ಗೆ ಅನುಮಾನ. ಅನ್ಯ ಮಹಿಳೆಯೊಂದಿಗೆ ಸಂಬಂಧ ಇರುವ ಬಗ್ಗೆ ಗುಮಾನಿ ವ್ಯಕ್ತಪಡಿಸುತ್ತಲೇ ಇದ್ದಳು. ಆದರೆ ಯಾವುದೇ ಸಣ್ಣ ಎಳೆಯೂ ಸಿಕ್ಕಿರಲಿಲ್ಲ. ಕೊನೆಗೆ ಆಕೆ ಮೊರೆ ಹೋಗಿದ್ದು ತಂತ್ರಜ್ಞಾನಕ್ಕೆ.
ಗ್ರೀಕ್ ಸಿಟಿ ಟೈಂಸ್ ವರದಿಯ ಪ್ರಕಾರ, ಭವಿಷ್ಯವನ್ನು ಊಹಿಸಲು ಕಾಫಿ ಮೈದಾನಗಳು ಅಥವಾ ಚಹಾ ಎಲೆಗಳನ್ನು ಓದುವ ಪ್ರಾಚೀನ ಕಲೆಯಾದ ಟ್ಯಾಸ್ಸಿಯೋಗ್ರಫಿ(tasseography)ಯ ನೆರವನ್ನೂ ಪಡೆದುಕೊಂಡರು.ತನ್ನ ಮತ್ತು ತನ್ನ ಪತಿಯ ಕಾಫಿ ಕಪ್‌ಗಳ ಫೋಟೋಗಳನ್ನು ಅಪ್ಲೋಡ್ ಮಾಡಿ ಚಾಟ್‌ಜಿಪಿಟಿ ಮೂಲಕ ಮಾಹಿತಿಗೆ ಮೊರೆ ಹೋದರು.ಆಗ ಚಾಟ್‌ಜಿಪಿಟಿ ನೀಡಿದ ಉತ್ತರ ಕೊಂಚ ಆಘಾತಕಾರಿಯೇ ಆಗಿತ್ತು.ತನಗಿಂತ ಕಿರಿಯ ವಯಸ್ಸಿಯ ಮಹಿಳೆ ಜತೆ ನಿಮ್ಮ ಪತಿ ಸಂಪರ್ಕದಲ್ಲಿದ್ದಾನೆ ಎನ್ನುವ ಮಾಹಿತಿಯನ್ನು ಕಾಫಿ ಕಪ್ ಆಧರಿಸಿ ಚಾಟ್‌ಜಿಪಿಟಿ ನೀಡಿತ್ತು.ನಿಮ್ಮ ಪತಿ ನಿಮಗೆ ಮೋಸ ಮಾಡುತ್ತಿರುವುದು ನಿಜ. ಇ ಎನ್ನುವ ಹೆಸರಿನ ಮಹಿಳೆಯೊಂದಿಗೆ ಸಂಬಂಧವಿದೆ. ಆಕೆ ನಿಮ್ಮ ಕುಟುಂಬ ಒಡೆಯುವ ಉದ್ದೇಶ ಹೊಂದಿದ್ಧಾಳೆ ಎನ್ನುವ ಆಘಾತಕಾರಿ ಅಂಶವನ್ನೂ ಅದು ನೀಡಿತ್ತು.
ಈ ಎಲ್ಲಾ ಮಾಹತಿಯನ್ನು ಪಡೆದುಕೊಂಡ ಆಕೆ ನ್ಯಾಯಾಲಯದ ಮೊರೆ ಹೋಗಿ ವಿಚ್ಛೇದನಕ್ಕೆ ಮುಂದಾಗಿದ್ದಳು.
ಆದರೆ ಇದ್ಯಾವುದೂ ಗೊತ್ತಿರದ ಪತಿಗೆ ಈ ಎಲ್ಲಾ ಬೆಳವಣಿಗೆಗಳ ಅರಿವು ಬಂದಿದ್ದು ವಕೀಲರಿಂದ ಕರೆ ಬಂದಾಗಲೇ.
ಸ್ಥಳೀಯ ಟಿವಿ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡ ಆಕೆಯ ಪತಿ ಈ ಹೇಳಿಕೆಗಳನ್ನು ತಳ್ಳಿಹಾಕಿದರು. ನನ್ನ ಹೆಂಡತಿಗೆ ಏನನ್ನಾದರೂ ವೈರಲ್ ಮಾಡಬೇಕು ಎನ್ನುವ ಪ್ರವೃತ್ತಿ ಇದೆ. ಅಷ್ಟೇ ಅಲ್ಲದೇ ಅದನ್ನು ಬೆನ್ನಟ್ಟುವ ಅಭ್ಯಾಸವಿದೆ. ಈಗ ಇದನ್ನು ಬಳಸಿಕೊಂಡಿದ್ದಾಳೆ. ನಾನು ಈ ವಿಚಾರ ಕೇಳಿದ ಬಳಿಕ ಅದನ್ನು ಅಸಂಬದ್ಧವೆಂದು ನಕ್ಕೆ. ಆದರೆ ಅವಳು ಅದನ್ನು ಗಂಭೀರವಾಗಿ ತೆಗೆದುಕೊಂಡಳು. ಅವಳು ನನ್ನನ್ನು ಹೊರಹೋಗಲು ಕೇಳಿದಳು. ನಾವು ವಿಚ್ಛೇದನ ಪಡೆಯುತ್ತಿದ್ದೇವೆ ಎಂದು ನಮ್ಮ ಮಕ್ಕಳಿಗೆ ಹೇಳಿದಳು. ನನ್ನ ಸಮರ್ಥನೆಗೆ ಆಕೆ ಬಳಿ ಅವಕಾಶವಿಲ್ಲ ಎನ್ನುವುದು ಪತಿ ನೀಡುವ ವಿವರಣೆ.
ಅತೀಂದ್ರಿಯ ನಂಬಿಕೆಗಳೊಂದಿಗೆ ಆಕೆ ಬದುಕುತ್ತಿದ್ದಾಳೆ. ಹಿಂದೊಮ್ಮೆ ಜ್ಯೋತಿಷಿಯೊಬ್ಬರ ಬಳಿಗೆ ಹೋಗಿದ್ದಳು. ಆಗಲೂ ಏನೇನೋ ಆರೋಪಗಳನ್ನು ಹೊರಿಸಿದ್ದಳು. ಇದೆಲ್ಲವೂ ಅಸಂಬದ್ದ ಎನ್ನುವುದನ್ನು ಆಕೆಗೆ ಮನದಟ್ಟು ಮಾಡಿಕೊಡಲಾಗಿತ್ತು. ಈಗ ತಂತ್ರಜ್ಞಾನದ ಮೊರೆ ಹೋಗಿ ಈ ರೀತ ನಡೆದುಕೊಳ್ಳುತ್ತಿದಾಳೆ ಮಾತ್ರವಲ್ಲ.ವಿಚ್ಛೇದನಕ್ಕೂ ಅರ್ಜಿ ಹಾಕಿದ್ಧಾಳೆ ಎನ್ನುವುದು ಆತ ನೀಡಿದ ಸ್ಪಷ್ಟನೆ.
ಚಾಟ್‌ಬಾಟ್‌ನ ಕಾಫಿ ರೀಡಿಂಗ್ ಅನೈತಿಕ ಸಂಬಂಧದ ಕಾನೂನು ಪುರಾವೆಯಾಗಿ ಸ್ವೀಕಾರಾರ್ಹವಲ್ಲ ಎಂದು ಆತನ ವಕೀಲರು ಹೇಳಿದ್ದಾರೆ. ಈ ಪ್ರಕರಣದಲ್ಲಿ ಆರೋಪ ಸಾಬೀತಾಗುವವರೆಗೂ ಆತ ನಿರಪರಾಧಿ" ಎಂಬುದು ವಕೀಲರ ವಿವರಣೆ.