ಒತ್ತಡವಿದೆ ಎಂದಿದ್ದಕ್ಕೆ 100ಕ್ಕೂ ಹೆಚ್ಚು ಕೆಲಸಗಾರರ ವಜಾ; ನೊಯ್ಡಾ ಮೂಲದ ಯೆಎಸ್‌ಮೇಡಂ ಕಂಪನಿ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಒತ್ತಡವಿದೆ ಎಂದಿದ್ದಕ್ಕೆ 100ಕ್ಕೂ ಹೆಚ್ಚು ಕೆಲಸಗಾರರ ವಜಾ; ನೊಯ್ಡಾ ಮೂಲದ ಯೆಎಸ್‌ಮೇಡಂ ಕಂಪನಿ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ

ಒತ್ತಡವಿದೆ ಎಂದಿದ್ದಕ್ಕೆ 100ಕ್ಕೂ ಹೆಚ್ಚು ಕೆಲಸಗಾರರ ವಜಾ; ನೊಯ್ಡಾ ಮೂಲದ ಯೆಎಸ್‌ಮೇಡಂ ಕಂಪನಿ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ

ಸಲೂನ್ ಹೋಮ್ ಸರ್ವೀಸ್ ನೀಡುವ ದೆಹಲಿಯ ನೊಯ್ದಾ ಮೂಲದ ಕಂಪನಿ ಯೆಎಸ್‌ಮೇಡಂ ಈಗ ಭಾರಿ ಸುದ್ದಿಯಲ್ಲಿದೆ. ಕಂಪನಿಯು ತನ್ನ ಕೆಲಸಗಾರರಿಗೆ ಒತ್ತಡದ ಬಗ್ಗೆ ಸರ್ವೇ ಮಾಡಿತ್ತು. ಈ ಸಂದರ್ಭದಲ್ಲಿ ಕೆಲಸದಲ್ಲಿ ಒತ್ತಡವಿದೆ ಎಂದ 100ಕ್ಕೂ ಹೆಚ್ಚು ಕೆಲಸಗಾರರನ್ನು ಒಂದೇ ದಿನದಲ್ಲಿ ಕೆಲಸದಿಂದ ವಜಾಗೊಳಿಸಲಾಗಿದೆ. ಇದೀಗ ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗುತ್ತಿದೆ.

ಯೆಎಸ್‌ ಮೇಡಂ ಕಂಪನಿಯ ಇಮೇಲ್ ಸ್ಕ್ರೀನ್‌ಶಾಟ್‌ (ಎಡಚಿತ್ರ)
ಯೆಎಸ್‌ ಮೇಡಂ ಕಂಪನಿಯ ಇಮೇಲ್ ಸ್ಕ್ರೀನ್‌ಶಾಟ್‌ (ಎಡಚಿತ್ರ)

ಇತ್ತೀಚಿನ ದಿನಗಳಲ್ಲಿ ಕಂಪನಿಗಳಲ್ಲಿ ಲೇಆಫ್ ಅಥವಾ ಕೆಲಸದಿಂದ ವಜಾಗೊಳಿಸುವ ಸುದ್ದಿಗಳು ಸಾಮಾನ್ಯವಾಗುತ್ತಿವೆ. ನಿರ್ದಿಷ್ಟ ಕಾರಣವಿಲ್ಲದೇ ನಾಳೆಯಿಂದಲೇ ಕೆಲಸಕ್ಕೆ ಬರಬೇಡಿ ಎಂದು ಉದ್ಯೋಗಿಗಳಿಗೆ ಹೇಳಲಾಗುತ್ತಿದೆ. ಆದರೆ ಇಲ್ಲೊಂದು ಕಂಪನಿ ಕೆಲಸಗಾರರನ್ನು ವಜಾಗೊಳಿಸಿರುವ ಕಾರಣ ಕೇಳಿ ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಅಲ್ಲದೇ ಈ ವಿಷಯವೀಗ ಎಲ್ಲಾ ಕಡೆ ವೈರಲ್ ಆಗುತ್ತಿದೆ.

ದೆಹಲಿಯ ನೋಯ್ಡಾ ಮೂಲದ ಯೆಎಸ್‌ಮೇಡಂ ಎನ್ನುವ ಸಲೂನ್ ಹೋಮ್ ಸರ್ವೀಸ್ ನೀಡುವ ಕಂಪನಿಯೊಂದು 100ಕ್ಕೂ ಹೆಚ್ಚು ಉದ್ಯೋಗಿಗಳನ್ನು ವಜಾಗೊಳಿಸಿದೆ. ಇದ್ದಕ್ಕಿದ್ದಂತೆ ನಾಳೆಯಿಂದಲೇ ಕೆಲಸಕ್ಕೆ ಬರಬೇಡಿ ಎಂದು ಹೇಳಿರುವ ಕಂಪನಿ ಇಮೇಲ್ ಈಗ ವೈರಲ್ ಆಗಿದೆ. ಕೆಲಸದಿಂದ ವಜಾಗೊಳಿಸಲು ಕಾರಣ ಹೀಗಿದೆ.

ಇತ್ತೀಚೆಗೆ ಯೆಎಸ್‌ಮೇಡಂ ಕಂಪನಿ ತನ್ನ ಉದ್ಯೋಗಿಗಳ ಕೆಲಸದ ಒತ್ತಡ ತಿಳಿಯುವ ಸಲುವಾಗಿ ಸರ್ವೆಯೊಂದನ್ನು ಮಾಡಿತ್ತು. ಇಂತಹ ಸರ್ವೆಗಳು ನಿಜಕ್ಕೂ ಉದ್ಯೋಗಿಗಳಿಗೆ ಅಗತ್ಯ, ಇದನ್ನು ಮಾಡಬೇಕು ಎಂದು ನೀವು ಅಂದುಕೊಳ್ಳುತ್ತಿದ್ದರೆ ನಿಮ್ಮ ಯೋಚನೆಯನ್ನು ಮೀರಿದ ಘಟನೆ ಈ ಕಂಪನಿಯಲ್ಲಿ ನಡೆದಿದೆ. ಉದ್ಯೋಗಿಗಳ ಪರವಾಗಿ ಕಂಪನಿಯಲ್ಲಿ ಒತ್ತಡವಿದೆಯೇ ಎಂದು ಕೇಳಿದ ಕಂಪನಿ ಹೌದು ಎಂದವರಿಗೆ ಗೇಟ್‌ಪಾಸ್ ನೀಡಿದೆ.

ಈ ಸರ್ವೆಯಲ್ಲಿ ಒತ್ತಡವಿದೆ ಎಂದು ಹೇಳಿದವರಿಗೆ ನಾಳೆಯಿಂದ ಕೆಲಸಕ್ಕೆ ಬರಬೇಡಿ, ನಿಮ್ಮನ್ನು ಈ ಕ್ಷಣದಿಂದಲೇ ಕೆಲಸದಿಂದ ವಜಾ ಮಾಡುತ್ತಿದ್ದೇವೆ ಎಂದು ಆದೇಶ ಹೊರಡಿಸಿ ಇಮೇಲ್ ಕಳುಹಿಸಿದೆ ಯೆಎಸ್‌ಮೇಡಂ. ಮಾತ್ರವಲ್ಲ 100 ಕ್ಕೂ ಹೆಚ್ಚು ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರೆ.

ಕೆಲಸ ಕಳೆದುಕೊಂಡ ಕಂಪನಿಯ ಉದ್ಯೋಗಿಯೊಬ್ಬರು ಇದೀಗ ಎಚ್‌ಆರ್‌ ಕಳುಹಿಸಿರುವ ಇ–ಮೇಲ್ ಅನ್ನು ಹಂಚಿಕೊಂಡಿದ್ದಾರೆ. ಅವರ ಇಮೇಲ್ ಈಗ ಭಾರಿ ವೈರಲ್ ಆಗಿದೆ. ಮಾತ್ರವಲ್ಲ ಯೆಎಸ್‌ ಮೇಡಂ ಕಂಪನಿ ಬಗ್ಗೆ ಸಾಮಾಜಿಕ ಜಾಲತಾಣಲದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ಯೆಸ್‌ ಮೇಡಂ ಕಂಪನಿ ತನ್ನ ಉದ್ಯೋಗಿಗಳ ಜೊತೆ ಅಮಾನವೀಯವಾಗಿ ನಡೆದುಕೊಂಡಿದೆ ಎಂದು ಕೆಲವರು ಹೇಳಿದರೆ ಇನ್ನೂ ಕೆಲವರು ಖಂಡಿತ ನಾರಾಯಣ ಮೂರ್ತಿ ಈ ಕಂಪನಿಗೆ ಇನ್ವೆಸ್ಟ್ ಮಾಡುತ್ತಾರೆ ಎಂದು ನೆಟ್ಟಿಗರು ವ್ಯಂಗ್ಯವಾಡಿದ್ದಾರೆ.

ಕಂಪನಿಯಿಂದ ವಜಾಗೊಂಡಿರುವ ವ್ಯಕ್ತಿಯೊಬ್ಬರು ಎಚ್‌ಆರ್‌ ಕಳುಹಿಸಿರುವ ಇಮೇಲ್‌ನ ಸ್ಕ್ರೀನ್‌ಶಾಟ್ ಹಂಚಿಕೊಂಡಿದ್ದು ‘ಯೆಸ್‌ ಮೇಡಂನಲ್ಲಿ ಏನಾಗುತ್ತಿದೆ. ನೀವು ಮೊದಲು ನಮ್ಮಲ್ಲಿ ಸರ್ವೇ ಮಾಡಿ, ನಂತರ ರಾತ್ರೋರಾತ್ರಿ 100ಕ್ಕೂ ಹೆಚ್ಚು ಕೆಲಸಗಾರರನ್ನು ಮನೆಗೆ ಕಳುಹಿಸುತ್ತೀರಿ ಎಂದರೆ ಏನರ್ಥ. ಕೆಲಸದಲ್ಲಿ ಒತ್ತಡವಿದೆ ಎಂದು ಹೇಳಿದ್ದೇ ತಪ್ಪಾ‘ ಎಂಬ ಅರ್ಥದಲ್ಲಿ ಬರೆದುಕೊಂಡು ಪೋಸ್ಟ್ ಮಾಡಿದ್ದರು. ಇವರ ಪೋಸ್ಟ್ ಅನ್ನು ಹಲವರು ರೀಪೋಸ್ಟ್ ಮಾಡಿದ್ದಾರೆ.

ಇಮೇಲ್‌ನಲ್ಲಿ ಏನಿದೆ?

ಡಿಯರ್‌ ಟೀಮ್‌, ಇತ್ತೀಚೆಗೆ ಕೆಲಸದಲ್ಲಿನ ಒತ್ತಡದ ಬಗ್ಗೆ ನಿಮ್ಮ ಭಾವನೆಗಳನ್ನು ಅರ್ಥಮಾಡಿಕೊಳ್ಳಲು ನಾವು ಸಮೀಕ್ಷೆ ನಡೆಸಿದ್ದೇವೆ. ನಿಮ್ಮಲ್ಲಿ ಹಲವರು ನಿಮ್ಮ ಕಾಳಜಿಗಳನ್ನು ಹಂಚಿಕೊಂಡಿದ್ದೀರಿ. ಅದನ್ನು ನಾವು ಆಳವಾಗಿ ಗೌರವಿಸುತ್ತೇವೆ. ಆರೋಗ್ಯಕರ ಮತ್ತು ಬೆಂಬಲದಾಯಕ ಕೆಲಸದ ವಾತಾವರಣವನ್ನು ಬೆಳೆಸಲು ಬದ್ಧವಾಗಿರುವ ಕಂಪನಿಯಾಗಿ, ನಾವು ನಿಮ್ಮ ಪ್ರತಿಕ್ರಿಯೆಯನ್ನು ಎಚ್ಚರಿಕೆಯಿಂದ ಪರಿಗಣಿಸಿದ್ದೇವೆ. ಕೆಲಸದಲ್ಲಿ ಯಾರೂ ಒತ್ತಡಕ್ಕೆ ಒಳಗಾಗುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು, ಗಮನಾರ್ಹವಾದ ಒತ್ತಡವನ್ನು ಸೂಚಿಸಿದ ಉದ್ಯೋಗಿಗಳೊಂದಿಗೆ ಬೇರೆಯಾಗಲು ನಾವು ಕಠಿಣ ನಿರ್ಧಾರ ಮಾಡಿದ್ದೇವೆ. ಈ ನಿರ್ಧಾರವು ತಕ್ಷಣವೇ ಜಾರಿಗೆ ಬರುತ್ತದೆ ಮತ್ತು ಪ್ರಭಾವಿತ ಉದ್ಯೋಗಿಗಳು ಹೆಚ್ಚಿನ ವಿವರಗಳನ್ನು ಪ್ರತ್ಯೇಕವಾಗಿ ಸ್ವೀಕರಿಸುತ್ತಾರೆ.

ನಿಮ್ಮ ಕೊಡುಗೆಗಳಿಗಾಗಿ ಧನ್ಯವಾದಗಳು. ಶುಭಾಶಯಗಳು, ಮಾನವ ಸಂಪನ್ಮೂಲ ವ್ಯವಸ್ಥಾಪಕ, ಯೆಸ್‌ಮೇಡಮ್” ಎಂದು ಬರೆಯಲಾಗಿದೆ.

ಯೆಸ್‌ಮ್ಯಾಡಮ್‌ನ ಮಾಜಿ ಯುಎಕ್ಸ್ ಕಾಪಿರೈಟರ್ ಅನುಷ್ಕಾ ದತ್ತಾ, ಕಂಪನಿಯ ಎಚ್‌ಆರ್ ಮ್ಯಾನೇಜರ್‌ನಿಂದ ಪಡೆದ ಇಮೇಲ್ ಉದ್ಯೋಗಿಗಳ ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಂಡಿದ್ದಾರೆ. ಸಂಸ್ಥೆಯು ನಡೆಸಿದ ಒತ್ತಡ ಸಮೀಕ್ಷೆಯ ಫಲಿತಾಂಶಗಳನ್ನು ಇಮೇಲ್ ವಿವರಿಸಿದೆ.

Whats_app_banner

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.