Kadapa Electrocution; ಕಡಪದಲ್ಲಿ ಕಣ್ಣೆದುರೇ ವಿದ್ಯುತ್ ತಂತಿ ತಗುಲಿ ಸುಟ್ಟುಹೋದ ಬಾಲಕ, ಮತ್ತೊಬ್ಬನ ಸ್ಥಿತಿ ಗಂಭೀರ, ಅಸಹಾಯಕರಾದ ಜನ
Kadapa Electrocution; ಆಂಧಪ್ರದೇಶದ ಕಡಪ ಪಟ್ಟಣದ ಅಗಡಿ ಬೀದಿಯಲ್ಲಿ ಕೆಳಮಟ್ಟದಲ್ಲಿ ನೇತಾಡುತ್ತಿದ್ದ ವಿದ್ಯುತ್ ತಂತಿ ತಗುಲಿ ಬಾಲಕನೊಬ್ಬ ಕ್ಷಣ ಮಾತ್ರದಲ್ಲಿ ಸುಟ್ಟು ಹೋದ ಘಟನೆ ಎಲ್ಲರ ಕಣ್ಣೆದುರಲ್ಲೇ ನಡೆಯಿತು. ಮತ್ತೊಬ್ಬ ಬಾಲಕನ ಸ್ಥಿತಿ ಗಂಭೀರವಾಗಿದೆ. ಬೆಂಗಳೂರಿನಲ್ಲಿ ತಾಯಿ-ಮಗು ಮೃತಪಟ್ಟ ಘಟನೆಯನ್ನು ಇದು ನೆನಪಿಸಿತು.
ಕಡಪಾ: ಆಂಧಪ್ರದೇಶದ ಕಡಪದ ಅಗಡಿ ಬೀದಿಯಲ್ಲಿ ಇಂದು (ಆಗಸ್ಟ್ 21) ವಿದ್ಯುತ್ ತಂತಿ ತಗುಲಿ ಘೋರ ದುರಂತ (Kadapa Electrocution) ಒಂದು ಸಂಭವಿಸಿದೆ. ಕೆಳಮಟ್ಟದಲ್ಲಿ ನೇತಾಡುತ್ತಿದ್ದ ವಿದ್ಯುತ್ ತಂತಿ ತಗುಲಿ ಬಾಲಕನೊಬ್ಬ ಕ್ಷಣ ಮಾತ್ರದಲ್ಲಿ ಸುಟ್ಟು ಹೋದ ಘಟನೆ ಎಲ್ಲರ ಕಣ್ಣೆದುರಲ್ಲೇ ನಡೆಯಿತು. ಮತ್ತೊಬ್ಬ ಬಾಲಕನ ಸ್ಥಿತಿ ಗಂಭೀರವಾಗಿದೆ.
ಬಾಲಕರಿಬ್ಬರು ಸೈಕಲ್ ಮೇಲೆ ಬರುತ್ತಿದ್ದಾಗ ಈ ದುರಂತ ಸಂಭವಿಸಿದೆ. ಇದರ ಘೋರ ದೃಶ್ಯ ಸಮೀಪದ ಸಿಸಿ ಕ್ಯಾಮೆರಾದಲ್ಲಿ ದಾಖಲಾಗಿದೆ. ದುರಂತ ಸಂಭವಿಸಿದ ಕೂಡಲೇ ಅಸಹಾಯಕ ಪರಿಸ್ಥಿತಿಯಲ್ಲೂ ಸಮಯ ಪ್ರಜ್ಞೆ ತೋರಿ ಮರದ ತುಂಡು ತಂದು ವಿದ್ಯುತ್ ತಂತಿಯಿಂದ ಅವರನ್ನು ದೂರ ಸರಿಸಿ ಕಾಪಾಡುವ ಪ್ರಯತ್ನ ನಡೆಯಿತು. ಸ್ಥಳೀಯರು ಇದರಲ್ಲಿ ಯಶಸ್ವಿಯಾಗಿದ್ದು, ಆ ಮಕ್ಕಳನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಒಬ್ಬಾತ ಸ್ಥಳದಲ್ಲೇ ಮೃತಪಟ್ಟಿದ್ದರೆ, ಮತ್ತೊಬ್ಬನ ಸ್ಥಿತಿ ಚಿಂತಾಜನಕವಾಗಿದೆ. ಮೃತ ಬಾಲಕನನ್ನು ತನ್ವೀರ್ (11) ಎಂದು ಗುರುತಿಸಿರುವುದಾಗಿ ಎಂದು ಹಿಂದೂಸ್ತಾನ್ ಟೈಮ್ಸ್ ತೆಲುಗು ವರದಿ ಮಾಡಿದೆ.
ದುರಂತ ಎಷ್ಟು ಗಂಟೆಗೆ ಹೇಗಾಯಿತು
ಬುಧವಾರ ಮಧ್ಯಾಹ್ನ ಬಾಲಕರು ಶಾಲೆಯಿಂದ ಸೈಕಲ್‌ನಲ್ಲಿ ಮನೆಗೆ ಬರುತ್ತಿದ್ದಾಗ ಈ ದುರಂತ ನಡೆದಿದೆ. ವಿದ್ಯುತ್ ಅಧಿಕಾರಿಗಳ ನಿರ್ಲಕ್ಷ್ಯವೇ ಈ ಅವಘಡಕ್ಕೆ ಕಾರಣವಾಗಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಕಡಪದ ಅಗಡಿ ಬೀದಿಯಲ್ಲಿ ನೇತಾಡುತ್ತಿದ್ದ ವಿದ್ಯುತ್ ತಂತಿ ತಗುಲಿ ತನ್ವೀರ್ (11) ಎಂಬ ಮಗು ಸಾವನ್ನಪ್ಪಿರುವ ಘಟನೆ ಅತೀವ ದುಃಖ ತಂದಿದೆ ಎಂದು ಸಚಿವ ನಾರಾ ಲೋಕೇಶ್ ಹೇಳಿದ್ದು, ವಿದ್ಯುತ್ ಸ್ಪರ್ಶದಿಂದ ಗಾಯಗೊಂಡ ಮತ್ತೊಬ್ಬ ವಿದ್ಯಾರ್ಥಿಗೆ ಉತ್ತಮ ವೈದ್ಯಕೀಯ ಚಿಕಿತ್ಸೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಇಂತಹ ಘಟನೆಗಳು ಮರುಕಳಿಸದಂತೆ ವಿದ್ಯುತ್ ಇಲಾಖೆ ಅಧಿಕಾರಿಗಳು ಜಾಗೃತರಾಗಿ ಕಾರ್ಯನಿರ್ವಹಿಸಬೇಕು. ಮೃತ ಮಗುವಿನ ಕುಟುಂಬದ ಬೆಂಬಲಕ್ಕೆ ಸರ್ಕಾರ ನಿಂತಿದೆ ಎಂದು ಟ್ವೀಟ್ ಮಾಡಿದ್ದಾರೆ.
ವಿದ್ಯುತ್ ಅವಘಡಗಳ ಬಗ್ಗೆ ಸಚಿವರು ಹೇಳುವುದೇನು?: ಸಚಿವ ಗೊಟ್ಟಪಾಟಿ ರವಿಕುಮಾರ್ ಇತ್ತೀಚೆಗಷ್ಟೇ ವಿದ್ಯುತ್ ಅನಾಹುತಗಳ ಬಗ್ಗೆ ಸ್ಪಂದಿಸಿದ್ದಾರೆ. ಮಳೆಗಾಲದಲ್ಲಿ ವಿದ್ಯುತ್ ಶಾಕ್ ಸಮಸ್ಯೆ ಹೆಚ್ಚಾಗುತ್ತಿದ್ದು, ಜೋರಾದ ಗಾಳಿಗೆ ವಿದ್ಯುತ್ ತಂತಿಗಳು ತುಂಡಾಗಿ ಕಂಬ, ಗೋಡೆಗಳು ಒದ್ದೆಯಾಗಿದ್ದರಿಂದ ವಿದ್ಯುತ್ ಶಾಕ್ ಆಗುತ್ತಿರುವ ಘಟನೆಗಳು ಹೆಚ್ಚಾಗುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.
ಬೆಳೆ ಗದ್ದೆ, ಕಾಮಗಾರಿಗಳಲ್ಲಿ ಕರೆಂಟ್ ತಂತಿ ನೇತುಹಾಕಿ ವಿದ್ಯುತ್ ಕಾರ್ಮಿಕರು ಹಾಗೂ ಜನರು ಬೆಚ್ಚಿಬಿದ್ದಿರುವ ಹಲವು ಘಟನೆಗಳು ತಮ್ಮ ಗಮನಕ್ಕೆ ಬಂದಿವೆ. ಆದ್ದರಿಂದ ರಾಜ್ಯಾದ್ಯಂತ ನೇತಾಡುತ್ತಿರುವ ವಿದ್ಯುತ್ ತಂತಿಗಳ ಬಗ್ಗೆ ಗಮನಹರಿಸಿ, ಜನರು ತೊಂದರೆ ಅನುಭವಿಸುತ್ತಿರುವ ಸಮಸ್ಯೆ ಇರುವ ಪ್ರದೇಶಗಳನ್ನು ಗುರುತಿಸಿ ಸೂಕ್ತ ಕ್ರಮಕೈಗೊಳ್ಳುವಂತೆ ಸಚಿವ ರವಿಕುಮಾರ್ ಆದೇಶಿಸಿದರು.
ಬೆಂಗಳೂರಿನಲ್ಲಿ ತಾಯಿ-ಮಗು ವಿದ್ಯುತ್ ತಂತಿ ತುಳಿದು ಮೃತಪಟ್ಟ ಘಟನೆಯ ನೆನಪು
ಬೆಂಗಳೂರಿನಲ್ಲೂ ಇಂಥದ್ದೇ ಕಳೆದ ವರ್ಷ ಅಂದರೆ 2023ರ ನವೆಂಬರ್ 20ರಂದು ಘಟನೆ ಸಂಭವಿಸಿತ್ತು. ಸ್ವಂತ ಊರು ಸೇಲಂನಲ್ಲಿ ದೀಪಾವಳಿ ಹಬ್ಬ ಆಚರಿಸಿ ಬೆಂಗಳೂರಿಗೆ ಪತಿಯೊಂದಿಗೆ ಆಗಮನಿಸಿದ್ದ ಎಕೆಜಿ ಕಾಲನಿಯ ನಿವಾಸಿ, ಸೌಂದರ್ಯ ಮತ್ತು ಅವರ ಮಗು ಅಂದು ಬೆಳಿಗ್ಗೆ 6 ಗಂಟೆ ಸುಮಾರಿಗೆ ತಮ್ಮ ಮಗಳನ್ನು ಕೈಯಲ್ಲಿ ಹಿಡಿದುಕೊಂಡು ಹೋಗುತ್ತಿದ್ದಾಗ ಅವರ ಅರಿವಿಗೆ ಬಾರದೆ ಪಾದಚಾರಿ ದಾರಿಯಲ್ಲಿದ್ದ ತಂತಿಯನ್ನು ಮೆಟ್ಟಿದ್ದರು. ಅದರಲ್ಲಿ ವಿದ್ಯುತ್ ಪ್ರವಹಿಸುತ್ತಿದ್ದುದು ಅವರ ಅರಿವಿಗೆ ಬಂದಿರಲಿಲ್ಲ. ಕೂಡಲೇ ಅವರಿಗೆ ವಿದ್ಯುತ್ ಆಘಾತವಾಗಿದ್ದು, ಮಗುವಿನ ಸಹಿತ ಅಲ್ಲೇ ಮೃತಪಟ್ಟರು. ಪತಿ ಅವರನ್ನು ರಕ್ಷಿಸಲು ಪ್ರಯತ್ನಿಸಿದರೂ ಅದು ಸಾಧ್ಯವಾಗಿರಲಿಲ್ಲ. ಪತಿ ಕುಮಾರ್ ಪ್ರಾಣಾಪಾಯದಿಂದ ಪಾರಾಗಿದ್ದರು.
ಕಡಪಾದಲ್ಲಿನ ದುರಂತ ಬೆಂಗಳೂರಿನಲ್ಲಿ ತಾಯಿ-ಮಗು ವಿದ್ಯುತ್ ತಂತಿ ತುಳಿದು ಮೃತಪಟ್ಟ ಘಟನೆಯನ್ನು ಮತ್ತೆ ನೆನಪಿಸಿದೆ.