Viral News; ಮುಂಬೈ ವಂದೇ ಭಾರತ್‌ನಲ್ಲಿ ಮಹಿಳೆಯ ಒಂಟಿ ಪಯಣ, ಬಿಟ್ಟು ಹೋಗಲು ಬಂದ ಪತಿ, ಅಲ್ಲೊಂದು ಟ್ವಿಸ್ಟ್-viral news woman s solo train trip takes twist after husband comes to drop her vadodara mumbai vande bharat uks ,ರಾಷ್ಟ್ರ-ಜಗತ್ತು ಸುದ್ದಿ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Viral News; ಮುಂಬೈ ವಂದೇ ಭಾರತ್‌ನಲ್ಲಿ ಮಹಿಳೆಯ ಒಂಟಿ ಪಯಣ, ಬಿಟ್ಟು ಹೋಗಲು ಬಂದ ಪತಿ, ಅಲ್ಲೊಂದು ಟ್ವಿಸ್ಟ್

Viral News; ಮುಂಬೈ ವಂದೇ ಭಾರತ್‌ನಲ್ಲಿ ಮಹಿಳೆಯ ಒಂಟಿ ಪಯಣ, ಬಿಟ್ಟು ಹೋಗಲು ಬಂದ ಪತಿ, ಅಲ್ಲೊಂದು ಟ್ವಿಸ್ಟ್

ಮುಂಬೈ ವಂದೇ ಭಾರತ್‌ನಲ್ಲಿ ಮಹಿಳೆಯ ಒಂಟಿ ಪಯಣದ ವೇಳೆ, ಬಿಟ್ಟು ಹೋಗಲು ಬಂದ ಪತಿ ಕೂಡ ಆ ರೈಲಿನಲ್ಲಿ ಪ್ರಯಾಣಿಸಬೇಕಾದ ಪ್ರಸಂಗ ಉಂಟಾಯಿತು. ಅಲ್ಲೊಂದು ಟ್ವಿಸ್ಟ್ ಹೇಗಾಯಿತು ಎಂಬ ಕುತೂಹಲ ತಣಿಸುವ ಪೋಸ್ಟ್ ಅನ್ನು ಕೋಶಾ ಎಂಬ ಮಹಿಳೆ ಎಕ್ಸ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ.

ಗುಜರಾತ್‌ನ ವಡೋದರಾದಿಂದ ಮುಂಬಯಿಗೆ ವಂದೇ ಭಾರತ್‌ನಲ್ಲಿ ಮಹಿಳೆಯ ಒಂಟಿ ಪಯಣ, ಬಿಟ್ಟು ಹೋಗಲು ಬಂದ ಪತಿಯ ಕಥೆಯನ್ನು ಹೇಳಿದ ಮಗಳ ವಾಟ್ಸ್‌ಆಪ್ ಸಂಭಾಷಣೆಯ ಸ್ಕ್ರೀನ್ ಶಾಟ್‌.(ಎಡ ಚಿತ್ರ), ವಂದೇ ಭಾರತ್ ಎಕ್ಸ್‌ಪ್ರೆಸ್ (ಬಲ ಚಿತ್ರ)
ಗುಜರಾತ್‌ನ ವಡೋದರಾದಿಂದ ಮುಂಬಯಿಗೆ ವಂದೇ ಭಾರತ್‌ನಲ್ಲಿ ಮಹಿಳೆಯ ಒಂಟಿ ಪಯಣ, ಬಿಟ್ಟು ಹೋಗಲು ಬಂದ ಪತಿಯ ಕಥೆಯನ್ನು ಹೇಳಿದ ಮಗಳ ವಾಟ್ಸ್‌ಆಪ್ ಸಂಭಾಷಣೆಯ ಸ್ಕ್ರೀನ್ ಶಾಟ್‌.(ಎಡ ಚಿತ್ರ), ವಂದೇ ಭಾರತ್ ಎಕ್ಸ್‌ಪ್ರೆಸ್ (ಬಲ ಚಿತ್ರ) (X/@imkosha/ HT News)

ವಡೋದರಾ: ಮುಂಬಯಿಗೆ ಒಂಟಿಯಾಗಿ ಹೊರಟಿದ್ದ ಮಹಿಳೆಯನ್ನು ವಡೋದರಾ ಮುಂಬಯಿ ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಬಿಟ್ಟು ಹೋಗಲು ಪತಿಯೂ ಜೊತೆಗೆ ಬಂದಿದ್ದರು. ವಡೋದರಾ ರೈಲು ನಿಲ್ದಾಣದಲ್ಲಿ ಪತ್ನಿಯನ್ನು ರೈಲು ಹತ್ತಿಸುವವರೆಗೆ ಎಲ್ಲವೂ ಸಹಜವಾಗಿಯೇ ಇತ್ತು. ಮಹಿಳೆ ರೈಲು ಏರಿದ್ರು. ಅವರ ಜೊತೆಗೆ ಪತಿಯೂ ಲಗೇಜ್ ಹಿಡಿದು ರೈಲು ಬೋಗಿ ಏರಿ, ಆ ಲಗೇಜುಗಳನ್ನು ಇಟ್ಟ ಕೂಡಲೇ ಆ ಮಹಿಳೆಯ ಒಂಟಿ ಪ್ರಯಾಣದಲ್ಲೊಂದು ಟ್ವಿಸ್ಟ್‌.

ಸಹಜವಾಗಿಯೆ ಕುತೂಹಲ ಕೆರಳಿಸ್ತು ಅಲ್ವ. ಹಾಗೆಯೇ ಒಂದಷ್ಟು ಆಲೋಚನೆಗಳೂ ಮನಸ್ಸಿನೊಳಗೆ ಸುಳಿದಾಡಿತು ಅನ್ಸುತ್ತೆ. ಅರೆ ಇನ್ನೇನು, ಪತ್ನಿಯನ್ನು ಒಂಟಿಯಾಗಿ ಕಳುಹಿಸೋದಕ್ಕಾಗದೇ ಪತಿಯೂ ಜೊತೆಗೆ ಹೊರಟಿರಬೇಕು. ಅದರಲ್ಲೇನು ವಿಶೇಷ ಎಂದು ಮೂಗು ಮುರಿಯಬೇಡಿ. ಅದೇ ಹೇಳಿದೆವಲ್ಲ ಅಲ್ಲೊಂದು ಟ್ವಿಸ್ಟ್ ಇದೆ ಅಂತ.

ಪತಿ ಮನೆಯಲ್ಲಿ ಧರಿಸುವ ಉಡುಪಿನಲ್ಲೇ ಬಂದಿದ್ರು. ನೀಟಾಗಿ ಲಗೇಜ್ ಎಲ್ಲವನ್ನೂ ಪತ್ನಿ ಕೂರುವ ಸೀಟಿನ ಪಕ್ಕದಲ್ಲೇ ಇಟ್ಟರು. ಇನ್ನೇನು ಪತ್ನಿಗೆ ಬಾಯ್ ಅಂತ ಹೇಳಿ ಹಿಂದಿರುಗಬೇಕು ಎನ್ನುವಷ್ಟರಲ್ಲಿ, ರೈಲು ಸಣ್ಣದಾಗಿ ಜರ್ಕ್‌ ಹೊಡೆಯಿತು. ಇನ್ನೇನು ರೈಲು ಹೊರಡುತ್ತೆ ಅಂತ ಬಾಗಿಲ ಬಳಿ ಹೋದರೆ ಬೀಪ್ ಸೌಂಡ್ ಆಯಿತು ಬಾಗಿಲು ಮುಚ್ಚೇ ಬಿಡ್ತು!

ವಂದೇ ಭಾರತ್‌ನಲ್ಲಿ ಮಹಿಳೆಯ ಒಂಟಿ ಪಯಣಕ್ಕೆ ಅನಿರೀಕ್ಷಿತವಾಗಿ ಜೊತೆಯಾದ ಪತಿಯ ಕಥೆ- ವ್ಯಥೆ

ಪತ್ನಿಯನ್ನು ಬೀಳ್ಕೊಡುವುದಕ್ಕೆ ಬಂದ ಪತಿ ಕೂಡ ರೈಲಿನಲ್ಲಿ ಬಾಕಿ. ಟಿಕೆಟ್ ಬೇರೆ ಇಲ್ಲ. ತಡಬಡಾಯಿಸಿಕೊಂಡು ರೈಲ್ವೆ ಟಿಸಿಯನ್ನು ಸಂಪರ್ಕಿಸಿದರು. ಕೂಡಲೇ ರೈಲು ನಿಲ್ಲಿಸಿ ನಾನು ಇಳಿಯಬೇಕು ಎಂದರು. ಅದೇನು ಸಿಟಿ ಬಸ್ಸೇ ಇಳಿಯೋದಕ್ಕೆ!

ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲು. ಸಹಜವಾಗಿಯೇ ಟಿಸಿ, ಇನ್ನು ಆಗಲ್ಲ. ರೈಲು ಸ್ಪೀಡ್ ತಗೊಂಡಿದೆ. ಮುಂದಿನ ಸ್ಟೇಷನ್‌ನಲ್ಲಿ ಇಳ್ಕೊಳ್ಳಿ. ಒಂದು ಕ್ಷಣ ದಿಕ್ಕೇತೋಚದಂತಾಗಿತ್ತು ಆ ಪತಿಗೆ. ವಡೋದರಾ ರೈಲು ನಿಲ್ಧಾಣದ ಹೊರಗೆ ಕಾರು ನಿಲ್ಲಿಸಿ ಬಂದಿದ್ದು, ಅದರ ಪರಿಸ್ಥಿತಿ ಏನೋ? ಮುಂದಿನ ನಿಲ್ದಾಣ ಎಂದರೆ ಸೂರತ್‌. ಅಲ್ಲಿ ಇಳಿದು ಇನ್ನೊಂದು ರೈಲು ಏರುವುದೋ, ಟ್ಯಾಕ್ಸಿ ಬುಕ್‌ ಮಾಡುವುದೋ, ಹೀಗೆ ನೂರೆಂಟು ಆಲೋಚನೆಗಳು ಅವರ ಮನಸ್ಸಿನಲ್ಲಿ ಸುಳಿದಾಡಿರಬಹುದು.

ಹೌದು ಈ ಎಲ್ಲ ವಿಚಾರಗಳನ್ನು ಕೋಶಾ ಎಂಬುವವರು ಎಕ್ಸ್‌ ಖಾತೆಯಲ್ಲಿ ಟ್ವೀಟ್ ಮಾಡಿದ್ದಾರೆ.

ವಾಟ್ಸಾಪ್ ಸಂಭಾಷಣೆಯ ಸ್ಕ್ರೀನ್‌ಶಾಟ್‌ ಇರುವ ಟ್ವೀಟ್‌ ಇಲ್ಲಿದೆ ನೋಡಿ

ಕೋಶಾ ಅವರು ತನ್ನ ತಾಯಿ ಮತ್ತು ತಂದೆಯವರ ಮೊದಲ ವಂದೇಭಾರತ್ ಎಕ್ಸ್‌ಪ್ರೆಸ್ ಅನುಭವವನ್ನು ಹಂಚಿಕೊಂಡಿದ್ದಾರೆ. ನಾಲ್ಕು ಟ್ವೀಟ್‌ಗಳ ಒಂದು ಸರಣಿಯಲ್ಲಿ ಈ ವಿಷಯವನ್ನು ಅವರು ಹೇಳಿಕೊಂಡಿದ್ದಾರೆ. "ನನ್ನ ತಾಯಿ ಮುಂಬಯಿಗೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನಲ್ಲಿ ವಡೋದರಾದಿಂದ ಹೊರಟಿದ್ದರು. ಅವರನ್ನು ಬಿಡಲು ಬಂದ ತಂದೆಯೂ ರೈಲಿನಲ್ಲಿ ಲಾಕ್ ಆಗಿದ್ದಾರೆ. ಹಾಗೆ ನನ್ನ ತಾಯಿ ಮತ್ತು ತಂದೆ ಇಬ್ಬರೂ ಮೊದಲ ಬಾರಿಗೆ ವಂದೇ ಭಾರತ್‌ನಲ್ಲಿ ಪ್ರಯಾಣಿಸಿದರು- ನನ್ನ ತಾಯಿ ಮುಂಬೈವರೆಗೆ ಮತ್ತು ನನ್ನ ತಂದೆ ಮುಂದಿನ ನಿಲ್ದಾಣವಾದ ಸೂರತ್‌ವರೆಗೆ, ರಾತ್ರಿ ಉಡುಪಿನಲ್ಲಿ ವಡೋದರಾಕ್ಕೆ ಹಿಂದಿರುಗುವ ಟಿಕೆಟ್ ಹುಡುಕುತ್ತಿದ್ದಾರೆ. ನಮ್ಮ ಕಾರನ್ನು ವಡೋದರಾ ರೈಲ್ವೆ ನಿಲ್ದಾಣದ ಬಳಿ ಎಲ್ಲೋ ನಿಲ್ಲಿಸಲಾಗಿದೆ" ಎಂದು ಬರೆದುಕೊಂಡಿದ್ದಾರೆ. ಕೋಶಾ ತನ್ನ ತಂದೆಯೊಂದಿಗಿನ ವಾಟ್ಸಾಪ್ ಸಂಭಾಷಣೆಯ ಸ್ಕ್ರೀನ್ಶಾಟ್ ಅನ್ನು ಸಹ ಲಗತ್ತಿಸಿದ್ದಾರೆ, ಅಲ್ಲಿ ಅವರ ತಂದೆ ತಮ್ಮ ಪತ್ನಿಯ ಜೊತೆಗಿನ ಈ ಕಿರು ಪ್ರಯಾಣವನ್ನು 'ಪ್ರೀಮಿಯಂ' ಎಂದು ಕರೆದಿದ್ದಾರೆ.

ಏಪ್ರಿಲ್ 2ರಂದು ಕೋಶಾ ಈ ಟ್ವೀಟ್ ಮಾಡಿದ್ದು, 1.61 ಲಕ್ಷ ವೀಕ್ಷಣೆ ಪಡೆದಿದೆ. ಅನೇಕರು ತಮ್ಮ ಅನುಭವಗಳನ್ನೂ ಹಂಚಿಕೊಂಡು ಸ್ಪಂದಿಸಿದ್ದಾರೆ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.